46 ರನ್.. RCB ರೆಕಾರ್ಡ್ ಬ್ರೇಕ್ – KL ಮೇಲೆ ರೇಗಿದ್ದೇಕೆ ರೋಹಿತ್?
ಡ್ವೇನ್ ಮೇಲೆ DSP ಸಿರಾಜ್ ಸಿಟ್ಟು
ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 46 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ. ಇದು ಭಾರತದ 93 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 3ನೇ ಅತಿ ಕಡಿಮೆ ಮೊತ್ತ. ಸ್ವದೇಶದಲ್ಲಿ ಗಳಿಸಿದ ಮೊದಲ ಲೋ ಸ್ಕೋರ್. ಇಂಥಾ ಕೆಟ್ಟ ಪ್ರದರ್ಶನ ನೀಡಿದ ಭಾರತ ತಂಡದ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ. ಅದ್ರಲ್ಲೂ ಗೌತಮ್ ಗಂಭೀರ್ ಅಂತೂ ಟಾರ್ಗೆಟ್ ಆಗಿದ್ದಾರೆ. 7 ವರ್ಷಗಳ ಹಿಂದಿನ ಆರ್ಸಿಬಿ ಪಂದ್ಯ ಮತ್ತೊಮ್ಮೆ ಸದ್ದು ಮಾಡಿದೆ. ಅಷ್ಟಕ್ಕೂ ಟೀಂ ಇಂಡಿಯಾವನ್ನ ಹೇಗೆಲ್ಲಾ ಲೇವಡಿ ಮಾಡ್ತಿದ್ದಾರೆ? ಗಂಭೀರ್ ಮಾಡಿದ್ದ ನಿರ್ಧಾರವೇ ಮುಳ್ಳಾಯ್ತಾ? ಆರ್ಸಿಬಿ ದಾಖಲೆ ಬ್ರೇಕ್ ಆಗಿದ್ದೇಗೆ? ಡಿಎಸ್ಪಿ ಸಿರಾಜ್ ಪೊಲೀಸ್ ಖದರ್ ತೋರಿಸೋಕೆ ಶುರು ಮಾಡಿದ್ರಾ? ಹೀಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭವಾನಿ ರೇವಣ್ಣಗೆ ಬಿಗ್ ರಿಲೀಫ್ – ಜಾಮೀನು ಅರ್ಜಿ ವಜಾ ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟ್!
ಟೀಂ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನಕ್ಕೆ ಭಾರತೀಯರು ಕೆರಳಿ ಕೆಂಡವಾಗಿದ್ದಾರೆ. ಇಂಥಾ ಆಟವನ್ನ ಗಲ್ಲಿ ಕ್ರಿಕೆಟ್ ಆಟಗಾರರು ಕೂಡ ಆಡುವುದಿಲ್ಲ ಅಂತಾ ಅಭಿಮಾನಿಗಳು ಸಿಟ್ಟಾಗಿದ್ದಾರೆ. ನಮ್ಮ ಬೆಂಗಳೂರು ನಗರದಲ್ಲೇ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಮ್ಯಾಚ್ ಹಲವು ಕೆಟ್ಟ ದಾಖಲೆಗಳನ್ನೂ ಕೂಡ ಬರೆದಿದೆ. ಮಳೆಯಿಂದಾಗಿ ಮೊದಲ ದಿನ ಟಾಸ್ ಕೂಡ ನಡೆದಿರಲಿಲ್ಲ. ಆದರೆ ಮರುದಿನವೇ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನ್ಯೂಜಿಲೆಂಡ್ ವೇಗಿಗಳ ದಾಳಿಗೆ ಸಿಲುಕಿ ಅಕ್ಷರಶಃ ತತ್ತರಿಸಿ ಹೋಗಿದೆ. ಕಿವೀಸ್ ವೇಗಿಗಳ ಎದುರು ರನ್ ಕಲೆಹಾಕಲು ಪರದಾಡಿದ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳು ಸೊನ್ನೆ ಸುತ್ತಿದ್ರು. ಇದೇ ಈಗ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ತರಹೆವಾರಿ ಮೀಮ್ಸ್ಗಳನ್ನು ಹರಿಬಿಡುವ ಮೂಲಕ ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಹಾಗೇ ಪಂದ್ಯದಲ್ಲಿ ಆಟಗಾರರು ತಾಳ್ಮೆ ಕಳೆದುಕೊಂಡು ಒಂದಷ್ಟು ಪ್ರಸಂಗಗಳೂ ನಡೆದಿವೆ.
ಫನ್ನಿ ವಿಡಿಯೋ ಹಂಚಿಕೊಂಡ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್!
ಟೀಂ ಇಂಡಿಯಾದ ಈ ಕಳಪೆ ದಾಖಲೆಗೆ ತಂಡದ ಮಾಜಿ ಆಟಗಾರರು ಕೂಡ ಕಾಲೆಳೆದಿದ್ದಾರೆ. ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಆಟಗಾರರ ಪ್ರದರ್ಶನವನ್ನು ಗೇಲಿ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಕೂಡ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಗೌತಮ್ ಗಂಭೀರ್ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್!
ಟೀಂ ಇಂಡಿಯಾದ ಈ ಕಳಪೆ ಪ್ರದರ್ಶನದ ಬಳಿಕ ಟ್ರೋಲಿಗರಿಗೆ ಕೋಚ್ ಗೌತಮ್ ಗಂಭೀರ್ ಟಾರ್ಗೆಟ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲೂ ಟೀಮ್ ಇಂಡಿಯಾ ಅಕ್ರಮಣಶೀಲ ಶೈಲಿಯಲ್ಲಿ ಆಡಲಿದೆ ಎಂದು ಹೇಳಿರುವ ಕೋಚ್ ಗೌತಮ್ ಗಂಭೀರ್ ಅವರ ವಿರುದ್ಧ ಮೀಮ್ಸ್ ಹರಿದಾಡುತ್ತಿದೆ. ಪಂದ್ಯದ ಆರಂಭಕ್ಕೂ ಮುನ್ನ ಗಂಭೀರ್ ನಾವು ಮೊದಲ ದಿನವೇ 400ಕ್ಕೂ ಹೆಚ್ಚು ರನ್ ಹೊಡೆಯುತ್ತೇವೆ. ಆ ಸಾಮರ್ಥ್ಯ ನಮ್ಮ ತಂಡಕ್ಕಿದೆ ಎಂದಿದ್ದರು. ಆದ್ರೆ46ಕ್ಕೆ ಆಲೌಟ್ ಆಗಿದ್ದಕ್ಕೆ ಇದು ಗೌತಮ್ ಗಂಭೀರ್ ಯುಗ ಅಂತಾ ಟ್ರೋಲ್ ಮಾಡ್ತಿದ್ದಾರೆ.
RCB ದಾಖಲೆ ಬ್ರೇಕ್ ಮಾಡಿದ ಟೀಂ ಇಂಡಿಯಾ!
ಕೆಲ ಟ್ರೋಲಿಗರು ಆರ್ಸಿಬಿ ದಾಖಲೆಯನ್ನ ಟೀಂ ಇಂಡಿಯಾ ಬ್ರೇಕ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ ಆರ್ ಸಿಬಿ ತಂಡ, 49 ರನ್ ಮೊತ್ತಕ್ಕೆ ಆಲೌಟ್ ಆಗಿತ್ತು. ಅದರ ದಾಖಲೆಯನ್ನು ಈಗ ಟೀಂ ಇಂಡಿಯಾ ಮುರಿದಿದೆ. 2017ರ ಐಪಿಎಲ್ ಸೀಸನ್ ನಲ್ಲಿ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿದಿದ್ದ ಆರ್ ಸಿಬಿ, ಟಾಸ್ ಗೆದ್ದರೂ ಮೊದಲು ಕೋಲ್ಕತಾ ತಂಡಕ್ಕೆ ಬ್ಯಾಟಿಂಗ್ ಮಾಡಲು ಆಮಂತ್ರಣ ನೀಡಿತ್ತು. ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತಾ, 19.3 ಓವರ್ ಗಳಲ್ಲಿ 131 ರನ್ ಗಳಿಸಿತ್ತು. ಆನಂತರ ಬ್ಯಾಟಿಂಗ್ ಗೆ ಇಳಿದಿದ್ದ ಆರ್ ಸಿಬಿ, ನಥಾನ್ ಕೋಲ್ಟರ್ ನೈಲ್, ಕ್ರಿಸ್ ವೋಕ್ಸ್ ಹಾಗೂ ಕೊಲಿನ್ ಡಿ ಗ್ರಾಂಡ್ ಹೋಮ್ ಅವರ ಮಾರಕ ಬೌಲಿಂಗ್ ದಾಳಿಗೆ ತುತ್ತಾಗಿ 9.4 ಓವರ್ ಗಳಲ್ಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 49 ರನ್ ಗಳನ್ನು ಮಾತ್ರ ಪೇರಿಸಿ, 82 ರನ್ ಗಳ ಸೋಲನುಭವಿಸಿತ್ತು.
ರಾಹುಲ್ ಮೇಲೆ ಕೆಂಡಾಮಂಡಲರಾದ ರೋಹಿತ್ ಶರ್ಮಾ!
ಮೊಹಮ್ಮದ್ ಸಿರಾಜ್ ಎಸೆತದ 12ನೇ ಓವರ್ನ 2ನೇ ಎಸೆತ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಅವರ ಬ್ಯಾಟ್ನ ಅಂಚಿಗೆ ತಾಗಿ ಸ್ಲಿಪ್ಗೆ ಹೋಯಿತು. ಆದರೆ ರಾಹುಲ್ ಕೈ ಬಳಿಯೇ ಚೆಂಡು ಪಾಸಾದ್ರೂ ಕೂಡ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಆ ಬಾಲು ಸೀದಾ ಬೌಂಡರಿ ಗೆರೆ ದಾಟಿತು. ಕೆಎಲ್ ರಾಹುಲ್ ಮಾಡಿದ ಈ ಎಡವಟ್ಟನ್ನು ನೋಡಿದ ರೋಹಿತ್ ಶರ್ಮಾ ತಾಳ್ಮೆ ಕಳೆದುಕೊಂಡಿದಲ್ಲದೆ, ರಾಹುಲ್ ಮೇಲೆ ತುಂಬಾ ಕೋಪಗೊಂಡರು. ಅದರ ಫೋಟೊ, ವಿಡಿಯೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಕಿವೀಸ್ ಆಟಗಾರನ ಮೇಲೆ ರೇಗಿದ ಡಿಎಸ್ ಪಿ ಸಿರಾಜ್!
