ಮತ್ತೊಂದು ಪ್ರಯೋಗ.. ಡ್ರೋನ್ ಪ್ರತಾಪ್ ಅರೆಸ್ಟ್! – ಬುದ್ಧಿ ಕಲಿಯೋದೇ ಇಲ್ವಾ ಪ್ರತಾಪ್?
ಪ್ರತಾಪ್ ನ ಜನ ಕ್ಷಮಿಸಿದ್ದೇ ತಪ್ಪಾ?
ಡ್ರೋನ್ ಪ್ರತಾಪ್ ಅರೆಸ್ಟ್ ಆಗಿದ್ದಾನೆ. ಸೈನ್ಸ್ ಎಕ್ಸ್ಪೆರಿಮೆಂಟ್ ಮಾಡ್ತೀನಿ ಅಂತಾ ಹೋಗಿ ಚೈಲ್ಡ್ ಥರ ವರ್ತನೆ ತೋರಿ ಪೊಲೀಸರ ವಶದಲ್ಲಿದ್ದಾನೆ. ಜನರ ಹಾದಿ ತಪ್ಪಿಸೋ ಕೆಲಸಕ್ಕೆ ಮತ್ತೆ ಜನ ಸಿಟ್ಟಾಗಿದ್ದಾರೆ. ಅಷ್ಟಕ್ಕೂ ಈ ಸಲ ಪ್ರತಾಪ್ ಮಾಡಿರೋ ಎಡವಟ್ಟೇನು? ಮಕ್ಕಳೇನಾದ್ರೂ ಪ್ರತಾಪ್ ಹೇಳಿದಂತೆ ಮಾಡಿದರೆ ಎಂಥಾ ಅಪಾಯ ಆಗುತ್ತದೆ? ಇದಕ್ಕೇನಾ ಜನ ಕ್ಷಮಿಸಿದ್ದು? ಪ್ರತಾಪ್ ಹುಚ್ಚಾಟಕ್ಕೆ ಮಿತಿಯಿಲ್ವಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಡ್ಯಾನ್ಸರ್ ಡ್ರೋನ್.. ಸೈಂಟಿಸ್ಟ್ ಅಲ್ವಾ? – ಪ್ರತಾಪ್ ಟ್ಯಾಲೆಂಟ್ ಒಂದಾ ಎರಡಾ?
ಡ್ರೋನ್ ಪ್ರತಾಪ್. ಬಡತನದಲ್ಲೇ ಬೆಳೆದು ಮಹಾ ಸಾಧನೆ ಮಾಡಿದ್ದಾನೆ ಅಂತಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳು ಕರೆದು ಶಾಲು ಹೊದಿಸಿ ಸನ್ಮಾನ ಮಾಡಿದ್ದೂ ಎಲ್ಲರಿಗೂ ಗೊತ್ತಿದೆ. ದೊಡ್ಡ ದೊಡ್ಡ ಕಂಪನಿಗಳ ಮಾಲೀಕರು ನಮಗೊಂದಷ್ಟು ಡ್ರೋನ್ ಮಾಡಿಕೊಡಪ್ಪ ಅಂತಾ ಲಕ್ಷ ಲಕ್ಷ ಕೊಟ್ಟಿರೋದು ಗೊತ್ತಿದೆ. ಯಾವಾಗ ಪ್ರತಾಪ್ ವಿಜ್ಞಾನಿನೇ ಅಲ್ಲ. ಯಾವ ಡ್ರೋನ್ನೂ ಕಂಡು ಹಿಡಿದಿಲ್ಲ ಅಂತಾ ಗೊತ್ತಾಯ್ತೋ ಬಾಯಿಗೆ ಬಂದಂಗೆ ಬೈದಿದ್ರು. ಸೋಶಿಯಲ್ ಮೀಡಿಯಾಗಳಲ್ಲಿ ಜನ ಕೂಡ ಉಗಿದು ಉಪ್ಪಿನಕಾಯಿ ಹಾಕಿದ್ದೂ ಇದೆ. ಪ್ರತಾಪ್ ಮಾಡಿದ್ದ ಮೋಸಕ್ಕೆ ಆತನ ಪೋಷಕರೂ ಮಗನ ಜೊತೆ ಮಾತು ಬಿಟ್ಟಿದ್ದರು. ಒಂದು ಲೆಕ್ಕದಲ್ಲಿ ಹೇಳ್ಬೇಕು ಅಂದ್ರೆ ಪ್ರತಾಪ್ ಹೊರಜಗತ್ತಿನಲ್ಲಿ ತಲೆ ಎತ್ತಿಕೊಂಡು ಓಡಾಡೋದೇ ಕಷ್ಟ ಇತ್ತು. ಇದೆಲ್ಲದ್ರಿಂದ ಪ್ರತಾಪ್ ಡಿಪ್ರೆಶನ್ಗೂ ಹೋಗಿದ್ದರು. ನಂತರ ಪ್ರತಾಪ್ಗೆ ಪುನರ್ಜನ್ಮ ಕೊಟ್ಟಿದ್ದೇ ಬಿಗ್ ಬಾಸ್ ರಿಯಾಲಿಟಿ ಶೋ. ಜಗತ್ತಿನಲ್ಲಿ ಮತ್ತೆ ತಲೆಎತ್ತಿ ನಡೀತಿದ್ದ ಪ್ರತಾಪ್ ಈಗ ಮತ್ತೊಮ್ಮೆ ಚೈಲ್ಡಿಶ್ ಬುದ್ಧಿ ತೋರಿಸಿ ಅರೆಸ್ಟ್ ಆಗಿದ್ದಾರೆ.
ಪ್ರತಾಪ್ಗೆ ಸೈನ್ಸ್ ಬಗ್ಗೆ ಚೂರಾದ್ರೂ ನಾಲೆಡ್ಜ್ ಇದ್ಯೋ ಅಥವಾ ಜನರನ್ನ ನಂಬಿಸೋಕೆ ಹಾಗೆ ಆಡ್ತಿದ್ದಾರೋ ಗೊತ್ತಿಲ್ಲ. ರೀಸೆಂಟ್ ಆಗಿ ಡ್ರೋನ್ಗಳ ಬಗ್ಗೆ ಒಂದಷ್ಟು ವಿಡಿಯೋಗಳನ್ನ ಮಾಡಿ ಪೋಸ್ಟ್ ಮಾಡುತ್ತಿದ್ರು. 50ಕೆಜಿ, 70 ಕೆಜಿ ಡ್ರೋನ್ ಇದೆ, ಕೃಷಿಗೆ ಬಳಸಬಹುದು ಅಂತೆಲ್ಲಾ ಹೇಳಿದ್ದೂ ಇದೆ. ಆದರೆ, ಈ ಸಲ ವಿಜ್ಞಾನದ ಪ್ರಯೋಗ ತೋರಿಸಲು ಹೋಗಿ ಹುಚ್ಚಾಟ ಆಡಿದ್ದಾರೆ. ಸುಮಾರು ಅರ್ಧ ಕೆಜಿಯಷ್ಟು ಸೋಡಿಯಂ ನ ಕವರ್ನಲ್ಲಿ ತುಂಬಿ ಅದನ್ನ ನೀರಿಗೆ ಎಸೆದಿದ್ದಾರೆ. ಕೆಮಿಕಲ್ ಎಸೆದಿದ್ದೇ ತಡ ನೀರಿನಲ್ಲಿ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿತ್ತು. ಬೆಂಕಿ ಸಹ ಚಿಮ್ಮಿತ್ತು. ಸ್ಫೋಟ ಆಗ್ತಿದ್ದಂತೆ ಪ್ರತಾಪ್ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಕೂಗಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೇ ಪ್ರಯೋಗದಿಂದ ಪರಿಸರ ಪ್ರೇಮಿಗಳು ರೊಚ್ಚಿಗೆದ್ದಿದ್ದಾರೆ.
ಚೈಲ್ಡಿಶ್ ಪ್ರತಾಪ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ ಪರಿಸರವಾದಿಗಳು!
