ಆಸ್ಟ್ರೇಲಿಯಾ ತಂಡದ ಲೆಕ್ಕಾಚಾರ ಉಲ್ಟಾ ಮಾಡಿದ ಬುಮ್ರಾ- ಸೆನಾ ದೇಶಗಳಲ್ಲಿ 7 ಸಲ 5+ ವಿಕೆಟ್ ಕಬಳಿಸಿದ ಬುಮ್ರಾ!
ಟೀಂ ಇಂಡಿಯಾದಲ್ಲಿ ಜಸ್ಪ್ರೀತ್ ಬುಮ್ರಾಗೆ ಯಾಕಷ್ಟು ಇಂಪಾರ್ಟೆನ್ಸ್ ಕೊಡ್ತಾರೆ.. ಬಿಸಿಸಿಐ ಮ್ಯಾನೇಜ್ಮೆಂಟ್ ಯಾಕೆ ಪದೇಪದೆ ರೆಸ್ಟ್ ನಿಡುತ್ತೆ.. ಇಂಪಾರ್ಟೆಂಟ್ ಮ್ಯಾಚ್ಗಳಿದ್ರೆ ಮಾತ್ರನೇ ಫೀಲ್ಡಿಗಿಳಿಸುತ್ತೆ ಅನ್ನೋದಕ್ಕೆ ಮತ್ತೊಂದು ಬೆಸ್ಟ್ ಎಕ್ಸಾಂಪಲ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯ. ಬ್ಯಾಟರ್ಸ್ ಕೈಕೊಟ್ರೂ ಬುಮ್ರಾ ಇದ್ದಾರೆ. ಅಲ್ಲೇನೋ ಮ್ಯಾಜಿಕ್ ನಡೆಯುತ್ತೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಅವರದ್ದೇ ನೆಲದಲ್ಲಿ ಕಾಂಗರೂಗಳನ್ನ ಬೆಂಡೆತ್ತಿರುವ ಬುಮ್ರಾ ಹೊಸ ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ. ಆಸಿಸ್ ಸರಣಿಯಲ್ಲಿ ಬುಮ್ರಾ ಬರೆದ ದಾಖಲೆ ಎಂಥಾದ್ದು? ಬ್ಯಾಟಿಂಗ್ನಲ್ಲಿ ಎಡವಿದ್ರೂ ಬೌಲಿಂಗ್ನಲ್ಲೇ ಕಟ್ಟಿ ಹಾಕಿದ್ದೇಗೆ? 5 ಪಂದ್ಯಗಳ ಸರಣಿಯ ಶುಭಾರಂಭ ಫಿಕ್ಸ್ ಆಯ್ತಾ? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಜಸ್ಪ್ರೀತ್ ಬುಮ್ರಾ ರಣಾರ್ಭಟ – 1 ಇನ್ನಿಂಗ್ಸ್.. 17 ವಿಕೆಟ್.. ಚರಿತ್ರೆ!
ಆಸ್ಟ್ರೇಲಿಯಾದ ಪರ್ತ್ನಲ್ಲಿ ನಡೆಯುತ್ತಿರೋ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಹೈವೋಲ್ಟೇಜ್ ಫೈಟ್ ಆಗಿ ಮಾರ್ಪಟ್ಟಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 150 ರನ್‌ಗಳಿಗೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾಗೆ ಭಾರತದ ಬೌಲರ್ಸ್ ಬೆವರಿಳಿಸಿದ್ರು. ಅದ್ರಲ್ಲೂ ಜಸ್ಪ್ರೀತ್ ಬುಮ್ರಾ ಸಾಲು ಸಾಲು ವಿಕೆಟ್ ಬೇಟೆಯಾಡಿ ತಾನೆಂಥ ಫಾಸ್ಟ್ ಬೌಲರ್ ಅನ್ನೋದನ್ನ ಇಡೀ ಜಗತ್ತಿಗೆ ಮತ್ತೊಮ್ಮೆ ಸಾಬೀತು ಪಡಿಸಿದ್ರು. ಮೊದಲ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು ಕೇವಲ 67 ರನ್ಗಳಿಸಿದ್ದ ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲೂ ಆಘಾತ ಎದುರಿಸತು.