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಎಲ್ಲರ ಗಮನ ಸೆಳೆದಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್ ಡ್ವೇನ್ ಕಾನ್ವೆ ಜೊತೆಗೆ ಮೊಹಮ್ಮದ್ ಸಿರಾಜ್ ವಾಗ್ವಾದ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನ್ಯೂಜಿಲೆಂಡ್ ಪರ ಕಾನ್ವೆ ಮತ್ತು ಟಾಮ್ ಲ್ಯಾಥಮ್ ಇನ್ನಿಂಗ್ಸ್ ಆರಂಭಿಸಿದರು. ಈ ಜೋಡಿ ಸುಲಭವಾಗಿ ಭಾರತದ ಸ್ಕೋರ್ ದಾಟಿದರು. ಆದರೆ 15ನೇ ಓವರ್ನಲ್ಲಿ ಸಿರಾಜ್ ಎಸೆತಕ್ಕೆ ಕಾನ್ವೆ ಬೌಂಡರಿ ಬಾರಿಸಿದರು. ಇದರಿಂದ ನಿರಾಶೆಗೊಂಡ ಸಿರಾಜ್ ಅವರು ಕಾನ್ವೆ ಜೊತೆಗೆ ವಾಗ್ವಾದಕ್ಕಿಳಿದರು. ಆದರೆ ಕಾನ್ವೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮೊಹಮ್ಮದ್ ಸಿರಾಜ್ ಮತ್ತು ಡ್ವೇನ್ ಕಾನ್ವೆ ನಡುವೆ ವಾಗ್ವಾದ ನಡೆಯುವಾಗ ಕಾಮೆಂಟೇಟರ್ ಹಾಗೂ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಎಲ್ಲರ ಗಮನ ಸೆಳೆದರು. ತೆಲಂಗಾಣದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಅಂದ್ರೆ ಡಿಎಸ್ಪಿ ಆಗಿ ಸಿರಾಜ್ ಆಯ್ಕೆಯಾಗಿರುವ ಬಗ್ಗೆ ಮಾತನಾಡಿದರು. ‘ಈಗ ಡಿಎಸ್ಪಿ ಆಗಿದ್ದಾರೆ ಎನ್ನುವುದನ್ನು ಮರೆಯಬೇಡಿ’ ಎಂದು ಸುನಿಲ್ ಗವಾಸ್ಕರ್ ಹೇಳಿದರು. ಇತ್ತ ಅಭಿಮಾನಿಗಳು ಡಿಎಸ್ಪಿ ಎಂದು ಗವಾಸ್ಕರ್ ಹೇಳುತ್ತಿದ್ದಂತೆ ಜೋರಾಗಿ ‘ಡಿಎಸ್ಪಿ…ಡಿಎಸ್ಪಿ’ ಎಂದು ಘೋಷಣೆ ಕೂಗಿದ್ದಾರೆ.
ಒಟ್ನಲ್ಲಿ ಜಸ್ಟ್ 15 ದಿನಗಳ ಹಿಂದಷ್ಟೇ ಎಲ್ಲರೂ ಡ್ರಾದಲ್ಲಿ ಅಂತ್ಯಗೊಳ್ಳುತ್ತದೆ ಎಂದು ಭಾವಿಸಿದ್ದ ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್ ಪಂದ್ಯವನ್ನು ಕೊನೆಯ ಎರಡು ದಿನಗಳಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಇದೀಗ ನ್ಯೂಜಿಲೆಂಡ್ ವಿರುದ್ಧ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ನಾಚಿಕೆಗೇಡಿನ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಭಾರತದ ಬೆನ್ನಲ್ಲೇ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅದ್ರಲ್ಲೂ ನಮ್ಮ ಕನ್ನಡಿಗನೇ ಆಗಿರುವ ನ್ಯೂಜಿಲೆಂಡ್ ತಂಡದಲ್ಲಿ ಆಡ್ತಿರುವ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿದ್ದಾರೆ. ಟಿಮ್ ಸೌತಿ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಕಿವೀಸ್ ಪಡೆ ಉತ್ತಮ ಲೀಡ್ ಪಡೆದುಕೊಂಡಿದೆ. ನೆಕ್ಸ್ಟ್ ಇನ್ನಿಂಗ್ಸ್ನಲ್ಲಿ ಭಾರತ ಹೇಗೆ ಪರ್ಫಾಮ್ ಮಾಡುತ್ತೆ ಅನ್ನೋದೇ ಈಗಿರುವ ಕುತೂಹಲ.