ತಿಂಡಿಪೋತ.. ತುಂಟ ಈ ಭೀಮ – ಕೂಗಿದ್ರೆ ಸೊಂಡಿಲು ಎತ್ತಿ ನಮಸ್ಕಾರ
ಅಭಿಮನ್ಯು ಬಳಿಕ ಈತನೇ ಕ್ಯಾಪ್ಟನ್!
ಮೈಸೂರು ದಸರಾ.. ಎಷ್ಟೊಂದು ಸುಂದರ. ನಿಜ ಮೈಸೂರು ದಸರಾ ಅಂದ್ರೇನೆ ಹಾಗೇ. ಗತವೈಭವ ಸಾರುವ ನಮ್ಮ ಸಾಂಸ್ಕೃತಿಕ ಹಬ್ಬದ ಅದ್ಧೂರಿತನವನ್ನ ನೋಡೋದೇ ಚೆಂದ. ಕಳೆದ ವಾರವಷ್ಟೇ ಸ್ವರ್ಗದ ಸೌಂದರ್ಯವನ್ನೂ ನಾಚಿಸುವಂತೆ ನಾಡಹಬ್ಬ ಮುಗಿದಿದೆ. ವಿಶ್ವವಿಖ್ಯಾತ ಜಂಬೂಸವಾರಿಯನ್ನ ಕಣ್ತುಂಬಿಕೊಂಡ ಕೋಟ್ಯಂತರ ಮಂದಿ ಈಗ ದೀಪಾವಳಿ ಹಬ್ಬಕ್ಕೆ ರೆಡಿಯಾಗ್ತಿದ್ದಾರೆ. ಬಟ್ ಮಳೆ ನಿಂತ್ರೂ ಮರದ ಹನಿ ನಿಲ್ಲಲ್ಲ ಅನ್ನೋ ಹಾಗೇ ವಿಜಯದಶಮಿ ಮುಗಿದ್ರೂ ಅದೊಬ್ಬನ ಗುಣಗಾನ ಮಾತ್ರ ನಿಂತಿಲ್ಲ. ಸೋಶಿಯಲ್ ಮೀಡಿಯಾದಲ್ಲಂತೂ ಆತನದ್ದೇ ಹವಾ. ಸಾವಿರಾರು ರೀಲ್ಸ್, ನೂರಾರು ವ್ಲಾಗ್ಸ್ಗಳಲ್ಲಿ ಆತನೇ ಹೀರೋ. ಅಷ್ಟೇ ಯಾಕೆ ಒಂದು ಅಭಿಮಾನಿಗಳ ಸಂಘವೇ ಹುಟ್ಟಿಕೊಂಡಿದೆ. ಆತ ಮತ್ತಿನ್ಯಾರೂ ಅಲ್ಲ. ಅಭಿಮನ್ಯು ಬಳಗದ ತುಂಟ, ಮುಗ್ಧ, ಸುಂದರ, ತಿಂಡಿಪೋತ ಭೀಮ ಆನೆ. ಕ್ಯಾಪ್ಟನ್ ಅಭಿಮನ್ಯು ಆಗಿದ್ರೂ ಜನರ ಕ್ರೇಜ್ ಇರೋದು ಮಾತ್ರ ಭೀಮ ಆನೆ ಮೇಲೆ. ಅಷ್ಟಕ್ಕೂ ಭೀಮ ಆನೆಗೆ ಇಷ್ಟೊಂದು ಜನ ಫ್ಯಾನ್ಸ್ ಆಗಿದ್ದೇಕೆ? ರೀಲ್ಸ್ಗಳ ರಾಜನಾಗಿದ್ದೇಗೆ? ಭೀಮನ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಅತ್ತೆ ಕೈಚಳಕ ಭಾಗ್ಯ ಲಕಲಕ! -ಹೆಂಡ್ತಿ ನೋಡಿ ಕಳೆದು ಹೋದ ತಾಂಡವ್
ವಿಶ್ವವಿಖ್ಯಾತ ಮೈಸೂರು ದಸರಾದ ಸೆಂಟರ್ ಆಫ್ ಅಟ್ರ್ಯಾಕ್ಷನ್ನೇ ಗಜಪಡೆ. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಮದಕರಿಗಳನ್ನ ನೋಡೋದೇ ಚೆಂದ. ಈ ಬಾರಿಯೂ ಕೂಡ ನಾಡಹಬ್ಬ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಅಭಿಮನ್ಯು ಬಳಗವೂ ಮರಳಿ ಶಿಬಿರ ಸೇರಿದೆ. ಆದ್ರೆ ಈ ವರ್ಷ ಭೀಮನ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ದಸರಾ ಪ್ರೇಮಿಗಳಿಗೆ ಭೀಮನೇ ಹೀರೋ ಆಗಿದ್ದಾನೆ. ಅಲಂಕಾರದೊಂದಿಗೆ ಸರ್ವಾಂಗ ಸುಂದರನಾಗಿ ರಸ್ತೆಯಲ್ಲಿ ಹೆಜ್ಜೆ ಹಾಕಿ ಬರ್ತಿದ್ರೆ ಅಭಿಮಾನಿಗಳು ಭೀಮ ಭೀಮ ಅಂತಾ ಜೈಕಾರ ಹಾಕಿದ್ದಾರೆ.
ದಸರೆ ನೋಡಲು ಬರುವ ತುಂಬಾ ಜನ ಆನೆಗಳನ್ನ ನೋಡೋಕಂತ್ಲೇ ಬರ್ತಾರೆ. ಹೀಗಾಗೇ ಗಜಪಡೆಯೂ ಅಪಾರ ಅಭಿಮಾನಿಗಳನ್ನು ಹೊಂದಿರುತ್ತಾರೆ. ಈ ಹಿಂದೆ ಸಾವನ್ನಪ್ಪಿದ್ದ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಕೂಡ ಲಕ್ಷಾಂತರ ಜನರ ಪ್ರೀತಿಯನ್ನು ಗಳಿಸಿದ್ದ. ಇದೀಗ ಅಂಬಾರಿ ಹೊರುತ್ತಿರುವ ಅಭಿಮನ್ನು ಕೂಡಾ ತನ್ನ ಶಿಸ್ತು ಹಾಗೂ ನಡವಳಿಕೆ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾನೆ. ಆದ್ರೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆ ಭೀಮನ ತುಂಟಾಟದ ಬಗ್ಗೆ ಕ್ರೇಜ್ ಇನ್ನೂ ಒಂದು ಲೆವೆಲ್ ಜಾಸ್ತಿನೇ ಇದೆ.
ಅಷ್ಟಕ್ಕೂ ಭೀಮನ ಬಗ್ಗೆ ಜನರಿಗೆ ಇಷ್ಟೊಂದು ಅಭಿಮಾನ ಬರೋದಕ್ಕೆ ಕಾರಣ ಅವನ ವರ್ತನೆ. ಭೀಮ ರಸ್ತೆಯಲ್ಲಿ ಹೆಜ್ಜೆ ಹಾಕಿ ಬರುವಾಗ ಯಾರಾದ್ರೂ ಭೀಮ ಅಂತಾ ಕರೆದ್ರೆ ಥಟ್ಟಂತ ಅವ್ರತ್ತ ತಿರುಗುವ ಭೀಮ ಸೊಂಡಿಲು ಎತ್ತಿ ಸಮಸ್ಕಾರ ಮಾಡ್ತಾನೆ. ಕೂಗಿದವ್ರಿಗೆ ರೆಸ್ಪಾನ್ಸ್ ಮಾಡ್ತಾನೆ. ಇದೇ ಕಾರಣಕ್ಕೆ ತುಂಬಾ ಜನ ದಸರೆಯಲ್ಲಿ ಭೀಮ ಭೀಮ ಅಂತಾ ಕೂಗಿ ಖುಷಿ ಪಟ್ಟಿದ್ದಾರೆ.
ಕೂಗಿದ ಕೂಡಲೇ ಸದ್ದು ಬಂದ ಕಡೆಗೆ ತಿರುಗುವ ಭೀಮ ರಿಯಾಕ್ಟ್ ಮಾಡೋದನ್ನ ನೋಡೋದೇ ಚೆಂದ. ಇಂಥಾ ವಿಡಿಯೋಗಳನ್ನ ರೆಕಾರ್ಡ್ ಮಾಡಿಕೊಳ್ಳುವ ಭೀಮನ ಫ್ಯಾನ್ಸ್ ಅದಕ್ಕೆ ಒಂದಷ್ಟು ಸಿನಿಮಾ ಡೈಲಾಗ್ಸ್ನ ಸಿಂಕ್ ಮಾಡಿ ವಿಡಿಯೋಗಳನ್ನ ಅಪ್ ಲೋಡ್ ಮಾಡ್ತಿದ್ದಾರೆ.
ಅಷ್ಟಕ್ಕೂ ಭೀಮ ಆನೆ ತನ್ನ ತುಂಟಾಟದ ಮೂಲಕ ಹೆಣ್ಮಕ್ಕಳ ನೆಚ್ಚಿನ ಆನೆಯೂ ಆಗಿದ್ದಾನೆ. 24 ವರ್ಷದ ಸ್ನೇಹಜೀವಿ ಭೀಮ 6 ತಿಂಗಳ ಮರಿ ಆಗಿದ್ದಾಗ ತಾಯಿ ಇಂದ ಬೇರ್ಪಟ್ಟು ನಾಗರಹೊಳೆ ಅಭಯಾರಣ್ಯದ ಭೀಮನಕಟ್ಟೆ ಎಂಬ ಜಾಗದಲ್ಲಿ ಸಿಕ್ಕಿದ್ದ. ಅದೇ ವರ್ಷದಲ್ಲಿ 6 ಮರಿಗಳು ಸಿಕ್ಕಿದ್ದು ಅದರಲ್ಲಿ ಬದುಕುಳಿದವ ತಿಂಡಿಪೋತ ಈ ಭೀಮ ಮಾತ್ರ. ತುಂಟಾಟ, ತಿಂಡಿಪೋತ, ಸ್ನೇಹಜೀವಿಯಾಗಿರುವ ಭೀಮನನ್ನ ಮುಂದಿನ ಜಂಬೂಸವಾರಿ ರೂವಾರಿ ಎಂದೇ ಬಿಂಬಿಸಲಾಗುತ್ತಿದೆ.
ಇನ್ನು ಈ ವರ್ಷದ ದಸರಾದಲ್ಲಿ ಅರ್ಜುನ ಆನೆಯ ಅಗಲಿಕೆ ತುಂಬಾನೇ ಕಾಡಿತ್ತು. ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನನ ನೆನಪು ದಸರೆಯಲ್ಲಿ ರಾರಾಜಿಸಿತ್ತು. ಅರ್ಜುನನನ್ನು 1968ರಲ್ಲಿ ಕಾಕನ ಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದಾಗ ಇನ್ನೂ 10 ವರ್ಷವೂ ದಾಟಿರಲಿಲ್ಲ. ಆರಂಭದಲ್ಲಿ ಉಗ್ರ ಕೋಪಕ್ಕೆ ಹೆಸರು ವಾಸಿಯಾಗಿದ್ದ ಅರ್ಜುನ ನಂತರ ಮಾವುತರು, ಕವಾಡಿಗಳ ಜೊತೆ ಹೊಂದಿಕೊಂಡು ಶೌರ್ಯ ಸಾಹಸಕ್ಕೂ ಹೆಸರುವಾಸಿಯಾಗಿದ್ದ. 2010ರಲ್ಲಿ 4,541 ಕೆಜಿ ತೂಕವಿದ್ದ ಅರ್ಜುನ 2016ರ ದಸರಾ ಜಂಬೂ ಸವಾರಿ ವೇಳೆಗೆ 5,870 ಕೆಜಿಗೆ ಹೆಚ್ಚಿಸಿಕೊಂಡು ಬಲಭೀಮನಾದ. ಆದ್ದರಿಂದಲೇ ಪುಂಡಾನೆ ಸೆರೆ, ಹುಲಿ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನನ್ನು ನಿರಂತರವಾಗಿ ಬಳಸಿಕೊಳ್ಳಲಾಗುತ್ತಿತ್ತು.
