ನರ್ವಸ್ 90ಗೆ ದಿಗ್ಗಜರೇ OUT – ಸಚಿನ್, ದ್ರಾವಿಡ್, ಧೋನಿಗೂ ಕಾಟ
90+ ರನ್ ಇದ್ದಾಗ ಮುಗ್ಗರಿದವರೆಷ್ಟು?
ಒಂದು ರನ್.. ಜಸ್ಟ್ ಒಂದು ರನ್.. ಇನ್ನೊಂದೇ ಒಂದು ರನ್ ಸಿಡಿಸಿದ್ರೂ ಸೆಂಚುರಿ ಸೆಲೆಬ್ರೇಷನ್ ಇರ್ತಿತ್ತು. ಸಹ ಆಟಗಾರರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿ ಅಪ್ರಿಶಿಯೇಟ್ ಮಾಡ್ತಿದ್ರು. ಇಡೀ ಮೈದಾನದಲ್ಲಿ ಅಭಿಮಾನಿಗಳ ಝೇಂಕಾರ ಕೇಳ್ತಿತ್ತು. ಬಟ್ 99 ರನ್ ಇದ್ದಾಗ ಔಟ್ ಅನ್ನೋ ಸಿಡಿಲು ಬಡಿದಿತ್ತು. ಇಡೀ ಸ್ಟೇಡಿಯಮ್ ಸ್ಟನ್ ಆಗಿತ್ತು. ಸೂಜಿ ಬಿದ್ರೂ ಕೇಳಿಸುವಂಥ ನಿಶ್ಯಬ್ಧ. ಯಾಕಂದ್ರೆ ಸೆಲೆಬ್ರೇಷನ್ಗೆ ಕಾಯ್ತಿದ್ದವರಿಗೆ ಆಗಿದ್ದು ಡಿಸಪಾಯಿಂಟ್ಮೆಂಟ್. ಇತ್ತೀಚೆಗೆ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ ವಿಕೆಟ್ ಬಿದ್ದಾಗ ಇದ್ದಿದ್ದು ಇಂಥಾ ಪರಿಸ್ಥಿತಿಯೇ. ಹಾಗಂತ ನರ್ವಸ್ ನೈಂಟಿಗೆ ಒಳಗಾಗಿ ಕ್ರಿಕೆಟ್ನಲ್ಲಿ ಸಾಕಷ್ಟು ದಿಗ್ಗಜರೇ ವಿಕೆಟ್ ಒಪ್ಪಿಸಿದ್ದಾರೆ. ಕ್ರಿಕೆಟ್ ಲೋಕದ ದಂತಕಥೆಯಾಗಿರೋ ಸಚಿನ್ ಕೂಡ ಹೊರತಲ್ಲ. ಹಾಗಾದ್ರೆ ರಿಷಭ್ ಪಂತ್ ಎಷ್ಟು ಸಲ ನರ್ವಸ್ 90ಗೆ ಔಟ್ ಆಗಿದ್ದಾರೆ..? ಭಾರತದ ಟಾಪ್ ಬ್ಯಾಟರ್ಸ್ಗೂ ಕಾಡಿದ್ದೇಗೆ? ಸಚಿನ್, ದ್ರಾವಿಡ್, ಧೋನಿ ಹೀಗೆ ಒಂದಷ್ಟು ಲೆಜೆಂಡರಿ ಕ್ರಿಕೆಟರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: NZಗೆ ಶರಣಾಗಿ ಬೆಲೆ ತೆತ್ತ ಭಾರತ – WTC ಫೈನಲ್ ರೇಸ್ ನಿಂದ ಔಟ್?
