ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅಚ್ಚರಿಯ ಗೆಲುವು – ಶಿಗ್ಗಾಂವಿಯಲ್ಲಿ ಸೋತ ಭರತ್ ಬೊಮ್ಮಾಯಿ
ಕಾಂಗ್ರೆಸ್ ಕೈ ಹಿಡಿದ ಗ್ಯಾರಂಟಿ ಯೋಜನೆಗಳು!
ಬೈ ಎಲೆಕ್ಷನ್ ಅಖಾಡದಲ್ಲಿ ಶಿಗ್ಗಾಂವಿ ಕ್ಷೇತ್ರ ಬಿಜೆಪಿಯದ್ದೇ ಎಂದು ವಿಶ್ಲೇಷಕರೆಲ್ಲಾ ಡಿಕ್ಲೇರ್ ಮಾಡಿಯೇ ಬಿಟ್ಟಿದ್ದರು. ಯಾರು ಏನೇ ಹೇಳಿದ್ರೂ ಕ್ಲೈಮ್ಯಾಕ್ಸ್ ನಲ್ಲಿ ಮತದಾರರು ಕೊಟ್ಟ ಟ್ವಿಸ್ಟ್ಗೆ ರಾಜಕೀಯ ತಂತ್ರಗಳೇ ಉಲ್ಟಾ ಹೊಡೆದಿವೆ. ಮಾಜಿ ಸಿಎಂ ಪುತ್ರನಿಗೆ ಸೋಲಿನ ಶಾಕ್ ಕೊಟ್ಟಿದ್ದಾರೆ ಮತದಾರರು. ಬಿಜೆಪಿಯ ಭದ್ರಕೋಟೆಯಾಗಿದ್ದ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಕೇಕೆ ಹಾಕಿದ್ದು ಹೇಗೆ..? ಬಿಜೆಪಿ ಸೋಲಿಗೆ ಅಸಲಿ ಕಾರಣಗಳೇನು ಅನ್ನೋದರ ವಿವರಣೆ ಇಲ್ಲಿದೆ.
ಇದನ್ನೂ ಓದಿ:ನಿಖಿಲ್ ಕುಮಾರಸ್ವಾಮಿಗೆ ಸೋಲಿನ ಸರದಾರ ಹಣೆಪಟ್ಟಿ – ಮೈತ್ರಿ ಚಕ್ರವ್ಯೂಹ ಭೇದಿಸಿದ ಸಿ.ಪಿ ಯೋಗೇಶ್ವರ್
ಭರತ್ ಬೊಮ್ಮಾಯಿ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವ್ರ ಪುತ್ರ. ಅಪ್ಪನ ವರ್ಚಸ್ಸು.. ಬಿಜೆಪಿಯ ಚಿಹ್ನೆ. ಹೈಕಮಾಂಡ್ ಕೃಪಾಕಟಾಕ್ಷ ಎಲ್ಲವೂ ಇದ್ರೂ ಶಿಗ್ಗಾವಿ ಬೈಎಲೆಕ್ಷನ್ನಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅಚ್ಚರಿಯ ರೀತಿಯಲ್ಲಿ ಗೆದ್ದು ಬೀಗಿದ್ದಾರೆ. ಟಿಕೆಟ್ ಹಂಚಿಕೆ ವೇಳೆ ಗೊಂದಲ, ಕಿತ್ತಾಟ, ಭಿನ್ನಾಭಿಪ್ರಾಯ, ಅಸಮಾಧಾನಗಳನ್ನ ಕಂಡಿದ್ದ ಕಾಂಗ್ರೆಸ್ಗೆ ಕ್ಷೇತ್ರದ ಜನ ಗೆಲುವಿನ ಗಿಫ್ಟ್ ಕೊಟ್ಟಿದ್ದಾರೆ.
ಶಿಗ್ಗಾಂವಿ ಬೈ ಎಲೆಕ್ಷನ್, ಭರತ್ ಬೊಮ್ಮಾಯಿ ಅಭ್ಯರ್ಥಿ ಅಂದಾಗ್ಲೇ 90 ಪರ್ಸೆಂಟ್ ಜನ ಭರತ್ ಬೊಮ್ಮಾಯಿ ಗೆಲುವು ನಿಶ್ಚಿತ ಅಂತಾನೇ ಹೇಳಲಾಗಿತ್ತು. ಆರಂಭದಲ್ಲಿ ಭರತ್ ಪರವಾಗಿ ಏಕಪಕ್ಷೀಯವಾಗಿ ಕಾಣುತ್ತಿದ್ದ ಸ್ಪರ್ಧೆ ಹೋಗ್ತಾ ಹೋಗ್ತಾ ಟ್ವಿಸ್ಟ್ ಪಡೆಯಿತು. ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಅವರಿಗೆ ಟಿಕೆಟ್ ನೀಡದಿದ್ದಕ್ಕೆ ಗಲಾಟೆಯೂ ಆಗಿತ್ತು. ಬಿಜೆಪಿಯಲ್ಲೂ ಕೂಡ ಆಂತರಿಕ ಕಚ್ಚಾಟ ನಡೆದಿದ್ದು ಹೊರಜಗತ್ತಿಗೆ ಅಷ್ಟಾಗಿ ಗೊತ್ತಾಗ್ಲೇ ಇಲ್ಲ. ಇದೇ ಕಚ್ಚಾಟ ಕಾಂಗ್ರೆಸ್ ಪರವಾಗಿ ತಿರುಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಬೊಮ್ಮಾಯಿ ಅವರಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 8,500 ಮತಗಳ ಮುನ್ನಡೆ ಸಾಧಿಸಿತ್ತು. ಬಟ್ ಬೇರೆ ಬೇರೆ ಕಡೆ ಲೀಡ್ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ವಿಧಾನಸಭಾ ಚುನಾವಣೆಯಲ್ಲಿ ಅಸಲಿ ರಿಸಲ್ಟ್ ಹೊರಬಿದ್ದಿದೆ. 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಗೆದ್ದು ಬೀಗಿದ್ದಾರೆ.
ರಾಜ್ಯದಲ್ಲಿ 3 ಬೈಎಲೆಕ್ಷನ್ ಅಖಾಡಗಳ ಪೈಕಿ ಮೂರಕ್ಕೆ ಮೂರೂ ಕ್ಷೇತ್ರಗಳನ್ನ ಕಾಂಗ್ರೆಸ್ ಗೆದ್ದು ಬೀಗಿದೆ. ಅದ್ರಲ್ಲೂ ಶಿಗ್ಗಾಂವಿಯಲ್ಲಿ ಗೆಲ್ಲೋಕೆ ಕಾಂಗ್ರೆಸ್ನ 5 ಗ್ಯಾರಂಟಿಗಳೇ ಮೇನ್ ರೀಸನ್. ಹಾಗೇ ಬಿಜೆಪಿಯ ಮಿಸ್ಟೇಕ್ಸ್. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಲೋಕಸಭೆಗೆ ವಲಸೆ ಹೋಗಿದ್ದೇ ಎಡವಟ್ಟಾಗಿತ್ತು. ಹಾಗೇ ಬೊಮ್ಮಾಯಿ ಪುತ್ರನಿಗೇ ಟಿಕೆಟ್ ಕೊಟ್ಟಿದ್ದು ಕ್ಷೇತ್ರದ ಬಿಜೆಪಿ ಮುಖಂಡರಿಗೂ ಅಸಮಾಧಾನಕ್ಕೆ ಕಾರಣವಾಗಿತ್ತು. ಸ್ಥಳೀಯ ಮುಖಂಡರು ಒಗ್ಗಟ್ಟಾಗಿ ಸಾಥ್ ನೀಡಲಿಲ್ಲ. ಆಡಳಿತ ಪಕ್ಷದ ಅಲೆಯ ಪ್ಲಸ್ ಪಾಯಿಂಟ್ ಪಡೆದ ಯಾಸೀರ್ ಖಾನ್ ಪಠಾಣ್ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.
ಇನ್ನು ಶಿಗ್ಗಾಂವಿ ಕ್ಷೇತ್ರಕ್ಕೆ ಇತಿಹಾಸದಲ್ಲೂ ಸಾಕಷ್ಟು ಮಹತ್ವ ಇದೆ. ರಾಜಕೀಯ ಮುತ್ಸದ್ಧಿ- ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಮತ್ತು ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ ಇದು. ಅಷ್ಟೇ ಅಲ್ಲ ದಾಸಶ್ರೇಷ್ಠರಾದ ಕನಕದಾಸ ಮತ್ತು ದಾರ್ಶನಿಕ ಶಿಶುನಾಳ ಷರೀಫರು ಜನ್ಮವೆತ್ತಿದ ಭೂಮಿ ಇದು. ಇಂಥಾ ಕ್ಷೇತ್ರ1952ರಿಂದ ಹಿಡಿದು 1994ರವರೆಗೆ ಒಂದು ಸಲ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದು ಬಿಟ್ರೆ ಪ್ರತೀ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ತಿದ್ರು. ಬಟ್ 1999ರಲ್ಲಿ ಜೆಡಿಎಸ್, 2004ರಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ರು. ಆದ್ರೆ 2008ರಲ್ಲಿ ಬಸವರಾಜ ಬೊಮ್ಮಾಯಿ ಅಖಾಡಕ್ಕೆ ಇಳಿದ್ಮೇಲೆ ಬಿಜೆಪಿಯದ್ದೇ ಪಾರುಪತ್ಯ. ಸತತ ನಾಲ್ಕು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಬಸವರಾಜ ಬೊಮ್ಮಾಯಿ ಗೆಲುವಿನ ಕೇಕೆ ಹಾಕಿದ್ರು. ಬಟ್ 2024ರ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಬಳಿಕ ಈ ಸಲ ಬೈಎಲೆಕ್ಷನ್ನಲ್ಲಿ ತಮ್ಮ ಪುತ್ರ ಭರತ್ಗೆ ಕ್ಷೇತ್ರವನ್ನ ಬಿಟ್ಟುಕೊಟ್ಟಿದ್ರು. ಹೈಕಮಾಂಡ್ ಕೂಡ ಮಾಜಿ ಸಿಎಂ ಪುತ್ರನಿಗೇ ಮಣೆ ಹಾಕಿತ್ತು. ಹೀಗಿದ್ರೂ ಭರತ್ ಸೋತಿರೋದು ಬಿಜೆಪಿಗೇ ಶಾಕಿಂಗ್ ಆಗಿದೆ. ರಾಜ್ಯ ನಾಯಕರು ಕೂಡ ಸೋಲಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.