ಸ್ಟಾರ್ಸ್ ಕೈಬಿಟ್ಟು ಫ್ರಾಂಚೈಸಿಗಳ ಎಡವಟ್ಟು – 5 ಪ್ಲೇಯರ್ಸ್ ಗೆ ಭರ್ಜರಿ ಡಿಮ್ಯಾಂಡ್
IPL ಹರಾಜಿನಲ್ಲಿ ಚರಿತ್ರೆ ಸೃಷ್ಟಿಸೋದ್ಯಾರು?
ಐಪಿಎಲ್ ರಿಟೇನ್ ಲಿಸ್ಟ್ ಅನೌನ್ಸ್ ಆದಾಗ ಕ್ರಿಕೆಟ್ ಲೋಕವೇ ಅಚ್ಚರಿಗೊಂಡಿತ್ತು. ಮೈದಾನದಲ್ಲಿ ಬೆಂಕಿ ಬಿರುಗಾಳಿಯಂತೆ ಧೂಳೆಬ್ಬಿಸ್ತಿದ್ದ ಸೂಪರ್ ಸ್ಟಾರ್ ಪ್ಲೇಯರ್ಗಳನ್ನೇ ಕೆಲ ಫ್ರಾಂಚೈಸಿಗಳು ರಿಲೀಸ್ ಮಾಡಿದ್ವು. ಬಟ್ ಈಗ ಅದೇ ಮಾಲೀಕರಿಗೆ ಎಡವಟ್ಟು ಮಾಡಿಕೊಂಡ್ವಿ ಎನ್ನುವಂಥ ಫೀಲ್ ಆಗ್ತಿದೆ. ತಂಡಗಳಿಂದ ಹೊರಬಿದ್ದಿರೋ ಪ್ಲೇಯರ್ಸ್ ಬೇರೆ ಬೇರೆ ಪಂದ್ಯಗಳಲ್ಲಿ ಧಮಾಕೇಧಾರ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಅಷ್ಟಕ್ಕೂ ಹರಾಜಿಗೂ ಮುನ್ನ ಯಾವ ಫ್ರಾಂಚೈಸಿ ಯಾರನ್ನ ರಿಲೀಸ್ ಮಾಡಿ ಈಗ ಪಶ್ಚಾತಾಪ ಪಡ್ತಿವೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಾಲಿವುಡ್ಗೆ ಶಾರುಖ್ ಖಾನ್ ಪುತ್ರನ ಎಂಟ್ರಿ – ವೆಬ್ ಸರಣಿ ಮೂಲಕ ಆರ್ಯನ್ ಖಾನ್ ಅದೃಷ್ಟ ಪರೀಕ್ಷೆ
2025ರ ಐಪಿಎಲ್ ಆಟಗಾರರ ಮೆಗಾ ಹರಾಜು ಇದೇ ನವೆಂಬರ್ 24 ಹಾಗೂ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಬಿಸಿಸಿಐ ಶಾರ್ಟ್ ಲಿಸ್ಟ್ನಲ್ಲಿ 574 ಆಟಗಾರರಿದ್ದಾರೆ. 10 ತಂಡಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡು, ಇನ್ನು ಕೆಲವು ಆಟಗಾರರನ್ನು ರಿಲೀಸ್ ಮಾಡಿದೆ. ಈ ಪೈಕಿ ಕೆಲ ಫ್ರಾಂಚೈಸಿಗಳಿಗೆ ಈಗ ತಲೆಬಿಸಿಯಾಗ್ತಿದೆ. ಸೂಪರ್ ಸ್ಟಾರ್ಸ್ ಕೈ ಬಿಟ್ಟು ತಪ್ಪು ಮಾಡಿದ್ವಾ ಅಂತಾ ಕೈ ಕೈ ಹಿಸುಕಿಕೊಳ್ತಿವೆ.
ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಜೋಸ್ ಬಟ್ಲರ್ ಕೈ ಬಿಟ್ಟ ರಾಜಸ್ಥಾನ!
ಇಂಗ್ಲೆಂಡ್ನ ಸ್ಫೋಟಕ ಆಟಗಾರ ಜೋಸ್ ಬಟ್ಲರ್. ಡೆಡ್ಲಿ ಌಂಡ್ ಡೇಂಜರಸ್ ಬ್ಯಾಟ್ಸ್ಮನ್. T20 ಫಾರ್ಮೆಟ್ನಲ್ಲಿ ಫುಲ್ ಡಿಮ್ಯಾಂಡ್ ಇದ್ದು, ಈ ಬಾರಿ ಹರಾಜಿಗೂ ಮುನ್ನವೇ ಐಪಿಎಲ್ ಫ್ರಾಂಚೈಸಿಗಳ ಹಾಟ್ ಫೇವರಿಟ್ ಆಗಿದ್ದಾರೆ. ಕಳೆದ ಸೀಸನ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದ ಜೋಸ್ ಬಟ್ಲರ್ ಅವರನ್ನು ಅಚ್ಚರಿಯ ರೀತಿಯಲ್ಲಿ ರಿಲೀಸ್ ಮಾಡಿತ್ತು. ಆದ್ರೀಗ ತಪ್ಪು ಮಾಡಿದವಾ ಎಂಬ ಆತಂಕದಲ್ಲಿದ್ದಾರೆ. ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 11 ಪಂದ್ಯಗಳನ್ನಾಡಿದ್ದ ಜೋಸ್ ಬಟ್ಲರ್ 2 ಭರ್ಜರಿ ಶತಕಗಳೊಂದಿಗೆ ಒಟ್ಟು 359 ರನ್ ಕಲೆಹಾಕಿದ್ದರು. ಅಲ್ಲದೆ 107 ಐಪಿಎಲ್ ಪಂದ್ಯಗಳಿಂದ ಒಟ್ಟು 3582 ರನ್ ಗಳಿಸಿದ್ದಾರೆ. ಈ ವೇಳೆ 7 ಶತಕ ಹಾಗೂ 19 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹೀಗಾಗೇ ಎಲ್ಲಾ ಫ್ರಾಂಚೈಸಿಗಳ ಟಾರ್ಗೆಟ್ ಲಿಸ್ಟ್ನಲ್ಲಿ ಬಟ್ಲರ್ ಹೆಸರು ಕಾಣಿಸಿಕೊಂಡಿದ್ದು, ಹೀಗಾಗಿ ಬಟ್ಲರ್ ಹೆಸರು ಮಾರ್ಕ್ಯೂ ಲಿಸ್ಟ್ನಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅಂದ್ರೆ ಪ್ರತಿ ಫ್ರಾಂಚೈಸಿಗಳು ಖರೀದಿಸಲು ಬಯಸುವ ಆಟಗಾರರನ್ನು ಮಾರ್ಕ್ಯೂ ಲಿಸ್ಟ್ನಲ್ಲಿ ಸೇರಿಸಲಾಗುತ್ತೆ. ಈ ಸಲ 12 ಆಟಗಾರರು ಮಾರ್ಕ್ಯೂ ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಎಲ್ಲಾ ಫ್ರಾಂಚೈಸಿಗಳ ಹಾಟ್ ಫೇವರೇಟ್ ಆಟಗಾರನಾಗಿ ಜೋಸ್ ಬಟ್ಲರ್ ಕಾಣಿಸಿಕೊಂಡಿದ್ದಾರೆ. ಯಾಕಂದ್ರೆ ಬಟ್ಲರ್ ಎಂಟ್ರಿಯಿಂದ ಮೂರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬಹುದು. ಟಿ20 ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಬಟ್ಲರ್, ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಇದರ ಜೊತೆಗೆ ನಾಯಕತ್ವವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿಯೇ ಎಲ್ಲಾ ಫ್ರಾಂಚೈಸಿಗಳು ಜೋಸ್ ಬಟ್ಲರ್ ಮೇಲೆ ಕಣ್ಣಿಟ್ಟಿದ್ದಾರೆ.
ಚಹಾಲ್ ಕೈ ಬಿಟ್ಟು ಕೈ ಕೈ ಹಿಸುಕಿಕೊಳ್ತಿದೆ ರಾಜಸ್ಥಾನ ರಾಯಲ್ಸ್!
ರಿಟೇನ್ ವೇಳೆ ರಾಜಸ್ಥಾನ ರಾಯಲ್ಸ್ ಮಾಡಿದ ಮತ್ತೊಂದು ಎಡವಟ್ಟು ಯುಜ್ವೇಂದ್ರ ಚಹಾಲ್ ಅವ್ರನ್ನ ರಿಲೀಸ್ ಮಾಡಿದ್ದು. ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಡಿದ್ದ ತಪ್ಪನ್ನೇ ರಾಜಸ್ಥಾನ ಕೂಡ ಮಾಡ್ಕೊಂಡಿದೆ. ಐಪಿಎಲ್ನಲ್ಲಿ ಸೂಪರ್ ಪರ್ಫಾಮೆನ್ಸ್ ನೀಡ್ತಿರೋ ಚಹಾಲ್ ಕಳೆದ 6 ಐಪಿಎಲ್ ಆವೃತ್ತಿಗಳಲ್ಲೂ 18ಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. ಅಲ್ದೇ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ಗಳನ್ನ ಕಬಳಿಸಿದ ಮೊದಲ ಹಾಗೂ ಏಕೈಕ ಆಟಗಾರ ಚಹಾಲ್. ಹೀಗಿದ್ರೂ ರಾಜಸ್ಥಾನ ಕೈ ಬಿಟ್ಟಿದ್ದು ಶಾಕಿಂಗ್ ನಿರ್ಧಾರವೇ ಸರಿ.
ರಿಷಭ್ ಪಂತ್ ರನ್ನು ಕೈ ಬಿಟ್ಟು ದೆಹಲಿ ತಂಡದ ಎಡವಟ್ಟು!
ರಿಷಭ್ ಪಂತ್. ಸದ್ಯ ಟೀಂ ಇಂಡಿಯಾದಲ್ಲಿ ಸ್ಥಿರ ಪ್ರದರ್ಶನ ನೀಡ್ತಿರೋ ಆಟಗಾರ. ಐಪಿಎಲ್ನಲ್ಲೂ ಕೂಡ ದೆಹಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ರು. ಆದ್ರೆ ಈ ಸಲ ರಿಷಭ್ ಪಂತ್ಗೆ ಡೆಲ್ಲಿ ತಂಡದಲ್ಲಿ ಕಂಟಿನ್ಯೂ ಆಗೋಕೆ ಆಸಕ್ತಿ ಇರಲಿಲ್ಲ. ಹೀಗಾಗಿ ತಂಡದಿಂದ ಹೊರಬರೋ ನಿರ್ಧಾರ ಮಾಡಿದ್ರು. ಬಟ್ ಇಲ್ಲಿ ದೆಹಲಿ ತಂಡ ಪಂತ್ರನ್ನ ಉಳಿಸಿಕೊಳ್ಳೋ ಯತ್ನ ಮಾಡಿದ್ರೆ ಬಹುಶಃ ಅಲ್ಲಿಯೇ ಉಳೀತಿದ್ರು.
ಬೌಲಿಂಗ್ ಬ್ರಹ್ಮಾಸ್ತ್ರ ಅರ್ಶದೀಪ್ ರನ್ನೇ ಬಿಟ್ಟುಕೊಟ್ಟ ಪಂಜಾಬ್!
ಒಂದು ತಂಡದ ಸೋಲು ಗೆಲುವಿಗೆ ಬ್ಯಾಟರ್ಗಿಂತ ಜಾಸ್ತಿ ಮ್ಯಾಟರ್ ಆಗೋದೇ ಬೌಲರ್ಸ್. ಒಬ್ಬ ಪವರ್ಫುಲ್ ಬೌಲರ್ ಇಬ್ಬರು ಬ್ಯಾಟರ್ಸ್ಗೆ ಸಮ. ಈ ಕೆಲಸವನ್ನ ಅಚ್ಚುಕಟ್ಟಾಗಿ ನಿಭಾಯಿಸೋ ಆಟಗಾರನೇ ಅರ್ಶದೀಪ್ ಸಿಂಗ್. ಎಡಗೈ ವೇಗದ ಬೌಲರ್ ಆರ್ಶದೀಪ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ರಿಲೀಸ್ ಮಾಡಿದೆ. ಸದ್ಯ ಅರ್ಶದೀಪ್ ಟೀಂ ಇಂಡಿಯಾದಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಬಿಡ್ ಮಾಡೋಕೆ ಕಾಯ್ತಿವೆ. ಬಟ್ ಈಗ ಪಂಜಾಬ್ ತಂಡ ಆರ್ಟಿಎಂ ಕಾರ್ಡ್ ಬಳಸಿ ತನ್ನಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಡೆತ್ ಓವರ್ ಸ್ಪೆಷಲಿಸ್ಟ್ ಶಮಿ ಕೈ ಬಿಟ್ಟಿದ್ದೇ ಗುಜರಾತ್ ತಪ್ಪು!
2023ರ ಐಪಿಎಲ್ ಟೂರ್ನಿಯ ಪರ್ಪಲ್ ಕ್ಯಾಪ್ ವಿಜೇತ ವೇಗಿ ಮೊಹಮ್ಮದ್ ಶಮಿ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಅಚ್ಚರಿಯ ರೀತಿಯಲ್ಲಿ ಕೈಬಿಟ್ಟಿದೆ. ಇದು ಗುಜರಾತ್ ಪಾಲಿಗೆ ದೊಡ್ಡ ಹೊಡೆತ ಕೊಡೋ ಸಾಧ್ಯತೆ ಇದೆ. 2013ರಲ್ಲಿ ಮೊಹಮ್ಮದ್ ಶಮಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದರು. ಇವರು ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಪರ ಬೌಲಿಂಗ್ ನಡೆಸಿದ್ದಾರೆ. ಒಟ್ಟು 110 ಪಂದ್ಯಗಳಲ್ಲಿ 127 ವಿಕೆಟ್ಗಳನ್ನು ಪಡೆದಿದ್ದಾರೆ. ಪವರ್ ಪ್ಲೇ ಹಾಗೂ ಡೆತ್ ಓವರ್ಗಳಲ್ಲಿ ಒಬ್ಬ ಸ್ಟಾರ್ ಬೌಲರ್. ತಮ್ಮ ವೇರಿಯೆಷನ್ ಮೂಲಕ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿ ಹಾಕುವ ಕ್ಷಮತೆಯನ್ನು ಹೊಂದಿದ್ದಾರೆ. ಹೀಗಾಗಿ ಈ ಸಲ ಯಾವ ತಂಡ ಸೇರಿಕೊಳ್ತಾರೋ ಕಾದು ನೋಡ್ಬೇಕು.
ಇನ್ನು ಇವ್ರಷ್ಟೇ ಅಲ್ಲದೇ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್ ಸೇರಿದಂತೆ ಸಾಕಷ್ಟು ಪ್ಲೇಯರ್ಸ್ ಹರಾಜಿನಲ್ಲಿದ್ದಾರೆ. ಈ ಸಲ ದಾಖಲೆಯ ಬೆಲೆಗೆ ಬಿಡ್ಡಿಂಗ್ ನಡೆಯೋದಂತೂ ಪಕ್ಕಾ.