ನರ್ವಸ್ 90.. ಕ್ರಿಕೆಟ್ ಲೋಕದಲ್ಲಿ ಟಾಪ್ ಬ್ಯಾಟರ್ಸ್ಗೂ ಕಾಡುವ ಭೂತ. ಇನ್ನೇನು ಒಂದು ಫೋರ್, ಸಿಕ್ಸ್ನಿಂದಲೋ ಅಥವಾ ಇನ್ನೊಂದೇ ಒಂದು ರನ್ನಲ್ಲೋ ಸೆಂಚುರಿ ಆಗೋ ಟೈಮಲ್ಲಿ ವಿಕೆಟ್ ಒಪ್ಪಿಸಿಬಿಡ್ತಾರೆ. ತಮ್ಮ ಸ್ಕೋರ್ 90+ ಆದಾಗ ಕಾಡುವ ಈ ನರ್ವಸ್ 90 ಭಯ ಟೀಂ ಇಂಡಿಯಾದ ಹಲವು ದಿಗ್ಗಜರನ್ನ ಕಾಡಿದೆ. ಸೆಂಚುರಿ ಸೆಲೆಬ್ರೇಷನ್ ಕಸಿದು ಸ್ಯಾಡ್ ಮುಮೆಂಟ್ ಕ್ರಿಯೇಟ್ ಮಾಡಿದೆ. ಅಷ್ಟಕ್ಕೂ ಭಾರತ ತಂಡದಲ್ಲಿ ಯಾರೆಲ್ಲಾ 90+ ರನ್ ಸ್ಕೋರ್ ಇದ್ದಾಗ ಎಷ್ಟು ಸಲ ಔಟ್ ಆಗಿದ್ದಾರೆ ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ.
ಶತಕಕ್ಕಿಂತ ಹೆಚ್ಚು ಸಲ ನರ್ವಸ್ 90ಗೆ ಔಟಾದ ಪಂತ್!
ರಿಷಭ್ ಪಂತ್. ಸದ್ಯ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಅಪಘಾತದ ಬಳಿಕ ಗ್ರೇಮ್ ಕಮ್ಬ್ಯಾಕ್ ಮಾಡಿರೋ ಪಂತ್, ಟೀಂ ಇಂಡಿಯಾದಲ್ಲಿ ಅತ್ಯದ್ಭುತ ಪ್ರದರ್ಶನ ನೀಡ್ತಿದ್ದಾರೆ. ಆದ್ರೆ ಇತ್ತೀಚೆಗೆ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಜಸ್ಟ್ ಒಂದು ರನ್ನಿಂದ ಶತಕ ವಂಚಿತರಾದ್ರು. ಟೆಸ್ಟ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಈವರೆಗೆ 6 ಶತಕಗಳನ್ನು ಬಾರಿಸಿದ್ದಾರೆ. ವಿಪರ್ಯಾಸ ಅಂದ್ರೆ ಪಂತ್ ಶತಕದಂಚಿನಲ್ಲಿ ಎಡವಿರುವುದು 7 ಬಾರಿ. ಅಂದರೆ ಟೆಸ್ಟ್ ಇನಿಂಗ್ಸ್ವೊಂದರಲ್ಲಿ 90 ಕ್ಕಿಂತ ಹೆಚ್ಚು ರನ್ ಕಲೆಹಾಕಿ ಒಟ್ಟು ಏಳು ಬಾರಿ ವಿಕೆಟ್ ಒಪ್ಪಿಸಿದ್ದಾರೆ.
7 ಬಾರಿ 90+ ರನ್ ಗಳಿಸಿ ವಿಕೆಟ್ ಒಪ್ಪಿಸಿದ ರಿಷಭ್ ಪಂತ್!
ಟೆಸ್ಟ್ ಕ್ರಿಕೆಟ್ನಲ್ಲೂ ಉತ್ತಮ ಪ್ರದರ್ಶನ ನೀಡ್ತಿರೋ ಪಂತ್, 7 ಬಾರಿ ಒಂದಂಕಿ ರನ್ಗಳಿಂದ ಶತಕ ವಂಚಿತರಾಗಿದ್ದಾರೆ. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 92 ರನ್ ಬಾರಿಸಿ ಔಟಾಗುವ ಮೂಲಕ ಪಂತ್ ನರ್ವಸ್ ನೈಂಟಿಯನ್ನು ಆರಂಭಿಸಿದ್ದರು. ಇದಾದ ಬಳಿಕ 2018ರಲ್ಲೇ ವಿಂಡೀಸ್ ವಿರುದ್ಧ ಮತ್ತೊಮ್ಮೆ 92 ರನ್ ಬಾರಿಸಿ ಔಟಾಗಿದ್ದರು. ಇನ್ನು 2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 97, ಇಂಗ್ಲೆಂಡ್ ವಿರುದ್ಧ 91 ರನ್ ಬಾರಿಸಿ ಔಟಾಗಿದ್ದರು. ಹಾಗೆಯೇ 2022 ರಲ್ಲಿ ಶ್ರೀಲಂಕಾ ವಿರುದ್ಧ 96 ಹಾಗೂ ಬಾಂಗ್ಲಾದೇಶ್ ವಿರುದ್ಧ 93 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದೀಗ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 99 ರನ್ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 1 ರನ್ನಿಂದ ಶತಕ ವಂಚಿತರಾಗಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ನೈಂಟಿ+ ರನ್ಗಳಿಸಿ ಶತಕ ವಂಚಿತನಾದ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಶತಕ ಕೈ ತಪ್ಪುವುದರೊಂದಿಗೆ ಟೀಮ್ ಇಂಡಿಯಾ ಪರ ಅತ್ಯಧಿಕ ಸೆಂಚುರಿ ಸಿಡಿಸಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ರಿಷಭ್ ಪಂತ್ ಕೈತಪ್ಪಿದೆ. ಈ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ಪಂತ್ 6 ಶತಕಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ರಿಷಭ್ ಪಂತ್ ನರ್ವಸ್ ನೈಂಟಿ ದಾಟಿ ಮೂರಂಕಿ ಮೊತ್ತಗಳಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೂ ಕಾಡಿತ್ತು ನರ್ವಸ್ 90 ಭೂತ!
ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡೂಲ್ಕರ್ ಎಂಥಾ ಬ್ಯಾಟರ್ ಅಂತಾ ನಿಮ್ಗೆಲ್ಲಾ ಗೊತ್ತೇ ಇದೆ. ಇಂಥಾ ಸಚಿನ್ಗೂ ಕೂಡ ವೃತ್ತಿ ಜೀವನದುದ್ದಕ್ಕೂ ಕಾಡಿತ್ತು ನರ್ವಸ್ 90 ಭೂತ. ಸಚಿನ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀನವದಲ್ಲಿ ಒಟ್ಟು 10 ಬಾರಿ ನರ್ವಸ್ 90ಗೆ ಬಲಿಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟ 28 ಬಾರಿ ನರ್ವಸ್ 90ಗೆ ವಿಕೆಟ್ ಒಪ್ಪಿಸಿದ್ದಾರೆ. 10 ಬಾರಿ ಟೆಸ್ಟ್ ಕ್ರಿಕೆಟ್ ಹಾಗೇ 18 ಬಾರಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಔಟ್ ಆಗಿದ್ದಾರೆ. 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 90ರ ಅಸುಪಾಸಿನಲ್ಲಿ ಔಟ್ ಆಗಿರುವುದು ಕೇವಲ 10 ಬಾರಿ ಮಾತ್ರ ಅನ್ನೋದೇ ಸಮಾಧಾನಕರ.
ಕನ್ನಡಿಗ ರಾಹುಲ್ ದ್ರಾವಿಡ್ ಕೂಡ 9 ಬಾರಿ ಔಟ್!
