ಬುಮ್ರಾ ಕ್ಯಾಪ್ಟನ್.. KL ಓಪನರ್ – AUS ಸರಣಿಗೆ BCCI ಬಿಗ್ ಟ್ವಿಸ್ಟ್
ಸರಣಿ ಸೋತ್ರೆ ಗಂಭೀರ್ ಗೇಟ್ ಪಾಸ್?
ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಲ್ಲಿ ಉಳಿಯೋಕೆ ಟೀಂ ಇಂಡಿಯಾಗೆ ಇರೋದು ಇನ್ನೊಂದೇ ಚಾನ್ಸ್. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನ ಗೆದ್ರಷ್ಟೇ ಫೈನಲ್ಗೆ ಅರ್ಹತೆ. ಇಲ್ದಿದ್ರೆ ಹ್ಯಾಟ್ರಿಕ್ ಫೈನಲ್ ಕನಸು ಭಗ್ನವಾಗಲಿದೆ. ಈಗಾಗಲೇ ಆಸಿಸ್ ಪ್ರವಾಸಕ್ಕಾಗಿ ವಾರಗಳ ಹಿಂದೆಯೇ ಬಿಸಿಸಿಐ ಟೀಂ ಇಂಡಿಯಾ ಸ್ವ್ಕಾಡ್ ಅನೌನ್ಸ್ ಮಾಡಿದೆ. ಸರಣಿ ಗೆಲುವಿನ ಕಾನ್ಫಿಡೆನ್ಸ್ನೊಂದಿಗೆ ಟೀಂ ಇಂಡಿಯಾದ ಆಟಗಾರರು ಕಾಂಗರೂ ನಾಡಿಗೆ ಕಾಲಿಟ್ಟಿದ್ದಾರೆ. ಬಟ್ ಸರಣಿಯ ಮೊದಲ ಪಂದ್ಯಕ್ಕೂ ಮುನ್ನವೇ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಆಗಿದ್ದ ಜಸ್ಪ್ರೀತ್ ಬುಮ್ರಾ ಕ್ಯಾಪ್ಟನ್ ಆಗಲಿದ್ದಾರೆ. ತಂಡದಿಂದ ಹೊರಬೀಳೋ ಆತಂಕದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಓಪನರ್ ಸ್ಲಾಟ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಅಷ್ಟಕ್ಕೂ ಕ್ಯಾಪ್ಟನ್ಸಿ ಮತ್ತು ಪ್ಲೇಯಿಂಗ್ 11ನಲ್ಲಿ ಮೇಜರ್ ಬದಲಾವಣೆಗೆ ಕಾರಣ ಏನು? ಕೋಚ್ ಗೌತಮ್ ಗಂಭೀರ್ ಸ್ಟ್ರಾಟಜಿ ಏನು? ಈ ಸರಣಿಯೂ ಕೈ ತಪ್ಪಿದ್ರೆ ಯಾರ್ಯಾರ ತಲೆದಂಡ ಫಿಕ್ಸ್ ಆಗಲಿದೆ? ಕನ್ನಡಿಗ ಕೆಎಲ್ ರಾಹುಲ್ ಭವಿಷ್ಯ ಬದಲಿಸುತ್ತಾ ಈ ಸಿರೀಸ್? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಹನಾ, ಸ್ನೇಹ ಬಳಿಕ ಪುಟ್ಟಕ್ಕ ಸಾವು – ಸೀರಿಯಲ್ ನ ಮುಖ್ಯ ಪಾತ್ರವೇ ಎಂಡ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನವೆಂಬರ್ 22 ರಿಂದ ಪರ್ತ್ನಲ್ಲಿ ಪ್ರಾರಂಭವಾಗಲಿದೆ. ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ. ಈಗಾಗಲೇ ಉಭಯ ತಂಡಗಳ ಸದಸ್ಯರು ಸಿದ್ಧತೆ ಆರಂಭಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗಿರುವ ಭಾರತ, ಆಸ್ಟ್ರೇಲಿಯಾ ವಿರುದ್ಧ ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದ್ರೆ ಮೊದಲ ಪಂದ್ಯಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಆಡೋದಿಲ್ಲ. ರೋಹಿತ್ ಆಬ್ಸೆನ್ಸ್ನಿಂದಾಗಿ ಒಂದಷ್ಟು ಬದಲಾವಣೆಗಳು ಆಗೋದು ಪಕ್ಕಾ ಆಗಿದೆ.
ಮೊದಲ ಪಂದ್ಯಕ್ಕೆ ರೋಹಿತ್ ಅಲ್ಲ ಬುಮ್ರಾ ಕ್ಯಾಪ್ಟನ್!
ಬಿಸಿಸಿಐ ಅನೌನ್ಸ್ ಮಾಡಿರುವಂತೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ. ಆದ್ರೆ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾಗಿಯಾಗೋದಿಲ್ಲ. ರೋಹಿತ್ ಶರ್ಮಾ ಹಾಗೂ ಪತ್ನಿ ರಿತಿಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಇದೇ ಕಾರಣಕ್ಕೆ ಮೊದಲ ಟೆಸ್ಟ್ ಪಂದ್ಯದಿಂದ ರೋಹಿತ್ ಹೊರಗುಳಿಯೋಕೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಹಿಟ್ಮ್ಯಾನ್ ಅಲಭ್ಯರಾದರೆ, ಪರ್ತ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನ ವೈಸ್ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ. ಸ್ವತಃ ಹೆಡ್ ಕೋಚ್ ಗೌತಮ್ ಗಂಭೀರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರೋಹಿತ್ ಜಾಗದಲ್ಲಿ ಓಪನರ್ ಆಗಿ ರಾಹುಲ್ ಇನ್ನಿಂಗ್ಸ್ ಆರಂಭ!
ಇನ್ನು ರೋಹಿತ್ ಶರ್ಮಾ ಆಬ್ಸೆನ್ಸ್ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸೋ ಸಾಧ್ಯತೆ ಇದೆ. ಈ ಬಗ್ಗೆ ಕೋಚ್ ಗೌತಮ್ ಗಂಭೀರ್ ಸುಳಿವು ನೀಡಿದ್ದಾರೆ. ಭಾರತೀಯ ಆಟಗಾರರ ಮೊದಲ ಬ್ಯಾಚ್ ಈಗಾಗಲೇ ಆಸೀಸ್ ತಲುಪಿದ್ದು, ಎರಡನೇ ಬ್ಯಾಚ್ ತೆರಳುತ್ತಿದೆ. ಆದರೆ ರೋಹಿತ್ ಶರ್ಮಾ ಮಾತ್ರ ಪ್ರಯಾಣಿಸಿಲ್ಲ. ಹೀಗಾಗಿ ಸರಣಿಯ ಆರಂಭಿಕ ಪಂದ್ಯದಲ್ಲಿ ರೋಹಿತ್ ಆಡುವುದು ಡೌಟಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಒಂದು ಸ್ಥಾನ ಖಾಲಿ ಉಳಿಯುತ್ತದೆ. ಆಗ ಕನ್ನಡಿಗ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಎ ವಿರುದ್ಧದ ಅನಧಿಕೃತ ಟೆಸ್ಟ್ನಲ್ಲಿ ಭಾರತ ಎ ಪರ ಆಡಿದ ಅನ್ಕ್ಯಾಪ್ಡ್ ಆಟಗಾರ ಅಭಿಮನ್ಯು ಈಶ್ವರನ್ ಮತ್ತು ಕೆಎಲ್ ರಾಹುಲ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಅದೆಲ್ಲಕ್ಕಿಂತ ಹೆಚ್ಚಾಗಿ ರಾಹುಲ್ ಅವರ ಎಕ್ಸ್ಪೀರಿಯನ್ಸ್ ಈಶ್ವರನ್ ಅವರ ಪ್ರಸ್ತುತ ಫಾರ್ಮ್ಗಿಂತ ಮೇಲುಗೈ ಸಾಧಿಸಬಹುದು ಎಂದು ಗಂಭೀರ್ ಸುಳಿವು ನೀಡಿದ್ದಾರೆ.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು 4 ಪಂದ್ಯಗಳನ್ನ ಗೆಲ್ಲಲೇಬೇಕು!
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಸೋತಿರುವಂತ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲ್ಲುವುದು ಭಾರತಕ್ಕೆ ಅನಿವಾರ್ಯವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ಭಾರತ 5 ಪಂದ್ಯಗಳ ಪೈಕಿ ಕನಿಷ್ಠ ನಾಲ್ಕು ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಒಂದು ಪಂದ್ಯ ಸೋತರು ಫೈನಲ್ ಹಾದಿ ಕಠಿಣವಾಗಲಿದೆ. ಇದೀಗ ರೋಹಿತ್ ಶರ್ಮಾ ಮೊದಲನೇ ಟೆಸ್ಟ್ನಲ್ಲಿ ಆಡದೇ ಇರುವುದು ತಂಡಕ್ಕೆ ತಲೆನೋವಾಗಿದೆ. ಸದ್ಯ ಆಸ್ಟ್ರೇಲಿಯಾ ಮತ್ತು ಭಾರತವು ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ.
ಆಸಿಸ್ ಸರಣಿ ಸೋತ್ರೆ ಕೋಚ್ ಸ್ಥಾನದಿಂದ ಗಂಭೀರ್ ಗೆ ಗೇಟ್ ಪಾಸ್?
ನ್ಯೂಜಿಲೆಂಡ್ ವಿರುದ್ಧ ದ ಸೋಲಿನ ಬಳಿಕ ಬಿಸಿಸಿಐನಲ್ಲಿ ಸಾಕಷ್ಟು ಚರ್ಚೆಗಳು ನಡೀತಿವೆ. ಅದರಲ್ಲೂ ಗೌತಮ್ ಗಂಭೀರ್ ಅವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿಯೇ ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗಂಭೀರ್ ಪಾಲಿಗೆ ಅಗ್ನಿ ಪರೀಕ್ಷೆ. ಈ ಪರೀಕ್ಷೆಯಲ್ಲಿ ಟೀಮ್ ಇಂಡಿಯಾ ಸೋತ್ರೆ ಗಂಭೀರ್ ತಲೆದಂಡವಾಗುವುದು ಫಿಕ್ಸ್ ಎನ್ನಲಾಗ್ತಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತರೆ, ಭಾರತ ತಂಡದ ಕೋಚ್ ಬದಲಾಗುವುದು ಖಚಿತ. ಅಲ್ಲದೆ ಟೆಸ್ಟ್ ಹಾಗೂ ಏಕದಿನ, ಟಿ20 ತಂಡಗಳಿಗೆ ಪತ್ಯೇಕ ತರಬೇತುದಾರರನ್ನು ನೇಮಿಸಿಕೊಳ್ಳಲು ಬಿಸಿಸಿಐ ಪ್ಲ್ಯಾನ್ ಮಾಡಿದೆ. ಗೌತಮ್ ಗಂಭೀರ್ ಅವರನ್ನು ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಚಾಂಪಿಯನ್ಸ್ ಟ್ರೋಫಿವರೆಗೆ ಗಂಭೀರ್ ಅವರನ್ನು ಏಕದಿನ ತಂಡದ ಕೋಚ್ ಆಗಿ ಮುಂದುವರೆಸಬಹುದು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗಂಭೀರ್ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಇನ್ನು ಸರಣಿಯ ಎರಡನೇ ಪಂದ್ಯ ಡಿಸೆಂಬರ್ 6ರಿಂದ 10ರವರೆಗೆ ಅಡಿಲೇಡ್ ಓವಲ್ನಲ್ಲಿ ನಡೆಯಲಿದೆ. ಡಿಸೆಂಬರ್ 14ರಿಂದ 18ರವರೆಗೆ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್ನ ಗಬ್ಬಾದಲ್ಲಿ ನಡೆಯಲಿದೆ. ಡಿಸೆಂಬರ್ 26ರಿಂದ 30ರವರೆಗೆ ಮೆಲ್ಬೋರ್ನ್ನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಾಲ್ಕನೇ ಟೆಸ್ಟ್ ನಿಗದಿಯಾಗಿದೆ. ಐದನೇ ಮತ್ತು ಅಂತಿಮ ಟೆಸ್ಟ್ ಜನವರಿ 3ರಿಂದ 7ರವರೆಗೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಡಬ್ಲ್ಯುಟಿಸಿ ಫೈನಲ್ ದೃಷ್ಟಿಯಿಂದ ಈ ಪಂದ್ಯ ಭಾರತಕ್ಕೆ ತುಂಬಾನೇ ಮಹತ್ವದ್ದಾಗಿದೆ.