IPL ಹರಾಜಿನಲ್ಲೂ CSK ಫಿಕ್ಸಿಂಗ್ – ಮೋಸದಿಂದ 5 ಸಲ ಟ್ರೋಫಿ ಗೆದ್ರಾ?
ಅಂಪೈರ್.. ಪ್ಲೇಯರ್ಸ್.. ಏನಿದು ಕಳ್ಳಾಟ?

IPL ಹರಾಜಿನಲ್ಲೂ CSK ಫಿಕ್ಸಿಂಗ್ – ಮೋಸದಿಂದ 5 ಸಲ ಟ್ರೋಫಿ ಗೆದ್ರಾ?ಅಂಪೈರ್.. ಪ್ಲೇಯರ್ಸ್.. ಏನಿದು ಕಳ್ಳಾಟ?

ಐಪಿಎಲ್ ಆಕ್ಷನ್ ಮುಗಿದು ಹೊಸ ಆಟಗಾರರಿಗೆಲ್ಲಾ ಫ್ರಾಂಚೈಸಿಗಳು ವೆಲ್ಕಂ ಮಾಡ್ತಿವೆ. ಮತ್ತೊಂದೆಡೆ ಪ್ಲೇಯರ್ಸ್ ಕೂಡ ತಮ್ಮ ತಮ್ಮ ಹಳೇ ಟೀಮ್ಸ್, ಫ್ಯಾನ್ಸ್​ಗೆ ಧನ್ಯವಾದ ಹೇಳ್ತಿದ್ದಾರೆ. ಬಟ್ ಇಂಥಾ ಟೈಮಲ್ಲೇ ಹರಾಜಿನಲ್ಲಿ ಫಿಕ್ಸಿಂಗ್ ನಡೆದಿದೆ. ಆಟಗಾರರನ್ನ ಖರೀದಿ ಮಾಡುವಲ್ಲಿ ಡೀಲ್ ಮಾಡ್ಕೊಂಡಿದ್ದಾರೆ. ಅಂಪೈರ್​ಗಳ ನೇಮಕದಲ್ಲೂ ಕಳ್ಳಾಟ ನಡೆದಿದೆ ಅನ್ನೋ ಸ್ಫೋಟಕ ಸುದ್ದಿ ಹೊರಬಿದ್ದಿದೆ. ಅದ್ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬಹುದೊಡ್ಡ ಆರೋಪವೇ ಕೇಳಿ ಬಂದಿದೆ. ಹಾಗಾದ್ರೆ ಏನಿದು ಸ್ಪಾಟ್ ಫಿಕ್ಸ್ ಹಾಗೇ ಆಕ್ಷನ್ ಡೀಲ್? ಸಿಎಸ್​​ಕೆಯಿಂದ ಮಹಾಪ್ರಮಾದ ನಡೀತಾ? ಈ ಬಗೆಗಿನ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮೀ ನಿವಾಸ ಸೀರಿಯಲ್‌ ನಟಿ ಚಂದನಾ ಅನಂತಕೃಷ್ಣ  

ಸ್ಪಾಟ್ ಫಿಕ್ಸಿಂಗ್. ಐಪಿಎಲ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ವಿವಾದ. ಆಟಗಾರರೂ ಬ್ಯಾನ್ ಆಗಿದ್ರು. ತಂಡಗಳಿಗೂ ಬ್ಯಾನ್ ಬಿಸಿ ತಟ್ಟಿತ್ತು. ಇದೀಗ ಮೊನ್ನೆಯಷ್ಟೇ 18ನೇ ಸೀಸನ್ ಐಪಿಎಲ್​ಗೆ ಮೆಗಾ ಹರಾಜು ಮುಗಿದಿದ್ದು ಮತ್ತೊಮ್ಮೆ ಫಿಕ್ಸಿಂಗ್ ಭೂತ ಸದ್ದು ಮಾಡ್ತಿದೆ. ಅದೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ನೇರಾನೇರ ಆರೋಪ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​​ನ ಮಾಜಿ ಅಧ್ಯಕ್ಷರ ಆರೋಪವು ಭಾರೀ ಚರ್ಚೆಗೆ ಕಾರಣವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಚಾಂಪಿಯನ್ ಪಟ್ಟದ ಮೇಲೆಯೇ ಪ್ರಶ್ನೆಗಳೆದ್ದಿವೆ. ಏಕೆಂದರೆ ಸಿಎಸ್​​​ಕೆ ಫ್ರಾಂಚೈಸಿ ಈ ಹಿಂದೆ 2 ವರ್ಷಗಳ ಕಾಲ ನಿಷೇಧಕ್ಕೊಳಗಾಗಿತ್ತು. ಇದೀಗ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮೇಲೆ ಅಂಪೈರ್ ಫಿಕ್ಸಿಂಗ್ ಆರೋಪ ಕೇಳಿ ಬಂದಿರೋದು ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿರುದ್ಧ ಮೋದಿ ವಾಗ್ದಾಳಿ!

ಇಂಡಿಯನ್ ಪ್ರೀಮಿಯರ್ ಲೀಗ್​​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸಿಎಸ್​ಕೆ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಡುತ್ತಿದ್ದ ಮಾಸ್ಟರ್ ಪ್ಲ್ಯಾನ್​​ಗಳನ್ನು ಸಹ ಬಿಚ್ಚಿಟ್ಟಿದ್ದಾರೆ. ಐಸಿಸಿ ಮಾಜಿ ಅಧ್ಯಕ್ಷ ಮತ್ತು ಸಿಎಸ್‌ಕೆ ಮಾಲೀಕ ಎನ್ ಶ್ರೀನಿವಾಸನ್  ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪಂದ್ಯಗಳಿದ್ದ ಅವಧಿಯಲ್ಲಿ ತನಗೆ ಅನುಕೂಲ ಆಗುವ ರೀತಿಯಲ್ಲಿ ಅಂಪೈರ್‌ಗಳನ್ನು ಫಿಕ್ಸ್ ಮಾಡುತ್ತಿದ್ದರು. ತಮಗೆ ಬೇಕಾದವರನ್ನೇ ನೇಮಿಸಿಕೊಳ್ಳುತ್ತಿದ್ದರು. ತಮ್ಮ ತಂಡಕ್ಕಾಗಿ ಹರಾಜು ಪ್ರಕ್ರಿಯೆಯಲ್ಲೂ ಫಿಕ್ಸಿಂಗ್ ಮಾಡುತ್ತಿದ್ದರು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಶ್ರೀನಿವಾಸನ್ ಅವರು ತಮ್ಮ ಉದ್ಧಾರಕ್ಕಷ್ಟೇ ಇಂಪಾರ್ಟೆನ್ಸ್ ಕೊಡ್ತಿದ್ರು. ಐಪಿಎಲ್ ಪ್ರತಿಷ್ಠೆ ಮಣ್ಣುಪಾಲಾದರೂ ಅವ್ರಿಗೆ ಲೆಕ್ಕಕ್ಕೆ ಇರ್ಲಿಲ್ಲ.  ಸಿಎಸ್​ಕೆ ಯಶಸ್ಸೇ ಮುಖ್ಯವಾಗಿತ್ತು. ಇದಕ್ಕಾಗಿ ಸಿಎಸ್​ಕೆ ಪಂದ್ಯಗಳಿದ್ದಾಗ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರು. ಹರಾಜಿನಲ್ಲೂ ಫಿಕ್ಸಿಂಗ್ ಮಾಡುತ್ತಿದ್ದರು. ಚೆನ್ನೈ ಮೂಲದ ಅಂಪೈರ್​ಗಳನ್ನೇ ನೇಮಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಐಪಿಎಲ್ ಹರಾಜಿಗೂ ಮುನ್ನವೇ ಆಟಗಾರರ ಟಾರ್ಗೆಟ್!

