‘ವಕ್ಫ್ ಆಸ್ತಿ ಯಾರಪ್ಪನ ಆಸ್ತಿಯಲ್ಲ’ – ಜಮೀರ್ Vs ಯತ್ನಾಳ್ ಕಿತ್ತಾಟ
ಹಿಂದೂ ಫೈರ್‌ಬ್ರ್ಯಾಂಡ್ CD ಇದ್ಯಾ?
ವಕ್ಸ್ ಬೋರ್ಡ್ ತಿದ್ದುಪಡಿ ಬಿಲ್ ಚರ್ಚೆಯಲ್ಲಿರುವಾಗಲೇ ವಿಜಯಪುರದಲ್ಲಿ ವಕ್ಪ್ ಬೋರ್ಡ್ ಸುಮಾರು 12 ಸಾವಿರ ಎಕರೆ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಇದ್ರ ವಿರುದ್ಧ ಬಿಜೆಪಿ ತೊಡೆ ತಟ್ಟಿ ನಿಂತಿದ್ರೆ, ಜಮೀರ್ ಆಹಮ್ಮದ್ ಕೂಡ ಬಿಜೆಪಿ ನಾಯಕರ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ಜಮೀರ್ ಅವರ ಅಪ್ಪಂದಿರು ಯಾರೂ ಮೂಲ ನಿವಾಸಿಗಳಲ್ಲ ಮತ್ತು ವಕ್ಫ್ ಆಸ್ತಿ ಜಮೀರ್ ಅವರ ಅಪ್ಪನದ್ದಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ರು. ಇದಕ್ಕೆ ಜಮೀರ್ ಅಹಮ್ಮದ್ ತಿರುಗೇಟು ನೀಡಿದ್ದಾರೆ. ವಕ್ಫ್ ಆಸ್ತಿ ಯಾರಪ್ಪನ ಸ್ವತ್ತಲ್ಲ, ಅದು ಸರಕಾರದ ಆಸ್ತಿಯೂ ಅಲ್ಲ, ದಾನಿಗಳು ಕೊಟ್ಟಿರುವ ಆಸ್ತಿ.. ಇದರಲ್ಲಿ ಕೆಲವು ಒತ್ತುವರಿಯಾಗಿವೆ. ಅದನ್ನೆಲ್ಲವನ್ನೂ ಸರಿಪಡಿಸುತ್ತಿದ್ದೇವೆ ಎಂದು ಜಮೀರ್ ಹೇಳಿದ್ದಾರೆ. ಹಾಗೇ ವಕ್ಫ್ ಆಸ್ತಿ ನಮ್ಮ ಅಪ್ಪನದ್ದೂ ಅಲ್ಲ, ಯತ್ನಾಳ್ ಅವರ ಅಪ್ಪನದ್ದೂ ಅಲ್ಲ ಎಂದು ಈ ಹಿಂದೆಯೇ ನಾನು ಯತ್ನಾಳ್ ಅವರಿಗೆ ಹೇಳಿದ್ದೇನೆ. ಒಂದಿಂಚೂ ಕೂಡ ನಾವು ಸರಕಾರದ ಆಸ್ತಿ ತಗೊಂಡಿಲ್ಲ. ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನಿಗಳು ದಾನ ಮಾಡಿರುವ ಆಸ್ತಿ ಇದು ಎಂದು ಜಮೀರ್ ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ನಲ್ಲಿ ಅವಮಾನ ಆಗಿದ್ದು ನಿಜನಾ? – ಮೌನ ಮುರಿದ ಕಿಚ್ಚ ಸುದೀಪ್!
ಸಿಟಿ ರವಿ ಬಗ್ಗೆ ಗುಡುಗಿದ ಜಮೀರ್ ಅಹ್ಮದ್
ಸಿ.ಟಿ.ರವಿ ಅವರು ಎರಡು ಬಾರಿ ಸಚಿವರಾಗಿದ್ದರು, ಆಗ ಮುಜರಾಯಿ ಆಸ್ತಿ ಒತ್ತುವರಿ ಸರಿಪಡಿಸಬಹುದಿತ್ತಲ್ಲ ಎಂದು ಜಮೀರ್ ಪ್ರಶ್ನಿಸಿದ್ದಾರೆ. ಮುಜರಾಯಿ ಇಲಾಖೆ ಹಾಗೂ ವಕ್ಫ್ ಆಸ್ತಿ ದೇವರ ಆಸ್ತಿ. ಆದರೆ ಎರಡೆರಡು ಬಾರಿ ಅವರದ್ದೇ ಸರಕಾರ ಇದ್ದಾಗ ಬರೀ ಭಾಷಣ ಮಾಡಿಕೊಂಡು ಓಡಾಡಿಕೊಂಡಿದ್ದರು ಎಂದು ಸಿ. ಟಿ. ರವಿ ವಿರುದ್ಧ ಜಮೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಕೈನಲ್ಲಿ ಆಗಲ್ಲ ಅಂದರೆ ಹೇಳಿ ಮುಜರಾಯಿ ಇಲಾಖೆ ಆಸ್ತಿ ಸಮಸ್ಯೆ ನಾನೇ ಬಗೆಹರಿಸುತ್ತೇನೆ ಎಂದಿದ್ದಾರೆ.
