ಫ್ಯಾಕ್ಟ್ ಚೆಕ್ : ಆಪ್ ಸಿಎಂ ಅಭ್ಯರ್ಥಿ ರೋಡ್ ಶೋ ವೇಳೆ ಖಾಲಿ ರಸ್ತೆ – ವೈರಲ್ ಆದ ವಿಡಿಯೋ 6 ತಿಂಗಳು ಹಳೆಯದ್ದು!

ಫ್ಯಾಕ್ಟ್ ಚೆಕ್ : ಆಪ್ ಸಿಎಂ ಅಭ್ಯರ್ಥಿ ರೋಡ್ ಶೋ ವೇಳೆ ಖಾಲಿ ರಸ್ತೆ – ವೈರಲ್ ಆದ ವಿಡಿಯೋ 6 ತಿಂಗಳು ಹಳೆಯದ್ದು!

ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ   ಮತದಾನ ನಾಳೆ ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಅಬ್ಬರದ ಪ್ರಚಾರ ನಡೆಸಿವೆ. ಈ ನಡುವೆ ಆಮ್ ಆದ್ಮಿ ಪಕ್ಷದ  ಮುಖ್ಯಮಂತ್ರಿ ಅಭ್ಯರ್ಥಿ ಇಸುದಾನ್ ಗಢ್ವಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳೂ ನಡೆಯುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ ಗಢ್ವಿ ಅವರು ಚಲಿಸುತ್ತಿರುವ ವಾಹನದ ಮೇಲಿಂದ ಕೈ ಬೀಸುತ್ತಾ ರೋಡ್ ಶೋ ನಡೆಸುತ್ತಿದ್ದರು. ಆದರೆ, ರಸ್ತೆಯ ಎರಡೂ ಕಡೆ ಜನಸಂದಣಿಯಿಲ್ಲದೆ ಖಾಲಿಯಾಗಿ ಕಾಣುತ್ತಿತ್ತು. ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರು ವಿಡಿಯೋವನ್ನು ಶೇರ್ ಮಾಡಿ ಆಪ್ ನಾಯಕನನ್ನು ಲೇವಡಿ ಮಾಡಿದ್ದಾರೆ. ಆಪ್ ನ ಗುಜರಾತ್ ಸಿಎಂ ಅಭ್ಯರ್ಥಿಯ ರೋಡ್‌ಶೋನ ದೃಶ್ಯಗಳನ್ನು ನೋಡಿದರೆ ಇಡೀ ಗುಜರಾತ್  ನೆರೆದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಬಿವಿ ಮತ್ತು ಕೇಶವ್ ಚಂದ್ ಯಾದವ್ ಸೋಷಿಯಲ್ ಮೀಡಿಯಾದಲ್ಲಿ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಗುಜರಾತ್ ಎಲೆಕ್ಷನ್: ಕಾಂಗ್ರೆಸ್ ಚುನಾವಣಾ ರ್‍ಯಾಲಿ ವೇಳೆ ನುಗ್ಗಿದ ಗೂಳಿ  – ಬಿಜೆಪಿ ಷಡ್ಯಂತ್ರ ಎಂದ ಗೆಹ್ಲೋಟ್

ಹಿಮಾಚಲ ಪ್ರದೇಶ ಯುವ ಕಾಂಗ್ರೆಸ್, ಮಧ್ಯಪ್ರದೇಶ ಯುವ ಕಾಂಗ್ರೆಸ್ ಮತ್ತು ಯುಪಿ-ಪಶ್ಚಿಮ ಯುವ ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್ ಪುಟಗಳಲ್ಲೂ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಈ  ವಿಡಿಯೋ ಆರು ತಿಂಗಳಿಗಿಂತ ಹಳೆಯದ್ದು. ಗಢ್ವಿ ಅವರನ್ನು ಗುಜರಾತ್‌ನಲ್ಲಿ ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಮೊದಲಿನ ವಿಡಿಯೋ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ಶ್ರೀನಿವಾಸ್ ಬಿವಿ ಅವರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಟ್ವೀಟ್ ಗೆ ಹಲವರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಹಳೆಯದು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ವೈರಲ್ ವಿಡಿಯೋದ ಫ್ರೇಮ್‌ಗಳನ್ನು ಆಪ್ ಗುಜರಾತ್‌ನ ಯೂಟ್ಯೂಬ್ ಪೇಜ್​​ಗೆ ಅಪ್‌ಲೋಡ್ ಮಾಡಿದ ಆರು ತಿಂಗಳ ಹಳೆಯ ವಿಡಿಯೋದೊಂದಿಗೆ ಹೋಲಿಸಿದ್ದಾರೆ.  ಈ ವರ್ಷದ ಮೇನಲ್ಲಿ ಆಪ್ ಚಾನಲ್‌ಗೆ ಅಪ್‌ಲೋಡ್ ಮಾಡಿದ ಇದೇ ರೀತಿಯ ರೋಡ್‌ಶೋ ವಿಡಿಯೋ ಇದೆ. ಈ ವಿಡಿಯೋದಲ್ಲಿ ಗಢ್ವಿ ಅವರು ಇದೇ ರೀತಿಯ ಉಡುಪಿನಲ್ಲಿ ರ್ಯಾಲಿಯನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. ಆರು ತಿಂಗಳ ಹಿಂದೆ ಆಪ್ ಗುಜರಾತ್‌ನ ಅಧಿಕೃತ ಫೇಸ್‌ಬುಕ್ ಪುಟಕ್ಕೆ ಅಪ್‌ಲೋಡ್ ಮಾಡಲಾದ ಮೂಲ ವಿಡಿಯೋ ಸಿಕ್ಕಿದೆ. ಫೋರ್​​ಬಂದರ್‌ನಲ್ಲಿ ನಡೆದ ಪರಿವರ್ತನ್ ಯಾತ್ರೆ ಸಮಯದಲ್ಲಿ ಇದನ್ನು ಸೆರೆಹಿಡಿಯಲಾಗಿದೆ ಎಂದು ಗುಜರಾತಿ ಭಾಷೆಯಲ್ಲಿ ಶೀರ್ಷಿಕೆ ಬರೆದಿದೆ.

ಇದನ್ನೂ ಓದಿ: ವೈಎಸ್‌ಆರ್‌ಟಿಪಿ ನಾಯಕಿಯನ್ನು ಕಾರು ಸಮೇತ ಎಳೆದೊಯ್ದ ಪೊಲೀಸರು!

ವೈರಲ್ ವಿಡಿಯೋದ ಫ್ರೇಮ್ ಮತ್ತು ಮೂಲ ವಿಡಿಯೋದಿಂದ ಫ್ರೇಮ್‌ಗಳನ್ನು ಹೋಲಿಸಿದ ನಂತರ, ಎರಡೂ ವಿಡಿಯೋಗಳು ಒಂದೇ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿ ಅಭ್ಯರ್ಥಿಯ ಅಧಿಕೃತ ಹೆಸರನ್ನು ಘೋಷಿಸುವ ಸುಮಾರು ಆರು ತಿಂಗಳ ಮೊದಲು ಈ ವರ್ಷದ ಮೇ 17 ರಂದು ಈ ಲೈವ್ ವಿಡಿಯೋವನ್ನು ಆಪ್  ಫೇಸ್‌ಬುಕ್ ಪೇಜ್ ನಲ್ಲಿ ಹಂಚಿಕೊಂಡಿದೆ. ವರದಿಯ ಪ್ರಕಾರ, ಆಪ್ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವೆಂಬರ್ 4 ರಂದು ಗಢ್ವಿಯ ಹೆಸರನ್ನು ಘೋಷಿಸಿದ್ದರು. ಆದ್ದರಿಂದ, ಈ ರೋಡ್ ಶೋ ವೇಳೆ ಗಢ್ವಿ ಗುಜರಾತ್‌ಗೆ ಆಪ್ ಸಿಎಂ ಅಭ್ಯರ್ಥಿಯಾಗಿರಲಿಲ್ಲ ಎಂಬುದು  ವರದಿಯಿಂದ ಸ್ಪಷ್ಟವಾಗಿದೆ.

suddiyaana