ಈ ಥರದ ಸೈನ್ಸ್ ಪ್ರಯೋಗಗಳನ್ನ ಮಾಡೋದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ರು. ಅಲ್ದೇ ಯಾವೆಲ್ಲ ಕೆಮಿಕಲ್ ಹಾಕಿದರೆ ಬ್ಲಾಸ್ಟ್ ಆಗುತ್ತೆ ಅನ್ನೋದನ್ನ ಲೈವ್ನಲ್ಲಿ ಪ್ರತಾಪ್ ಹೇಳಿದ್ರು. ಇದನ್ನು ಕಿಡಿಗೇಡಿಗಳು ಕೃತ್ಯಕ್ಕೆ ಬಳಸಿಕೊಳ್ಳೋ ಚಾನ್ಸಸ್ ಇರುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಪ್ರಯೋಗ ಮಾಡಲು ಮುಂದಾದ್ರೆ ದೊಡ್ಡ ಅಪಾಯವೇ ಆಗುತ್ತೆ. ಕೂಡಲೇ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಬೇಕು ಅಂತಾ ಪರಿಸರ ಪ್ರೇಮಿಗಳು ಒತ್ತಾಯಿಸಿದ್ರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಗುರುವಾರ ಪ್ರತಾಪ್ನನ್ನ ಅರೆಸ್ಟ್ ಮಾಡಿದ್ದಾರೆ.
ಸೋಡಿಯಂ ಬ್ಲಾಸ್ಟ್ ನಿಂದ ನೀರು ವಿಷವಾಗಿ ಜಲಚರಗಳು ಸಾವು!
ಡ್ರೋನ್ ಪ್ರತಾಪ್ ವಿಡಿಯೋಗೋಸ್ಕರವೇ ಇಂಥಾದ್ದೊಂದು ದುಸ್ಸಾಹಸಕ್ಕೆ ಕೈ ಹಾಕಿರೋದು ಸ್ಪಷ್ಟವಾಗಿದೆ. ಹೀಗಾಗಿ ಸೋಡಿಯಂ ಬ್ಲಾಸ್ಟ್ ಆಗಿರೋ ನೀರನ್ನ ಪ್ರಾಣಿ ಪಕ್ಷಿಗಳು ಕುಡಿದರೆ ಗತಿ ಏನು? ಕನಿಷ್ಠ ಜವಾಬ್ದಾರಿಯೂ ಇಲ್ಲದೆ ಇಂಥಾ ವರ್ತನೆ ಬೇಕಿತ್ತಾ ಅಂತಾ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಅದೂ ಅಲ್ದೇ ಈ ರೀತಿಯ ಸ್ಫೋಟ ನಡೆಸಲು ಅನುಮತಿ ಪಡೆಯಬೇಕು. ಬೇಕಾದ ಕಡೆ, ಖುಷಿಗೋ, ವಿಡಿಯೋಗೋಸ್ಕರನೋ ಬ್ಲಾಸ್ಟ್ ಮಾಡುವಂತಿಲ್ಲ. ಕೆಲ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಸೋಡಿಯಂ ಬ್ಲಾಸ್ಟ್ನಿಂದ ಕೃಷಿ ಹೊಂಡದಲ್ಲಿರುವ ಜಲಚರಗಳು ಸಾಯುತ್ತದೆ. ನೀರು ವಿಷಕಾರಿಯಾಗಿದೆ. ಇದರ ಕನಿಷ್ಠ ಜ್ಞಾನವಿಲ್ಲದ ಡ್ರೋನ್ ಪ್ರತಾಪ್ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹಲವರು ಆಗ್ರಹಿಸಿದ್ದರು. ವಿಡಿಯೋಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಸೆಕ್ಷನ್ 288 ರ ಭಾರತೀಯ ದಂಡ ಸಂಹಿತೆ ಪ್ರಕರಣದಡಿಯಲ್ಲಿ ದೂರು ದಾಖಲಿಸಿ ಸೆಕ್ಷನ್ 3ರ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ.