ರೆಡ್ಡಿ, ರಿಂಕು ಕೇಕೆ.. ಬೆಚ್ಚಿದ ಬಾಂಗ್ಲಾ – ಸೂರ್ಯ 7 ಬೌಲರ್ ಅಸ್ತ್ರ ಸಕ್ಸಸ್
ಟೀಂ ಇಂಡಿಯಾ ಟಿ-20 ಪಾರುಪತ್ಯ

ರೆಡ್ಡಿ, ರಿಂಕು ಕೇಕೆ.. ಬೆಚ್ಚಿದ ಬಾಂಗ್ಲಾ – ಸೂರ್ಯ 7 ಬೌಲರ್ ಅಸ್ತ್ರ ಸಕ್ಸಸ್ಟೀಂ ಇಂಡಿಯಾ ಟಿ-20 ಪಾರುಪತ್ಯ

ಬೊಂಬಾಟ್ ಬ್ಯಾಟಿಂಗ್​.. ಭರ್ಜರಿ ಬೌಲಿಂಗ್.. ಬಾಂಗ್ಲಾ ಆಟಗಾರರನ್ನ ಉಸಿರಾಡೋಕೂ ಬಿಡದೆ ಬೆಂಡೆತ್ತಿದ ಟೀಂ ಇಂಡಿಯಾ ಪ್ಲೇಯರ್ಸ್ ಇನ್ನೂ ಒಂದು ಮ್ಯಾಚ್ ಇರುವಂತೆಯೇ ಟಿ-20 ಸರಣಿಯನ್ನ ಕೈ ವಶ ಮಾಡಿಕೊಂಡಿದ್ದಾರೆ. ಹೊಡಿಬಡಿ ಆಟವಾಡಿದ ಆಟಗಾರರು ಹಲವು ದಾಖಲೆಗಳನ್ನ ಬರೆದಿದ್ದಾರೆ. ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಇಂಡಿಯನ್​ ಬೌಲರ್ಸ್​​ ರಣಕೇಕೆ ಹಾಕ್ತಿದರೆ, ಬಾಂಗ್ಲಾ ಬ್ಯಾಟರ್ಸ್​ ಪೆವಿಲಿಯನ್​ ಪರೇಡ್​ ನಡೆಸಿದರು. ಅಷ್ಟಕ್ಕೂ ಟೀಮ್​ ಇಂಡಿಯಾ ಬೌಲಿಂಗ್ & ಬ್ಯಾಟಿಂಗ್​ನಲ್ಲಿ ಮಿಂಚಿದ್ದೇಗೆ? ನಿತೀಶ್ ಕುಮಾರ್ ರೆಡ್ಡಿ ಬರೆದ ದಾಖಲೆ ಏನು? ರಿಂಕು ಸಿಂಗ್ ಅಬ್ಬರ ಹೇಗಿತ್ತು..? ಸಂಜು ಸ್ಯಾಮ್ಸನ್​ಗೆ ಇನ್ನೆಷ್ಟು ಚಾನ್ಸ್ ಕೊಡ್ಬೇಕು? ಹೀಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಮೃತಧಾರೆಯಿಂದ ಮಹಿಮಾ ನಾಪತ್ತೆ – ಸನ್ಯಾಸಿಯಾದ್ರಾ ಸಾರಾ ಅಣ್ಣಯ್ಯ?

ಟೆಸ್ಟ್ ಮ್ಯಾಚ್​ನಲ್ಲಿ ಕ್ಲೀನ್ ಸ್ವೀಪ್ ಆಗಿದ್ದ ಬಾಂಗ್ಲಾ ತಂಡದ ಮೇಲೆ ಟಿ-20 ಸರಣಿಯಲ್ಲೂ ಭಾರತೀಯ ಪಡೆ ಮೇಲುಗೈ ಸಾಧಿಸಿದೆ. 2ನೇ ಟಿ20ಐ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ 86 ರನ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ  ಈ ಮೂಲಕ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈವಶ ಮಾಡಿಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗೆದ್ದು ಸರಣಿ ಉಳಿಸಿಕೊಳ್ಳುವ ತವಕದಲ್ಲಿದ್ದ ಪ್ರವಾಸಿ ತಂಡಕ್ಕೆ ಭಾರೀ ನಿರಾಸೆಯಾಗಿದೆ.

ನಿತೀಶ್ & ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್!

