ಆರ್ ಅಶ್ವಿನ್ ದಿಢೀರ್ ನಿವೃತ್ತಿಗೆ ಕಾರಣವೇನು? – ಬೆಂಚ್ ಕಾಯಿಸಿದ ನೋವು, ಒತ್ತಡ ತಂತ್ರವೋ?
ತಮ್ಮ 38ನೇ ವಯಸ್ಸಿಗೆ ಕ್ರಿಕೆಟ್ ಅಂಗಳಕ್ಕೆ ಗುಡ್ ಬೈ ಹೇಳಿದ ಆರ್ ಅಶ್ವಿನ್ಗೆ ಮಿಸ್ ಯೂ ಲೆಜೆಂಡ್ ಅಂತಿದ್ದಾರೆ ಫ್ಯಾನ್ಸ್. ಮತ್ತೊಂದೆಡೆ ಅಶ್ವಿನ್ ನಿವೃತ್ತಿಯನ್ನು ಬಿಸಿಸಿಐ ಅಧಿಕೃತಗೊಳಿಸಿದೆ. ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಅಶ್ವಿನ್ ನಿವೃತ್ತಿ ಬಗ್ಗೆ ಪೋಸ್ಟ್ ಮಾಡಿದೆ. ಥ್ಯಾಂಕ್ಯು ಅಶ್ವಿನ್, ಈ ಹೆಸರಲ್ಲಿಯೇ ಒಂದು ಮಾಂತ್ರಿಕತೆ, ಹಾಗೂ ತೇಜಸ್ಸು ಇದೆ. ಸ್ಪಿನ್ ಮಾಂತ್ರಿಕ ಹಾಗೂ ಭಾರತ ತಂಡದ ಆಲ್ರೌಂಡರ್ ಆಟಗಾರ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ದಿಗ್ಗಜ ಆಟಗಾರನಿಗೆ ಶುಭಾಶಯಗಳು ಎಂದು ಬಿಸಿಸಿಐ ಹೇಳಿದೆ.
ಇದನ್ನೂ ಓದಿ:ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ – ಮಿಸ್ ಯೂ ಲೆಜೆಂಡ್
ಆರ್.ಅಶ್ವಿನ್ ದಿಢೀರ್ ನಿವೃತ್ತಿಗೆ ಕಾರಣಗಳೇನು ಎಂಬ ಚರ್ಚೆ ನಡೀತಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಪರ್ತ್ನಲ್ಲಿ ನಡೆದ ಟೆಸ್ಟ್ನಲ್ಲಿ ಅಶ್ವಿನ್ಗೆ ಪ್ಲೇಯಿಂಗ್-11ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಎರಡನೇ ಟೆಸ್ಟ್ಗೆ ಅವಕಾಶ ಸಿಕ್ಕಿತ್ತು. ಆದ್ರೆ, ಮೂರನೇ ಟೆಸ್ಟ್ನಲ್ಲಿ ಮತ್ತೆ ಅಶ್ವಿನ್ರನ್ನು ಹೊರಗಿಡಲಾಗಿತ್ತು. ಕೋಚ್, ಕ್ಯಾಪ್ಟನ್, ಮ್ಯಾನೇಜ್ಮೆಂಟ್ ಮೇಲಿರೋ ನೋವಿಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗ್ತಿದೆ.
ಈ ಸರಣಿಯ ಮೂಲಕ ಅಶ್ವಿನ್ ನಿವೃತ್ತರಾಗಲು ನಿರ್ಧರಿಸಿದ್ದರೆ, ಸರಣಿ ಆರಂಭಕ್ಕೂ ಮುನ್ನ ತಿಳಿಸುತ್ತಿದ್ದರು. ಆದರೆ ಸರಣಿಯ ನಡುವೆಯೇ ದಿಢೀರ್ ನಿವೃತ್ತಿ ನೀಡಿರುವುದಕ್ಕೆ ಯಾರಾದರೂ ಒತ್ತಡ ಹೇರಿದ್ದಾರಾ ಎಂಬ ಅನುಮಾನ ಮೂಡಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾದಿಂದ ಇಬ್ಬರಿಗೆ ಗೇಟ್ ಪಾಸ್ ನೀಡುವುದಾಗಿ ಬಿಸಿಸಿಐ ತಿಳಿಸಿದೆ. ಅವರಲ್ಲಿ ಒಬ್ಬರು ಅಶ್ವಿನ್ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ ರವಿಚಂದ್ರನ್ ಅಶ್ವಿನ್ ದಿಢೀರ್ ನಿವೃತ್ತಿ ಘೋಷಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಆದರೂ ಕೂಡಾ ಸರಣಿ ಮಧ್ಯದಲ್ಲೇ ರವಿಚಂದ್ರನ್ ಅಶ್ವಿನ್ ತಮ್ಮ ಕೆರಿಯರ್ ಕೊನೆಗೊಳಿಸಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.