ಲಾರೆನ್ಸ್ ಬಿಷ್ಣೋಯ್ ಯಾರು? – ಪೊಲೀಸ್ ಮಗ ಗ್ಯಾಂಗ್ಸ್ಟರ್!
ಬೆಂಕಿಯಲ್ಲಿ ಬೆಂದ ಪ್ರೀತಿಸಿದ ಹುಡುಗಿ!
ಲಾರೆನ್ಸ್ ಬಿಷ್ಣೋಯ್.. ಈ ಹೆಸರು ಈಗ ದೇಶದಲ್ಲಿ ತಲ್ಲಣ ಮೂಡಿಸುತ್ತಿದೆ.. ಗ್ಯಾಂಗ್ ಸ್ಟಾರ್ ಆಗಿರೋ ಈತ ಭಾರತದಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶದಲ್ಲಿ ತನ್ನ ಅಪರಾಧ ಸಾಮ್ರಾಜ್ಯವನ್ನ ಕಟ್ಟಿದ್ದಾನೆ. ಗಣ್ಯವ್ಯಕ್ತಿಗಳ ನೆತ್ತರನ್ನೇ ಹರಿಸುತ್ತಿದ್ದಾನೆ.. ಗುಂಡಿನ ಸುರಿಮಳೆಯನ್ನೇ ಸುರಿಸುತ್ತಿದ್ದಾನೆ. ಹಾಗಿದ್ರೆ ಈ ಲಾರೆನ್ಸ್ ಬಿಷ್ಣೋಯ್ ಯಾರು.. ಇವನ ಹಿನ್ನಲೆ ಏನು..? ಒಬ್ಬ ಪೊಲೀಸ್ ಅಧಿಕಾರಿಯ ಮಗನಾಗಿ ಅಪರಾಧ ಲೋಕಕ್ಕೆ ಎಂಟ್ರಿಕೊಟ್ಟಿದ್ದು ಹೇಗೆ..? ಆತನ ದುರಂತ ಪ್ರೇಮೆ ಕಥೆ ಇಲ್ಲಿದೆ.
ಇದನ್ನೂ ಓದಿ: ಧರ್ಮನಿಗೆ ಕೈಕೊಟ್ಟ ಐಶ್ – ಶಿಶಿರ್ ಕಿಸ್ ಗೆ ಸುಂದರಿ ಕ್ಲೀನ್ ಬೌಲ್ಡ್
ಒಬ್ಬ ಅಪರಾಧಿ ಹೊರಗಿದ್ದು ಏನೆಲ್ಲಾ ಅಪರಾಧ ಮಾಡೋಕೆ ಆಗಲ್ವೋ ಅದಕ್ಕೂ ಹೆಚ್ಚಿನ ಅಪರಾಧಗಳನ್ನ ಲಾರೆನ್ಸ್ ಬಿಷ್ಣೋಯ್ ಮಾಡುತ್ತಿದ್ದಾನೆ. 31 ವರ್ಷ ವಯಸ್ಸಿನ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಅಹಮದಾಬಾದ್‌ನ ಸಬರಮತಿ ಸೆಂಟ್ರಲ್ ಜೈಲಿನಲ್ಲಿದ್ದುಕೊಂಡು ಕ್ರೈಂ ಲೋಕಕ್ಕೆ ಅಧಿಪತಿಯಾಗಿದ್ದಾನೆ. ಗಾಯಕ ಸಿಧು ಮೂಸ್ ವಾಲಾ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಗಳು ಹೀಗೆ ಹಲವಾರು ಅಪರಾಧ ಪ್ರಕರಣಗಳು ಈತನೇ ಮೇಲಿದೆ. ಜೈಲಿನಲ್ಲಿದ್ದರು ತನ್ನ ಗ್ಯಾಂಗ್ ಮೂಲಕ ದೇಶ ಮಾತ್ರವಲ್ಲ ವಿದೇಶದಲ್ಲು ಅಪರಾಧ ಕೃತ್ಯಗಳನ್ನ ನಡೆಸುತ್ತಿದ್ದಾನೆ.
ಬಾಲಿವುಡ್ ನಟ ಸಲ್ಮಾನ್ ಖಾನ್‌ನ ಅತ್ಯಾಪ್ತನಾಗಿ ಗುರುತಿಸಿಕೊಂಡಿದ್ದ ಮಹಾರಾಷ್ಟ್ರ ಮಾಜಿ ಸಚಿವ ಹಾಗೂ ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಹತ್ಯೆ ಇಡೀ ದೇಶದಲ್ಲಿ ತಲ್ಲಣ ಮೂಡಿಸಿದೆ. ಸಲ್ಮಾನ್ ಖಾನ್ ಜೊತೆ ನಂಟು ಹೊಂದಿದ್ದಕ್ಕೆ ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇದರ ಹೊಣೆಯನ್ನು ಪಂಜಾಬ್‌ನ ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಕಳೆದ ಕೆಲ ತಿಂಗಳಿನಿಂದ ಬಿಷ್ಣೋಯ್ ಗ್ಯಾಂಗ್ ಹೆಸರು ಹಲವು ಪ್ರಕರಣಗಳಲ್ಲಿ ಗಿರಕಿ ಹೊಡೆಯುತ್ತಲೇ ಇತ್ತು. ಅದರಲ್ಲೂ ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆ ಪ್ರಯತ್ನದಲ್ಲಿ ಈ ಗ್ಯಾಂಗ್ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆ ಬಿಷ್ಣೋಯ್ ಗ್ಯಾಂಗ್ ಅನ್ನು ಬೆನ್ನತ್ತಿರುವ ಪೊಲೀಸರಿಗೆ ಶಾಕಿಂಗ್ ವಿಚಾರಗಳು ಗೊತ್ತಾಗಿದೆ. ಬಿಷ್ಣೋಯ್ ಗ್ಯಾಂಗ್ ಪೊಲೀಸರ ಅಂದಾಜಿಗೂ ನಿಲುಕದ ರೀತಿ ಬೆಳೆದಿದೆ. ಇಡೀ ಇಂಡಿಯಾ ತುಂಬಾ ನೆಟ್‌ವರ್ಕ್ ಹೊಂದಿದೆ. ಈ ಬಿಷ್ಣೋಯ್ ಗ್ಯಾಂಗ್‌ನ ಸ್ಥಾಪಕ ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಮಗ ಎಂದರೆ ನೀವು ನಂಬಲೇಬೇಕು.
11 ರಾಜ್ಯಗಳು ಮತ್ತು 6 ದೇಶಗಳಲ್ಲಿ ಕ್ರೈಂ ಲೋಕ
ಹೌದು, ಬಿಷ್ಣೋಯ್ ಗ್ಯಾಂಗ್ 11 ರಾಜ್ಯ 6 ದೇಶಗಳಲ್ಲಿ ಸಕ್ರಿಯವಾಗಿದ್ದು, 700 ಶೂಟರ್‌ಗಳ ನೆಟ್‌ವರ್ಕ್ ಅನ್ನು ಹೊಂದಿದೆ ಎಂದು ತಿಳಿದುಬಂದಿದೆ.ಬಿಷ್ಣೋಯ್ ಗ್ಯಾಂಗ್ ಹಿಂದೆ ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳ ಪೊಲೀಸರು ಬಿದ್ದಿದ್ದು, ಎನ್‌ಐಎ ಕೂಡ ತನಿಖೆ ನಡೆಸುತ್ತಿದೆ. ದಾವೂದ್ ಇಬ್ರಾಹಿಂ 90ರ ದಶಕದಲ್ಲಿ ಸಣ್ಣ ಅಪರಾಧಗಳಿಂದ ಪ್ರಾರಂಭಿಸಿ ತನ್ನ ಜಾಲವನ್ನು ಭಾರತ ಸೇರಿ ಜಗತ್ತಿನಾದ್ಯಂತ ವಿಸ್ತರಿಸಿದ್ದ. ಅದೇ ರೀತಿ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಭಯೋತ್ಪಾದಕ ಸಿಂಡಿಕೇಟ್ ಭಾರೀ ದೊಡ್ಡ ಮಟ್ಟದಲ್ಲಿ ವಿಸ್ತರಣೆಯಾಗಿದೆ ಎಂದು ತಿಳಿದುಬಂದಿದೆ. ದಾವೂದ್ ಇಬ್ರಾಹಿಂ ಮಾದಕವಸ್ತು ಕಳ್ಳಸಾಗಣೆ, ಸುಪಾರಿ ಹತ್ಯೆಗಳು, ಸುಲಿಗೆ ದಂಧೆಗಳ ಮೂಲಕ ತನ್ನ ಡಿ-ಕಂಪನಿಯನ್ನು ವಿಸ್ತರಿಸಿದ್ದ. ಬಳಿಕ ಪಾಕಿಸ್ತಾನಿ ಭಯೋತ್ಪಾದಕರ ಜೊತೆಯೂ ಕೈಜೋಡಿಸಿದ್ದ. ಅದರಂತೆ ಬಿಷ್ಣೋಯ್ ಗ್ಯಾಂಗ್ ಕೂಡ ಸಣ್ಣ ಸಣ್ಣ ಕ್ರೈಂಗಳಿಂದ ಪ್ರಾರಂಭವಾಗಿ, ತನ್ನದೇ ಆದ ದೊಡ್ಡ ಗುಂಪನ್ನು ಕಟ್ಟಿಕೊಂಡಿದ್ದು, ಉತ್ತರ ಭಾರತದಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದಾನೆ. ಅಷ್ಟೇ ಅಲ್ಲ ಈ ಗ್ಯಾಂಗ್ ಯುಎಸ್ಎ, ಕೆನಡಾ, ಪೋರ್ಚುಗಲ್, ಯುಎಇ ಮತ್ತು ರಷ್ಯಾಕ್ಕೆ ಹರಡಿದೆ.
