‘ಪುಷ್ಪ 2’ ಸಿನಿಮಾ ಟಿಕೆಟ್ ದರ ಹೆಚ್ಚಳ ಸಾಧ್ಯತೆ – ಅಲ್ಲು ಅರ್ಜುನ್ ಅಭಿಮಾನಿಗಳ ಅಸಮಾಧಾನ

‘ಪುಷ್ಪ 2’ ಸಿನಿಮಾ ಟಿಕೆಟ್ ದರ ಹೆಚ್ಚಳ ಸಾಧ್ಯತೆ – ಅಲ್ಲು ಅರ್ಜುನ್ ಅಭಿಮಾನಿಗಳ ಅಸಮಾಧಾನ

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದ ‘ಪುಷ್ಪ’ ಸಿನಿಮಾದ ಸೀಕ್ವೆಲ್ ಆಗಿ ‘ಪುಷ್ಪ 2’ ಸಿನಿಮಾ ಸಿದ್ಧವಾಗಿದೆ. ಡಿಸೆಂಬರ್​ 5ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ಇದೀಗ ಬಿಡುಗಡೆಗೂ ಮುನ್ನವೇ ಅಲ್ಲು ಅರ್ಜುನ್ ಅಭಿಮಾನಿಗಳು ‘ಪುಷ್ಪ 2’ ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್‌ಗೆ ಶಾರುಖ್ ಖಾನ್ ಪುತ್ರನ ಎಂಟ್ರಿ – ವೆಬ್ ಸರಣಿ ಮೂಲಕ ಆರ್ಯನ್ ಖಾನ್ ಅದೃಷ್ಟ ಪರೀಕ್ಷೆ