ಆಸ್ಟ್ರೇಲಿಯಾ ತಂಡದ ಬೌಲರ್‌ಗಳ ವಿರುದ್ಧ ಜಿದ್ದಿಗೆ ಬಿದ್ದವರಂತೆ ಅಬ್ಬರಿಸಿದ ಭಾರತೀಯ ಬೌಲರ್‌ಗಳು, ಪ್ಯಾಟ್ ಕಮಿನ್ಸ್ ಪಡೆ ಲೆಕ್ಕಾಚಾರಗವನ್ನೇ ತಲೆ ಕೆಳಗೆ ಮಾಡಿದ್ರು. ಅದರಲ್ಲೂ ರೋಹಿತ್ ಶರ್ಮ ಅವರ ಅನುಪಸ್ಥಿಯಲ್ಲಿ ತಂಡವನ್ನು ಮುನ್ನಡೆಸಿದ ಬುಮ್ರಾ, ಮೊದಲ ದಿನ 10 ಓವರ್‌ಗಳಲ್ಲಿ 3 ಮೇಡನ್ ಸೇರಿದಂತೆ 17 ರನ್ ನೀಡಿ 4 ವಿಕೆಟ್ ಕಬಳಿಸಿ ಭಾರತೀಯರ ಪ್ರಬಲ ಮರು ಹೋರಾಟಕ್ಕೆ ಸಾಕ್ಷಿಯಾದರು. ಇವರಿಗೆ ಮೊಹಮ್ಮದ್ ಸಿರಾಜ್ ಮತ್ತು ಪದಾರ್ಪಣೆ ಆಟಗಾರ ಹರ್ಷಿತ್ ರಾಣಾ ಕ್ರಮವಾಗಿ 2 ಮತ್ತು 1 ವಿಕೆಟ್ ಕಿತ್ತು ಉತ್ತಮ ಸಾಥ್ ನೀಡಿದರು. 1980ರ ನಂತರ ಆಸ್ಪ್ರೇಲಿಯಾ ತವರಿನ ಟೆಸ್ಟ್‌ನಲ್ಲಿ 2ನೇ ಸಲ 40 ರನ್‌ಗೂ ಮುನ್ನ 5 ವಿಕೆಟ್ ಕಳೆದುಕೊಂಡಿತು. 2016ರಲ್ಲಿ ಹೋಬರ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು 17ಕ್ಕೆ 5 ವಿಕೆಟ್ ಒಪ್ಪಿಸಿದ್ದು ಹಿಂದಿನ ದಾಖಲೆಯಾಗಿದೆ.
ಪರ್ತ್ ಟೆಸ್ಟ್‌ನ ಮೊದಲ ದಿನದ ಪಂದ್ಯದಲ್ಲೇ ನಾಲ್ಕು ವಿಕೆಟ್ ಬೇಟೆಯಾಡಿದ್ದ ಜಸ್ಪ್ರೀತ್ ಬುಮ್ರಾ 2ನೇ ದಿನದಾಟದ ಆರಂಭದಲ್ಲೇ ಆರ್ಭಟಿಸಿದ್ರು. ತಾವು ಎಸೆದ ಮೊದಲ ಬಾಲ್ನಲ್ಲೇ ಅಲೆಕ್ಸ್ ಕ್ಯಾರಿಯನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಕ್ಯಾರಿ 21 ರನ್ ಗಳಿಸಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ನೇಥನ್ ಲಿಯಾನ್ 5 ರನ್ ಗಳಿಸಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್ 112 ಎಸೆತಗಳನ್ನು ಎದುರಿಸಿ 26 ರನ್ ಗಳಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟಾರ್ಕ್ ಗಳಿಸಿದ 26 ರನ್ ಆಸೀಸ್ ಪರ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. ಓವರ್ ಆಲ್ ಆಗಿ 104 ರನ್‌ಗಳಿಗೆ ಆಲೌಟ್ ಆಯ್ತು.
