NZ ಕದನಕ್ಕೆ RO-KO ಸ್ಟ್ರಾಟಜಿ  – ಚಿನ್ನಸ್ವಾಮಿ ಸೀಕ್ರೆಟ್ ಹೇಳಿದ ದ್ರಾವಿಡ್
ಕಿವೀಸ್ ಬೇಟೆ.. WTC ಫೈನಲ್ ಫಿಕ್ಸ್

NZ ಕದನಕ್ಕೆ RO-KO ಸ್ಟ್ರಾಟಜಿ  – ಚಿನ್ನಸ್ವಾಮಿ ಸೀಕ್ರೆಟ್ ಹೇಳಿದ ದ್ರಾವಿಡ್ಕಿವೀಸ್ ಬೇಟೆ.. WTC ಫೈನಲ್ ಫಿಕ್ಸ್

ತವರಿನಲ್ಲಿ ಟೀಂ ಇಂಡಿಯಾದ ವಿಜಯಯಾತ್ರೆ ಮುಂದುವರಿದಿದೆ. ಪ್ರವಾಸಿ ಬಾಂಗ್ಲಾ ತಂಡವನ್ನ ಟೆಸ್ಟ್ ಹಾಗೇ ಟಿ-20 ಎರಡೂ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದ ಆಟಗಾರರು ಅಭ್ಯಾಸ ಶುರು ಮಾಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದ್ದು, ಆಟಗಾರರು ಭರ್ಜರಿ ತಾಲೀಮಿನಲ್ಲಿ ತೊಡಗಿದ್ದಾರೆ. ನೆಕ್ಸ್​ಟ್ ಇಯರ್ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್​ನ ಭಾಗವಾಗಿ ಈ ಸರಣಿ ತುಂಬಾನೇ ಇಂಪಾರ್ಟೆಂಟ್ ಆಗಿದೆ. ಅಷ್ಟಕ್ಕೂ ನ್ಯೂಜಿಲೆಂಡ್ ವಿರುದ್ಧದ ಸರಣಿ ಭಾರತಕ್ಕೆ ಎಷ್ಟು ಮುಖ್ಯ..? ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್ ಕೊಡ್ತಾರೆ? ರೋಹಿತ್ ಶರ್ಮಾಗೆ ಈ ಪಂದ್ಯಗಳು ಯಾಕೆ ಇಂಪಾರ್ಟೆಂಟ್ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 40 ಬಾಲ್.. 14 ಫೋರ್.. ಸೆಂಚುರಿ! – ಸಂಜು ಸ್ಯಾಮ್ಸನ್ IS BACK

ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮಾತ್ರ ಟೀಂ ಇಂಡಿಯಾ ಮುಗ್ಗರಿಸಿದೆ. ಜಿಂಬಾಬ್ವೆ ಪ್ರವಾಸ, ಲಂಕಾ ವಿರುದ್ಧದ ಟಿ-20 ಸಿರೀಸ್, ಆ ಬಳಿಕ ಬಾಂಗ್ಲಾ ವಿರುದ್ಧದ ಟೆಸ್ಟ್ ಹಾಗೇ ಟಿ-20 ಸರಣಿ ಎರಡದಲ್ಲೂ ಭರ್ಜರಿ ಜಯಬೇರಿ ಬಾರಿಸಿದೆ.  ಇದೀಗ ಅಕ್ಟೋಬರ್ 16ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕಾಗಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಭಾನುವಾರದಿಂದಲೇ ಅಭ್ಯಾಸ ಶುರು ಮಾಡಿದ್ದಾರೆ. ಸ್ಟಾರ್ ಆಟಗಾರರಾದ ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ಹಾಗೂ ರೋಹಿತ್‌ ಶರ್ಮಾ ನೆಟ್ಸ್‌ನಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. ಈ ವೇಳೆ ಭಾರತದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಕೂಡಾ ಕಾಣಿಸಿಕೊಂಡಿದ್ದಾರೆ.

ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್?

ಸದ್ಯ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ 15 ಜನರ ತಂಡವನ್ನ ಟೀಂ ಇಂಡಿಯಾ ಪ್ರಕಟಿಸಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ, ವೈಸ್ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ, ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ದೃವ್ ಜುರೆಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಸ್ಥಾನ ಪಡೆದಿದ್ದಾರೆ. ಆದ್ರೆ ಅಂತಿಮವಾಗಿ ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಚಾನ್ಸ್ ಪಡೆಯಬಹುದು ಅನ್ನೋ ಕುತೂಹಲವೂ ಇದೆ.

