ಬಿಲ್ಡಪ್ ಕೊಟ್ಟು ಜಾರಿಬಿದ್ದ ಪಾಂಡ್ಯ – SA ಬೌಲರ್ಸ್ ಗೆ ಶರಣಾದ ಭಾರತ
1-1 ಸಮಬಲ.. 3ನೇ ಪಂದ್ಯಕ್ಕೆ ಟ್ವಿಸ್ಟ್

ಬಿಲ್ಡಪ್ ಕೊಟ್ಟು ಜಾರಿಬಿದ್ದ ಪಾಂಡ್ಯ – SA ಬೌಲರ್ಸ್ ಗೆ ಶರಣಾದ ಭಾರತ1-1 ಸಮಬಲ.. 3ನೇ ಪಂದ್ಯಕ್ಕೆ ಟ್ವಿಸ್ಟ್

ಇಷ್ಟು ದಿನ ಟಿ-20 ಫಾರ್ಮೆಟ್​​ನಲ್ಲಿ ಟೀಂ ಇಂಡಿಯಾನೇ ಸುಲ್ತಾನ್. ಯಂಗ್​ಸ್ಟರ್ಸ್ ಬ್ಯಾಟಿಂಗ್ ಆರ್ಭಟ ನೋಡೋದೇ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಥ್ರಿಲ್. ಲಂಕಾ ಸರಣಿಯಿಂದ ಹಿಡ್ದು ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದವರೆಗೂ ಹೊಡಿಬಡಿ ಆಟದ್ದೇ ಸದ್ದು. ಬಟ್ ಹರಿಣಗಳ ವಿರುದ್ಧದ ಎರಡನೇ ಪಂದ್ಯದಲ್ಲಿ ಸೀನ್  ಕಂಪ್ಲೀಟ್ ಉಲ್ಟಾ. ಶತಕವೀರ ಸಂಜು ಸ್ಯಾಮ್ಸನ್ ಜೀರೋ.. ಪವರ್ ಹಿಟ್ಟರ್ ಬ್ಯಾಟರ್ ಸೂರ್ಯನೂ ಸೈಲೆಂಟ್. ಪಾಂಡ್ಯ ಫ್ಲ್ಯಾಪ್ ಶೋ. ಟೋಟಲಿ ಇಡೀ ಟೀಮೇ ಫೇಲ್ಯೂರ್. ಪರಿಣಾಮ ಸೋಲಿಲ್ಲದ ಸರನಾಗಿ ನುಗ್ತಿದ್ದ ಭಾರತ ಚುಟುಕು ಸಮರದಲ್ಲೂ ಮುಗ್ಗರಿಸಿತು. ಅಷ್ಟಕ್ಕೂ 2ನೇ ಟಿ-20 ಪಂದ್ಯದಲ್ಲಿ ಭಾರತದ ಸೋಲಿಗೆ ಏನೆಲ್ಲಾ ಕಾರಣ ಆಯ್ತು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಗೆಲ್ಲೀವಿ ಅಂತಾ ಜಂಭ ಕೊಚ್ಚಿಕೊಂಡರೂ ಗೆದ್ದೇ ಬಿಟ್ಟ ಪಾಕ್ ಕ್ಯಾಪ್ಟನ್- 22 ವರ್ಷಗಳ ನಂತರ ಪಾಕಿಸ್ತಾನಕ್ಕೆ ಗೆಲುವು

ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಹಿರಿಯರ ಟೀಂ ಮೂರಕ್ಕೆ ಮೂರೂ ಪಂದ್ಯಗಳನ್ನ ಸೋತು ಕ್ಲೀನ್ ಸ್ವೀಪ್ ಆಗಿತ್ತು. ಈ ಸೋಲು ಭಾರತೀಯ ಅಭಿಮಾನಿಗಳನ್ನ ತೀವ್ರವಾಗಿ ಕಾಡಿತ್ತು. ಬಟ್ ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿ ಆರಂಭವಾಗಿ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಪರ್ಫಾಮೆನ್ಸ್ ನೋಡಿದ್ಮೇಲೆ ಸ್ವಲ್ಪ ರಿಲ್ಯಾಕ್ಸ್ ಆಗಿದ್ರು. ಹೊಡಿಬಡಿ ಆಟದಿಂದ ಸಮಾಧಾನ ಪಟ್ಕೊಂಡಿದ್ರು. ಬಟ್ ಎರಡನೇ ಮ್ಯಾಚ್​ನಲ್ಲಿ ಭಾರತದ ಸ್ಟ್ರಾಟಜಿ ವರ್ಕೌಟ್ ಆಗ್ಲಿಲ್ಲ. ಬ್ಯಾಟಿಂಗ್​ನಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ನೀಡಿದ ಆಟಗಾರರು ಪಂದ್ಯವನ್ನ ಕೈ ಚೆಲ್ಲಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೇವಲ 125ರನ್​ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಸೌತ್ ಆಫ್ರಿಕಾ ಆಟಗಾರರು 19 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಪಂದ್ಯವನ್ನ ಗೆದ್ದು ಬೀಗಿದ್ರು.

ಫಸ್ಟ್ ಮ್ಯಾಚ್ ನಲ್ಲಿ ವೈಲೆಂಟ್.. ಎರಡನೇ ಪಂದ್ಯಕ್ಕೆ ಸೈಲೆಂಟ್!

ಸೌತ್​ ಆಫ್ರಿಕಾ ವಿರುದ್ಧ ಮೊದಲ ಟಿ20ಯಲ್ಲಿ ಆರ್ಭಟಿಸಿದ್ದ ಟೀಮ್​ ಇಂಡಿಯಾದ ಬ್ಯಾಟ್ಸ್​​ಮನ್​ಗಳು 2ನೇ ಟಿ20ಯಲ್ಲಿ ಸೈಲೆಂಟ್​ ಆಗಿದ್ರು. ಭಾನುವಾರ ನಡೆದ ಪಂದ್ಯದಲ್ಲಿ ಸೌತ್​ ಆಫ್ರಿಕನ್​ ಬೌಲರ್ಸ್ ಮೆರೆದಾಡಿದ್ರೆ, ಇಂಡಿಯನ್​ ಬ್ಯಾಟರ್ಸ್​ ಪೆವಿಲಿಯನ್​ ಪರೇಡ್​ ನಡೆಸಿದ್ರು. ರನ್ ​ಗಳಿಸೋಕೆ ಒದ್ದಾಡಿದ್ರು. ಡರ್ಬನ್​ನಲ್ಲಿ ನಡೆದ ಪಂದ್ಯದಲ್ಲಿ ಮೆರೆದಾಡಿದ್ದ ಟೀಮ್​ ಇಂಡಿಯಾ ಬ್ಯಾಟರ್​ಗಳು, 2ನೇ ಟಿ20ಯಲ್ಲಿ ಮಕಾಡೆ ಮಲಗಿದ್ರು. ಟಾಪ್​ ಆರ್ಡರ್​ ಬ್ಯಾಟರ್​ಗಳಂತೂ ಒಬ್ರೂ ಸೆಟಲ್ ಆಗ್ಲೇ ಇಲ್ಲ. ಹರಿಣಗಳ ಬೌಲರ್ಸ್ ಅಬ್ಬರಕ್ಕೆ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಪರೇಡ್ ನಡೆಸಿದ್ರು.

ಶತಕವೀರ ಸಂಜು ಶೂನ್ಯ.. ಅಭಿಷೇಕ್ ಶರ್ಮಾ ಫೇಲ್!

ಟೀಂ ಇಂಡಿಯಾ ಪರ ಓಪನರ್ ಆಗಿ ಕಣಕ್ಕಿಳಿದು ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್, ಗೆಬೆರ್ಹಾದಲ್ಲಿ ಸದ್ದು ಮಾಡ್ಲಿಲ್ಲ. 3 ಬಾಲ್​ಗಳನ್ನ ಫೇಸ್ ಮಾಡಿ ಕ್ಲೀನ್​ಬೋಲ್ಡ್​ ಆಗಿ ಪೆವಿಲಿಯನ್ ಸೇರಿದ್ರು. ಇನ್ನು ಅಭಿಷೇಕ್ ಶರ್ಮಾದಂತೂ ಸೇಮ್ ಸೀನ್. 4 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ರು. ಸದಾ ಕಾಲ ತಂಡಕ್ಕೆ ಹೊಡಿಬಡಿ ಆಟದ ಮೂಲಕ ನೆರವಾಗ್ತಿದ್ದ ಕ್ಯಾಪ್ಟನ್, ಟಿ-20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಸಿಮಿಲಾನೆ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ರು. 15 ರನ್​ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ ಮತ್ತೆ ಮೇಲೆಳಲೇ ಇಲ್ಲ.

ತಿಲಕ್ ವರ್ಮಾ-ಅಕ್ಷರ್ ಪಟೇಲ್ ಜವಾಬ್ದಾರಿಯುತ ಆಟ!

5ನೇ ವಿಕೆಟ್​ಗೆ ಜೊತೆಯಾದ ತಿಲಕ್​ ವರ್ಮಾ-ಅಕ್ಷರ್​ ಪಟೇಲ್​ ತಂಡಕ್ಕೆ ಚೇತರಿಕೆ ನೀಡೋ ಯತ್ನ ಮಾಡಿದ್ರು. ಆದ್ರೆ ಸೌತ್​ ಆಫ್ರಿಕನ್​ ಕ್ಯಾಪ್ಟನ್​ ಏಡೆನ್​ ಮಾರ್ಕ್ರಮ್ ಇದಕ್ಕೆ ಅವಕಾಶ ನೀಡಲಿಲ್ಲ. 20 ರನ್​ಗಳಿಸಿ ಭರವಸೆ ಹುಟ್ಟುಹಾಕಿದ್ದ ತಿಲಕ್​ ವರ್ಮಾ, ಮಿಲ್ಲರ್​ ಹಿಡಿದ ಕ್ಯಾಚ್​ಗೆ ಬಲಿಯಾದ್ರು. ತಿಲಕ್​ ವರ್ಮಾ ಬೆನ್ನಲ್ಲೇ 4 ಬೌಂಡರಿ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಅಕ್ಷರ್​ ಪಟೇಲ್ ಕೂಡ ಪೆವಿಲಿಯನ್​ ಸೇರಿದ್ರು. ನಾನ್​​ ಸ್ಟ್ರೈಕರ್​ ಎಂಡ್​ನಲ್ಲಿ ರನೌಟ್​ಗೆ ಬಲಿಯಾದ್ರು. ಬಳಿಕ ಕಣಕ್ಕಿಳಿದ ರಿಂಕು ಸಿಂಗ್​ ಕೂಡ ಬಂದಷ್ಟೇ ವೇಗವಾಗಿ ವಿಕೆಟ್ ಒಪ್ಪಿಸಿದ್ರು.

ಓವರ್ ಕಾನ್ಫಿಡೆನ್ಸ್.. ಅರ್ಷದೀಪ್ ಗೆ ಸ್ಟ್ರೈಕ್ ಕೊಡದ ಪಾಂಡ್ಯ

ಅಷ್ಟಕ್ಕೂ ಟೀಮ್ ಇಂಡಿಯಾ ಸೋಲಿಗೆ ಮೇನ್ ರೀಸನ್ನೇ ಬ್ಯಾಟಿಂಗ್ ಫೇಲ್ಯೂರ್. ಅದರಲ್ಲೂ ಡೆತ್ ಓವರ್​ಗಳಲ್ಲಿ ರನ್​ ಗಳಿಸೋಕೆ ಭಾರತೀಯ ಬ್ಯಾಟರ್​ಗಳು ತಿಣುಕಾಡಿದ್ರು. ಇದ್ರ ನಡುವೆ 8ನೇ ಸ್ಲಾಟ್​ನಲ್ಲಿ ಕಣಕ್ಕಿಳಿದಿದ್ದ ಅರ್ಷದೀಪ್ ಸಿಂಗ್ ಒಂದು ಸಿಕ್ಸ್ ಸಿಡಿಸಿ ಭರವಸೆ ಮೂಡಿಸಿದ್ರು. ಆದರೆ ಹಾರ್ದಿಪ್ ಪಾಂಡ್ಯ ನಡೆಯಿಂದಾಗಿ ಅರ್ಷದೀಪ್​ಗೆ ಹೆಚ್ಚಿನ ಬಾಲ್​ಗಳನ್ನು ಎದುರಿಸೋಕೆ ಅವಕಾಶನೇ ಸಿಗ್ಲಿಲ್ಲ. ಕೊನೆಯ ಮೂರು ಓವರ್​ಗಳಲ್ಲೂ ಸ್ಟ್ರೈಕ್ ಬಿಟ್ಟುಕೊಡದೆ ಆಡಿದ್ರು ಪಾಂಡ್ಯ. ಅದರಲ್ಲೂ 19ನೇ ಓವರ್​ನ 2ನೇ ಎಸೆತದಲ್ಲಿ ಅರ್ಷದೀಪ್ ಸಿಂಗ್ ಸಿಂಗಲ್ ತೆಗೆಯುವ ಮೂಲಕ ಪಾಂಡ್ಯಗೆ ಸ್ಟ್ರೈಕ್ ನೀಡಿದ್ದರು. ಈ ವೇಳೆ ಹಾರ್ದಿಕ್ ಆಡಿದ ಮಾತುಗಳೇ ಈಗ ಟ್ರೋಲಿಗರಿಗೆ ಆಹಾರವಾಗಿದೆ.  ಅರ್ಷದೀಪ್ ಗೆ ಹಾರ್ದಿಕ್ ಪಾಂಡ್ಯ, ಇನ್ನು ನಾನ್ ಸ್ಟ್ರೈಕ್​ನಲ್ಲಿ ನಿಂತು ಎಂಜಾಯ್ ಮಾಡು ಎಂದಿದ್ದಾರೆ. ಓವರ್ ಕಾನ್ಫಿಡೆನ್ಸ್​​ನಲ್ಲಿ ಪಾಂಡ್ಯ ಆಡಿದ್ದ ಇದೇ ಮಾತು ಸ್ಟಂಪ್ ಮೈಕ್​ನಲ್ಲಿ ಕೇಳಿದೆ. ಬಟ್ ಆಮೇಲೆ 10 ಬಾಲ್​ಗಳನ್ನ ಎದುರಿಸಿದ ಪಾಂಡ್ಯ ರನ್​ಗಳಿಸೋಕೆ ಒದ್ದಾಡಿದ್ರು.

ಕೊನೆಯ ಹತ್ತು ಎಸೆತಗಳಲ್ಲಿ ಕಲೆ ಹಾಕಿದ್ದು 7 ರನ್ ಮಾತ್ರ!

ಪಾಂಡ್ಯ ಆತ್ಮವಿಶ್ವಾಸ ನೋಡಿದ್ರೆ ಇನ್ನೇನು ಸಿಕ್ಸ್, ಫೋರ್ ಅಷ್ಟೇ ಅನ್ನೋ ಹಾಗಿತ್ತು. ಆದ್ರೆ 19ನೇ ಓವರ್​ನ ಮೂರನೇ ಎಸೆತದಿಂದ ಸ್ಟ್ರೈಕ್ ಪಡೆದ ಹಾರ್ದಿಕ್ ಪಾಂಡ್ಯ ನಾಲ್ಕು ಎಸೆತಗಳಲ್ಲಿ 1 ಬೈಸ್ ರನ್ ಮಾತ್ರ ಕಲೆಹಾಕಿದ್ದರು. ಅಲ್ಲದೆ ಕೊನೆಯ ಓವರ್​ನಲ್ಲಿ ಮತ್ತೆ ಸ್ಟ್ರೈಕ್​ಗೆ ಬಂದ ಹಾರ್ದಿಕ್ ಮೊದಲ 4 ಎಸೆತಗಳಲ್ಲಿ ಯಾವುದೇ ರನ್​ಗಳಿಸಲಿಲ್ಲ. ಇನ್ನು 5ನೇ ಎಸೆತದಲ್ಲಿ 2 ರನ್​​ಗಳಿಸಿದರೆ, ಇನಿಂಗ್ಸ್​ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದರು. ನಾನ್ ಸ್ಟ್ರೈಕ್​ನಲ್ಲಿ ನಿಂತು ನನ್ನ ಬ್ಯಾಟಿಂಗ್ ಎಂಜಾಯ್ ಮಾಡು ಎಂದಿದ್ದ ಪಾಂಡ್ಯ ಕಲೆ ಹಾಕಿದ್ದು 7 ರನ್ ಅಷ್ಟೇ. ಹೀಗಾಗಿಯೇ ಇದೀಗ ಅತಿಯಾದ ಆತ್ಮ ವಿಶ್ವಾಸದಿಂದ ತೇಲಿದ ಹಾರ್ದಿಕ್ ಪಾಂಡ್ಯರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತ್ತಿದೆ.

ಇನ್ನು ಭಾನುವಾರದ ಪಂದ್ಯದಲ್ಲಿ ಭಾರತದ ಪರ ವರುಣ್ ಚಕ್ರವರ್ತಿ 5 ವಿಕೆಟ್ ಪಡೆದು ಮಿಂಚಿದರು. ದಕ್ಷಿಣ ಆಫ್ರಿಕಾ ಎರಡನೇ ಟಿ20 ಗೆದ್ದು ನಾಲ್ಕು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಬುಧವಾರ ಮೂರನೇ ಪಂದ್ಯ ನಡೆಯಲಿದ್ದು, ಗೆದ್ದ ತಂಡಕ್ಕೆ ಸರಣಿ ಗೆಲುವಿನ ಚಾನ್ಸಸ್ ಜಾಸ್ತಿ ಇದೆ.

Shwetha M

Leave a Reply

Your email address will not be published. Required fields are marked *