ಪಾಕ್ ಪ್ರವಾಸದಲ್ಲಿರುವ ಇಂಗ್ಲೆಂಡ್ ಆಟಗಾರರ ಆರೋಗ್ಯದಲ್ಲಿ ಏರುಪೇರು..!

17 ವರ್ಷಗಳ ಬಳಿಕ ಪಾಕ್ ನೆಲಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್ ತಂಡದ ಕ್ರಿಕೆಟ್ ಆಟಗಾರರ ಆರೋಗ್ಯದಲ್ಲಿ ಏರುಪೇರಾಗಿದೆ. ರಾವಲ್ಪಿಂಡಿಯಲ್ಲಿ ಡಿಸೆಂಬರ್ 1 ರಂದು ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಬೇಕಿತ್ತು. ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗಲೇ ಆಟಗಾರರಿಗೆ ಅನಾರೋಗ್ಯ ಕಾಡಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕ್ ನೆಲಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್ ತಂಡದ ಮೇಲೆ ವೈರಸ್ ದಾಳಿ ಮಾಡಿದೆ ಎನ್ನಲಾಗುತ್ತಿದೆ. ಟೀಮ್ ನ ಪ್ರಮುಖ ಆಟಗಾರರಾದ ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್ಸ್ಟನ್, ಮೊಯಿನ್ ಅಲಿಯಂತವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಆಟಗಾರರು ಆಡುವ ಸ್ಥಿತಿಯಲ್ಲೂ ಇಲ್ಲ ಎನ್ನಲಾಗಿದೆ.
ಇದನ್ನೂ ಓದಿ : ಮಳೆಗೆ ಆಹುತಿಯಾದ ಮೂರನೇ ಪಂದ್ಯ – ಕಿವೀಸ್ ವಿರುದ್ಧ ಏಕದಿನ ಸರಣಿ ಸೋತ ಭಾರತ
ಪಾಕ್ ಪ್ರವಾಸ ಮಾಡಿರುವ ಒಟ್ಟು ತಂಡದಲ್ಲಿ ಕೇವಲ 5 ಆಟಗಾರರು ಮಾತ್ರ ಆರೋಗ್ಯವಾಗಿದ್ದಾರೆ. ಮೊದಲ ಟೆಸ್ಟ್ಗಾಗಿ ಇಂಗ್ಲೆಂಡ್ ಮಂಡಳಿ ಮಂಗಳವಾರವೇ ತನ್ನ ತಂಡವನ್ನು ಪ್ರಕಟಿಸಿತ್ತು. ಆದರೆ ಪ್ರಕಟಿಸಿದ 11 ಆಟಗಾರರ ತಂಡದಲ್ಲಿ 7 ಆಟಗಾರರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಇಂಗ್ಲೆಂಡ್ ಆಟಗಾರರು, ಅಭ್ಯಾಸ ಪಂದ್ಯ ಕೂಡಾ ಆಡಿರಲಿಲ್ಲ. ಜೊತೆಗೆ ಪ್ರಾಕ್ಟೀಸ್ ಕೂಡಾ ಮಾಡಲು ಅಸಾಧ್ಯವಾಗಿದೆ.
ಟಿ20 ವಿಶ್ವಕಪ್ಗೂ ಮುನ್ನ ಟಿ20 ಸರಣಿಗಾಗಿ ಪಾಕ್ ಪ್ರವಾಸ ಮಾಡಿದ್ದ ಇಂಗ್ಲೆಂಡ್ ತಂಡದ ಆಟಗಾರರು ಪಾಕ್ ಮಂಡಳಿ ನೀಡಿದ್ದ ಊಟೋಪಚಾರದ ಬಗ್ಗೆ ಅಪಸ್ವರ ಎತ್ತಿದ್ದರು. ತಂಡದ ಆಲ್ರೌಂಡರ್ ಮೊಯಿನ್ ಅಲಿ ನನಗೆ ಲಾಹೋರ್ನಲ್ಲಿ ನೀಡಿದ್ದ ಊಟ ಇಷ್ಟವಾಗಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಈ ಕಾರಣಕ್ಕಾಗಿಯೇ ಈ ಬಾರಿ ಟೆಸ್ಟ್ ಸರಣಿಗಾಗಿ ಪಾಕ್ ಪ್ರವಾಸ ಮಾಡಿರುವ ಇಂಗ್ಲೆಂಡ್ ತಂಡ ತಮ್ಮ ತಂಡದೊಂದಿಗೆ ಬಾಣಸಿಗರನ್ನು ಕರೆತಂದಿದೆ. ಆದರೆ ಇದರ ಹೊರತಾಗಿಯೂ ತಂಡದ ಆಟಗಾರರ ಆರೋಗ್ಯವು ಹದಗೆಟ್ಟಿರವುದು ಮಂಡಳಿಯನ್ನು ಚಿಂತೆಗೀಡುಮಾಡಿದೆ.