ಕೆಎಲ್ ರಾಹುಲ್ & ಸರ್ಫರಾಜ್ ನಡುವೆ ಮೈದಾನಕ್ಕಿಳಿಯೋದ್ಯಾರು?

ಇನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಪ್ಲೇಯಿಂಗ್ 11ನಲ್ಲಿ ಬದಲಾವಣೆಗಳು ಇರುತ್ತಾ ಅನ್ನೋ ಕನ್ಫ್ಯೂಷನ್ಸ್ ಇದೆ. ಬಾಂಗ್ಲಾ ಸರಣಿಗೆ ಇದ್ದ ಆಟಗಾರರೇ ಇಲ್ಲೂ ಇರೋದ್ರಿಂದ ಕಳೆದ ಪಂದ್ಯದಂತೆ ಅವ್ರನ್ನೇ ಅಂತಿಮ ತಂಡದಲ್ಲಿ ಆಯ್ಕೆ ಮಾಡಲಾಗುತ್ತಾ? ಅಥವಾ ಬೇರೆಯವ್ರಿಗೆ ಚಾನ್ಸ್ ಕೊಡ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಅಲ್ದೇ ದೇಶೀ ಟೂರ್ನಿಗಳಲ್ಲಿ ಮಿಂಚಿರುವ ಸರ್ಫರಾಜ್ ಖಾನ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳೋ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಕೆಎಲ್ ರಾಹುಲ್ ಕೂಡ ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಮತ್ತೊಮ್ಮೆ ಕಣಕ್ಕಿಳಿಯೋ ಕಾನ್ಪಿಡೆನ್ಸ್​ನಲ್ಲಿದ್ದಾರೆ. ಹೀಗಾಗಿ ಬಿಸಿಸಿಐ ಅಂತಿಮ ನಿರ್ಧಾರವೇ ಕುತೂಹಲ ಮೂಡಿಸಿದೆ.

ರೋಹಿತ್ ಶರ್ಮಾಗಿದೆ ಸಾಲು ಸಾಲು ದಾಖಲೆಗಳ ಅವಕಾಶ!

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಈ ಸರಣಿಯಲ್ಲಿ ಬ್ಯಾಟರ್ ಮತ್ತು ನಾಯಕನಾಗಿ ಅನೇಕ ದಾಖಲೆಗಳನ್ನು ಕ್ರಿಯೇಟ್ ಮಾಡುವ ಅವಕಾಶಗಳಿವೆ. ಭಾರತೀಯ ಮೆನ್ಸ್ ಕ್ರಿಕೆಟ್ ತಂಡಕ್ಕಾಗಿ ಆಡಿದ 61 ಟೆಸ್ಟ್‌ಗಳಲ್ಲಿ 87 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿಯಲು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಸಿಕ್ಸ್-ಹಿಟ್ಟರ್ ಆಗಲು ಬಲಗೈ ಬ್ಯಾಟರ್‌ಗೆ ಇನ್ನೂ ಐದು ಸಿಕ್ಸರ್‌ಗಳ ಅಗತ್ಯವಿದೆ. ತಮ್ಮ ಆಟದ ದಿನಗಳಲ್ಲಿ, ಸೆಹ್ವಾಗ್ 104 ಪಂದ್ಯಗಳಲ್ಲಿ 91 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಹಾಗೇ WTC 2023-25 ​​ರಲ್ಲಿ ಇದುವರೆಗೆ ಆಡಿದ 11 ಪಂದ್ಯಗಳಲ್ಲಿ ರೋಹಿತ್ 742 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕನಿಷ್ಠ 258 ರನ್ ಗಳಿಸಲು ಯಶಸ್ವಿಯಾದರೆ, ಎರಡು WTC ಸೀಸನ್​ಗಳಲ್ಲಿ 1000 ರನ್ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.  ಹಾಗೇ ರೋಹಿತ್ ನಾಯಕತ್ವದಲ್ಲಿ ಭಾರತ ಇದುವರೆಗೆ ಆಡಿದ 18 ಟೆಸ್ಟ್‌ಗಳಲ್ಲಿ 12 ಅನ್ನು ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಮೂರು ಗೆದ್ದರೆ, ಅವರು ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಮುರಿಯುತ್ತಾರೆ ಮತ್ತು ಟೆಸ್ಟ್‌ಗಳಲ್ಲಿ ಭಾರತದ ನಾಲ್ಕನೇ ಯಶಸ್ವಿ ನಾಯಕರಾಗುತ್ತಾರೆ. ಹಾಗೇ ಡಬ್ಲ್ಯೂಟಿಸಿಯಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಳ್ಳಲಿದ್ದಾರೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು ಕಿವೀಸ್ ಅನ್ನು ವೈಟ್‌ವಾಶ್ ಮಾಡಲು ಯಶಸ್ವಿಯಾದರೆ ರೋಹಿತ್ ಶರ್ಮಾ ಅವರು ಸೌರವ್ ಗಂಗೂಲಿ ಅವರ ದಾಖಲೆಯನ್ನು ಬ್ರೇಕ್ ಮಾಡ್ತಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತ್ಯಂತ ಯಶಸ್ವಿ ನಾಯಕರಾಗುತ್ತಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನತ್ತ ಉಭಯ ತಂಡಗಳ ಚಿತ್ತ!