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಸಿನಿಮಾದ ಒಟ್ಟು ಬಜೆಟ್ 500 ಕೋಟಿಗೂ ಅಧಿಕ ಎನ್ನಲಾಗುತ್ತಿದೆ. ಹೀಗಾಗಿಯೇ ಹಾಕಿದ ಬಂಡವಾಳ ವಾಪಸ್ ಪಡೆಯಲು ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಸಕಲ ಪ್ರಯತ್ನ ಮಾಡ್ತಿದೆ. ಈಗಾಗಲೇ ಸಿನಿಮಾದ ಪ್ರಚಾರಕ್ಕೆಂದೇ ಸುಮಾರು 50 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇನ್ನು ಹೂಡಿರುವ ಬಂಡವಾಳ ವಾಪಸ್ ಪಡೆಯಲು ಟಿಕೆಟ್ ದರಗಳನ್ನು ಹೆಚ್ಚಿಸಲು ಚಿತ್ರತಂಡ ಮುಂದಾಗಿದೆ. ಆದರೆ ಇದಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾ ಟಿಕೆಟ್ ದರಗಳ ಮೇಲೆ ನಿಯಂತ್ರಣ ಹೇರಲಾಗಿದೆ. ಒಂದೊಮ್ಮೆ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗುವುದಿದ್ದರೆ ಸರ್ಕಾರದಿಂದ ಅನುಮತಿ ಪಡೆದ ಬಳಿಕವಷ್ಟೆ ಟಿಕೆಟ್ ದರಗಳನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಟಿಕೆಟ್ ದರ ಎಷ್ಟು ಹೆಚ್ಚಿಸಬೇಕು, ಎಷ್ಟು ದಿನಗಳ ಕಾಲ ಟಿಕೆಟ್ ದರ ಹೆಚ್ಚಿಗೆ ಇರಬೇಕು ಎಂಬಿತ್ಯಾದಿಯನ್ನು ಸರ್ಕಾರವೇ ಸೂಚಿಸುತ್ತದೆ. ಇದೀಗ ‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಹೆಚ್ಚಳ ಹಾಗೂ ಹೆಚ್ಚುವರಿ ಶೋ ಪ್ರದರ್ಶಿಸಲು ಚಿತ್ರತಂಡ ಸರ್ಕಾರದ ಅನುಮತಿ ಕೋರಲು ಮುಂದಾಗಿದೆ. ಈ ಹಿಂದೆ ‘ಆರ್​ಆರ್​ಆರ್’, ‘ಕಲ್ಕಿ 2898 ಎಡಿ’ ಸಿನಿಮಾಗಳಿಗೆಲ್ಲ ಆಂಧ್ರ, ತೆಲಂಗಾಣಗಳಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳು ಭಾರಿ ಮೊತ್ತದಲ್ಲಿ ಹೆಚ್ಚಾಗಿದ್ದವು. ಮಲ್ಟಿಪ್ಲೆಕ್ಸ್​ನಲ್ಲಿ ನಿಗದಿತ ದರ 150 ರೂಪಾಯಿಗಳಿದ್ದು, ‘ಕಲ್ಕಿ’, ‘ಆರ್​ಆರ್​ಆರ್’ ಇನ್ನು ಕೆಲ ಸಿನಿಮಾಗಳಿಗೆ ಈ ಬೆಲೆ 450 ರೂಪಾಯಿ ವರೆಗೆ ಏರಿತ್ತು. ಆದರೆ ‘ಪುಷ್ಪ 2’ ಸಿನಿಮಾಕ್ಕೆ ಟಿಕೆಟ್ ಬೆಲೆ ಇನ್ನಷ್ಟು ಏರಿಕೆ ಆಗಲಿದೆ ಎಂದು ಊಹಿಸಲಾಗಿದೆ. ‘ಪುಷ್ಪ 2’ ಸಿನಿಮಾದ ಟಿಕೆಟ್ ಬೆಲೆ ಆಂಧ್ರ-ತೆಲಂಗಾಣದ ಮಲ್ಟಿಪ್ಲೆಕ್ಸ್​ಗಳಲ್ಲಿ 700 ರೂಪಾಯಿ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸುಮಾರು 350 ರಿಂದ 450 ರೂಪಾಯಿ ವರೆಗೆ ಇರಲಿದೆಯಂತೆ. ಈ ಬೆಲೆ ಎಷ್ಟು ವಾರಗಳ ವರೆಗೆ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಬೆಂಗಳೂರಿನಲ್ಲಂತೂ ಯಾವುದೇ ಪರ ಭಾಷೆಯ ದೊಡ್ಡ ಸಿನಿಮಾ ಬಿಡುಗಡೆ ಆದಾಗಲೂ ಟಿಕೆಟ್ ಬೆಲೆ ಏರಿಕೆ ಎಂಬುದು ಸಾಮಾನ್ಯ ಎಂಬಂತಾಗಿದೆ. ಬೆಂಗಳೂರಿನಲ್ಲಿ ‘ಪುಷ್ಪ 2’ ಸಿನಿಮಾದ ಟಿಕೆಟ್ ಬೆಲೆ 1000 ರೂಪಾಯಿಗೆ ಮಾರಾಟವಾಗುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್​ಗಳ ಟಿಕೆಟ್ ಬೆಲೆ ಮೇಲೆ ಸರ್ಕಾರ ನಿಯಂತ್ರಣ ಹೇರಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತೀಚೆಗಷ್ಟೆ ಸಿಎಂ ಅವರನ್ನು ಭೇಟಿಯಾಗಿ ಮನವಿ ನೀಡಿದೆ. ‘ಪುಷ್ಪ 2’ ಸಿನಿಮಾದ ಮೂಲಕವೇ ಈ ನಿಯಮ ಜಾರಿಗೆ ಬರಬೇಕು, ಅನವಶ್ಯಕವಾಗಿ ಸಿನಿಮಾ ಟಿಕೆಟ್ ಏರಿಕೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ‘ಪುಷ್ಪ 2’ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಪಡೆದಿರುವವರು ನಾವು ‘ಕೆಜಿಎಫ್’ ದಾಖಲೆ ಮುರಿಯುತ್ತೇವೆ ಎಂದು ಈಗಾಗಲೇ ಸವಾಲು ಹಾಕಿದ್ದಾರೆ. ಹೀಗಾಗಿ ‘ಪುಷ್ಪ 2’ ಸಿನಿಮಾದ ಬೆಂಗಳೂರು ಬಿಡುಗಡೆ ಹೇಗಿರಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಮತ್ತೊಂದೆಡೆ, ಪ್ರೇಕ್ಷಕರಿಗೆ ಪುಷ್ಟ ಕಥೆ ಮತ್ತೊಮ್ಮೆ ನೆನಪಿಸಬೇಕು ಎಂಬ ಕಾರಣಕ್ಕೆ ‘ಪುಷ್ಪ’ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲಾಗುತ್ತಿದೆ. ಮರು ಬಿಡುಗಡೆಯಿಂದ ಚಿತ್ರಕ್ಕೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬ ಕುತೂಹಲವೂ ಗರಿಗೆದರಿದೆ.

suddiyaana

Leave a Reply

Your email address will not be published. Required fields are marked *