700 ಶೂಟರ್‌ಗಳಲ್ಲಿ 300 ಜನ ಪಂಜಾಬ್‌ನವರು
ಇನ್ನು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ಸತ್ವಿಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಆಪರೇಟ್ ಮಾಡ್ತಿದ್ದಾನೆ. ಕೆನಡಾ ಪೊಲೀಸ್ ಹಾಗೂ ಹಲವು ಭಾರತೀಯ ತನಿಖಾ ಸಂಸ್ಥೆಗಳಿಗೆ ಈತ ವಾಂಟೆಂಡ್ ಕ್ರಿಮಿನಲ್ ಆಗಿದ್ದಾನೆ. ಬಿಷ್ಣೋಯ್ ಗ್ಯಾಂಗ್ 700ಕ್ಕೂ ಹೆಚ್ಚು ಶೂಟರ್‌ಗಳನ್ನು ಹೊಂದಿದ್ದು, ಅದರಲ್ಲಿ 300 ಮಂದಿ ಪಂಜಾಬ್‌ನವರೇ ಎಂಬುದು ಆಘಾತಕಾರಿ ಅಂಶ. ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಯುವಕರನ್ನೇ ಟಾರ್ಗೆಟ್ ಮಾಡಿ ತಮ್ಮ ಗ್ಯಾಂಗ್‌ಗೆ ಸೇರಿಸಿಕೊಳ್ಳುತ್ತಿದ್ದರು. ಯುವಕರನ್ನು ಗ್ಯಾಂಗ್‌ಗೆ ಸೇರಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ಮತ್ತು ಇತರ ಹಲವು ಮಾರ್ಗಗಳನ್ನು ಬಳಸಲಾಗುತ್ತದೆ.
11 ರಾಜ್ಯಗಳಲ್ಲಿ ಹೇಗಿದೆ ಗೊತ್ತಾ ಬಿಷ್ಣೋಯ್ ಸಾಮ್ರಾಜ್ಯ?
ಎನ್‌ಐಎ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಒಂದು ಕಾಲದಲ್ಲಿ ಪಂಜಾಬ್‌ಗೆ ಸೀಮಿತವಾಗಿತ್ತು. ಆದರೆ, ಗೋಲ್ಡಿ ಬ್ರಾರ್ ಸಹಾಯದಿಂದ ಲಾರೆನ್ಸ್ ಬಿಷ್ಣೋಯ್ ಹರಿಯಾಣ, ದೆಹಲಿ ಮತ್ತು ರಾಜಸ್ಥಾನದಲ್ಲಿರುವ ವಿವಿಧ ಗ್ಯಾಂಗ್‌ಗಳೊಂದಿಗೆ ಮೈತ್ರಿ ಮಾಡಿಕೊಂಡ. ಬಳಿಕ ತನ್ನದೇ ಆದ ಬಿಷ್ಣೋಯ್ ಗ್ಯಾಂಗ್ ಎಂಬ ದೊಡ್ಡ ಜಾಲವನ್ನು ರಚಿಸಿದ ಎನ್ನಲಾಗಿದೆ. ಈಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ದಿಲ್ಲಿ, ರಾಜಸ್ಥಾನ, ಜಾರ್ಖಂಡ್ ಸೇರಿ ಉತ್ತರ ಭಾರತದಾದ್ಯಂತ ವ್ಯಾಪಿಸಿದೆ. 2020 – 21ರ ವೇಳೆಗೆ ಬಿಷ್ಣೋಯ್ ಗ್ಯಾಂಗ್ ಸುಲಿಗೆ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿತ್ತು. ಜೊತೆಗೆ ಆ ಹಣವನ್ನು ಹವಾಲಾ ಮಾರ್ಗಗಳ ಮೂಲಕ ವಿದೇಶಕ್ಕೆ ಕಳುಹಿಸಲಾಗಿತ್ತು ಎಂಬ ಮಾಹಿತಿ ಇದೆ.
ಫಾರೀನ್ ಕನಸು ಬಿತ್ತಿ ಗ್ಯಾಂಗ್‌ಗೆ ಯುವಕರ ನೇಮಕ
ಪ್ರಮುಖವಾಗಿ ಬಿಷ್ಣೋಯ್ ಗ್ಯಾಂಗ್ ಯುವಕರನ್ನು ತನ್ನ ಗುಂಪಿಗೆ ಸೇರಿಸಿಕೊಳ್ಳಲು ವಿದೇಶಿ ಕನಸನ್ನು ಆ ಯುವಕರ ಮನಸಲ್ಲಿ ಬಿತ್ತುತ್ತದೆ. ಕೆಲಸ ಮುಗಿದ ಬಳಿಕ ಕೆನಡಾ ಅಥವಾ ಅವರಿಗಿಷ್ಟವಾದ ದೇಶಕ್ಕೆ ಕಳುಹಿಸುವುದಾಗಿ ಗ್ಯಾಂಗ್ ಭರವಸೆ ನೀಡುತ್ತದೆ. ಅದನ್ನು ನಂಬಿ ಬರುವ ಯುವಕರು ಅಪರಾಧ ಜಗತ್ತಿನಲ್ಲಿ ಸಿಲುಕುತ್ತಾರೆ. ಈ ರೀತಿ ಬಿಷ್ಣೋಯ್ ಗ್ಯಾಂಗ್ ತನ್ನ ಜಾಲವನ್ನು ವಿಸ್ತರಿಸುತ್ತಾ ಸಾಗಿದೆ.
ಪೊಲೀಸ್ ಕಾನಸ್ಟೇಬಲ್ ಮಗ ಗ್ಯಾಂಗ್‌ಸ್ಟರ್ ಆಗಿದ್ದೇಗೆ?
ಇಷ್ಟೊಂದು ದೊಡ್ಡ ಬಿಷ್ಣೋಯ್ ಗ್ಯಾಂಗ್ ಕಟ್ಟಿರುವ ಲಾರೆನ್ಸ್ ಬಿಷ್ಣೋಯ್ ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಮಗ. ಹೌದು, ಹರಿಯಾಣದಲ್ಲಿ ಲಾರೆನ್ಸ್ ಬಿಷ್ಣೋಯ್ ತಂದೆ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದರು. 1993ರಲ್ಲಿ ಪಂಜಾಬ್‌ನಲ್ಲಿ ಹುಟ್ಟಿದ ಲಾರೆನ್ಸ್ ಬಿಷ್ಣೋಯ್ 2011ರಲ್ಲಿ ಪಂಜಾಬ್ ಯುನಿವರ್ಸಿಟಿ ಕ್ಯಾಂಪಸ್ ಸ್ಟೂಡೆಂಟ್ಸ್ ಕೌನ್ಸಿಲ್ ಅನ್ನು ಸೇರಿದ ಬಳಿಕ ಅಪರಾಧ ಜಗತ್ತಿನ ಕಡೆ ಮುಖ ಮಾಡ್ತಾನೆ.. ಅದೇ ವಿಶ್ವವಿದ್ಯಾಲಯದಲ್ಲಿ ಆತನಿಗೆ ಗೋಲ್ಡಿ ಬ್ರಾರ್ ಕೂಡ ಸಿಗ್ತಾನೆ. ಕೇವಲ 12 ರಿಂದ 13 ವರ್ಷದಲ್ಲಿ ದೊಡ್ಡ ಬಿಷ್ಣೋಯ್ ಗ್ಯಾಂಗ್ ಕಟ್ಟಿರುವ ಲಾರೆನ್ಸ್ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾನೆ. 2012ರಿಂದ ಶುರುವಾದ ಬಿಷ್ಣೋಯ್ ಕ್ರೈಂ ಅಧ್ಯಾಯ ಬೆಳೆಯುತ್ತಲೇ ಸಾಗಿದೆ.
ಎಲ್ಲಿಂದ ಸಿಗುತ್ತೆ ಇವರಿಗೆ ಮಾರಕಾಸ್ತ್ರ?
