39 ಫೋರ್.. 6 ಸಿಕ್ಸ್.. 309 ರನ್ – ಮುಲ್ತಾನ್ ಸುಲ್ತಾನ್ ಮತ್ತೆ ನೆನಪಾಗಿದ್ದೇಕೆ?
ಸಚಿನ್ ಡಬಲ್ ಸೆಂಚುರಿ ತಡೆದ್ರಾ ದ್ರಾವಿಡ್?

39 ಫೋರ್.. 6 ಸಿಕ್ಸ್.. 309 ರನ್ – ಮುಲ್ತಾನ್ ಸುಲ್ತಾನ್ ಮತ್ತೆ ನೆನಪಾಗಿದ್ದೇಕೆ?ಸಚಿನ್ ಡಬಲ್ ಸೆಂಚುರಿ ತಡೆದ್ರಾ ದ್ರಾವಿಡ್?

ಇಂಟರ್ ನ್ಯಾಷನಲ್ ಮ್ಯಾಚ್ ಅಂದ್ರೆ ಥಟ್ ಅಂತಾ ನೆನಪಾಗೋದೇ ಇಂಡಿಯಾ ವರ್ಸಸ್ ಪಾಕಿಸ್ತಾನ ಮ್ಯಾಚ್. ಇತಿಹಾಸವನ್ನ ಕೆದಕಿದ್ರೂ ಕೂಡ ಈ ಎರಡು ರಾಷ್ಟ್ರಗಳ ಪಂದ್ಯದ ಬಗ್ಗೆ ಇರೋವಷ್ಟು ಕ್ರೇಜ್ ಇನ್ಯಾವ ಪಂದ್ಯಕ್ಕೂ ಇರೋದಿಲ್ಲ. ಅದು ಐಸಿಸಿಯ ವಿಶ್ವಕಪ್ ಫೈನಲ್ ಫೈಟ್ ಆಗಿದ್ರೂ ಅಷ್ಟೇ. ಹಾಗಂತ ಈ ಜಿದ್ದು, ಪೈಪೋಟಿ, ಪ್ರತಿಷ್ಠೆ ನಿನ್ನೆ, ಮೊನ್ನೆಯದಲ್ಲ. ಭಾರತ ಸ್ವಾತಂತ್ರ್ಯ ಪಡೆದ ದಶಕದಿಂದ ಇಂದಿನವರೆಗೂ ಇಂಡಿಯಾ ಪಾಕ್ ಮ್ಯಾಚ್ ಅಂದ್ರೆ ಅದ್ರ ಬಿಸಿನೇ ಹಾಗಿರುತ್ತೆ. ಇಂಥ ಪಾಕಿಸ್ತಾನದ ವಿರುದ್ಧ ಭಾರತದ ದಿಗ್ಗಜರು ಸವಾರಿ ಮಾಡುತ್ತಲೇ ಬಂದಿದ್ದಾರೆ. ಅವ್ರದ್ದೇ ನೆಲದಲ್ಲಿ ಬೆಂಡೆತ್ತೆ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಹೀಗೆ ವೈರಿ ನೆಲದಲ್ಲಿ ತ್ರಿಬಲ್ ಸೆಂಚುರಿ ಸಿಡಿಸಿ ಮೆರೆದಾಡಿದ ಆಟಗಾರ ಯಾರು? ಆ ಪಂದ್ಯ ಯಾವುದು? ಕ್ರಿಕೆಟ್ ಇತಿಹಾಸದಲ್ಲಿ ಮರೆಯಲು ಸಾಧ್ಯವೇ ಇಲ್ಲದ ಕದನದ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಇಂಡಿಯಾ ಮೈತ್ರಿ ಕೂಟ ಛಿದ್ರಛಿದ್ರ? -ಮೈತ್ರಿ ಪಕ್ಷಗಳ ನಿರ್ಧಾರ..‘ಕೈ’ಗೆ ಶಾಕ್