ಸಂದರ್ಶನವೊಂದ್ರಲ್ಲಿ ಮಾತ್ನಾಡಿರೋ ಮೋದಿ,  ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು​ ಹರಾಜಿಗೂ ಮುನ್ನ ಕೆಲ ಆಟಗಾರರನ್ನು ಟಾರ್ಗೆಟ್ ಮಾಡುತ್ತಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 2008ರಿಂದ ಐಪಿಎಲ್ ಆರಂಭವಾಗಿತ್ತು. 2009 ರಲ್ಲಿ ಇಂಗ್ಲೆಂಡ್ ಆಟಗಾರ ಆ್ಯಂಡ್ರ್ಯೂ ಫ್ಲಿಂಟಾಫ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಆದರೆ ಇದಕ್ಕೂ ಮುನ್ನ ನಡೆದ ಹರಾಜಿನ ವೇಳೆ ಇಂಗ್ಲೆಂಡ್ ಆಟಗಾರನನ್ನು ಖರೀದಿಸದಂತೆ ಉಳಿದ ಫ್ರಾಂಚೈಸಿಗಳಿಗೆ ಸಿಎಸ್​​ಕೆ ಒತ್ತಡ ಹೇರಿತ್ತು. ಸಿಎಸ್​​ಕೆ 7.5 ಕೋಟಿ ರೂಪಾಯಿಗೆ ಫ್ಲಿಂಟಾಫ್ ಅವರನ್ನು ಖರೀದಿಸಿತು ಎಂದು ಲಲಿತ್ ಮೋದಿ ಹೇಳಿದ್ದಾರೆ. ಫ್ಲಿಂಟಾಫ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಬಾರದು ಸಿಎಸ್​​ಕೆ ಮಾಲೀಕರಾದ ಎನ್ ಶ್ರೀನಿವಾಸನ್ ತಿಳಿಸಿದ್ದರು. ಅಂದರೆ ಇಲ್ಲಿ ಮೊದಲೇ ಬಿಡ್ ಮಾಡಬಾರದೆಂದು ಸೂಚಿಸಲಾಗುತ್ತಿತ್ತು. ನಾವೇನಾದ್ರೂ ಅದಕ್ಕೆ ಒಪ್ಪದೇ ಇದ್ದಿದ್ರೆ ಐಪಿಎಲ್ ಆಯೋಜನೆ ಮಾಡಲು ಬಿಡ್ತಾನೇ ಇರಲಿಲ್ಲ.  ಹೀಗಾಗಿ ಸಿಎಸ್​​ಕೆ ಫ್ರಾಂಚೈಸಿಯ ಡಿಮ್ಯಾಂಡ್​​ಗೆ ತಕ್ಕಂತೆ ಆಟಗಾರರ ಬಿಡ್ಡಿಂಗ್ ನಡೆದಿದೆ ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

ಸಿಎಸ್ ಕೆ ಪಂದ್ಯಗಳಿದ್ದ ವೇಳೆ ಅಂಪೈರ್ ಗಳ ಜೊತೆಯೂ ಫಿಕ್ಸಿಂಗ್!

ಇನ್ನು ಚೆನ್ನೈ ಫ್ರಾಂಚೈಸಿಯು ತನ್ನ ಪಂದ್ಯಗಳಿಗೆ ಚೆನ್ನೈ ಮೂಲದ ಅಂಪೈರ್​​ಗಳನ್ನು ಮಾತ್ರವೇ ನೇಮಿಸಿಕೊಳ್ಳುತ್ತಿದ್ದರು. ಈ ಮೂಲಕ ಅಂಪೈರ್​​ಗಳನ್ನು ಫಿಕ್ಸ್ ಮಾಡಿಕೊಳ್ಳುತ್ತಿದ್ದರು. ಓವರ್, ಬೌಲಿಂಗ್ ಬಗ್ಗೆಯೂ ಸಿಎಸ್ ಕೆ ಫೇವರ್ ಆಗಿಯೇ ಅಂಪೈರ್ಸ್ ಡಿಸಿಷನ್ಸ್ ಕೊಡ್ತಿದ್ರು. ಇದನ್ನು ಪ್ರಶ್ನಿಸಿದ ಲಲಿತ್ ಮೋದಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರು ತಿರುಗಿಬಿದ್ದಿದ್ರಂತೆ. ಫಿಕ್ಸಿಂಗ್ ಸೇರಿ ಅನೇಕ ಅಕ್ರಮಗಳನ್ನು ಎಸಗಿದ್ದಾರೆ. 2008 ಮತ್ತು 2010ರ ನಡುವೆ ಐಪಿಎಲ್ ತುಂಬಾ ಸಕ್ಸಸ್​ಫುಲ್ ಆಗಿ ಮುಗಿದಿತ್ತು.  T20 ಫಾರ್ಮೆಟ್​​ನ ಈ ಯಶಸ್ಸಿನ ಬೆನ್ನಲ್ಲೇ ಶ್ರೀನಿವಾಸನ್ ದಿಢೀರ್ ದುಡ್ಡು ಮಾಡುವತ್ತ ಕಣ್ಣಿಟ್ಟರು. ಟೂರ್ನಿ ಮರ್ಯಾದೆಗಿಂತ ಅವ್ರ ಮಾಲೀಕತ್ವದ ಸಿಎಸ್​ಕೆ ಗೆಲುವೇ ಮುಖ್ಯವಾಗಿತ್ತು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

