6 ವಿಕೆಟ್ ಕಿತ್ತು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ! – ಹೆಡ್ ಶತಕ ಸಿಡಿಸಿದ ಪಂದ್ಯಗಳಲ್ಲೆಲ್ಲಾ ಭಾರತದ ಸೋಲು ಫಿಕ್ಸ್!
ಟೀಂ ಇಂಡಿಯಾ ಪಾಲಿಗೆ ಸದಾ ಆಪತ್ಬಾಂಧವನಾಗುವ ವೇಗಿ ಜಸ್ಪ್ರಿತ್ ಬುಮ್ರಾ ಮೂರನೇ ಟೆಸ್ಟ್ನಲ್ಲೂ ಅಬ್ಬರಿಸಿದ್ದಾರೆ. ಆಸ್ಟ್ರೇಲಿಯಾ ಆಟಗಾರರ 6 ವಿಕೆಟ್ ಕಿತ್ತು ಮಿಂಚಿದ್ದಾರೆ. ವಿದೇಶಿ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಭಾರತದ ವೇಗಿ ಎಂಬ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಭಾರತದ ಮಾಜಿ ನಾಯಕ ಕಪಿಲ್ ದೇವ್ ಹೆಸರಿನಲ್ಲಿತ್ತು.
ಇದನ್ನೂ ಓದಿ:RCBಗೆ ಕೆಎಲ್ ತಪ್ಪಿಸಿದ್ದೇ DK? – ಇಶಾನ್ ಕಿಶನ್ ಗೆ ಪವರ್ ಇಲ್ವಾ?
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲೇ ಬೃಹತ್ ರನ್ಗಳನ್ನು ಕಲೆ ಹಾಕಿದ್ದರಿಂದ ಭಾರತಕ್ಕೆ ದೊಡ್ಡ ಚಾಲೆಂಜ್ ಆಗಿದೆ. ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದರೆ, ಆಕಾಶ್ ದೀಪ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದುಕೊಂಡರು.
ಹೆಡ್ ಶತಕ ಸಿಡಿಸಿದರೆ ಭಾರತಕ್ಕೆ ಸೋಲು!
ಟ್ರಾವಿಸ್ ಹೆಡ್ ತಮ್ಮ ಟೆಸ್ಟ್ ಕರಿಯರ್ನಲ್ಲಿ 9ನೇ ಟೆಸ್ಟ್ ಶತಕ ಸಿಡಿಸಿದ್ದಾರೆ. ಅದೂ ಕೂಡ ಕ್ರೂಶಿಯಲ್ ಟೈಮ್ಗಳಲ್ಲೇ ಅಬ್ಬರಿಸೋ ಹೆಡ್ ಭಾರತಕ್ಕೆ ತಲೆನೋವಾಗಿಯೇ ಕಾಡ್ತಿದ್ದಾರೆ. 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮತ್ತು ಅದೇ ವರ್ಷ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ರು. ಇದೀಗ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಪರ್ತ್ ಟೆಸ್ಟ್ನಲ್ಲಿ ಶತಕ ಸಿಡಿಸಲು ವಿಫಲವಾಗಿದ್ದರು. ಅಡಿಲೇಡ್, ಬ್ರಿಸ್ಬೇನ್ ಟೆಸ್ಟ್ನಲ್ಲಿ ಶತಕ ಬಾರಿಸಿದ್ದಾರೆ. ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ನಲ್ಲಿ 140 ರನ್ ಸಿಡಿಸಿ ಅಬ್ಬರಿಸಿದ್ದ ಹೆಡ್, ಇದೀಗ ಬ್ರಿಸ್ಬೇನ್ ಟೆಸ್ಟ್ನಲ್ಲೂ 152 ರನ್ ಚಚ್ಚಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಅಚ್ಚರಿ ಏನೆಂದರೆ ಹೆಡ್ ಶತಕ ಸಿಡಿಸಿದ ಎಲ್ಲಾ ಪಂದ್ಯಗಳಲ್ಲೂ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಗಬ್ಬಾ ಟೆಸ್ಟ್ನಲ್ಲೂ ಭಾರತ ತಂಡಕ್ಕೆ ಆತಂಕ ಮೂಡಿಸಿದೆ.
ಇಲ್ಲಿ ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಟ್ರಾವಿಸ್ ಹೆಡ್ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ವಿರುದ್ಧದ ಪಂದ್ಯಗಳಲ್ಲಿ ಹೆಚ್ಚು ಅಬ್ಬರಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ವಿರುದ್ಧ ಟ್ರಾವಿಸ್ ಹೆಡ್ ಈವರೆಗೆ 6 ಇನಿಂಗ್ಸ್ ಆಡಿದ್ದಾರೆ. ಈ ಆರು ಇನಿಂಗ್ಸ್ಗಳಲ್ಲಿ 4 ಸೆಂಚುರಿ ಸಿಡಿಸಿರುವುದು ವಿಶೇಷ. ರೋಹಿತ್ ಶರ್ಮಾ ನಾಯಕರಾಗಿದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023 ಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ 163 ರನ್ ಬಾರಿಸಿದ್ದರು. ಇನ್ನು 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 137 ರನ್ ಚಚ್ಚಿದ್ದರು. ಇದೀಗ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 140 ಹಾಗೂ 152 ರನ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಮುಂದಾಳತ್ವದ ಟೀಮ್ ಇಂಡಿಯಾ ವಿರುದ್ಧ ಟ್ರಾವಿಸ್ ಹೆಡ್ 6 ಪಂದ್ಯಗಳಲ್ಲಿ 4 ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಸೋ ಮುಂದಿನ ಎರಡೂ ಇನ್ನಿಂಗ್ಸ್ಗಳಲ್ಲೂ ಟ್ರಾವಿಡ್ ಹೆಡ್ ತಲೆನೋವಾಗೋ ಆತಂಕ ಮೂಡಿಸಿದ್ದಾರೆ. ಹೀಗೆ ಆಸಿಸ್ ಆಟಗಾರರು ಅಬ್ಬರಿಸ್ತಿದ್ರೆ ಟೀಂ ಇಂಡಿಯಾ ಬ್ಯಾಟರ್ಸ್ ಮಾತ್ರ ಮಂಕಾಗಿದ್ದಾರೆ. ಮೂರನೇ ಪಂದ್ಯವನ್ನ ಆಸಿಸ್ ಆಟಗಾರರೇ ಗೆಲ್ಲೋದು ಫಿಕ್ಸ್ ಆಗಿದೆ.