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ತಂಡಕ್ಕೆ ಆರಂಭದಲ್ಲೇ ಬಿಗ್ ಶಾಕ್ ಎದುರಾಗಿತ್ತು. ಓಪನರ್ ಆಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ನಿರಾಸೆ ಮೂಡಿಸಿದ್ರು. 10 ರನ್ ಗಳಿಸಿ ಕ್ಯಾಚ್ ಕೊಟ್ರು. ಇನ್ನು ಅಭಿಷೇಕ್ ಶರ್ಮಾ 15 ರನ್, ಸೂರ್ಯಕುಮಾರ್ ಯಾದವ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಸ್ಟಾರ್ಟಿಂಗ್​ಗಲ್ಲೇ ಮೂರು ವಿಕೆಟ್ ಕಳ್ಕೊಂಡ ಭಾರತಕ್ಕೆ ಬೆನ್ನೆಲುಬಾಗಿದ್ದೇ ನಿತೀಶ್ ಕುಮಾರ್ ರೆಡ್ಡಿ ಹಾಗೇ ರಿಂಕು ಸಿಂಗ್.  ನಿತೀಶ್ ಹಾಗೇ ರಿಂಕು ಬಾಂಗ್ಲಾ ಬೌಲರ್ಸ್​​ಗೆ ಬೆಂಡೆತ್ತಿ ಬೆವರಿಳಿಸಿದ್ರು. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು.  ಅದ್ರಲ್ಲೂ ನಿತೀಶ್ ತಾನಾಡಿದ ಎರಡನೇ ಅಂತರಾಷ್ಟ್ರೀಯ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದರು. 34 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 74 ರನ್ ಚಚ್ಚಿದ್ರು. ಮತ್ತೊಂದೆಡೆ ರಿಂಕು ಸಿಂಗ್ 29 ಎಸೆತಗಳಿಗೆ 5 ಬೌಂಡರಿ, 3 ಸಿಕ್ಸರ್ ಸಹಿತ 53 ರನ್ ಬಾರಿಸಿದ್ರು. ಈ ಜೋಡಿ 4ನೇ ವಿಕೆಟ್​​ಗೆ 104 ರನ್ ಗಳ ಜೊತೆಯಾಟ ಆಡಿದರು. ಇನ್ನು ಹಾರ್ದಿಕ್ ಪಾಂಡ್ಯ 32 ರನ್ ಗಳಿಸಿದ್ರೆ ರಿಯಾನ್ ಪರಾಗ್ 15 ರನ್ ಬಾರಿಸಿದ್ರು. ಹೀಗೆ 20 ಓವರ್​ಗಳಲ್ಲಿ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 221 ರನ್​ ಗಳಿಸಿತು.

ಭಾರತೀಯ ಬೌಲರ್ಸ್ ಮುಂದೆ ಒದ್ದಾಡಿದ ಬಾಂಗ್ಲಾ ಬ್ಯಾಟರ್ಸ್!

222ರನ್​ಗಳ ಟಾರ್ಗೆಟ್ ನೋಡಿದಾಗ್ಲೇ ದಂಗಾಗಿದ್ದ ಬಾಂಗ್ಲಾ ಬ್ಯಾಟರ್ಸ್ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲೇ ಇಲ್ಲ.  ಹಿರಿಯ ಆಟಗಾರ ಮಹ್ಮುದಲ್ಲಾ 41 ರನ್​ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ 20ರನ್​ ಗಡಿ ದಾಟಲಿಲ್ಲ. ಮೆಹಿದಿ ಹಸನ್​ ಹಾಗೂ ಪರ್ವೆಜ್​ ಹೊಸೇನ್ ಎಮಾನ್ ತಲಾ 16 ರನ್​ಗಳಸಿದ್ದೇ ಎರಡನೇ ಗರಿಷ್ಠ ಮೊತ್ತವಾಯ್ತು. ಪರಿಣಾಮ ಬಾಂಗ್ಲಾದೇಶ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 135 ರನ್​ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ನಿತೀಶ್ ಕುಮಾರ್ ರೆಡ್ಡಿ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಬೇಟೆಯಾಡಿ ಮಿಂಚಿದ್ರು.

ಟೀಂ ಇಂಡಿಯಾ ಪರ ಗಮನ ಸೆಳೆದ ನಿತೀಶ್ ಕುಮಾರ್ ರೆಡ್ಡಿ!

ಟೀಮ್ ಇಂಡಿಯಾದ ಯುವ ಆಲ್​ರೌಂಡರ್ ನಿತೀಶ್ ಕುಮಾರ್ ನಿನ್ನೆಯ ಮ್ಯಾಚ್​ನಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ರು. ಮೊದಲ ಪಂದ್ಯದಲ್ಲಿ ಅಜೇಯ 16 ರನ್ ಬಾರಿಸಿದ್ದ ನಿತೀಶ್ ದ್ವಿತೀಯ ಟಿ20 ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದ್ದೂ ಅಲ್ಲದೇ ಬೌಲಿಂಗ್​ನಲ್ಲೂ ಮಿಂಚಿ ಹೊಸ ದಾಖಲೆ ಬರೆದಿದ್ದಾರೆ.    ಟಿ20 ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾದ ಯಾವುದೇ ಆಟಗಾರ 70+ ರನ್​ ಬಾರಿಸಿ, 2 ವಿಕೆಟ್ ಕಬಳಿಸಿಲ್ಲ. ಇದೀಗ ಆಡಿದ 2ನೇ ಪಂದ್ಯದ ಮೂಲಕವೇ ನಿತೀಶ್ ಕುಮಾರ್ ರೆಡ್ಡಿ ಯಾರಿಂದಲೂ ಸಾಧ್ಯವಾಗದಿದ್ದ ದಾಖಲೆಯನ್ನು ನಿರ್ಮಿಸಿ ತೋರಿಸಿದ್ದಾರೆ. ಅಲ್ಲದೆ ಆಲ್​ರೌಂಡರ್ ಆಟದೊಂದಿಗೆ ಭಾರತ ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

ಭಾರತದ 7 ಬೌಲರ್ ಗಳಿಗೂ ದಕ್ಕಿದ ವಿಕೆಟ್!

ಭಾರತ ನೀಡಿದ್ದ ಬೃಹತ್ ಸ್ಕೋರ್ ಬೆನ್ನತ್ತಿದ ಹುಸೈನ್​ ಶ್ಯಾಂಟೊ ಪಡೆ ಆರಂಭಿದಿಂದಲೇ ಆಘಾತಕ್ಕೊಳಗಾಯ್ತು. ಯಾವೊಬ್ಬ ಬ್ಯಾಟರ್​ ಕೂಡ ಕ್ರೀಸ್​ನಲ್ಲಿ ನಿಲ್ಲದೇ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು. ಹಿರಿಯ ಆಟಗಾರ ಮಹಮದುಲ್ಲಾ ಮಾತ್ರ 39 ಎಸೆತಗಳಲ್ಲಿ 41 ರನ್​ ಗಳಿಸಿದರು. ಪ್ರತೀ ಹಂತದಲ್ಲೂ ಕೂಡ ಖರಾರುವಾಕ್ ದಾಳಿ ನಡೆಸಿದ ಭಾರತೀಯ ಬೌಲರ್​ಗಳು ಬಾಂಗ್ಲಾ ಬಾಯ್ಸ್ ಚೇತರಿಸಿಕೊಳ್ಳೋಕೆ ಬಿಡ್ಲೇ ಇಲ್ಲ. ಅದ್ರಲ್ಲೂ ಭಾರತ ತಂಡದ ನಾಯಕ ಸೂರ್ಯಕುಮಾರ್​​ ಯಾದವ್​ 7 ಜನರಿಂದ ಬೌಲಿಂಗ್​ ಮಾಡಿಸಿದರು. ವಿಶೇಷವೆಂದರೆ, ಬೌಲ್ ಮಾಡಿದ ಅಷ್ಟೂ ಆಟಗಾರರು ಕನಿಷ್ಠ ಒಂದು ವಿಕೆಟ್​​ ಕಿತ್ತರು. ನಿತಿಶ್​​ ರೆಡ್ಡಿ, ವರುಣ್​ ಚಕ್ರವರ್ತಿ ತಲಾ 2 ವಿಕೆಟ್​ ಪಡೆದರು. ಇದು ಬಾಂಗ್ಲಾಕ್ಕೆ ಭಾರಿ ದುಬಾರಿಯಾಯಿತು.

ಇನ್ನು ಟೆಸ್ಟ್​ ನಲ್ಲಿ ಮತ್ತು ಟಿ-20 ಸರಣಿಯಲ್ಲೂ ತವರಿನಲ್ಲಿ ಟೀಂ ಇಂಡಿಯಾ ಪಾರುಪತ್ಯ ಸಾಧಿಸುತ್ತಲೇ ಸಾಗುತ್ತಿದೆ. ಭಾರತ ತಂಡ ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆಲುವು ಸಾಧಿಸಿದೆ. 2022ರ ಬಳಿಕ ತಂಡ ತವರಿನಲ್ಲಿ ಸರಣಿ ಸೋತಿಲ್ಲ. ಇನ್ನು ಡ್ರಾಗೊಂಡ ಸರಣಿಗಳನ್ನೂ ಪರಿಗಣಿಸಿದರೆ, ಭಾರತ ಸತತ 15ನೇ ಸರಣಿಯಲ್ಲಿ ಅಜೇಯವಾಗಿ ಉಳಿದಿದೆ. ಒಟ್ನಲ್ಲಿ ಪಾಕ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಭಾರತಕ್ಕೆ ಬಂದಿದ್ದ ಬಾಂಗ್ಲಾ ಪಡೆ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಆಗಿತ್ತು. ಇದೀಗ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಈಗಾಗ್ಲೇ ಎರಡು ಮ್ಯಾಚ್ ಸೋತು ಇಲ್ಲೂ ಸೋಲೊಪ್ಪಿಕೊಂಡಿದೆ. ಸೋ ಮುಂದಿನ ಪಂದ್ಯದಲ್ಲಾದ್ರೂ ಗೆದ್ದು ಮುಖಭಂಗದಿಂದ ತಪ್ಪಿಸಿಕೊಳ್ಳೋ ಯೋಜನೆಯಲ್ಲಿದೆ. ಆದ್ರೆ ನಮ್ಮ ಟೀಂ ಇಂಡಿಯಾ ಬಾಯ್ಸ್ ಅಬ್ಬರ ನೋಡ್ತಿದ್ರೆ ಅದೂ ಕೂಡ ಸಾಧ್ಯವಾಗಲ್ಲ ಅನ್ನಿಸ್ತಿದೆ.

Shwetha M

Leave a Reply

Your email address will not be published. Required fields are marked *