ಇಂಡಿಯಾ ವರ್ಸಸ್ ಪಾಕಿಸ್ತಾನದ ಪಂದ್ಯದಲ್ಲಿ ಭಾರತವೇ ಸಾರ್ವಭೌಮ. ಆದ್ರೆ ಕಳೆದ ಒಂದೂವರೆ ದಶಕದಿಂದ ಉಭಯ ರಾಷ್ಟ್ರಗಳು ಐಸಿಸಿ ಪಂದ್ಯಗಳಲ್ಲಿ ಮಾತ್ರವೇ ಎದುರು ಬದುರಾಗ್ತಿವೆ. ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳನ್ನ ಆಡಿಸಲಾಗ್ತಿಲ್ಲ. ಮುಂದಿನ ವರ್ಷ ಅಂದ್ರೆ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನ ಪಾಕಿಸ್ತಾನದಲ್ಲೇ ಆಯೋಜನೆ ಮಾಡಲಾಗ್ತಿದೆ. ಆದ್ರೆ ಟೂರ್ನಿಗಾಗಿ ಭಾರತ ತಂಡದ ಆಟಗಾರರು ಪಾಕಿಸ್ತಾನಕ್ಕೆ ತೆರಳ್ತಾರಾ ಅನ್ನೋ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಇದಕ್ಕೆ ಸರ್ಕಾರ ಈವರೆಗೂ ಒಪ್ಪಿಗೆ ನೀಡಿಲ್ಲ. ಹೀಗಿದ್ರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತ್ರ ಟೀಂ ಇಂಡಿಯಾ ಪಾಕ್​ಗೆ ಬಂದೇ ಬರ್ತಾರೆ ಅನ್ನೋ ದೃಢ ವಿಶ್ವಾಸದಲ್ಲಿದ್ದಾರೆ. ಹೀಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್​ನಲ್ಲೂ ಕೂಡ ಅದೆಷ್ಟೇ ಕನ್ಫ್ಯೂಷನ್ಸ್ ಇದ್ರೂ ಅದೊಂದು ಪಂದ್ಯವನ್ನ ಮರೆಯೋಕೆ ಸಾಧ್ಯನೇ ಇಲ್ಲ.

49 ವರ್ಷಗಳ ಬಳಿಕ ಪಾಕ್ ನಲ್ಲೇ ಟೆಸ್ಟ್ ಸರಣಿ ಗೆದ್ದಿದ್ದ ಭಾರತ!

ಪಾಕಿಸ್ತಾನ ಕ್ರಿಕೆಟ್ ತಂಡ ಇತ್ತಿಚಿನ ದಿನಗಳಲ್ಲಿ ಫೇಲ್ಯೂರ್ ಆಗ್ತಿದೆ ನಿಜ. ಬಟ್ ಹಿಂದೆಲ್ಲಾ ಪಾಕ್​ನಲ್ಲಿ ಸ್ಟಾರ್ ಆಟಗಾರರೇ ಇದ್ರು. ಭಾರತ ಕ್ರಿಕೆಟ್ ತಂಡವು 1954-55ರಲ್ಲಿ ಟೆಸ್ಟ್ ಸರಣಿಗಾಗಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿತ್ತು. ಅಂದು ಪಾಕಿಸ್ತಾನದ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲುವು ಕಂಡಿತ್ತು. ಅದಾದ ನಂತರ 2003-04 ಪ್ರವಾಸದಲ್ಲಿ ಭಾರತವು ಪಾಕಿಸ್ತಾನವನ್ನು 2-1 ಅಂತರದಿಂದ ಸೋಲಿಸಿತು. ಅಲ್ದೇ ಭಾರತವು ಪಾಕಿಸ್ತಾನ ಪ್ರವಾಸದಲ್ಲಿ ಇತಿಹಾಸವನ್ನೇ ಸೃಷ್ಟಿಸಿತ್ತು. 49 ವರ್ಷಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ನೆಲದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿತ್ತು.

ತ್ರಿಬಲ್ ಸೆಂಚುರಿ ಸಿಡಿಸಿ ಪಾಕ್ ಬೌಲರ್ಸ್ ಬೆಂಡೆತ್ತಿದ್ದ ಸೆಹ್ವಾಗ್!

