IPLನ ದುರಂತ ತಂಡ RCB.. 3 ಸಲ ಫೈನಲ್.. ಎಡವಿದ್ದೆಲ್ಲಿ ಸ್ಟಾರ್ಸ್? – 17 ವರ್ಷಗಳ ಕಪ್ ಬರ ನೀಗುತ್ತಾ?
ಜಗತ್ತಿನ ಅತ್ಯಂತ ಯಶಸ್ವೀ ಮತ್ತು ಶ್ರೀಮಂತ ಲೀಗ್ ಐಪಿಎಲ್. 2009ರಲ್ಲಿ 17 ಸಾವಿರ ಕೋಟಿ ಇದ್ದ ಬ್ರ್ಯಾಂಡ್ ವ್ಯಾಲ್ಯೂ ಈಗ ಲಕ್ಷಕೋಟಿ ದಾಟಿದೆ. ಒಂದೊಂದು ಫ್ರಾಂಚೈಸಿಗಳೇ ಸಾವಿರ ಕೋಟಿ ಬ್ರ್ಯಾಂಡ್ ಮೌಲ್ಯ ಹೊಂದಿವೆ. ಈ ಪೈಕಿ ಸಿಎಸ್ಕೆ 122 ಮಿಲಿಯನ್ ಡಾಲರ್ಗಳ ಮೂಲಕ ಅಗ್ರಸ್ಥಾನದಲ್ಲಿದ್ರೆ ಮುಂಬೈ ಇಂಡಿಯನ್ಸ್ ಸೆಕೆಂಡ್ ಪ್ಲೇಸ್ನಲ್ಲಿದೆ. ಈ ಎರಡೂ ಫ್ರಾಂಚೈಸಿಗಳು ಐದೈದು ಸಲ ಚಾಂಪಿಯನ್ ಆಗಿವೆ ಸೋ ಬ್ರ್ಯಾಂಡ್ ವ್ಯಾಲ್ಯೂ ಜಾಸ್ತಿ ಇದ್ದೇ ಇರುತ್ತೆ. ಬಟ್ 17 ಸೀಸನ್ಗಳಲ್ಲಿ 1 ಸಲವೂ ಕಪ್ ಗೆಲ್ಲದ ಆರ್ಸಿಬಿ ಫ್ರಾಂಚೈಸಿ ಈ ಲಿಸ್ಟ್ನಲ್ಲಿ ಥರ್ಡ್ ಪ್ಲೇಸ್ನಲ್ಲಿದೆ. ನಿಜ ಹೇಳ್ಬೇಕಂದ್ರೆ ಕಪ್ ಗೆಲ್ಲಲು ಬೇಕಾದ ಎಲ್ಲಾ ಕ್ವಾಲಿಟೀಸ್ ಬೆಂಗಳೂರು ತಂಡಕ್ಕಿದೆ. ಆದ್ರೂ ಟ್ರೋಫಿ ಕನಸು ಕನಸಾಗೇ ಉಳಿದಿದೆ. ಇದೇ ಕಾರಣಕ್ಕೆ ಆರ್ಸಿಬಿಯನ್ನ ಐಪಿಎಲ್ನ ಮೋಸ್ಟ್ ಅನ್ಲಕ್ಕಿ ಟೀಂ ಅಂತಾ ಕರೀತಾರೆ. ಹಾಗೆ ಮತ್ತೊಂದಷ್ಟು ಕಾರಣಗಳೂ ಇವೆ. ಏನವು ಕಾರಣ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಮೇಜರ್ ಟ್ವಿಸ್ಟ್! – ಭಾರತ-ಪಾಕ್ ಗೆ ಹೊಸ ಸ್ಟೇಡಿಯಂ?
ರಾಯಲ್ ಚಾಲೆಂಜರ್ಸ್ ಬೆಂಗಳೂರು. ಐಪಿಎಲ್ನ ಮೋಸ್ಟ್ ಪಾಪುಲರ್ ಟೀಂ. ಅದ್ರಲ್ಲೂ ಆರ್ಸಿಬಿ ಅಭಿಮಾನಿಗಳ ಈ ಸಲ ಕಪ್ ನಮ್ದೇ ಅನ್ನೋ ಡೈಲಾಗ್ ಇಡೀ ಜಗತ್ತಿಗೇ ಗೊತ್ತಿದೆ ಅಂದ್ರೂ ತಪ್ಪಿಲ್ಲ. ವಿಶ್ವದ ಟಾಪ್ ಪ್ಲೇಯರ್ಸ್ಗಳನ್ನೇ ಹೊಂದಿದ್ದ ಬೆಂಗಳೂರು ಫ್ರಾಂಚೈಸಿಗೆ ಇರೋ ಒಂದೇ ಒಂದು ಕೊರಗು ಅಂದ್ರೆ ಕಪ್ ಗೆಲ್ಲೋದು. ಕಳೆದ 17 ಸೀಸನ್ಗಳಿಂದ ಟ್ರೋಫಿ ಗೆಲ್ಲೋಕೆ ಸಾಧ್ಯನೇ ಆಗ್ತಿದೆ. 2008ರಿಂದ 24ರ ವರೆಗಿನ ಆರ್ಸಿಬಿ ಜರ್ನಿ ಮತ್ತು ತಂಡ ಕಂಡಂತಹ ಮಹಾನ್ ಆಟಗಾರರ ಬಗ್ಗೆ ವಿವರ ಇಲ್ಲಿದೆ.
ಕ್ರಿಕೆಟ್ ಜಗತ್ತಿನ ಐಕಾನ್ ಕಿಂಗ್ ಕೊಹ್ಲಿಯೇ RCB ಬ್ರ್ಯಾಂಡ್!
ವಿರಾಟ್ ಕೊಹ್ಲಿ. ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 271 ಮಿಲಿಯನ್ ಫಾಲೋವರ್ಸ್ ಹೊಂದಿರೋ ಸ್ಟಾರ್ ಪ್ಲೇಯರ್. ಸದ್ಯದ ಮಟ್ಟಿಗೆ ಕೊಹ್ಲಿಯಷ್ಟು ಫ್ಯಾನ್ ಫಾಲೋವರ್ಸ್ ಹೊಂದಿರೋ ಕ್ರಿಕೆಟರ್ ಮತ್ತೊಬ್ರಿಲ್ಲ. ಇಂಥಾ ಕೊಹ್ಲಿಯೇ ಕಳೆದ 17 ಸೀಸನ್ಗಳಿಂದ ಬೆಂಗಳೂರು ತಂಡದ ಪರ ಐಪಿಎಲ್ ಆಡ್ತಿದ್ದಾರೆ. ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ್ದಾಗ ಏಕಾಂಗಿಯಾಗಿ ಹೋರಾಗಿ ಕಪ್ ಗೆಲ್ಲಿಸಿಕೊಟ್ಟಿರೋ ಕೊಹ್ಲಿಗೆ ಐಪಿಎಲ್ನಲ್ಲಿ ಕಪ್ ಎತ್ತಿ ಹಿಡಿಯೋ ಅದೃಷ್ಟ ಇನ್ನೂ ಸಿಕ್ಕಿಲ್ಲ.
ಆರ್ಸಿಬಿ ಆಪತ್ಬಾಂದವ ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್ 2008 ರಿಂದ 2010 ರವರೆಗೆ ಡೆಲ್ಲಿ ಡೇರ್‌ಡೆವಿಲ್ಸ್‌ಗಾಗಿ ಐಪಿಎಲ್ ಆಡಿದ್ರು. 2011ರಲ್ಲಿ ಆರ್ಸಿಬಿ ಸೇರಿದ ಡಿವಿಲಿಯರ್ಸ್ ಬೆಂಗಳೂರು ಪಾಲಿಗೆ ಆಪತ್ಬಾಂಧವನಾಗಿದ್ರು. 2021 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೇ ಕಣಕ್ಕಿಳಿದಿದ್ರು. ಸುದೀರ್ಘ 11 ವರ್ಷಗಳ ಬೆಂಗಳೂರು ಜೊತೆಗಿನ ಜರ್ನಿಯಲ್ಲೂ ಕಪ್ ಗೆಲ್ಲೋಕೆ ಆಗ್ತಿಲ್ಲ. ಅಂತಿಮವಾಗಿ 2021 ರ ನಂತರ ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ್ರು. ಎಬಿಡಿ ಆರ್ಸಿಬಿಯ ದಿ ಬೆಸ್ಟ್ ಪಿಕ್ ಎಂದರೆ ತಪ್ಪಾಗಲ್ಲ. ಬೆಂಗಳೂರಿಗೆ ಬರುವುದಕ್ಕೂ ಮುನ್ನ ಡೆಲ್ಲಿ ಡೇರ್ಡೆವಿಲ್ಸ್ ತಂಡದಲ್ಲಿದ್ದ ಎಬಿಡಿಯನ್ನು 2011ರಲ್ಲಿ 5.6 ಕೋಟಿಗೆ ಖರೀದಿಸಲಾಗಿತ್ತು. ರೆಡ್ ಆರ್ಮಿ ಪರ 157 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 158ರ ಸ್ಟ್ರೈಕ್ರೇಟ್ನಲ್ಲಿ 4522 ರನ್ ಗಳಿಸಿದ್ದಾರೆ. ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ.
ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ RCB ಹೀರೋ!
ಬಹುಶಃ ಬೆಂಗಳೂರು ತಂಡದ ಅಭಿಮಾನಿಗಳ್ಯಾರು ಕ್ರಿಸ್ಗೇಲ್ ಬ್ಯಾಟಿಂಗ್ ನ ಮರೆಯೋಕೆ ಸಾಧ್ಯನೇ ಇಲ್ಲ. ಯುನಿವರ್ಸಲ್ ಬಾಸ್ ಅಂತಾನೇ ಕರೆಸಿಕೊಳ್ಳೊ ದೈತ್ಯ ದಾಂಡಿದ ಗೇಲ್. ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಕೋಲ್ಕತ್ತಾ, ಬೆಂಗಳೂರು ಮತ್ತು ಪಂಜಾಬ್ ಪರ ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. 2011ರಲ್ಲಿ 2.9 ಕೋಟಿಗೆ ಬೆಂಗಳೂರು ಪಾಲಾಗಿದ್ದ ಗೇಲ್, ಆಡಿದ 7 ಆವೃತ್ತಿಗಳಲ್ಲಿ 154 ಸ್ಟ್ರೈಕ್ ರೇಟ್ನಲ್ಲಿ 43.29ರ ಸರಾಸರಿಯಲ್ಲಿ 3420 ರನ್ ಕಲೆ ಹಾಕಿದ್ದಾರೆ. ಬಟ್ ಗೇಲ್ ಟೈಮಲ್ಲೂ ಬೆಂಗಳೂರು ಟೀಂ ಕಪ್ ಗೆಲ್ಲೋಕೆ ಸಾಧ್ಯವಾಗ್ಲಿಲ್ಲ.
ರೆಡ್ ಆರ್ಮಿ ಪರ ಅತೀ ಹೆಚ್ಚು ರನ್ ಗಳಿಸಿದ 5ನೇ ಆಟಗಾರ ಮ್ಯಾಕ್ಸಿ!
ಆರ್ಸಿಬಿಯ ಅತ್ಯುತ್ತಮ ಆಯ್ಕೆಗಳಲ್ಲಿ ಮ್ಯಾಕ್ಸಿ ಕೂಡ ಒಬ್ಬರು. 2021ರಲ್ಲಿ 14.25 ಕೋಟಿ ನೀಡಿ ತಂಡಕ್ಕೆ ಕರೆಸಿಕೊಳ್ಳಲಾಗಿತ್ತು. ಆರ್ಸಿಬಿ ಪರ ಹಲವು ಅದ್ಬುತ ಇನ್ನಿಂಗ್ಸ್‌ಗಳನ್ನು ಕಟ್ಟಿರುವ ಮ್ಯಾಕ್ಸಿ, ರೆಡ್ ಆರ್ಮಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಐದನೇ ಸ್ಥಾನದಲ್ಲಿದ್ದಾರೆ. ಬಟ್ 2024ರ ಐಪಿಎಲ್ನಲ್ಲಿ ಅಷ್ಟೇನು ಪ್ರದರ್ಶನ ನೀಡಲಿಲ್ಲ. ಹೀಗಾಗಿ ಐಪಿಎಲ್ ಹರಾಜಿಗೆ ರಿಲೀಸ್ ಮಾಡಲಾಗಿತ್ತು. ಹರಾಜಿನಲ್ಲಿ ಮ್ಯಾಚ್ ಪಂಜಾಬ್ ತಂಡದ ಪಾಲಾಗಿದ್ದಾರೆ.