ತಮ್ಮ ತಾಳ್ಮೆಯ ಆಟದಿಂದಲೇ ಕ್ರಿಕೆಟ್ ಲೋಕದಲ್ಲಿ ದಿಗ್ಗಜನಾಗಿ ಬೆಳೆದಿದ್ದ ಟೀಂ ಇಂಡಿಯಾದಲ್ಲಿ ಸ್ಟಾರ್ ಬ್ಯಾಟರ್ ಆಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ನರ್ವಸ್ 90 ಭೂತದ ಲಿಸ್ಟ್ನಲ್ಲಿ ಸೆಕೆಂಡ್ ಪ್ಲೇಸ್ನಲ್ಲಿದ್ದಾರೆ. ಸಚಿನ್ ನಂತ್ರ ಅತೀ ಹೆಚ್ಚು ಬಾರಿ 90ರ ಆಸುಪಾಸಿನಲ್ಲಿ ಔಟಾಗಿದ್ದು ಕೂಡ ರಾಹುಲ್ ದ್ರಾವಿಡ್ರೇ. ಟೆಸ್ಟ್ ಕ್ರಿಕೆಟ್ನಲ್ಲಿ 9 ಸಲ ನರ್ವಸ್ 90ಯಿಂದ ಡಿಸ್ಮಿಸ್ ಆಗಿದ್ದಾರೆ.
ನರ್ವಸ್ 90 ಲಿಸ್ಟ್ ನಲ್ಲಿದ್ದಾರೆ ಸೆಹ್ವಾಗ್, ಧೋನಿ, ಗವಾಸ್ಕರ್!
ಟೀಂ ಇಂಡಿಯಾವನ್ನು ಕ್ರಿಕೆಟ್ನಲ್ಲಿ ಉತ್ತುಂಗಕ್ಕೆ ಏರಿಸಿರೋ ಕ್ರಿಕೆಟ್ ದಿಗ್ಗಜರೇ ತಮ್ಮ ಶತಕದ ಅಂಚಿನಲ್ಲಿ ಎಡವಿದ್ದಾರೆ. ಮಾಜಿ ಓಪನರ್ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ 5 ಬಾರಿ ನರ್ವಸ್ ನೈಂಟಿಗೆ ವಿಕೆಟ್ ನೀಡಿದ್ದಾರೆ. ಹಾಗೇ ಲಿಟಲ್ ಮಾಸ್ಟರ್ ಅಂತಾನೇ ಫೇಮಸ್ ಆಗಿರೋ ಸುನಿಲ್ ಗವಾಸ್ಕರ್ ತಮ್ಮ 16 ವರ್ಷಗಳ ಕ್ರಿಕೆಟ್ ಕರಿಯರ್ನಲ್ಲಿ 5 ಸಲ 90+ ರನ್ಗೆ ಔಟ್ ಆಗಿದ್ದಾರೆ. ಇನ್ನು ಭಾರತ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ 5 ಬಾರಿ ನರ್ವಸ್ 90 ಭೂತಕ್ಕೆ ಬಲಿಯಾಗಿದ್ದಾರೆ. ಒಟ್ನಲ್ಲಿ ಒಬ್ಬ ಬ್ಯಾಟ್ಸ್್ಮನ್ 100 ರನ್ ಗಳಿಸಿ ಮರುಕ್ಷಣವೇ ಔಟಾದ್ರೂ ಅಷ್ಟೊಂದು ನೋವು ಇರಲ್ಲ. ಬಟ್ 90+ ರನ್ ಇದ್ದಾಗ ಔಟಾದ್ರೆ ಇದು ಬರೀ ಆಟಗಾರನಿಗೆ ಮಾತ್ರ ಅಲ್ಲ. ಇಡೀ ತಂಡಕ್ಕೆ ಹಾಗೇ ಅಭಿಮಾನಿಗಳಿಗೂ ಕೂಡ ನೋವುಂಟು ಮಾಡುತ್ತೆ. ಮೊನ್ನೆ ರಿಷಭ್ ಪಂತ್ ವಿಚಾರದಲ್ಲಿ ಆಗಿದ್ದೂ ಇದೇ. ತಂಡ ಸೋಲ್ತು ಅನ್ನೋದಕ್ಕಿಂತ ಪಂತ್ 99 ರನ್ ಇದ್ದಾಗ ಔಟ್ ಆಗಿದ್ದು ಹೆಚ್ಚು ನೋವು ಕೊಟ್ಟಿತ್ತು.