IND Vs AUS.. ಮಳೆಗೆ ಪಂದ್ಯ ರದ್ದು.. ಭಾರತಕ್ಕೆ ನಷ್ಟ.. ಆಸಿಸ್ ಗೆ ಲಾಭ ಹೇಗೆ? – WTC ಕನಸಿಗೆ ಎಳ್ಳುನೀರು ಬಿಡುತ್ತಾ?

IND Vs AUS.. ಮಳೆಗೆ ಪಂದ್ಯ ರದ್ದು.. ಭಾರತಕ್ಕೆ ನಷ್ಟ.. ಆಸಿಸ್ ಗೆ ಲಾಭ ಹೇಗೆ? – WTC ಕನಸಿಗೆ ಎಳ್ಳುನೀರು ಬಿಡುತ್ತಾ?

ಆಸ್ಟ್ರೇಲಿಯಾ ಸರಣಿಯಲ್ಲಿರುವ ಟೀಂ ಇಂಡಿಯಾ ಇದೀಗ ಮೂರನೇ ಪಂದ್ಯಕ್ಕೆ ಕಣಕ್ಕಿಳಿದಿದೆ. ಬಟ್ ಪಂದ್ಯದ ಆರಂಭದಲ್ಲೇ ಮಳೆ ಆಘಾತ ಎದುರಾಗಿದ್ದು, ಮೊದಲ ದಿನದ ಆಟವನ್ನ ಸ್ಥಗಿತಗೊಳಿಸಲಾಗಿದೆ. ಹಾಗೇನಾದ್ರೂ ಮಳೆಯಿಂದ ಪಂದ್ಯ ಸಂಪೂರ್ಣ ರದ್ದಾದ್ರೆ ಭಾರತಕ್ಕೆ ದೊಡ್ಡ ನಷ್ಟವಾಗಲಿದೆ. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಪುಟದಿಂದ ಒಪ್ಪಿಗೆ – ಪ್ರಸಕ್ತ ಅಧಿವೇಶನದಲ್ಲೇ ಮಂಡನೆ?

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಪ್ರವಾಸದಲ್ಲಿದೆ. ಈಗಾಗ್ಲೇ ಎರಡು ಮ್ಯಾಚ್​ಗಳು ಮುಗಿಗಿದ್ದು ಎರಡೂ ರಾಷ್ಟ್ರಗಳು ಒಂದೊಂದು ಮ್ಯಾಚ್ ಗೆದ್ದಿವೆ. ಇದೀಗ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದೆ. ಉಭಯ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿದ್ದು, ಭಾರತ ತಂಡ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯಕ್ಕೆ ಟೀಮ್​ನಲ್ಲಿ ಕೆಲವೊಂದಷ್ಟು ಬದಲಾವಣೆಗಳನ್ನೂ ಮಾಡಿಕೊಳ್ಳಲಾಗಿದೆ.

ಪಂದ್ಯ ಆರಂಭವಾದ ಕೆಲ ಹೊತ್ತಿನಲ್ಲೇ ಮಳೆ ಆರಂಭ!

ಬ್ರಿಸ್ಬೇನ್‌ನಲ್ಲಿ ಗಬ್ಬಾ ಟೆಸ್ಟ್ ಆರಂಭವಾಗಿದ್ದು, ಟಾಸ್​ ಗೆದ್ದಿರುವ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ಪಂದ್ಯ ಗೆದ್ದು ಎರಡನೇ ಟೆಸ್ಟ್ ಸೋತಿರುವ ಟೀಂ ಇಂಡಿಯಾಗೆ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಹಿನ್ನೆಲೆಯಲ್ಲಿ ಮೂರನೇ ಟೆಸ್ಟ್​ ಗೆಲ್ಲಲೇಬೇಕಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಟೀಂ ಇಂಡಿಯಾ ಮೈದಾನಕ್ಕಿಳಿದಿತ್ತು. ಭಾರತೀಯ ಕಾಲಮಾನ ಬೆಳಿಗ್ಗೆ 5.50 ರಿಂದ ಶುರುವಾದ ಈ ಪಂದ್ಯದ ಮೊದಲ ಸೆಷನ್​ನಲ್ಲಿ ಕೇವಲ 13.2 ಓವರ್​​ಗಳನ್ನು ಆಡಲಾಗಿದೆ. ಇದರ ನಡುವೆ ಎರಡು ಬಾರಿ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಮದ್ಯಾಹ್ನದ ಸೆಷನ್ ವೇಳೆಗೂ ಮಳೆ ಬಿಡುವು ಕೊಡದ ಕಾರಣ ಮೊದಲ ದಿನದಾಟವನ್ನ ಸ್ಥಗಿತಗೊಳಿಸಲಾಯ್ತು.

