ಧನು ಬೆನ್ನಿಗೆ ನಿಲ್ಲುವ ಹನುಮ – ಹನು ನೋವಿಗೆ ಧನು ಮುಲಾಮು
ಬಿಗ್‌ಬಾಸ್ ಈ ಜೋಡಿ ನಿಮ್ಗೂ ಇಷ್ಟಾನಾ?
ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಟಾರ್ಟಿಂಗ್ ಎಪಿಸೋಡ್‌ಗಳು ಸಖತ್ ಬೋರ್ ಹೊಡೀತಿತ್ತು. ಯಾವಾಗ ಹನುಮಂತನ ಎಂಟ್ರಿಯಾಯ್ತೋ ಅಸಲಿ ಮಜಾ ಶುರುವಾಯ್ತು. ಸೆಲೆಬ್ರಿಟಿಗಳ ಮಧ್ಯೆ ಒಂಟಿಯಾಗಿ ನೊಂದು ಹೋಗಿದ್ದ ಧನರಾಜ್‌ಗೂ ಜೊತೆಗಾರ ಸಿಕ್ಕಿದ್ದ. ಇದೀಗ ಲಾಸ್ಟ್ ಸೀಸನ್ ನ ಸಂತು ಪಂತು ಜೋಡಿಯಂತೆ, ಈ ಸೀಸನ್‌ನಲ್ಲಿ ಹನು ಧನು ಜೋಡಿ ಹೈಲೆಟ್ ಆಗ್ತಿದೆ. ಮುಗ್ಧ ಮನಸುಗಳ ಈ ಜೋಡಿ ಯಾಕೆ ಇಷ್ಟವಾಗ್ತಿದ್ದಾರೆ?, ಧನು ಹನು ನಡುವೆ ಸ್ಟ್ರಾಂಗ್ ಫ್ರೆಂಡ್‌ಶಿಪ್ ಬಿಲ್ಡ್ ಆಗೋಕೆ ಕಾರಣವೇನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಶ್ವೇತಾ ಬಲೆಗೆ ಬಿದ್ದ ವರ್ತೂರು!- ಚಿನ್ನು.. ಅಂತಿದ್ದವ್ರು ಗೊತ್ತಿಲ್ಲವೆಂದಿದ್ದೇಕೆ?
ದೋಸ್ತಾ.. ಅವ ಸತ್ತ.. ನಾ ಮನಿಗ್ ಹೋಗ್ತಿನೋ ಮಾರಾಯ.. ಹನುಮಂತನ ಇಂಥಾ ಡೈಲಾಗ್ ಎಷ್ಟು ಮಜಾ ಕೊಡ್ತಿದೆಯೋ.. ಹನುಮನ ರಾಗಕ್ಕೆ ಧನು ಹಾಕುವ ತಾಳ ಕೂಡಾ ಅಷ್ಟೇ ಚೆನ್ನಾಗಿರುತ್ತೆ. ನೋಡೋದಕ್ಕೆ ಹನುಮಂತ ಮತ್ತು ಧನರಾಜ್ ತುಂಬಾನೇ ಸೈಲೆಂಟ್.. ಇಬ್ರೂ ಸೇರಿದ್ರೆ ಮಾತ್ರ ಅಲ್ಲೊಂದು ಮಜಾಭಾರತವೇ ಸೃಷ್ಟಿಯಾಗಿರುತ್ತೆ. ಅದ್ರಲ್ಲೂ ಸೈಡಲ್ಲೇ ಇದ್ದು ಸೈಲೆಂಟ್ ಆಗಿಯೇ ಹೊಡೆಯೋ ಕಾಮೆಂಟ್ ಕೂಡಾ ಕಾಮಿಡಿಯಾಗಿಯೇ ಇರುತ್ತೆ.
ಅಷ್ಟಕ್ಕೂ ಧನು ಹನು ಜೋಡಿಯಾಗಿದ್ದು ಹೇಗೆ ಅಂತಾ ನೋಡ್ತಾ ಹೋಗೋದಾದ್ರೆ, ಮೊದ್ಲಿಗೆ ಧನರಾಜ್ ಒಬ್ರೇ ಇದ್ರು. ಎಲ್ಲಾ ಕಲಾವಿದರ ನಡುವೆ ರೀಲ್ಸ್ ಹೀರೋ ಧನು ನಿಜಕ್ಕೂ ಕಳೆದೇ ಹೋಗಿದ್ರು. ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ಮೂಲಕ ಫೇಮಸ್ ಆಗಿದ್ದ ಧನು ವಾಪಸ್ ಆಡಲು ಶುರು ಮಾಡಿದ್ದು ಹನುಮಂತ ಬಂದ ಮೇಲೆಯೇ. ಬಹುಶಃ ಬಿಗ್‌ಬಾಸ್ ಮನೆಯಲ್ಲಿ ಏನೋ ಮಿಸ್ ಹೊಡೀತಿದೆ ಅಂತಾ ಆಯೋಜಕರಿಗೂ ಗೊತ್ತಾಗಿರಬೇಕು. ಹನುಮಂತ ಬಹಳ ಬೇಗನೆ ವೈಲ್ಡ್ ಕಾರ್ಡ್ ಎಂಟ್ರಿ ನೆಪದಲ್ಲಿ ಬಿಗ್ ಹೌಸ್‌ಗೆ ಎಂಟ್ರಿಕೊಟ್ಟಿದ್ದ. ಹನುಮಂತನಿಗೂ ಸೆಲೆಬ್ರಿಟಿಗಳ ನಡುವೆ ಸೈಲೆಂಟ್ ಆಗಿದ್ದ, ಅಕ್ಷರಶಃ ಒಂಟಿಯಾಗಿದ್ದ ಧನುವೇ ದೋಸ್ತ್ ಆಗೋಕೆ ಖರೇ ಜೋಡಿ ಅನ್ಸಿರಬೇಕು. ಧನರಾಜ್ ಜೊತೆಯಲ್ಲೇ ಸ್ನೇಹ ಬೆಳೆಯೋಕೆ ಶುರುವಾಯ್ತು. ಹಳ್ಳಿ ಮಂದಿ ಸಿಟಿ ಲೈಫ್ ಹೇಗೆ ಇರ್ಬೇಕು ಅನ್ನೋದನ್ನ ಧನು ಜೊತೆ ಹೇಳಿಸಿಕೊಂಡಿದ್ದು ಇದೆ. ಕ್ಯಾಪ್ಟನ್ ಆದಾಗ, ವಾಶ್ ರೂಮ್ ಬಳಕೆ ಬಗ್ಗೆಯೂ ಧನೂನೇ ಇಂಚಿಂಚೂ ಹೇಳಿಕೊಟ್ಟಿದ್ದು. ಯಾವುದೇ ಮುಜುಗರವಿಲ್ಲದೇ ಹನುಮನ ಬಗ್ಗೆ ಕಾಳಜಿವಹಿಸಿ ಧನು ಹೀರೋ ಆಗಿ ಕಾಣ್ತಿದ್ರೆ, ಹನುಮ ನಿಜವಾದ ಹೃದಯವಂತ ಗೆಳೆಯ ಅನ್ನೋದು ಕೂಡಾ ಸಾಬೀತಾಯ್ತು.
ಇನ್ನೊಂದು ವಿಚಾರದಲ್ಲಿ ಈ ಹನು ಧನು ಜೋಡಿನಾ ಮೆಚ್ಚಲೇಬೇಕು. ಈ ಇಬ್ಬರೂ ದೋಸ್ತಿಗಳು ನಿಜ. ಆದ್ರೆ, ಟಾಸ್ಕ್ ಅಂತಾ ಬಂದಾಗ ಪಕ್ಕಾ ಎದುರಾಳಿಗಳು.. ನಾಮಿನೇಷನ್ ಅಂತಾ ಬಂದಾಗ ಪಕ್ಕಾ ಆಟಗಾರರು. ಯಾವುದೇ ಗೆಳೆತನದ ಹಂಗು ಬಯಸದೇ ತಮ್ಮ ಮನಸಿಗೆ ಬಂದದನ್ನ ಹೇಳುವ ಚತುರರು. ಇವರ ಈ ಆಟವೇ ವೀಕ್ಷಕರಿಗೆ ಇಷ್ಟವಾಗಿತ್ತು. ಆಟ ಸರಿಯೆನಿಸಿದ್ರೆ ಇಬ್ಬರೂ ಹೊಗಳಿಕೊಂಡಿರ್ತಾರೆ. ಸ್ವಲ್ಪ ಏರುಪೇರಾದ್ರೂ ಇಬ್ಬರೂ ಒಬ್ಬರಿಗೊಬ್ಬರು ನಾಮಿನೇಟ್ ಮಾಡಿಕೊಳ್ತಾರೆ. ದೋಸ್ತಿ ಬೇರೆ, ಆಟ ಬೇರೆ, ಒಂದಕ್ಕೊಂದು ಬೆರೆಸದೇ ಪಕ್ಷಪಾತ ತೋರದೇ ಆಡೋ ಈ ಜೋಡಿ ನಿಜಕ್ಕೂ ಬೆಸ್ಟ್ ಜೋಡಿ.
ದೋಸ್ತಾ, ಹುಲಿ ಅಂತಾನೇ ಹನುಮಂತ ಧನರಾಜ್‌ರನ್ನ ಪ್ರೀತಿಯಿಂದ ಕರೀತಾರೆ. ಮನೆಯಲ್ಲಿ ಧನರಾಜ್‌ಗೂ ಹನುಮಂತನೇ ಅಚ್ಚುಮೆಚ್ಚು. ಉತ್ತರಕರ್ನಾಟಕದ ಸೊಗಡಲ್ಲಿ ಹನುಮಂತನ ಮಾತು ಕೇಳೋದೇ ಚೆಂದ, ಕರಾವಳಿಯ ಕನ್ನಡದಲ್ಲಿ ಧನು ಕಾಮಿಡಿಯೇ ಚೆಂದ. ಇಬ್ಬರೂ ಆಟದಲ್ಲಿ ಮಾತ್ರ ಅಗ್ರೆಸ್ಸಿವ್ ಆಗಿರ್ತಾರೆ. ಉಳಿದ ಎಲ್ಲಾ ಸಮಯದಲ್ಲೂ ಇವರಿಬ್ಬರ ಕಾಮಿಡಿ, ಹಾಡು ನೋಡೋದೇ ಚೆಂದ. ಹೀಗಾಗಿಯೇ ಹನು ಧನು ಜೋಡಿ ಇರುವರೆಗೂ ವೀಕ್ಷಕರಿಗೆ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯಂತೂ ಸಿಕ್ಕೇ ಸಿಗುತ್ತೆ.