ಗ್ಯಾಂಗ್‌ನ ಶಸ್ತ್ರಾಸ್ತ್ರಗಳು ಮಧ್ಯಪ್ರದೇಶದ ಮಾಲ್ವಾ, ಮೀರತ್, ಯುಪಿ, ಬಿಹಾರದಿಂದ ಬರುತ್ತವೆ. ಇದಲ್ಲದೇ ಪಾಕಿಸ್ತಾನದ ಗಡಿಯಲ್ಲಿರುವ ಪಂಜಾಬ್ ಜಿಲ್ಲೆಗಳಿಂದಲೂ ಗ್ಯಾಂಗ್‌ಗೆ ಶಸ್ತ್ರಾಸ್ತ್ರಗಳು ತಲುಪುತ್ತವೆ. ಜೊತೆಗೆ, ಗ್ಯಾಂಗ್ ಪಾಕಿಸ್ತಾನ, ಯುಎಸ್ಎ, ರಷ್ಯಾ, ಕೆನಡಾ ಮತ್ತು ನೇಪಾಳದಿಂದಲೂ ಶಸ್ತ್ರಾಸ್ತ್ರಗಳನ್ನು ಪಡೆಯುತ್ತದೆ.
ಶಾಲೆಯಲ್ಲಿದ್ದಾಗ ಪ್ರೀತಿ.. ಪ್ರೀತಿಸಿದವಳಿಗೆ ವಿರೋಧಿಗಳಿಂದ ಬೆಂಕಿ
ಅಂದಹಾಗೇ ಈ ಲಾರೆನ್ಸ್ ಜೀವನದಲ್ಲಿ ಪ್ರೀತಿ ಹುಟ್ಟಿತ್ತು. ಬಿಷ್ಣೋಯ್ ಶಾಲೆಯಲ್ಲಿದ್ದಾಗ ಸಹಪಾಠಿ ಜೊತೆ ಸ್ನೇಹ ಬೆಳದಿತ್ತು. ಇಬ್ಬರೂ ಉನ್ನತ ಶಿಕ್ಷಣಕ್ಕಾಗಿ ಚಂಡೀಗಢದ ಡಿಎವಿ ಕಾಲೇಜಿಗೆ ಹೋಗಾದ ಆ ಸ್ನೇಹಿ ಪ್ರೀತಿಯಾಗಿ ಬದಲಾಗಿತ್ತು. ನಂತ್ರ ಕಾಲೇಜ್‌ನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಬಣದ ವಿರುದ್ಧ ಲಾರೆನ್ಸ್ ಸೋತು ಹೋದ. ಈ ಚುನಾವಣೆ ಸೋಲು ಲಾರೆನ್ಸ್ ಕೋಪಕ್ಕೆ ಕಾರಣವಾಗಿ ಆತನನ್ನ ವ್ಯಕ್ತತ್ವವನ್ನ ಬದಲಾಯಿಸುತ್ತೆ. ಕಾಲೇಜ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗುಂಪು ಮತ್ತು ವಿರೋಧಿಗಳ ನಡುವೆ ಗಲಾಟೆ ಆಗಿ ಅದು ಹಿಂಸಾ ರೂಪಕ್ಕೆ ಇಳಿದಿತ್ತು. ಸರಿಯಾಗ ಸಮಯ ನೋಡಿ ವಿರೋಧ ಬಣ ಲಾರೆನ್ಸ್ ಅವರು ಪ್ರೀತಿಸಿದ ಹುಡುಗಿಗೆ ಬೆಂಕಿ ಹಂಚಿತು. ಆಕೆಯ ಸಾವಿನ ನಂತರ, ಲಾರೆನ್ಸ್ ಬಿಷ್ಣೋಯ್ ಹಲವಾರು ವಿದ್ಯಾರ್ಥಿ ನಾಯಕರ ಮೇಲೆ ಸೇಡು ತೀರಿಸಿಕೊಂಡಿದ್ದಾನೆ. ಇಷ್ಟೇ ಅಲ್ಲ ಕೆನಡಾದಲ್ಲಿ ನಡೆಯುತ್ತಿರುವ ಟಾರ್ಗೆಟ್ ಕಿಲ್ಲಿಂಗ್‌ನಲ್ಲಿ ಭಾರತದ ಸಿಬ್ಬಂದಿ ಬಿಷ್ಣೋಯ್ ಗ್ಯಾಂಗನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆನಡಾ ಪೊಲೀಸರು ಆರೋಪಿಸಿದ್ದಾರೆ. ಹೀಗೆ ಲಾರೆನ್ಸ್ ಬಿಷ್ಣೋಯ್ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಬೇರೆ ದೇಶದಲ್ಲಿ ಸದ್ದು ಮಾಡುತ್ತಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಅಪರಾಧ ಕೃತ್ಯಗಳನ್ನ ನಡೆಸುತ್ತಿದ್ದಾನೆ.