ಐಪಿಎಲ್ ನ ಹೈಯೆಸ್ಟ್ ವಿಕೆಟ್ ಟೇಕರ್ ಚಹಾಲ್!
ಹರಾಜಿನಲ್ಲಿ ಆರ್ಸಿಬಿ ಬೆಸ್ಟ್ ಆಯ್ಕೆಗಳಲ್ಲಿ ಚಹಲ್ ಕೂಡ ಒಬ್ಬರು. 10 ಲಕ್ಷಕ್ಕೆ 2014ರಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡಿತು. ಇದು ಚಹಲ್ ಭವಿಷ್ಯವನ್ನೇ ಬದಲಿಸಿತು. 2014 ರಿಂದ 2021ರವರೆಗೂ ಆರ್ಸಿಬಿ ಪರ 113 ಪಂದ್ಯಗಳನ್ನಾಡಿದ ಚಹಲ್, 139 ವಿಕೆಟ್ ಉರುಳಿಸಿದ್ದಾರೆ. ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಚಹಲ್ ರನ್ನು ಬೆಂಗಳೂರು ಉಳಿಸಿಕೊಳ್ಳದೆ ಬಿಟ್ಟು ಕೊಟ್ಟು ತಪ್ಪು ಮಾಡಿತು. ಐಪಿಎಲ್ನಲ್ಲಿ ಅತೀಹೆಚ್ಚು ವಿಕೆಟ್ಗಳನ್ನ ಪಡೆದ ದಾಖಲೆ ಚಹಾಲ್ ಹೆಸರಿನಲ್ಲಿದೆ.
ಇನ್ನು ಇವ್ರಿಷ್ಟೇ ಅಲ್ಲದೇ ಅನಿಲ್ ಕುಂಬ್ಳೆ, ದಿನೇಶ್ ಕಾರ್ತಿಕ್, ಯುವರಾಜ್ ಸಿಂಗ್, ಫಾಫ್ ಡುಪ್ಲೆಸಿಸ್, ಡೇನಿಯಲ್ ವೆಟ್ಟೋರಿ, ಜಾಕ್ವೆಸ್ ಕಾಲಿಸ್, ರಾಹುಲ್ ದ್ರಾವಿಡ್, ಕೆವಿನ್ ಪೀಟರ್ಸನ್, ರೊಸ್ ಟೇಲರ್ ಸೇರಿದಂತೆ ಸಾಕಷ್ಟು ಸ್ಟಾರ್ ಆಟಗಾರರೇ ಬೆಂಗಳೂರು ತಂಡದ ಪರ ಆಡಿದ್ದಾರೆ. ಆದ್ರೆ ಕಪ್ ಗೆಲ್ಲೋದು ಮಾತ್ರ ಸಾಧ್ಯವಾಗಿಯೇ ಇಲ್ಲ.
2008ರಲ್ಲಿ 14 ಪಂದ್ಯಗಳನ್ನಾಡಿದ್ದ ಆರ್ ಸಿಬಿ 4 ಪಂದ್ಯಗಳನ್ನಷ್ಟೇ ಗೆದ್ದಿತ್ತು 10 ಪಂದ್ಯಗಳನ್ನ ಸೋತಿತ್ತು. 2009ರಲ್ಲಿ 16 ಪಂದ್ಯಗಳ ಪೈಕಿ 9ರಲ್ಲಿ ವಿಕ್ಟರಿ 7ರಲ್ಲಿ ಸೋಲು ಕಂಡಿತ್ತು. 2010ರಲ್ಲಿ 16 ಪಂದ್ಯಗಳ್ಲಲಿ ಕಣಕ್ಕಿಳಿದಿದ್ದು 8 ಪಂದ್ಯ ಗೆದ್ರೆ 8 ಪಂದ್ಯ ಮುಗ್ಗರಿಸಿತ್ತು. 2011ರಲ್ಲಿ 16 ಮ್ಯಾಚ್ಗಳಲ್ಲಿ 10ರಲ್ಲಿ ಗೆದ್ರೆ 6ರಲ್ಲಿ ಎಡವಿತ್ತು. 2012ರಲ್ಲಿ 16 ಮ್ಯಾಚ್ಗಳಲ್ಲಿ ಆಡಿದ್ದು 8ರಲ್ಲಿ ಗೆಲುವು 7 ರಲ್ಲಿ ಸೋಲು ಕಂಡಿತ್ತು 1 ಟೈ ಆಗಿತ್ತು. 2013ರಲ್ಲಿ 16 ಪಂದ್ಯಗಳ ಪೈಕಿ 8 ಸಲ ಗೆಲುವು 6 ಸಲ ಸೋಲು 2ರಲ್ಲಿ ಟೈಂ ಆಗಿತ್ತು. 2014ರಲ್ಲಿ 14 ಪಂದ್ಯಗಳಲ್ಲಿ 5 ಗೆಲುವು 9 ಸೋಲು ಇತ್ತು. 2015ರಲ್ಲಿ 16 ಪಂದ್ಯಗಳು ನಡೆದಿದ್ದು 8 ರಲ್ಲಿ ಗೆಲುವು 6 ರಲ್ಲಿ ಸೋತಿತ್ತು. 2016ರ ಸೀಸನ್ನಲ್ಲಿ 9 ಪಂದ್ಯ ಗೆದ್ರೆ 7 ರಲ್ಲಿ ಮಕಾಡೆ ಮಲಗಿತ್ತು. 2017ರ ಆವೃತ್ತಿಯಲ್ಲಿ 13 ಪಂದ್ಯಗಳಿಗೆ ಕಣಕ್ಕಿಳಿದು 3 ಪಂದ್ಯ ಅಷ್ಟೇ ಗೆದ್ದಿತ್ತು. 10 ಪಂದ್ಯಗಳನ್ನ ಕೈ ಚೆಲ್ಲಿತ್ತು. 2018ರಲ್ಲಿ 14 ಮ್ಯಾಚ್ಗಳ ಪೈಕಿ 6ರಲ್ಲಿ ಗೆದ್ರೆ 8 ಮ್ಯಾಚ್ ಕೈ ಜಾರಿದ್ದವು. 2019ರಲ್ಲಿ 14 ಮ್ಯಾಚ್ಗಳಲ್ಲಿ 5 ಗೆಲುವು 8 ಸೋಲು ಕಂಡಿತ್ತು. 2020ರಲ್ಲಿ 15 ಪಂದ್ಯಗಳಲ್ಲಿ 6 ಗೆಲುವು 8 ಸೋಲು 1 ಟೈ ಆಗಿತ್ತು. 2021ರಲ್ಲಿ 15 ಪಂದ್ಯಗಳನ್ನ ಆಡಿ 9 ಸಲ ಗೆದ್ರೆ 6 ಸಲ ಸೋತಿತ್ತು. 2022ರಲ್ಲಿ 16 ಪಂದ್ಯಗಳ ಪೈಕಿ 9ರಲ್ಲಿ ಗೆಲುವು 7ರಲ್ಲಿ ಸೋಲು ಕಂಡಿದೆ. 2023ರಲ್ಲಿ 14 ಪಂದ್ಯಗಳ ಪೈಕಿ 7 ಸಲ ಗೆಲುವು 7 ಸಲ ಸೋಲು ಕಂಡಿದೆ. ಇನ್ನು ಕಳೆದ ಸೀಸನ್ನಲ್ಲಿ 15 ಪಂದ್ಯಗಳನ್ನ ಆಡಿದ್ದು 7 ಮ್ಯಾಚ್ ಗೆಲುವು 8ರಲ್ಲಿ ಸೋಲು ಕಂಡಿತ್ತು.
17 ಸೀಸನ್.. 3 ಸಲ ಫಿನಾಲೆ.. ಟ್ರೋಫಿ ಗೆಲ್ಲುವಲ್ಲಿ ಫೇಲ್!
2008ರಲ್ಲಿ ಐಪಿಎಲ್ ಆರಂಭವಾದ ವರ್ಷದಲ್ಲೇ ಬೆಂಗಳೂರು ಫ್ರಾಂಚೈಸಿ ಕೂಡ ಕಣಕ್ಕಿಳಿದಿತ್ತು. ಅಂದಿನಿಂದ 2004ರವರೆಗೆ ಅಂದ್ರೆ 17 ಸೀಸನ್ಗಳಲ್ಲಿ ಮೂರು ಸಲ ಫಿನಾಲೆ ತಲುಪಿದೆ. 2009 ರಲ್ಲಿ ಮೊದಲ ಬಾರಿಗೆ ಫಿನಾಲೆ ತಲುಪಿದ್ದ ಬೆಂಗಳೂರು ತಂಡವನ್ನ ಡೆಕ್ಕನ್ ಚಾರ್ಜರ್ಸ್ ತಂಡ ಸೋಲಿಸಿ ಚಾಂಪಿಯನ್ ಆಗಿತ್ತು. ಹಾಗೇ 2011 ರಲ್ಲಿ ಫಿನಾಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿನ್ ಆಗಿತ್ತು. ಇನ್ನು ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ 2016 ರಲ್ಲಿ ಫೈನಲ್ ತಲುಪಿದ್ದ ಬೆಂಗಳೂರು ತಂಡಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಸೋಲಿನ ಶಾಕ್ ನೀಡಿ ಚಾಂಪಿಯನ್ ಪಟ್ಟಕ್ಕೇರಿತ್ತು. ಹೀಗೆ 17 ಸೀಸನ್ಗಳ ಜರ್ನಿಯಲ್ಲಿ ಮೂರು ಸಲ ಕೂದಲೆಳೆ ಅಂತರದಲ್ಲಿ ಕಪ್ ಗೆಲ್ಲೋದ್ರಿಂದ ವಂಚಿತವಾಗಿದೆ.
22 ಆಟಗಾರರು.. 2025ಕ್ಕೆ ಸಿಗುತ್ತಾ ಕಪ್?
2008ರಿಂದ ಕಪ್ ಗೆಲ್ಲುವಲ್ಲಿ ಫೇಲ್ಯೂರ್ ಆಗಿರೋ ಟೀಂ 2025ಕ್ಕೆ ಕಪ್ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿದೆ. ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನ ಕಟ್ಟಿದ್ದು ಚಾಂಪಿಯನ್ ಪಟ್ಟಕ್ಕೇರೋ ಟಾರ್ಗೆಟ್ ಇಟ್ಕೊಂಡಿದೆ. ಹೊಸ ಜೋಶ್, ಹೊಸ ಟೀಮ್ನೊಂದಿಗೆ ರೆಡಿಯಾಗಿರೋ ರೆಡ್ ಆರ್ಮಿಯನ್ನ ಯಾರು ಕ್ಯಾಪ್ಟನ್ ಆಗಿ ಲೀಡ್ ಮಾಡ್ತಾರೆ ಅನ್ನೋದೇ ಈಗಿರೋ ಪ್ರಶ್ನೆ. ಕಳೆದ ಮೂರು ಸೀಸನ್ಗಳಿಂದ ನಾಯಕನಾಗಿದ್ದ ಫಾಫ್ ಡುಪ್ಲೆಸಿಸ್ ಈ ಬಾರಿ ಡೆಲ್ಲಿ ಪಾಲಾಗಿದ್ದಾರೆ. ಸೋ ಹೊರ ಸಾರಥಿಯ ನೇಮಕದ ಜೊತೆಗೆ ಚಾಂಪಿಯನ್ ಪಟ್ಟಕ್ಕೇರೋ ಸವಾಲೂ ಕೂಡ ಬೆಂಗಳೂರು ಫ್ರಾಂಚೈಸಿಗಿದೆ. ಆದ್ರೆ 17 ಸೀಸನ್ಗಳಿಂದ ಘಟಾನುಘಟಿ ಆಟಗಾರರನ್ನೇ ಇಟ್ಟುಕೊಂಡು ಸೋತಿರೋ ಟೀಮ್ಗೆ ಈ ಸಲನಾದ್ರೂ ಅದೃಷ್ಟ ಒಲಿಯುತ್ತಾ ಅಥವಾ ದುರಂತ ತಂಡ ಅನ್ನೋ ಹಣೆಪಟ್ಟಿ ಮತ್ತೆ ಕಂಟಿನ್ಯೂ ಆಗುತ್ತಾ ಅನ್ನೋದನ್ನ ಕಾದು ನೋಡ್ಬೇಕು.