ಸದ್ಯ ಭಾರತ ತಂಡದ ಚಿತ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನತ್ತ ನೆಟ್ಟಿದೆ. ಸತತ ಎರಡೂ ಆವೃತ್ತಿಗಳಲ್ಲಿ ಫೈನಲ್‌ ತಲುಪಿ ಡಬ್ಲ್ಯುಟಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ಟೀಮ್‌ ಇಂಡಿಯಾ, ಈ ಬಾರಿಯೂ ಸದ್ಯ ಪಾಯಿಂಟ್‌ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಕಿವೀಸ್‌ ವಿರುದ್ಧ ಸರಣಿಯಲ್ಲಿ ಮುನ್ನಡೆ ಸಾಧಿಸಿ, ಹೆಚ್ಚು ಅಂಕ ಕಲೆ ಹಾಕುವ ವಿಶ್ವಾಸದಲ್ಲಿದೆ. ಹೀಗಾಗಿ ಉಭಯ ತಂಡಗಳಿಗೂ ಈ ಸರಣಿ ಮಹತ್ವದ್ದಾಗಿದೆ. ಈಗಾಗಲೇ ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ ಸ್ವೀಪ್‌ ಮಾಡಿದ ನಂತರ, ರೋಹಿತ್ ಶರ್ಮಾ ಬಳಗವು ತುಂಬಾನೇ ಕಾನ್ಫಿಡೆನ್ಸ್​ನಲ್ಲಿದೆ. ಆದ್ರೆ ನ್ಯೂಜಿಲ್ಯಾಂಡ್‌ ತಂಡವು ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಲಂಕಾ ನೆಲದಲ್ಲಿ 2-0 ಅಂತರದಿಂದ ಸರಣಿ ಸೋಲನ್ನು ಕಂಡು ನಿರಾಸೆಯಲ್ಲಿದೆ.

ಇನ್ನು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯ ಅಕ್ಟೋಬರ್ 16 ರಂದು ಬೆಂಗಳೂರಿನಲ್ಲಿ ನಡೆಯಲ್ಲಿದ್ದು, ಆ ಬಳಿಕ ಎರಡನೇ ಪಂದ್ಯ ಅಕ್ಟೋಬರ್ 24 ರಂದು ಪುಣೆಯಲ್ಲಿ ನಡೆಯಲಿದೆ. ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ನವೆಂಬರ್ 1 ರಂದು ಮುಂಬೈನ ಐತಿಹಾಸಿಕ ಮೈದಾನದಲ್ಲಿ ನಡೆಯಲಿದೆ. ಎಲ್ಲಾ ಟೆಸ್ಟ್ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 9.30ಕ್ಕೆ ಆರಂಭವಾಗಲಿವೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇದುವರೆಗೆ ಒಟ್ಟು 62 ಟೆಸ್ಟ್ ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 22 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 12 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಈ ಸರಣಿಯಲ್ಲೂ ಕೂಡ ಭಾರತವೇ ಗೆಲ್ಲುವ ಹಾಟ್ ಫೇವರೆಟ್ ಟೀಂ ಎನಿಸಿಕೊಂಡಿದೆ. ಸೋ ಭಾರತದ ಗೆಲುವಿನ ಯಾನ ಹೀಗೆ ಕಂಟಿನ್ಯೂ ಆಗ್ಲಿ ಅಂತಿದ್ದಾರೆ ಫ್ಯಾನ್ಸ್.

Shwetha M