ಎಚ್ಚರಿಕೆಯ ಆಟವಾಡ್ತಿದ್ದಾರೆ ಆಸ್ಟ್ರೇಲಿಯಾ ಓಪನರ್ಸ್!

ಟಾಸ್ ಸೋತು ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜ ಹಾಗೂ ನಾಥನ್ ಮೆಕ್​ಸ್ವೀನಿ ಆರಂಭಿಕರಾಗಿ ಕಣಕ್ಕಿಳಿದಿದ್ರು. 13.2 ಓವರ್​ಗಳವರೆಗೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿರುವ ಆಸ್ಟ್ರೇಲಿಯಾ ಓಪನರ್​​ಗಳು ಯಾವುದೇ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡರು. 47 ಎಸೆತಗಳನ್ನು ಎದುರಿಸಿದ ಉಸ್ಮಾನ್ ಖ್ವಾಜಾ ಅಜೇಯ 19 ರನ್ ಬಾರಿಸಿದರೆ, ನಾಥನ್ ಮೆಕ್​ಸ್ವೀನಿ 33 ಎಸೆತಗಳಲ್ಲಿ 4 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 28 ರನ್ ಕಲೆಹಾಕಿದೆ.

ಮೂರನೇ ಮ್ಯಾಚ್ ಗೆ 2 ಬದಲಾವಣೆ ಮಾಡಿದ ಭಾರತ!

ಕಳೆದ ಪಂದ್ಯದಲ್ಲಿ ಸೋಲು ಕಂಡಿರೋ ಭಾರತ ಈ ಮ್ಯಾಚ್​ನಲ್ಲಿ ಕೆಲ ಬದಲಾವಣೆಗಳನ್ನ ಮಾಡಿದೆ. ಹರ್ಷಿತ್ ರಾಣಾ ಮತ್ತು ಆರ್ ಅಶ್ವಿನ್ ಬದಲಾಗಿ ಆಕಾಶ್ ದೀಪ್ ಮತ್ತು ರವೀಂದ್ರ ಜಡೇಜಾಗೆ ಅವಕಾಶ ನೀಡಲಾಗಿದೆ. ಇನ್ನೊಂದು ವಿಚಾರ ಅಂದ್ರೆ  ರೋಹಿತ್​ ಶರ್ಮಾ ಮತ್ತೆ ಓಪನಿಂಗ್ ಸ್ಲಾಟ್​ಗೆ ಮರಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಮತ್ತೆ ಮಧ್ಯಮ ಕ್ರಮಾಂಕದಲ್ಲೇ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಭಾರತದ ಪರ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್​ ಪಂತ್, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್​ ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿದಿದ್ದಾರೆ.

ಮೂರು ಪಂದ್ಯಗಳಿಗೆ ಮೂವರು ಸ್ಪಿನ್ನರ್ಸ್ ಕಣಕ್ಕಿಳಿಸಿದ ಭಾರತ!

ಆಸ್ಟ್ರೇಲಿಯಾ ಸರಣಿಯಲ್ಲಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳಿಗೂ ಮೂವರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸಿದೆ. ಪರ್ತ್​ ಟೆಸ್ಟ್​​​ನಲ್ಲಿ ವಾಷಿಂಗ್ಟನ್ ಸುಂದರ್​ಗೆ ಅವಕಾಶ ನೀಡಲಾಗಿತ್ತು. ಅಡಿಲೇಡ್​ ಟೆಸ್ಟ್​ಗೆ ಆರ್ ಅಶ್ವಿನ್ ಅವಕಾಶ ಪಡೆದಿದ್ದರು. ಇದೀಗ ರವೀಂದ್ರ ಜಡೇಜಾಗೆ ಮಣೆ ಹಾಕಲಾಗಿದೆ. ಇನ್ನು ಆಸ್ಟ್ರೇಲಿಯ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಜೋಶ್ ಹೇಜಲ್‌ವುಡ್ ತಂಡಕ್ಕೆ ಮರಳಿದ್ದಾರೆ.

5 ದಿನವೂ ಮಳೆ ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ!

ಪರ್ತ್ ಮತ್ತು ಅಡಿಲೇಡ್ ನಂತರ ಬಳಿಕ ಭಾರತಕ್ಕೆ ಗಾಬ್ಬಾ ಸವಾಲು ಎದುರಾಗಿದೆ. ಆದರೆ ಹವಾಮಾನ ಇಲಾಖೆ ಡಿಸೆಂಬರ್ 14 ರ ಶನಿವಾರದಿಂದ ಪ್ರಾರಂಭವಾಗುವ ಈ ಪಂದ್ಯದ ಎಲ್ಲಾ ಐದು ದಿನಗಳು ಅಂದರೆ ಡಿಸೆಂಬರ್ 18 ರವರೆಗೆ ಮಳೆಯ ಮುನ್ಸೂಚನೆ ನೀಡಿದೆ. ಈ ಐದು ದಿನಗಳಲ್ಲಿ ಮಿಂಚು ಮತ್ತು ಚಂಡಮಾರುತದೊಂದಿಗೆ ಮೋಡ ಕವಿದ ವಾತಾವರಣ ಇರಲಿದೆ. ಹಾಗೇನಾದ್ರೂ ಮಳೆಯಿಂದಾಗಿ ಪಂದ್ಯ ರದ್ದಾಗಿ ಡ್ರಾದಲ್ಲಿ ಅಂತ್ಯಗೊಂಡರೆ ಡಬ್ಲ್ಯುಟಿಸಿ ಫೈನಲ್‌ಗೆ ಭಾರತದ ಹಾದಿ ಭಾಗಶಃ ಮುಚ್ಚಲಿದೆ. ಇದೇ ಕಾರಣಕ್ಕೆ  ಭಾರತ ವಿಕೆಟ್ ಬೇಟೆಗೆ ಪ್ಲ್ಯಾನ್ ಮಾಡ್ತಿದ್ರೆ ಆಸ್ಟ್ರೇಲಿಯಾ ಬಿಗ್​ಸ್ಕೋರ್​ ಟಾರ್ಗೆಟ್ ಇಟ್ಕೊಂಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯ. ಭಾರತ ಮೊದಲ ಟೆಸ್ಟ್ ಗೆದ್ದುಕೊಂಡರೆ, ಎರಡನೇ ಟೆಸ್ಟ್​ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿದೆ. ಇನ್ನುಳಿದ ಮೂರು ಟೆಸ್ಟ್​ಗಳಲ್ಲೂ ಭಾರತ ಗೆದ್ದರೆಷ್ಟೇ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ಗೆ ಪ್ರವೇಶ ಮಾಡಬಹುದು.

ಸದ್ಯ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್​ ರೇಸ್​ನ ಅಂಕಪಟ್ಟಿಯಲ್ಲಿ ಸೌತ್ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಸೆಕೆಂಡ್ ಪ್ಲೇಸ್​ನಲ್ಲಿದ್ರೆ ಭಾರತ ಮೂರನೇ ಸ್ಥಾನದಲ್ಲಿದೆ. ಗಾಬಾದಲ್ಲಿ ನಡೆಯುತ್ತಿರೋ ಪಂದ್ಯಕ್ಕೆ ಮಳೆ ಅಡ್ಡಿಪಡಿಸದೇ ಭಾರತ ಗೆಲುವು ಸಾಧಿಸಿದ್ರೆ ಎರಡನೇ ಸ್ಥಾನಕ್ಕೆ ಏರುತ್ತದೆ. ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಜಾರಲಿದೆ. ಅಕಸ್ಮಾತ್ ಆಸ್ಟ್ರೇಲಿಯ ಗೆದ್ದರೆ ಸದ್ಯದ ಯಾವುದೇ ಬದಲಾವಣೆ ಇರುವುದಿಲ್ಲ. ಒಟ್ನಲ್ಲಿ ಭಾರತ  ಮೊದಲ ಪಂದ್ಯದಲ್ಲಿ 295 ರನ್​​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 10 ವಿಕೆಟ್​ಗಳ ಗೆಲುವು ದಾಖಲಿಸಿದೆ. ಇದೀಗ ಉಭಯ ತಂಡಗಳು ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಮಳೆಗೆ ಮೊದಲ ದಿನದ ಸೆಷನ್ ಬಲಿಯಾಗಿದೆ.

Shwetha M