ಫಿಕ್ಸಿಂಗ್ ಆರೋಪದಿಂದ 2 ವರ್ಷ ಸಿಎಸ್ ಕೆ & ಆರ್ ಆರ್ ಬ್ಯಾನ್!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ಸದ್ದು ಮಾಡಿತ್ತು. ಅಂದು ಫ್ರಾಂಚೈಸಿಯ ಉನ್ನತ ಅಧಿಕಾರಿ ಮತ್ತು ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ಫೋರ್ಜರಿ ಮತ್ತು ವಂಚನೆ ಆರೋಪದಡಿ ಬಂಧಿಸಲಾಗಿತ್ತು. ಗುರುನಾಥ್ ಬುಕ್ಕಿಗಳ ಸಂಪರ್ಕವನ್ನು ಹೊಂದಿದ್ದ ವೀರೇಂದ್ರ ಸಿಂಗ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದದ್ದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿತ್ತು. ಆತ ಐಪಿಎಲ್ ಪಂದ್ಯಗಳು ನಡೆಯೋ ಟೈಮಲ್ಲಿ ಆಗಾಗ್ಗೆ ಸ್ಟೇಡಿಯಂ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ. ಇದೇ ಕಾರಣಕ್ಕೆ ಸಿಎಸ್​ಕೆ ಮತ್ತು ರಾಜಸ್ಥಾನ್ ರಾಯಲ್ಸ್  ತಂಡಗಳು 2016 ಮತ್ತು 2017ರಲ್ಲಿ ಬ್ಯಾನ್ ಆಗಿತ್ತು.

ನಾಲ್ಕು ತಿಂಗಳ ಕಾಲ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ!

2013ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು ಸತತ ನಾಲ್ಕು ತಿಂಗಳ ಕಾಲ ತನಿಖೆ ನಡೆಸಿ ಸುಪ್ರೀಂ ಕೋರ್ಟ್ ‌ಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಅವರ ಅಳಿಯ ಗುರುನಾಥನ್ ಮೇಯಪ್ಪನ್ ‌ರನ್ನೊಳಗೊಂಡ 13 ಮಂದಿ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಆದ್ರೆ ತನಿಖೆಯಲ್ಲಿ ಮೂವರ ಹೆಸರನ್ನಷ್ಟೇ ಬಹಿರಂಗಪಡಿಸಲಾಗಿತ್ತು. ಆದ್ರೆ ತಂಡದ 7 ಆಟಗಾರರ ಹೆಸರನ್ನ ಇಂದಿಗೂ ಬಹಿರಂಗಪಡಿಸಿಲ್ಲ.

ಒಟ್ಟಿನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿ 2 ವರ್ಷಗಳ ಕಾಲ ಐಪಿಎಲ್​​ನಿಂದ ಬ್ಯಾನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇದೀಗ ಅಂಪೈರ್ ಫಿಕ್ಸಿಂಗ್ ಹಾಗೂ ಹರಾಜು ಫಿಕ್ಸಿಂಗ್ ಆರೋಪಗಳು ಕೇಳಿ ಬಂದಿವೆ. ಬಹುದೊಡ್ಡ ಆರೋಪಗಳ ಮೂಲಕ ಐಪಿಎಲ್​​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಹೊಸ ಚರ್ಚೆಗಳನ್ನು ಹುಟ್ಟುಹಾಕಿದ್ದಾರೆ. ಹರಾಜು, ಪಂದ್ಯ, ತೀರ್ಪುಗಳು ಎಷ್ಟು ಪ್ರಾಮಾಣಿಕವಾಗಿ ನಡೆಯುತ್ತವೇ ಅನ್ನೋ ಪ್ರಶ್ನೆಗಳನ್ನೂ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *