ಸಿಎಂ ವಿರುದ್ಧ ತೊಡೆತಟ್ಟಿದ ರೆಡ್ಡಿ – ಗಣಿಧಣಿ ಊರಲ್ಲಿ ಟಗರು ಕಾಳಗ
ಸೋತ್ರೆ ರೆಡ್ಡಿ ಭವಿಷ್ಯ ಏನಾಗುತ್ತೆ?
ಗೆಲ್ಲಲೇ ಬೇಕು.. ಗೆದ್ದು ತಮ್ಮ ತಾಕತ್ತು.. ಖದರ್ ತೋರಿಸಲೇ ಬೇಕು.. ವಿರೋಧಿಗಳಿಗೆ ಸೋಲಿನ ಕಹಿ ಉಣಿಸೋಕೆ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷವಾದ ಬಿಜೆಪಿ ಹಾಗೂ ಜೆಡಿಎಸ್ ಉಪ ಸಮರದ ಅಖಾಡದಲ್ಲಿ ಹೋರಾಟ ನಡೆಸುತ್ತಿವೆ. ಅದ್ರಲ್ಲೂ ಸಿಎಂ ಸಿದ್ದರಾಮಯ್ಯಗೆ ಈ ಬೈ ಎಲೆಕ್ಷನ್ ಪ್ರತಿಷ್ಠೆಯ ಪ್ರಶ್ನೆಯಾಗಿದೆ.. ಮುಡಾ ಆರೋಪ, ಸಿಎಂ ಬದಲಾವಣೆ ಮಾತುಗಳಿಗೆ ಈ ಉಪಚುನಾವಣೆಯಲ್ಲಿ ಗೆದ್ದು ಉತ್ತರ ಕೊಡಲೇ ಬೇಕಾದ ಸ್ಥಿತಿಯಲ್ಲಿ ಸಿಎಂ ಇದ್ದಾರೆ. ಅದರಲ್ಲೂ ಸಂಡೂರು ಅಖಾಡವನ್ನ ಸಿಎಂ ಸಿರೀಯಸ್ ಆಗೇ ತೆಗೆದುಕೊಂಡಿದ್ದಾರೆ. ಹಾಗಿದ್ರೆ ಸಂಡೂರು ಗೆಲ್ಲೋಕೆ ಸಿಎಂ ಮಾಡಿರೋ ಪ್ಲ್ಯಾನ್ ಏನು? ಸಿಎಂ ವಿರುದ್ಧ ರೆಡ್ಡಿ ತೊಡೆತಟ್ಟಿದ್ದೇಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವಿಕೆಟ್ ಕೀಪರ್ಸ್ ಗೆ ಭರ್ಜರಿ ಲಾಟರಿ – ರಿಷಭ್ ಪಂತ್ ಗೆ ₹26 ಕೋಟಿ ಆಫರ್
ಸಂಡೂರಿನಲ್ಲಿ ಕಾಂಗ್ರೆಸ್ಸಿಗೆ ಗೆಲ್ಲೋದು ಅತ್ಯವಶ್ಯಕ, ಇದಕ್ಕೆ ಕಾರಣ ಒಂದು ಇದು ಕಾಂಗ್ರೆಸ್ ಗೆದ್ದಿರುವ ಕ್ಷೇತ್ರ. ಇನ್ನೊಂದು, ಸಂಡೂರಿನ ಬಿಜೆಪಿಯ ಜವಾಬ್ದಾರಿಯನ್ನು ವಹಿಸಿಕೊಂಡವರು ಜನಾರ್ದನ ರೆಡ್ಡಿ. ರೆಡ್ಡಿ ಮತ್ತು ಸಿದ್ದರಾಮಯ್ಯ ನಡುವಿನ ರಾಜಕೀಯ ಸಂಬಂಧಗಳು ಅಷ್ಟಕಷ್ಟೇ.. ತಾನು ಜೈಲು ಪಾಲಾಗಿದ್ದು, ಸ್ವಂತ ಊರಿಗೆ 13 ವರ್ಷಗಳು ಕಾಲು ಇಡಲು ಆಗದೇ ಇದ್ದದ್ದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ ಎನ್ನುವುದು ರೆಡ್ಡಿ ಸಿಟ್ಟಿಗೆ ಕಾರಣ. ಅದಕ್ಕೆ, ಜಿದ್ದಿಗೆ ಬಿದ್ದಂತೆ, ಕಾಲಿಗೆ ಚಕ್ರ ಕಟ್ಟಿಕೊಂಡು, ಸಂಡೂರಿನ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಗೆಲುವಿಗೆ, ರೆಡ್ಡಿ ಪಣ ತೊಟ್ಟಿದ್ದಾರೆ. ಇನ್ನೊಂದು ಕಡೆ, ಕ್ಷೇತ್ರದ ಸೋಲು ಗೆಲುವಿನ ಜವಾಬ್ದಾರಿ ತನ್ನ ಮೇಲೆ ಇರುವುದನ್ನು ಅರಿತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಅಪ್ಪ ಇಲ್ಲೇ ಸತ್ತಿದ್ದು, ದೊಡ್ಡಪ್ಪ ಇಲ್ಲೇ ಸತ್ತಿದ್ದು, ನಾನೂ ಇಲ್ಲೇ ಸಾಯೋದು ಎನ್ನುವ ಸೆಂಟಿಮೆಂಟ್ ಡೈಲಾಗುಗಳನ್ನು ಹೊಡೆಯುತ್ತಿದ್ದಾರೆ
