ಪೃಥ್ವಿ ಶಾ ಪರ ಗೌತಮ್ ಗಂಭೀರ್ ಬ್ಯಾಟಿಂಗ್- ಭಾರತ ತಂಡದ ಭವಿಷ್ಯದ ನಾಯಕ ಇವನೇ ಎಂದ ಗಂಭೀರ್
ಟೀಮ್ ಇಂಡಿಯಾದ ಭವಿಷ್ಯದ ನಾಯಕನನ್ನು ಆರಿಸಿದ ಗೌತಮ್ ಗಂಭೀರ್
ಭಾರತ ತಂಡದ ಭವಿಷ್ಯದ ನಾಯಕರಾಗುವ ಸಾಮರ್ಥ್ಯ ಹಾರ್ದಿಕ್ ಪಾಂಡ್ಯ ಹಾಗೂ ಪೃಥ್ವಿ ಶಾ ಅವರಲ್ಲಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಕಳೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಇದರ ನಡುವೆ ಭಾರತ ತಂಡದ ಮಾಜಿ ಕ್ರಿಕೆಟಿಗ, ಗೌತಮ್ ಗಂಭೀರ್, ಟೀಮ್ ಇಂಡಿಯಾದ ಭವಿಷ್ಯದ ನಾಯಕನನ್ನು ಆರಿಸಿದ್ದಾರೆ.
ಇದನ್ನೂ ಓದಿ: ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ನ್ಯೂಜಿಲೆಂಡ್ – ಧವನ್ ಪಡೆಗೆ ಸೋಲು
2021ರ ಜುಲೈ ತಿಂಗಳಿನಿಂದ ಭಾರತ ತಂಡದಲ್ಲಿ ಅವಕಾಶ ಕಳೆದುಕೊಂಡಿರುವ ಪೃಥ್ವಿ ಶಾ ಬಗ್ಗೆ ಗೌತಮ್ ಗಂಭೀರ್ ವಿಶೇಷವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಬ್ಯಾಟಿಂಗ್ ಹಾಗೂ ನಿಜ ಜೀವನದಲ್ಲಿಯೂ ಆಕ್ರಮಣಕಾರಿ ವರ್ತನೆಯನ್ನು ಹೊಂದಿರುವ ಪೃಥ್ವಿ ಶಾಗೆ ಟೀಮ್ ಇಂಡಿಯಾದ ಭವಿಷ್ಯದ ನಾಯಕನಾಗುವ ಸಾಮರ್ಥ್ಯವಿದೆ ಎಂದಿದ್ದಾರೆ.
2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿ ಲೀಗ್ ಸುತ್ತಿನಲ್ಲಿಯೇ ಹೊರ ಬಿದ್ದಿತ್ತು. ಇದರಿಂದಾಗಿ ವಿರಾಟ್ ಕೊಹ್ಲಿ ಭಾರೀ ಟೀಕೆಗೆ ಗುರಿಯಾಗಿದ್ದರು. ಇದಾದ ಕೆಲ ತಿಂಗಳಲ್ಲಿ ವಿರಾಟ್ ಕೊಹ್ಲಿ ಮೂರು ತಂಡಗಳ ನಾಯಕತ್ವಕ್ಕೆ ರಾಜೀನಾಮೆ ಕೊಟ್ಟಿದ್ದರು.
ಇದಾದ ಮೇಲೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ವೈಫಲ್ಯತೆ ಅನುಭವಿಸಿದ ಬಳಿಕ ರೋಹಿತ್ ಶರ್ಮಾ ಅವರನ್ನು ಟಿ20 ತಂಡದ ನಾಯಕತ್ವದಿಂದ ತೆಗೆದುಹಾಕಬೇಕು ಅನ್ನೋ ಒತ್ತಾಯವೂ ಕೇಳಿಬರ್ತಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯಗೆ ತಂಡದ ನಾಯಕತ್ವ ನೀಡುವ ಸೂಚನೆಯೂ ಕಂಡು ಬರ್ತಿದೆ. ಅದರಂತೆ ರೋಹಿತ್ ಶರ್ಮಾಗೆ ಒಡಿಐ ಹಾಗೂ ಟೆಸ್ಟ್ ತಂಡದ ನಾಯಕತ್ವ ಕೊಟ್ಟು, ಹಾರ್ದಿಕ್ ಪಾಂಡ್ಯಗೆ ಟಿ20 ತಂಡದ ನಾಯಕತ್ವ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗ್ತಿದೆ. ಹೀಗಿರುವಾಗ ಗೌತಮ್ ಗಂಭೀರ್ ಪೃಥ್ವಿ ಶಾ ಪರವಾಗಿ ಬ್ಯಾಟ್ ಬೀಸಿರುವುದು ಎಲ್ಲಿವರೆಗೆ ಹೋಗಿ ತಲುಪುತ್ತೋ ನೋಡಬೇಕಿದೆ.