ಅರ್ಜುನನಂತೆಯೇ 24 ವರ್ಷದ ಭೀಮ ಕೂಡ ಹಲವು ಖೆಡ್ಡಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡಿದ್ದಾನೆ. ಕಾಡಿನಿಂದ ನಾಡಿಗೆ ಬಂದು ಪುಂಡಾಟ ಮೆರೆಯುತ್ತಿದ್ದ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಅಭಿಮನ್ಯು, ಪ್ರಶಾಂತ, ಹರ್ಷ ಆನೆಯೊಂದಿಗೆ ಮುಂಚೂಣಿಯಲ್ಲಿ ಪಾಲ್ಗೊಳ್ಳುವ ಭೀಮ ಅರಣ್ಯಇಲಾಖೆಗೆ ಆಸ್ತಿಯಂತಾಗಿದ್ದಾನೆ. ಹೀಗಾಗೇ ಮುಂದಿನ ದಿನಗಳಲ್ಲಿ ಅಂಬಾರಿ ಹೊರುವ ಆನೆಯನ್ನು ಸಜ್ಜುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಹ ಯುವ ಭೀಮನಿಗೆ ತರಬೇತಿ ನೀಡಲು ಸಮ್ಮತಿಸಿದ್ದಾರೆ. ಅಲ್ದೇ ಭೀಮ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾನೆ. ದಂತ, ದೇಹ ರಚನೆ, ಸಮತಟ್ಟಾಗಿರುವ ಬೆನ್ನು ಅಂಬಾರಿ ಇಡಲು ಸೂಕ್ತವಾಗಿದೆ. ಆದ್ದರಿಂದ ಭವಿಷ್ಯದಲ್ಲಿ ಗಜಪಡೆಯ ಕ್ಯಾಪ್ಟನ್ ಆಗಲು ಮುಂಚೂಣಿಯಲ್ಲಿದ್ದಾನೆ.
ಅಷ್ಟಕ್ಕೂ ಭೀಮ ಅರಣ್ಯಾಧಿಕಾರಿಗಳಿಗೆ ಸಿಕ್ಕಿದ್ದೇ ಒಂದು ರೋಚಕ. ಭೀಮನ ಕಥೆ ಯಾವ ಸಿನಿಮಾಗೂ ಕಡಿಮೆ ಇಲ್ಲ. 2001ರಲ್ಲಿ ಭೀಮ ನಾಗರಹೊಳೆ ಮತ್ತಿಗೋಡು ವಲಯದವಾದ ಭೀಮನಕಟ್ಟೆಯಲ್ಲಿ ಅರಣ್ಯ ಇಲಾಖೆಗೆ ಸಿಗುತ್ತಾನೆ. ಆಗ ಅವನಿಗೆ ಕೇವಲ 6 ತಿಂಗಳು. ತಾಯಿಯನ್ನು ಕಳೆದುಕೊಂಡ ಭೀಮ ವಾರಗಟ್ಟಲೆ ಅಲೆದು ಕೊನೆಗೆ ಗ್ರಾಮ ಜನರ ಕಣ್ಣಿಗೆ ಬೀಳುತ್ತಾನೆ. ಕಾಡಿಗೆ ಮೇಯಲು ಹೋಗಿದ್ದ ದನಗಳ ಜತೆ ಭೀಮನಕಟ್ಟೆ ಬಳಿ ಇರುವ ಅಳ್ಳೂರು ಗ್ರಾಮಕ್ಕೆ ಬರ್ತಾನೆ. ಇದರಿಂದ ಸಂಭ್ರಮಗೊಂಡ ಗ್ರಾಮಸ್ಥರು ಆ ಆನೆ ಮರಿಗೆ ಪೂಜೆ ಮಾಡಿ, ಊರಿನಲ್ಲಿ ಮೆರವಣಿಗೆ ಮಾಡಿದರು. ನಂತರ ಮತ್ತಿಗೋಡು ಅರಣ್ಯ ಇಲಾಖೆ ಕಚೇರಿಗೆ ಕರೆದೊಯ್ದು ಒಪ್ಪಿಸಿದರು. ಆನೆಗಳ ಲಾಲನೆ, ಪಾಲನೆ ಮತ್ತು ಪಳಗಿಸುವಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಮಾವುತ ಕುಳ್ಳರಾಮ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮರಿ ಆನೆಯ ಜವಾಬ್ದಾರಿ ವಹಿಸಿದರು. ನಂತರ ಕುಳ್ಳರಾಮ ಈ ಮರಿ ಆನೆಗೆ ಭೀಮ ಎಂದು ನಾಮಕಾರಣ ಮಾಡಿ, ತನ್ನ ಮಗನಂತೆಯೇ ಸಾಕಿದರು. ಅದೇ ಸಮಯದಲ್ಲಿ ಸುಮಾರು 6 ಮರಿ ಆನೆಗಳು ಕಾಡಿನಲ್ಲಿ ಸಿಕ್ಕಿದ್ದವು. ಆದರೆ, ತಾಯಿಹಾಲು ಸಿಗದ ಕಾರಣ ಅವುಗಳೆಲ್ಲಾ ಸತ್ತುಹೋದವು. ಆದರೆ ಆ ಪೈಕಿ ಉಳಿದವನು ಭೀಮ ಒಬ್ಬನೆ. ಈತನನ್ನು ಕುಳ್ಳರಾಮ ಮತ್ತು ಅವರ ಪತ್ನಿ ತುಂಬಾ ಮುದ್ದಾಗಿ ಸಾಕಿದ್ದಾರೆ. ತಮ್ಮ ಮಗನಂತೆಯೇ ಆರೈಕೆ ಮಾಡಿದ್ದಾರೆ. ಸದ್ಯ ಗುಂಡಣ್ಣ ಅವರು ಭೀಮನ ಮಾವುತರಾಗಿ ನೋಡಿಕೊಳ್ತಿದ್ದಾರೆ.
ಒಟ್ನಲ್ಲಿ ಮೈಸೂರು ದಸರಾ ಸ್ಟಾರ್ಟ್ ಅಂದ್ರೆ ಯಾರಿಗೆ ಖುಷಿಯಾಗುತ್ತೋ ಇಲ್ವೋ. ಆದ್ರೆ ನಮ್ಮ ಗಜಪಡೆಗೆ ಮಾತ್ರ ಹಬ್ಬವೋ ಹಬ್ಬ. ಒಂದೂವರೆ ತಿಂಗಳ ಕಾಲ ರಾಜಾತಿಥ್ಯ. ಇದೇ ಕಾರಣಕ್ಕೆ ಭೀಮ ಕೂಡ ಈ ಸಲ 400 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ. ಕಾಡಿನಿಂದ ಬರುವಾಗ 4,945 ಕೆಜಿ ಇದ್ದ ಭೀಮ 5,380 ಕೆಜಿಯಾಗಿದ್ದ. 24ರ ಹರೆಯದ ಮತ್ತಿಗೋಡು ಭೀಮ ಆನೆ, ಅಭಿಮನ್ಯುವಿನ ನಂತರ ಚಿನ್ನದ ಅಂಬಾರಿ ಹೊರಲು ಬೇಕಾದ ಎಲ್ಲಾ ಸಾಮರ್ಥ್ಯ ಹೊಂದಿದ್ದಾನೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಈಗಲೇ ಲಕ್ಷಾಂತರ ಜನರ ಪ್ರೀತಿ ಸಂಪಾದಿಸಿದ್ದಾನೆ.