ಸಂಡೂರು ಗೆಲ್ಲೋಕೆ ಸಿಎಂ ಸಿದ್ದು ಪಣ
ಸಿಎಂ ಸಿದ್ದರಾಮಯ್ಯ ಇತರ ಎರಡು ಕ್ಷೇತ್ರಗಳಿಗಿಂತ ಸಂಡೂರು ಕ್ಷೇತ್ರವನ್ನು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಶತಾಯಗತಾಯು ಗೆಲ್ಲಲ್ಲೇ ಬೇಕು ಎನ್ನುವ ಫರ್ಮಾನ್ ಅನ್ನು ಸಂತೋಷ್ ಲಾಡ್, ನಾಗೇಂದ್ರ ಮತ್ತು ತುಕರಾಂ ಅವರಿಗೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ 3 ದಿನ ಸಂಡೂರಿನಲ್ಲೇ ಬೀಡು ಬಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಉಪಚುನಾವಣೆಯ ಫಲಿತಾಂಶ ಕೆಪಿಸಿಸಿ ಅಧ್ಯಕ್ಷರಿಗಿಂತ ಹೆಚ್ಚಾಗಿ, ಸಿದ್ದರಾಮಯ್ಯನವರಿಗೆ ಮುಖ್ಯ. ಅವರ ವಿರುದ್ದದ ಮುಡಾ ಆರೋಪ, ಎಫ್ಐಆರ್ ನಂತರ ಎದುರಾಗುತ್ತಿರುವ ಚುನಾವಣೆ ಇದಾಗಿರುವುದರಿಂದ, ಸೋಲು / ಗೆಲುವು ಇವರ ಮೇಲೆ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು. ಅಂದು, ಬಳ್ಳಾರಿಗೆ ಬಾ ಎಂದು ಚಾಲೆಂಜ್ ಮಾಡಿದ್ದಕ್ಕೆ, ವಿಧಾನಸೌಧದಲ್ಲೇ ತೊಡೆತಟ್ಟಿ, ಪಾದಯಾತ್ರೆಯ ಮೂಲಕ ಬಳ್ಳಾರಿಗೆ ಆಗಮಿಸಿ, ಜನಾರ್ಧನ ರೆಡ್ಡಿ ವಿರುದ್ದ ಸಿದ್ದರಾಮಯ್ಯ ಗುಡುಗಿದ್ದರು. ಈಗ ಕೂಡಾ ಅಂತದ್ದೇ ಪರಿಸ್ಥಿತಿ, ಆದರೆ ಸನ್ನಿವೇಶ ಮತ್ತು ಪರಿಸ್ಥಿತಿ ಬೇರೆ ಬೇರೆ ಅಷ್ಟೇ..
ಗೆದ್ದಿಲ್ಲ ಅಂದ್ರೆ ರೆಡ್ಡಿಗೆ ಎಫೆಕ್ಟ್?
ಅಭ್ಯರ್ಥಿ ಘೋಷಣೆಗೂ ಮುನ್ನವೇ ಬಿಜೆಪಿ ಪರ ಪ್ರಚಾರ ಆರಂಭಿಸಿರುವ ಜನಾರ್ಧನ ರೆಡ್ಡಿಯವರಿಗೂ ಈ ಚುನಾವಣೆಯ ಫಲಿತಾಂಶ ನಿರ್ಣಾಯಕ. ಯಾಕೆಂದರೆ, ಇಲ್ಲಿ ಸೋತರೆ ರಾಜ್ಯ ರಾಜಕೀಯದಲ್ಲಿ ಮೂಲೆಗುಂಪಾಗುವ ಸಾಧ್ಯತೆಯಿದೆ. ಗೆದ್ದರೆ, ಕೇಂದ್ರ ಮಟ್ಟದಲ್ಲೂ ಬಿರುದು, ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಒಳ್ಳೆಯ ಅವಕಾಶ. ಚನ್ನಪಟ್ಟಣ ಎಲೆಕ್ಷನ್ ಹೇಗೆ ಹೆಚ್ಡಿಕೆ ಮತ್ತು ಡಿಕೆಶಿಗೆ ಮುಖ್ಯನೋ ಹಾಗೇ ಸಂಡೂರಿನ ಎಲೆಕ್ಷನ್ ಸಿದ್ದರಾಮಯ್ಯ ಮತ್ತು ಜನರ್ಧಾನ್ ರೆಡ್ಡಿಗೆ ಮುಖ್ಯವಾಗಿದೆ.