ಯೆಸ್. ಈ ಸರಣಿಯ ಗೆಲುವಿನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅಬ್ಬರಿಸಿದ್ದರು. ಭಾರತದ ಪರ ಟೆಸ್ಟ್​ನಲ್ಲಿ ತ್ರಿಶತಕ ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು. 375 ಎಸೆತಗಳನ್ನು ಎದುರಿಸಿದ್ದ ಸೆಹ್ವಾಗ್‌ 309 ರನ್‌ಗಳ ಇನಿಂಗ್ಸ್ ಆಡಿದ್ದು, ಇದರಲ್ಲಿ 39 ಬೌಂಡರಿ ಮತ್ತು 6 ಸಿಕ್ಸರ್‌ ಸೇರಿತ್ತು. ವೀರೇಂದ್ರ ಸೆಹ್ವಾಗ್‌ಗಿಂತ ಮೊದಲು ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಸಾಧನೆಯನ್ನು ಮಾಡಿರಲಿಲ್ಲ.  ಸೆಹ್ವಾಗ್ ಅವರಿಗಿಂತ ಮೊದಲು, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆ ವಿವಿಎಸ್ ಲಕ್ಷ್ಮಣ್ ಹೆಸರಿನಲ್ಲಿತ್ತು. ಅವರು 2001 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೋಲ್ಕತ್ತಾ ಟೆಸ್ಟ್‌ನಲ್ಲಿ 281 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ ತ್ರಿಶತಕ ಬಾರಿಸಿದ ನಂತರ, ವೀರೇಂದ್ರ ಸೆಹ್ವಾಗ್ ಅವರನ್ನು ‘ಮುಲ್ತಾನ್ ಸುಲ್ತಾನ್’ ಎಂದು ಕರೆಯಲು ಶುರು ಮಾಡಿದ್ರು. ಆವತ್ತು ಅಕ್ಷರಶಃ ಮುಲ್ತಾನ್‌ನಲ್ಲಿ ಪಾಕಿಸ್ತಾನದ ಬೌಲರ್‌ಗಳು ವೀರೇಂದ್ರ ಸೆಹ್ವಾಗ್ ಅವರ ಮುಂದೆ ಅಸಹಾಯಕರಾಗಿದ್ರು. ಔಟ್ ಮಾಡೋಕೆ ಆಗ್ದೇ ಒದ್ದಾಡಿದ್ರು.

ಮೊದಲ ಇನ್ನಿಂಗ್ಸ್‌ ನಲ್ಲಿ 675 ರನ್ ಗಳಿಸಿದ್ದ ಭಾರತ!

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 675 ರನ್ ಗಳಿಸಿತ್ತು. ಭಾರತದ ಪರ ವೀರೇಂದ್ರ ಸೆಹ್ವಾಗ್ 375 ಎಸೆತಗಳನ್ನು ಎದುರಿಸಿ 309 ರನ್ ಗಳಿಸಿದರು.ಸಚಿನ್ ತೆಂಡೂಲ್ಕರ್ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅಜೇಯ 194 ರನ್ ಗಳಿಸಿದ್ದರು. ಭಾರತದ ಈ ಬೃಹತ್‌ ಸ್ಕೋರ್‌ಗೆ ಉತ್ತರವಾಗಿ, ಪಾಕಿಸ್ತಾನ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 216 ರನ್‌ಗಳಿಗೆ ಕುಸಿಯಿತು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 52 ರನ್‌ಗಳಿಂದ ಗೆದ್ದುಕೊಂಡಿತು. ಅಂತಿಮವಾಗಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-1 ಅಂತರದಲ್ಲಿ ಗೆದ್ದುಕೊಂಡಿತು. 49 ವರ್ಷಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ನೆಲದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿತ್ತು.

ಸಚಿನ್ ಡಬಲ್ ಸೆಂಚುರಿ ಕಸಿದಿದ್ರಾ ದ್ರಾವಿಡ್.. ಏನಿದು ವಿವಾದ?

ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಹಾಗೇ ಅಚ್ಚರಿಯ ವಿಚಾರವೂ ಇದೆ. ಸೌರವ್ ಗಂಗೂಲಿ ಗಾಯದ ಸಮಸ್ಯೆಯಿಂದ ರಾಹುಲ್ ದ್ರಾವಿಡ್ ನಾಯಕತ್ವ ವಹಿಸಿಕೊಂಡಿದ್ರು. ಭಾರತದ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಗೆ 675 ರನ್ ಗಳಿಸಿದ್ದಾಗ ರಾಹುಲ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಆದ್ರೆ ಡಿಕ್ಲೇರ್ ಮಾಡಿಕೊಂಡಿದ್ದು ಸಚಿನ್ ತೆಂಡೂಲ್ಕರ್​ಗೆ ದೊಡ್ಡ ಶಾಕ್ ನೀಡಿತ್ತು. ಯಾಕಂದ್ರೆ ಈ ವೇಳೆ ಸಚಿನ್ ತೆಂಡೂಲ್ಕರ್ 194 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅಷ್ಟೇ ಅಲ್ಲದೆ ಡಬಲ್ ಸೆಂಚುರಿ ಪೂರ್ಣಗೊಳಿಸೋಕೆ ಕೇವಲ 6 ರನ್‌ಗಳ ಅಗತ್ಯವಿತ್ತು. ಹೀಗಿದ್ರೂ ಮ್ಯಾಚ್ ಡಿಕ್ಲೇರ್ ಮಾಡಿಕೊಂಡಿದ್ದ ಪಂದ್ಯದ ನಂತರ ರಾಹುಲ್ ದ್ರಾವಿಡ್ ಅವರನ್ನು ಸಾಕಷ್ಟು ಟೀಕಿಸಲಾಗಿತ್ತು. ರಾಹುಲ್ ಅವರ ಈ ನಿರ್ಧಾರದಿಂದ ಸಚಿನ್ ಕೂಡ ತುಂಬಾನೇ ಸಿಟ್ಟಾಗಿದ್ರು. ಆದ್ರೂ ಆ ಸಮಯದಲ್ಲಿ ಹೆಚ್ಚೇನು ಹೇಳಿಕೊಂಡಿರಲಿಲ್ಲ. ಆದ್ರೆ ಸಚಿನ್ 2014ರಲ್ಲಿ ತಮ್ಮ ಆತ್ಮಕಥೆ ‘ಪ್ಲೇಯಿಂಗ್ ಇಟ್ ಮೈ ವೇ’ನಲ್ಲಿ ಈ ಘಟನೆಯನ್ನು ಪ್ರಸ್ತಾಪಿಸಿ ರಾಹುಲ್‌ನ ಈ ನಿರ್ಧಾರದಿಂದ ಆ ಸಮಯದಲ್ಲಿ ತುಂಬಾ ಬೇಸರವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಏಕೆಂದರೆ ಪಂದ್ಯದಲ್ಲಿ ಸಾಕಷ್ಟು ಸಮಯ ಉಳಿದಿತ್ತು ಮತ್ತು ಅವರು ತಮ್ಮ ದ್ವಿಶತಕವನ್ನು ಪೂರ್ಣಗೊಳಿಸಬಹುದಿತ್ತು. ಆದ್ರೂ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ್ರು ಅಂದಿದ್ದಾರೆ. ಇನ್ನು ಭಾರತದ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸ್ಕೋರ್ ಮಾಡಿದವ್ರು ಯಾರ್ಯಾರು ಅನ್ನೋದನ್ನ ನೋಡೋದಾದ್ರೆ..

ಟೆಸ್ಟ್ ನಲ್ಲಿ ಅತೀ ಹೆಚ್ಚು ಸ್ಕೋರ್! 

  1. ವೀರೇಂದ್ರ ಸೆಹ್ವಾಗ್ 319 ರನ್, – ದಕ್ಷಿಣ ಆಫ್ರಿಕಾ (2008)
  2. ವೀರೇಂದ್ರ ಸೆಹ್ವಾಗ್ 309 ರನ್ – ಪಾಕಿಸ್ತಾನ (2004)
  3. ಕರುಣ್ ನಾಯರ್, 303 ರನ್ – ಇಂಗ್ಲೆಂಡ್ (2016)
  4. ವೀರೇಂದ್ರ ಸೆಹ್ವಾಗ್ 293 ರನ್ – ಶ್ರೀಲಂಕಾ (2009)
  5. ವಿವಿಎಸ್ ಲಕ್ಷ್ಮಣ್ 281 ರನ್ – ಆಸ್ಟ್ರೇಲಿಯಾ (2001)

ಒಟ್ನಲ್ಲಿ ಭಾರತ ಪಾಕ್ ಮ್ಯಾಚ್ ಅಂದ್ರೆ ಮೊದ್ಲಿಂದಲೂ ಕೂಡ ಹೈವೋಲ್ಟೇಜ್ ರೀತಿಯಲ್ಲೇ ನಡೆದುಕೊಂಡು ಬಂದಿದೆ. ಅದ್ರಲ್ಲೂ 2003 ಮತ್ತು 04ರ ಸರಣಿಯನ್ನ ಭಾರತೀಯ ಕ್ರಿಕೆಟಿಗರ್ಯಾರೂ ಮರೆಯೋಕೆ ಸಾಧ್ಯನೇ ಇಲ್ಲ. ಆದ್ರೆ 2008ರ ಬಳಿಕ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಕಾಲಿಟ್ಟಿಲ್ಲ. ಸೋ 2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕ್ ಪ್ರವಾಸ ಕೈಗೊಳ್ಳುತ್ತಾ ಅನ್ನೋದನ್ನ ಕಾದು ನೋಡ್ಬೇಕು.

Shwetha M