ಅಶ್ವಿನ್ ರದ್ದು ಆರಂಭ ಮಾತ್ರ – ಟೀಂ ಇಂಡಿಯಾದಲ್ಲಿ ವಿದಾಯದ ಪರ್ವ
ಭಾರತೀಯ ಕ್ರಿಕೆಟ್ನ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಬುಧವಾರ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ರು. ಅಶ್ವಿನ್ರ ಈ ದಿಢೀರ್ ನಿರ್ಧಾರ ಕೋಟಿ ಕೋಟಿ ಭಾರತೀಯರನ್ನೂ ಒಳಗೊಂಡಂತೆ ಟೀಂ ಇಂಡಿಯಾ ಆಟಗಾರರಿಗೂ ಅಚ್ಚರಿ ಮೂಡಿಸಿದೆ. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ನಂತರ ಟೀಂ ಇಂಡಿಯಾ ಸ್ಪಿನ್ ವಿಭಾಗವನ್ನ ತಮ್ಮ ಹೆಗಲ ಮೇಲೆ ಹೊತ್ತು ಯಶಸ್ವಿಯಾಗಿ ಸಾಗಿದ ಗ್ರೇಟೆಸ್ಟ್ ಎವರ್ ಸ್ಪಿನ್ ಮಾಂತ್ರಿಕನ ವಿದಾಯ ನಿಜಕ್ಕೂ ಭಾರತ ತಂಡಕ್ಕೆ ತುಂಬಲಾರದ ನಷ್ಟವೇ. ಆದ್ರೆ ಟೀಂ ಇಂಡಿಯಾ ಪಾಲಿಗೆ ಇದು ಜಸ್ಟ್ ಆರಂಭ ಅಷ್ಟೇ. ಇನ್ನೂ ಕೂಡ ಸಾಲು ಸಾಲು ಆಟಗಾರರ ನಿವೃತ್ತಿ ಆಘಾತ ಕಾದಿದೆ. ಕ್ರಿಕೆಟ್ಗೆ ಗುಡ್ ಬೈ ಹೇಳೋಕೆ ಹಿರಿಯರ ದಂಡೇ ಕ್ಯೂನಲ್ಲಿದೆ.
ಇದನ್ನೂ ಓದಿ : ಭಾರತಕ್ಕೆ WTC ಫೈನಲ್ ಚಾಲೆಂಜ್ – 2 ಮ್ಯಾಚ್.. 3 ಟೀಂ.. ಯಾರಿಗೆ ಟಿಕೆಟ್?
ನವೆಂಬರ್ 6, 2011 ರಂದು ದೆಹಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಆರ್ ಅಶ್ವಿನ್ ಅವರು 106 ಪಂದ್ಯಗಳಲ್ಲಿ 537 ವಿಕೆಟ್ ಗಳನ್ನು ಪಡೆದಿದ್ದಾರೆ. ಆರ್ ಅಶ್ವಿನ್ ಅವರು ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿ 619 ವಿಕೆಟ್ಗಳನ್ನು ಪಡೆದ ಅನಿಲ್ ಕುಂಬ್ಳೆ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಅಲ್ದೇ ಭಾರತದ ಬೌಲರ್ಗಳಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದ್ದಾರೆ. ಒಟ್ಟು 37 ಬಾರಿ ಐದು ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿರುವ ಅಶ್ವಿನ್, ಶೇನ್ ವಾರ್ನ್ ಜತೆಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಸುದೀರ್ಘ 13 ವರ್ಷಗಳ ಕಾಲ ಟೀಂ ಇಂಡಿಯಾ ಭಾಗವಾಗಿದ್ದ ಅಶ್ವಿನ್ ಡಿಸೆಂಬರ್ 18ರಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್ ಮುಗಿಸಿದ್ರು. ಈ ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ಅಂಗಳದಲ್ಲಿ ಗುಸು ಗುಸು ಜೋರಾಗಿದೆ. ಇದು ಒಂದು ಆರಂಭ, ಇನ್ನೂ ಅನೇಕರು ಇಂಗ್ಲೆಂಡ್ ಟೂರ್ಗೂ ಮುನ್ನವೇ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಲಿದ್ದಾರೆ ಎಂದು.
ಸದ್ಯ ಟೀಂ ಇಂಡಿಯಾದಲ್ಲಿ ಯಂಗ್ಸ್ಟರ್ಸ್ ಅಬ್ಬರ ಜೋರಾಗಿದೆ. ಸಿಕ್ಕ ಅವಕಾಶಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡ್ತಿದ್ದಾರೆ. ಟಿ-20 ಮ್ಯಾಚ್ನಲ್ಲಿ ನೀವೆಲ್ಲಾ ನೋಡೇ ಇರ್ತೀರಾ. ಹೀಗಾಗಿ ಯುವಕರಿಗೆ ಆದ್ಯತೆ ನೀಡಲು ನಿವೃತ್ತಿಯ ವಿದಾಯದ ಮೂಲಕ ಮೈದಾನದಿಂದ ಹೊರ ನಡೆಯಲು ಸೀನಿಯರ್ಸ್ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಶಾಕಿಂಗ್ ನಿರ್ಧಾರ ಘೋಷಿಸಲಿದ್ದಾರೆ. 2012 ಹಾಗೂ 2013ರಲ್ಲಿ ಇದೇ ಮಾದರಿಯಲ್ಲಿ ನಿವೃತ್ತಿ ಪರ್ವ ನಡೆದಿತ್ತು. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಗಂಗೂಲಿ, ಸಚಿನ್ ತೆಂಡೂಲ್ಕರ್ ಒಬ್ಬರ ಹಿಂದೆ ಒಬ್ಬರಂತೆ ನಿವೃತ್ತಿ ಘೋಷಿಸಿ ಹೊಸ ಆಟಗಾರರಿಗೆ ಸ್ಥಾನ ಬಿಟ್ಟುಕೊಟ್ಟಿದ್ರು. ಅದೇ ಮಾದರಿಯ ನಿವೃತ್ತಿಗಳ ಸರಣಿ 2025ರಲ್ಲಿ ನಡೆಯಲಿದೆ ಎನ್ನಲಾಗ್ತಿದೆ. ಈ ಹಿಂದೆಯೂ ಕೂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲೇ ಸಾಕಷ್ಟು ಕ್ರಿಕೆಟರ್ಸ್ ನಿವೃತ್ತಿ ಶಾಕ್ ನೀಡಿದ್ರು.