ಆಸಿಸ್ ಪಡೆಯನ್ನ ಕಟ್ಟಿ ಹಾಕುವಲ್ಲಿ ಜಸ್ಪ್ರೀತ್ ಬುಮ್ರಾರೇ ಭಾರತದ ಬ್ರಹ್ಮಾಸ್ತ್ರ. ಮೊದಲ ದಿನದಾಟದಲ್ಲಿ 4 ವಿಕೆಟ್ ಕಿತ್ತಿದ್ದ ಬುಮ್ರಾ ಎರಡನೇ ದಿನದಾಟದಲ್ಲಿ ಮತ್ತೊಂದು ವಿಕೆಟ್ ಬೇಟೆಯಾಡಿ ಒಟ್ಟಾರೆ 5 ವಿಕೆಟ್ ಪಡೆದ್ರು. ಈ ಮೂಲಕ ಸೆನಾ ದೇಶಗಳಲ್ಲಿ ಜಸ್ಪ್ರೀತ್ ಬುಮ್ರಾ 7ನೇ ಬಾರಿಗೆ 5+ ವಿಕೆಟ್ ಕಬಳಿಸುವ ಮೂಲಕ ಭಾರತ ಪರ ಅತಿಹೆಚ್ಚು ಬಾರಿ ಸೆನಾ ರಾಷ್ಟ್ರಗಳಲ್ಲಿ 5+ ವಿಕೆಟ್ ಕಬಳಿಸಿದ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದ್ರು. ಬುಮ್ರಾ ಟೆಸ್ಟ್ ಜೀವನದಲ್ಲಿ 11ನೇ ಬಾರಿಗೆ 5+ ವಿಕೆಟ್ ಸಾಧನೆ ಮಾಡಿದ್ದಾರೆ. ಈ ಪೈಕಿ ವಿದೇಶಿ ನೆಲದಲ್ಲಿ ಅದರಲ್ಲೂ ಸೆನಾ ದೇಶಗಳಲ್ಲೇ 7 ಬಾರಿ 5+ ವಿಕೆಟ್ ಸಾಧನೆ ಮಾಡಿರುವುದು ವಿಶೇಷ. ಇನ್ನು ಸೌಥ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ. ಈ ನಾಲ್ಕು ರಾಷ್ಟ್ರಗಳ ಸೆನಾ ರಾಷ್ಟ್ರಗಳೆಂದು ಕರೆಯುತ್ತಾರೆ. ಮೊದಲ ಇನಿಂಗ್ಸ್ನಲ್ಲಿ 18 ಓವರ್ಗಳನ್ನು ಎಸೆದ ಜಸ್ಪ್ರೀತ್ ಬುಮ್ರಾ ಕೇವಲ 30 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅತ್ತ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರೆ, ಯುವ ವೇಗಿ ಹರ್ಷಿತ್ ರಾಣಾ 3 ವಿಕೆಟ್ ಕಬಳಿಸಿದ್ರು.
ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾ ಪರ್ತ್ ಮೈದಾನವನ್ನು ಸೆಲೆಕ್ಟ್ ಮಾಡಿಕೊಂಡಿತ್ತು. ಅದಕ್ಕೆ ಕಾರಣ ಆಸ್ಟ್ರೇಲಿಯಾದ ಲೆಕ್ಕಾಚಾರ. ಈ ಪಿಚ್‌ನಲ್ಲಿ ಒಮ್ಮೆಯೂ ಆಸೀಸ್ ಸೋತೆ ಇಲ್ಲ. ಈ ಮೈದಾನದಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಆಸೀಸ್ ಜಯ ಸಾಧಿಸಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ 360 ರನ್ ಗಳ ಜಯ ದಾಖಲಿಸಿದ್ದು, ದೊಡ್ಡ ಅಂತರದ ಗೆಲುವಾಗಿದೆ. ಪ್ರವಾಸಿ ತಂಡಕ್ಕೆ ಭಯ ಹುಟ್ಟಿಸಲು ಈ ಪಿಚ್ ಆಯ್ಕೆ ಮಾಡಿತ್ತು. ಯಾಕಂದ್ರೆ ಈ ಪಿಚ್ ನ ಮೇಲ್ಮೈಯು ಹುಲ್ಲಿನಿಂದ ಕೂಡಿದ್ದು ಈ ಪಿಚ್ ಬೌಲರ್ಗಳಿಗೆ ಸಹಕಾರಿ. ಹೀಗಾಗಿ ಬೌಲಿಂಗ್ ವೇಳೆ ಹೆಚ್ಚೆಚ್ಚು ಬೌನ್ಸ್ ಇರಲಿದ್ದು, ಇದು ವೇಗದ ಬೌಲರ್‌ಗಳು ಹಾಗೂ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗಲಿದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ಇದೇ ಮೈದಾನವನ್ನ ಆಯ್ಕೆ ಮಾಡಿಕೊಂಡಿತ್ತು. ಆಸಿಸ್ ಪ್ಲ್ಯಾನ್ ಅವ್ರಿಗೇ ಉಲ್ಟಾ ಹೊಡೆದಿದೆ.
ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಲೀಡ್ನಲ್ಲಿದೆ. ಎರಡನೇ ಇನ್ನಿಂಗ್ಸ್ ಶುರುವಾಗಿದ್ದು, ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಓಪನರ್ ಆಗಿ ಕಣಕ್ಕಿಳಿದು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ರು. ಟೆನ್ಷನ್ ಹೆಚ್ಚಿಸಿದ ಈ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟಿದ್ದೇ ಬುಮ್ರಾ ಅನ್ನೋದನ್ನ ಎಲ್ಲರೂ ಒಪ್ಪಿಕೊಳ್ಳಬೇಕು.