ಯತ್ನಾಳ್ ಸಿಡಿ ಬಿಡುಗಡೆ ಮಾಡುತ್ತೇವೆಂದ ಮುಸ್ಮಿಂ ಮುಖಂಡರು
ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಿಡಿ, ಪೆನ್ ಡ್ರೈವ್ ವಿಚಾರಗಳು ಸಾಕಷ್ಟು ವಿವಾದ ಸೃಷ್ಟಿಸಿವೆ. ಇದೀಗ ಹಿಂದೂ ನಾಯಕ ಎಂದೇ ಬಿಂಬಿತವಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಮುಸ್ಲಿಂ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಯತ್ನಾಳ್ ವಿಜಯಪುರದಲ್ಲಿ ವಕ್ಫ್ ಹಠಾವೋ ದೇಶ ಬಚಾವೋ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಂ ಮುಖಂಡರು, ಮುಚ್ಚಿಕೊಂಡು ನಿಮ್ಮದೆಷ್ಟಿದೆಯೋ ಅಷ್ಟು ನೋಡಿಕೊಂಡು ರಾಜಕಾರಣ ಮಾಡಿ. ನಮ್ಮ ವಕ್ಫ್ ಬೋರ್ಡ್ ತಂಟೆಗೆ ಬಂದರೆ ನವಂಬರ್ 6 ರಂದು ಸಿಡಿ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜಕಾರಣಿಗಳ ಪೈಕಿ ನೇರ ನುಡಿಯಿಂದ ಹೆಸರು ವಾಸಿಯಾಗಿರುವ ಬಸನಗೌಡ ಪಾಟೀಲ್ ಅವರ ಸಿಡಿಯೂ ಇದೆಯೇ ಎಂದು ಜನ ಅಚ್ಚರಿಪಟ್ಟುಕೊಳ್ಳುವಂತಾಗಿದೆ.
‘ಅಪ್ಪನಿಗೆ ಹುಟ್ಟಿದ್ರೆ ಸಿಡಿ ರಿಲೀಸ್ ಮಾಡಲಿ’
ಮುಸ್ಮಿಂ ಮುಖಂಡರು ಸಿಡಿ ರಿಲೀಸ್ ಮಾಡುತ್ತೇವೆ ಎನ್ನುತ್ತಿದ್ದಂತೆ ಯತ್ನಾಳ್ ಕೂಡ ರೊಚ್ಚಿಗೆದಿದ್ದಾರೆ. ನನ್ನ ಸಿ.ಡಿ ಬಿಡುಗಡೆ ಮಾಡುತ್ತೀನಿ ಎಂದು ಹೇಳಿರುವುದನ್ನು ನಾನು ಗಮನಿಸಿದ್ದೇನೆ. ಹಿಂದೆಯೂ ನಾನು ಹೇಳಿದ್ದೆ ಅವರ ಅಪ್ಪನಿಗೆ ಯಾರಾದರು ಹುಟ್ಟಿರುವವರು ಬಿಡುಗಡೆ ಮಾಡಲಿ ಎಂದು, ಈಗ ಅದನ್ನೇ ಹೇಳುತ್ತಿದ್ದಾನೆ. ಇಂತಹ ಅಯೋಗ್ಯರ ಹೇಳಿಕೆಗಳನ್ನು ಕೆಲ ಮಾಧ್ಯಮಗಳು ವೈಭವೀಕರಿಸುತ್ತಿರುವುದನ್ನೂ ಗಮನಿಸಿದ್ದೇನೆ. ಈಗಾಗಲೇ ಮಾನಹಾನಿ ಪ್ರಕರಣದ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏನಿದು ವಕ್ಫ್ ಕಿರಿಕ್
ವಿಜಯಪುರದಲ್ಲಿ ಸುಮಾರು 12 ಸಾವಿರ ಎಕರೆ ವಕ್ಸ್ ಬೋರ್ಡ್ ಗೆ ಸೇರಿದ್ದು ಎಂದು ವಕ್ಸ್ ಬೋರ್ಡ್ ಹೇಳಿಕೊಳ್ಳುತ್ತಿದೆ. ಇದರಲ್ಲಿ ಕಂದಾಯ ಇಲಾಖೆಯ 2148 ಎಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ 1012 ಎಕರೆ, ನಗರಾಭಿವೃದ್ಧಿ ಇಲಾಖೆ 322 ಎಕರೆ ಜಮೀನು ಒಳಗೊಂಡಿದೆ.ಇದೆಲ್ಲವೂ ವಕ್ಸ್ ಆಸ್ತಿ ಎಂದು ಸರ್ವೇ ಮಾಡಲು ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 45 ದಿನಗಳೊಳಗಾಗಿ ಸರ್ವೇ ನಡೆಸಲು ಆದೇಶ ನೀಡಿದ್ದಾರೆ. ಈಗಾಗಲೇ ಭೂಮಿ ಸರ್ವೇ ಬಗ್ಗೆ ನೋಟಿಸ್ ಪಡೆದವರು ಆತಂಕಕ್ಕಕೊಳಗಾಗಿದ್ದಾರೆ. ಸರ್ವೆ ನಡೆಸಿ ವಕ್ಸ್ ಆಸ್ತಿ ತನ್ನದೆಂದು ಘೋಷಿಸಿಕೊಂಡು ವಕ್ಸ್ ಜಮೀನು ಮಾರಾಟವಾಗದಂತೆ ಫ್ಲ್ಯಾನಿಂಗ್ ಮಾಡಲು ಸಚಿವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದು ಹಿಂದೂ ಸಂಘಟನೆಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಇದ್ರ ವಿರುದ್ಧ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರು ಪ್ರತಿಭಟನೆ ನೆಡೆಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ.