ಚನ್ನಪಟ್ಟಣ ದೋಸ್ತಿ ಖತಂ! – ಸಿಪಿವೈ ಜೊತೆ ಡಿಕೆಶಿ ಡೀಲ್?
ಕಾಂಗ್ರೆಸ್‌ಗೆ ಯೋಗೇಶ್ವರ್ ರೀ-ಎಂಟ್ರಿ?

ಚನ್ನಪಟ್ಟಣ ದೋಸ್ತಿ ಖತಂ! – ಸಿಪಿವೈ ಜೊತೆ ಡಿಕೆಶಿ ಡೀಲ್?ಕಾಂಗ್ರೆಸ್‌ಗೆ ಯೋಗೇಶ್ವರ್ ರೀ-ಎಂಟ್ರಿ?

ಚನ್ನಪಟ್ಟಣದ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೈ ಎಲೆಕ್ಷನ್ ಆದ್ರೂ ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕಣವಾಗಿದೆ. ರಾಜ್ಯದಲ್ಲಿ 3 ಕ್ಷೇತ್ರಕ್ಕೆ ಬೈಎಲೆಕ್ಷನ್ ನಡೆಯುತ್ತಿದ್ದರು, ಹೆಚ್ಚು ಸದ್ದು ಮಾಡ್ತಾ ಇರೋದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ.  3 ಪಕ್ಷಗಳಿಗೂ ಈ ಕ್ಷೇತ್ರ ಸಾಕಷ್ಟು ಮಹತ್ವದಾಗಿದೆ. ಹೀಗಾಗಿ ಘಟಾನುಘಟಿ ನಾಯಕರು ಈ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಯಾರಿಗೆ ಟಿಕೆಟ್ ಕೊಡಬೇಕು..? ಯಾರಿಗೆ ಟಿಕೆಟ್ ಕೊಟ್ಟರೇ ಚನ್ನಪಟ್ಟಣ ನಮ್ಮ ವಶ ಆಗುತ್ತೆ ಅಂತಾ 3 ಪಕ್ಷದ ನಾಯಕರು ತಂತ್ರ-ರಣತಂತ್ರ ಮಾಡುತ್ತಿದ್ದಾರೆ. ಇದ್ರ ನಡುವೆ ಸಿಪಿ ಯೋಗೇಶ್ವರ್ ಜೆಡಿಎಶ್ ಆಫರ್ ರಿಜಕ್ಟ್ ಮಾಡಿದ್ದು ಅವರ ನಡೆ ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ದೊಡ್ಮನೆಯಲ್ಲಿ ಮತ್ತೆ ದೊಡ್ಡ ಗಲಾಟೆ – ಟಾಸ್ಕ್‌ ವೇಳೆ ಬಡಿದಾಡಿಕೊಂಡ ಮಂಜು, ಶಿಶಿರ್‌!

ರಾಜ್ಯದ ಮೂರು ಉಪ ಚುನಾವಣೆಗಳ ಪೈಕಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣ ಕ್ಷೇತ್ರದತ್ತ ಇದೀಗ ಎಲ್ಲ ಚಿತ್ತ ನೆಟ್ಟಿದೆ. ಮೈತ್ರಿ ನಾಯಕರು ಸಭೆಗಳನ್ನು ನಡೆಸಿ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುವ ಚಿಂತನೆ ನಡೆಸುತ್ತಿದ್ದಾರೆ. ಈ ನಡುವೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ  ಯಾರೇ ಅಭ್ಯರ್ಥಿಯಾದರೂ ಜೆಡಿಎಸ್‌ ಚಿಹ್ನೆಯಡಿ ಕಣಕ್ಕೆ ಇಳಿಯಬೇಕು ಎಂದು  ಷರತ್ತು ವಿಧಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.  ಅದ್ರಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರೋ  ಸಿಪಿ ಯೋಗೇಶ್ವರ್ ಅವರಿಗೆ ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಲು ಡೆಡ್ಲೈನ್ ನೀಡಲಾಗಿದೆ. ಆದರೆ, ಸಿಪಿ ಯೋಗೇಶ್ವರ್ ಬೆಣ್ಣೆಯಲ್ಲಿ ಕೂದಲು ತಗೆದಂತೆ ಅದನ್ನ ತಿರಸ್ಕರಿಸಿದ್ದಾರೆ.

 ‘ಜೆಡಿಎಸ್‌ನಿಂದ ಸ್ಪರ್ಧೆ ಬೇಡೆ ಎನ್ನುತ್ತಿದ್ದಾರೆ’

ಜೆಡಿಎಸ್ ನೀಡಿರುವ ಚನ್ನಪಟ್ಟಣ ಟಿಕೆಟ್ ಆಫರ್ ಕುರಿತು ಸಿಪಿವೈ ಪ್ರತಿಕ್ರಿಯಿಸಿದ್ದಾರೆ. ನಾನು ನನ್ನ ತಾಲ್ಲೂಕಿನ ಜನರ ಜತೆಗೂ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ಆದ್ರೆ ಈ ಬಗ್ಗೆ ಬಹಳ ಭಿನ್ನಾಭಿಪ್ರಾಯ ಬಂತು. ಅವರೆಲ್ಲ ಜೆಡಿಎಸ್ ಚಿನ್ಹೆಯಿಂದ ಸ್ಪರ್ಧೆ ಬೇಡ ಅಂತಿದ್ದಾರೆ. ಮೊದಲೇ ನನಗೆ ಪಕ್ಷಾಂತರಿ ಅಂತ ಕರಿತಾರೆ, ಹಾಗಾಗಿ ಬಿಜೆಪಿಯಿಂದಲೇ ನಿಲ್ಲಿ ಅಂತಿದ್ದಾರೆ. ಇಷ್ಟು ವರ್ಷ ವಿರೋಧ ಮಾಡಿಕೊಂಡು ಬಂದಿದ್ದೀರಿ, ಈಗ ಮೈತ್ರಿ ಆಗಿದೆ. ಈಗ ಅನಾವಶ್ಯಕವಾಗಿ ಜೆಡಿಎಸ್‌ಗೆ ಹೋಗೋದು ಬೇಡ ಅಂತ ತಾಲ್ಲೂಕಿನಲ್ಲಿ ಅಭಿಪ್ರಾಯ ಬಂದಿದೆ. ನಾನು ಬಿಜೆಪಿಯಿಂದಲೇ ನಿಲ್ಲಲು ನಿರ್ಧರಿದ್ದೇನೆ, ಆದರೆ ನನಗೆ ಯಾರೂ ಬೆಂಬಲ ಕೊಡ್ತಿಲ್ಲ’’ ಎಂದಿದ್ದಾರೆ.

 ‘ಬಿಜೆಪಿಯಿಂದ ನಿಲ್ಲಬೇಕು ಅಂತ ಆಸೆಯಿದೆ’

ನನಗೆ ಅವಕಾಶ ಕೊಟ್ರೆ ಎನ್‌ಡಿಎ ಅಭ್ಯರ್ಥಿ ಆಗ್ತೇನೆ, ಅವಕಾಶ ಸಿಗಬೇಕು ಅಷ್ಟೇ. ನಾನು ನನ್ನ ಪಾರ್ಟನರ್ ಕುಮಾರಸ್ವಾಮಿ ಮೂರು ದಿನಗಳಿಂದ ಚರ್ಚೆ ಮಾಡ್ತಿದೀವಿ. ನಾನು ಜೆಡಿಎಸ್ ‌ನಿಂದ ನಿಂತರೆ ಕಷ್ಟ ಆಗುತ್ತೆ. ಬಿಜೆಪಿಯಿಂದಲೇ ನಿಲ್ಲಬೇಕು ಅಂತ ಆಸೆ ಇದೆ. ಅವರು ಆಗಲ್ಲ ಅಂತಿದ್ದಾರೆ. ಕುಮಾರಸ್ವಾಮಿ ಅವರಿಗೆ ಅವರ ಮಗ ನಿಖಿಲ್ ಗೆ ಟಿಕೆಟ್ ಕೊಡಬೇಕು ಅಂತ ಆಸೆ ಇದೆ ಎಂದರು.  ಜೆಡಿಎಸ್ ಚಿನ್ಹೆಯಲ್ಲಿ ನಿಲ್ಲಿ ಅಂತ ಅವರು ಮುಕ್ತವಾಗಿ ಏನೂ ಹೇಳಿಲ್ಲ. ಅವರ ಪಕ್ಷದ ಮುಖಂಡರು ಬಂದಾಗ ಹೇಳಿದ್ದಾರೆ ಅಷ್ಟೇ ಎಂದು  ಸಿಪಿವೈ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯತೆ

ನಾನು ಚನ್ನಪಟ್ಟಣದಲ್ಲಿ ಜೆಡಿಎಸ್ ಚಿನ್ಹೆಯಡಿ ನಿಲ್ಲಲ್ಲ ಅಂತಾ ಸಿಪಿಯೋಗೇಶ್ವರ್ ಹೇಳುತ್ತಿದ್ದಾರೆ. ಆದ್ರೆ ಚನ್ನಪಟ್ಟಣವನ್ನ ಬಿಜೆಪಿಗೆ ಬಿಟ್ಟು ಕೊಡೋಕೆ ಹೆಚ್‌ಡಿಕೆಗೆ ಇಷ್ಟವೇ ಇಲ್ಲ. ಒಂದು ವೇಳೆ ಈಗ ಬಿಜೆಪಿಗೆ ಬಿಟ್ಟುಕೊಟ್ಟರೇ ಜೆಡಿಎಸ್ ಅಸ್ತಿತ್ವಕ್ಕೆ ಕುತ್ತು ಬರೋದು ಪಕ್ಕಾ. ಒಂದು ವೇಳೆ ನಿಖಿಲ್ ಕುಮಾರ್‌ಸ್ವಾಮಿಯನ್ನ ಚನ್ನಪಟ್ಟಣದಲ್ಲಿ ನಿಲ್ಲಿಸಿ ಸೋತ್ರೆ, ಕೇಂದ್ರ ಸಚಿವರಾಗಿರೋ ಹೆಚ್‌ಡಿಕೆಗೆ ಮುಖಭಂಗ. ಆಗಿದ್ದು ಆಗಲಿ ಅಂತಾ ಜೆಡಿಎಸ್‌ನಿಂದ ಅಂದ್ರೆ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್‌ಸ್ವಾಮಿಯನ್ನ ಅಭ್ಯರ್ಥಿಯಾಗಿ ನಿಲ್ಲಿಸಬಹುದು.  ಹಾಗೇ  ಬಿಜೆಪಿಯಿಂದ ಟಿಕೆಟ್ ಕೊಟ್ಟಿಲ್ಲ ಅಂದ್ರೆ ಸಿಪಿಯೋಗೇಶ್ವರ್‌ ಸ್ಪತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ಸಾಧ್ಯತೆಯಿದೆ. ಇವರಿಬ್ಬರು ನಿರ್ಧಾರವನ್ನ ನೋಡಿ ಕಾಂಗ್ರೆಸ್ ಅಖಾಡಕ್ಕೆ ಇಳಿಯಲಿದೆ. ಸಿಪಿಯೋಗೇಶ್ವರ್ ಮತ್ತು ನಿಖಲ್ ಕುಮಾರ್‌ಸ್ವಾಮಿ ಇಬ್ಬರು ನಿಂತ್ರೆ ವೋಟ್ ಡಿವೈಡ್ ಆಗಿ ಕಾಂಗ್ರೆಸ್‌ಗೆ ಪ್ಲಸ್ ಆಗಲಿದೆ. ಆಗ ಡಿಕೆ ಸುರೇಶ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇಲ್ಲ ಅಂದ್ರೆ ಬೇರೆಯವರನ್ನ ಕಣ್ಣಕ್ಕಿಳಿಸೋ ಸಾಧ್ಯತೆಯಿದೆ.

ಕಾಂಗ್ರೆಸ್‌ಗೆ ಶಿಫ್ಟ್ ಆಗ್ತಾರಾ ಸಿಪಿ ಯೋಗೇಶ್ವರ್?

ಈ ನಡುವೆ ಮತ್ತೊಂದು ಬೆಳವಣಿಗೆ ನಡೆದಿದೆ. ಅದೇನ್ ಅಂದ್ರೆ ಸಿಪಿ ಯೋಗೇಶ್ವರ್‌ನನ್ನ ಕರೆ ತರಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಹೆಚ್‌ಡಿಕೆ ಕೂಡ ಸಿಪಿ ಯೋಗೇಶ್ವರ್ ಕೈ ಸಂಪರ್ಕ ಮಾಡಿದ್ದೆಂದು ಆರೋಪಿಸಿದ್ರು. ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್   ರಾಜೀನಾಮೆ ನಡೆ ಬೆನ್ನಲ್ಲೇ ಕಾಂಗ್ರೆಸ್ ಹೈ ಅಲರ್ಟ್ ಆಗಿದ್ದು ತೆರೆಮರೆ ಮಾತುಕತೆ ಪ್ರಯತ್ನ ನಡೆಸುತ್ತಿದೆ. ಒಂದು ವೇಳೆ ಯೋಗೇಶ್ವರ್ ಗ್ರೀನ್ ಸಿಗ್ನಲ್ ನೀಡಿದರೆ  ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳಲು ಸಿದ್ದತೆ ನಡೆದಿದೆ. ಇದಕ್ಕೆ ಸಿಎಂ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.  ಹೀಗಾಗಿ ಚನ್ನಪಟ್ಟಣ ರಣಕಣ ಸಾಕಷ್ಟು ಹಲ್‌ಚಲ್ ಎಬ್ಬಿಸಿದೆ. ಯಾರಿಗೆ ಟಿಕೆಟ್ ಸಿಗುತ್ತೆ..? ಯಾರಿಗೆ ವಿಜಯ ಲಕ್ಷ್ಮೀ ಒಲೆಯಲಿದ್ದಾಳೆ ಅನ್ನೋ ಕುತೂಹಲ ಹೆಚ್ಚಾಗಿದೆ.

Shwetha M

Leave a Reply

Your email address will not be published. Required fields are marked *