ವಿಜಯೇಂದ್ರ ಮೋದಿನ ಭೇಟಿಯಾಗಿದ್ದೇಕೆ? – ರೆಬಲ್ ಟೀಂಗೆ ಬಿಗ್ ಸಂದೇಶ ಕೊಟ್ರಾ?
ಯತ್ನಾಳ್ ಬಗ್ಗೆ ಚಾಡಿ ಹೇಳಿದ್ರಾ ಬಿವೈವಿ
ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಗುಸು ಗುಸು ಕೇಳಿ ಬರುತ್ತಿದೆ. ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರದಲ್ಲೂ ಹೀನಾಯವಾಗಿ ಸೋಲು ಕಂಡ ಬಳಿಕ ಬಿ ವೈ ವಿಜಯೇಂದ್ರ ಅವರ ವಿರೋಧಿ ಬಣ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷರ ಕುರಿತು ಅಸಮಾಧಾನವನ್ನ ಹೊರ ಹಾಕಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಹೇಳಿಕೆ ಕಮಲ ಪಾಳಯದಲ್ಲಿ ಸಂಚಲನವನ್ನ ಸೃಷ್ಟಿಸಿತ್ತು. ಈ ಚರ್ಚೆಯ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿರುವುದು ಹಲವು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ. ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷರ ಬಿ ವೈ ವಿಜಯೇಂದ್ರ ಅವರು ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಆರ್ ಅಶ್ವಿನ್ ದಿಢೀರ್ ನಿವೃತ್ತಿಗೆ ಕಾರಣವೇನು? – ಬೆಂಚ್ ಕಾಯಿಸಿದ ನೋವು, ಒತ್ತಡ ತಂತ್ರವೋ?
ಬಿಜೆಪಿ ರಾಜ್ಯಾಧ್ಯಕ್ಷನಾಗಿ ಒಂದು ವರ್ಷ ಆದ ಹಿನ್ನಲೆಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಳ್ಳಲಾಯಿತು ಎಂದು ಟ್ವೀಟ್ ಮೂಲಕ ವಿಜಯೇಂದ್ರ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಅಪೂರ್ವ ಕ್ಷಣಗಳು ಕರ್ನಾಟಕ ರಾಜ್ಯದಲ್ಲಿ ಪಕ್ಷ ಬಲವರ್ಧನೆಗೆ ದೊರೆತ ಪ್ರೇರಣೆಯ ಕಿರಣಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮೋದಿ ಭೇಟಿ, ಭಿನ್ನಮತಕ್ಕೆ ಬೀಳುತ್ತಾ ಬ್ರೇಕ್?
ಇತ್ತ ವಿಜಯೇಂದ್ರ ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೆ ರಾಜ್ಯ ಬಿಜೆಪಿ ಭಿನ್ನಮತಕ್ಕೆ ಬ್ರೇಕ್ ಬೀಳುತ್ತಾ ಎಂಬ ಪ್ರಶ್ನೆ ಎದ್ದಿದೆ. ಮೋದಿ ಜೊತೆಗಿನ ಚರ್ಚೆ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದ್ದು, ದೆಹಲಿಯಿಂದ ರೆಬೆಲ್ಸ್ಗೆ ಸಂದೇಶ ರವಾನೆಮಾಡಲು ವಿಜಯೇಂದ್ರ ಪ್ರಧಾನಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿ ಅವರ ಮುಂದೆ ಯತ್ನಾಳ್ ಮತ್ತು ಟೀಂ ವಿರುದ್ಧ ವಿಜಯೇಂದ್ರ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಯತ್ನಾಳ್ ಮತ್ತು ಟೀಂ ವಿರುದ್ಧ ದೂರು ನೀಡಲಿದ್ದು, ಅಧಿವೇಶನದಲ್ಲಿ ಒಗ್ಗಟ್ಟಾಗಿ ಹೋರಾಡುತ್ತಿಲ್ಲ. ವಕ್ಫ್ 2ನೇ ಹಂತದ ಸಮಾವೇಶ ಮಾಡುತ್ತಿದ್ದು, ಪಕ್ಷದ ವೇದಿಕೆ ಬಿಟ್ಟು ಪ್ರತ್ಯೇಕ ಹೋರಾಟ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ಮೋದಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಶಿಸ್ತು ಸಮಿತಿ ನೋಟಿಸ್ ಕೊಟ್ಟರೂ ರೆಬಲ್ಸ್ ಟೀಮ್ ಸುಮ್ಮನಾಗಿಲ್ಲ ಎಂಬ ವಿಚಾರವನ್ನು ಮೋದಿ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಎದುರಾಳಿಗಳಿಗೆ ತಾಕತ್ತು ತೋರಿಸಿದ್ರಾ ವಿಜಯೇಂದ್ರ?
ಯತ್ನಾಳ್ – ವಿಜಯೇಂದ್ರ ಭಿನ್ನಮತ ಹಲವು ಬಾರಿ ಹೈಕಮಾಂಡ್ ಅಂಗಣಕ್ಕೆ ಹೋಗಿ ಬಂದಾಗಿದೆ. ಆದರೆ, ಯಾವುದೇ ಬದಲಾವಣೆ ರಾಜ್ಯ ಬಿಜೆಪಿಯಲ್ಲಿ ಕಾಣುತ್ತಿಲ್ಲ. ಈ ಎಲ್ಲಾ ಬೆಳವಣಿಗೆಯ ಮಧ್ಯೆ, ವಿಜಯೇಂದ್ರ ಅವರು ಮೋದಿಯವನ್ನು ಭೇಟಿಯಾಗಿದ್ದದ್ದು ಮಹತ್ವವನ್ನು ಪಡೆದುಕೊಂಡಿದೆ. ಯಾಕಂದ್ರೆ ಸಡನ್ ಆಗಿ ಹೋಗಿ ಬೇಟಿ ನೀಡಿದ್ದು, ಎದುರಾಳಿಗೆ ಟಾಂಗ್ ಕೊಡೋಕೆ ಅಂತಾಲೇ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದೆ. ಮೋದಿ ಮತ್ತು ನನ್ನ ಸಬಂಧ ಚೆನ್ನಾಗಿದೆ.. ನನ್ನ ಹಿಂದೆ ಮೋದಿ ಇದ್ದಾರೆ.. ನನ್ನ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟದಿಂದ ಕೆಳಗಿಳಿಸೋಕೆ ಆಗಲ್ಲ ಅಂತ ವಿಜಯೇಂದ್ರ ಸಂದೇಶ ರವಾನೆ ಮಾಡಿದಂತೆ ಮೆಲ್ನೋಟಕ್ಕೆ ಕಾಣುತ್ತಿದೆ. ವಿಜಯೇಂದ್ರ ರೆಬಲ್ ನಾಯಕರ ಬಗ್ಗೆ ಮೋದಿಗೆ ಏನ್ ಹೇಳಿದ್ದಾರೆ? ರಾಜ್ಯಧ್ಯಕ್ಷರ ದೂರಿಗೆ ಪ್ರಧಾನಿಗಳು ಯಾವ ರೀತಿ ಮದ್ದನ್ನು ಅರಿಯುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.