NZ ಫೈಟ್ ಗೆ KL & KOHLI ರೆಡಿ – ಬೆಂಗಳೂರಲ್ಲೇ ರೋಚಕ ಟೆಸ್ಟ್ ಫೈಟ್
ರೋಹಿತ್ ಬಳಗದಲ್ಲಿ ಯಾರಿಗೆ ಚಾನ್ಸ್?
ಟೀಂ ಇಂಡಿಯಾದ ಸೂಪರ್ ಸ್ಟಾರ್ಸ್ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಗೆದ್ದ ಜೋಶ್ನಲ್ಲಿದ್ದಾರೆ. ಇನ್ನು ಯಂಗ್ಸ್ಟರ್ಸ್ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನ ಸದೆ ಬಡಿದಿದ್ದಾರೆ. ಬುಧವಾರ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ 2ನೇ ಚುಟುಕು ಸಮರ ನಡೆಯಲಿದ್ದು ಇಲ್ಲೂ ಕೂಡ ಸೂರ್ಯಕುಮಾರ್ ಯಾದವ್ ನೇತೃತ್ವದ ಬಾಯ್ಸ್ ಮೇಲುಗೈ ಸಾಧಿಸೋ ಹುಮ್ಮಸ್ಸಿನಲ್ಲಿದ್ದಾರೆ. ಮೂರು ಪಂದ್ಯಗಳ ಟಿ-20 ಸರಣಿ ಮುಗಿದ ಬೆನ್ನಲ್ಲೇ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗಾಗಿ ಮೈದಾನಕ್ಕಿಳಿಯಬೇಕಿದೆ. ಅದೂ ಕೂಡ ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಮೊದಲ ಪಂದ್ಯ ನಡೆಯಲಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಜಸ್ಟ್ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಆದ್ರೆ ಈವರೆಗೂ ಭಾರತ ತಂಡವನ್ನ ಅನೌನ್ಸ್ ಮಾಡಿಲ್ಲ. ಬಾಂಗ್ಲಾ ಸರಣಿಯಲ್ಲಿ ಆಡಿದ ಆಟಗಾರರೇ ನ್ಯೂಜಿಲೆಂಡ್ ವಿರುದ್ಧದ ಮ್ಯಾಚ್ಗೂ ಸೆಲೆಕ್ಟ್ ಆಗ್ತಾರಾ? ಕೊಹ್ಲಿಗಾಗಿ ಕಾಯ್ತಿರೋದ್ಯಾಕೆ ಬೆಂಗಳೂರು ಫ್ಯಾನ್ಸ್..? ಕೆಎಲ್ ರಾಹುಲ್ ಕನಸು ನನಸಾಗುತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರೂಲ್ಸ್ ಬ್ರೇಕ್.. ಸಿಡಿದೆದ್ದ ಬಿಗ್ ಬಾಸ್ – ಕಂಟೆಂಟ್ ಗಾಗಿ ನಿಯಮ ಉಲ್ಲಂಘನೆ?
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ 2 ಪಂದ್ಯಗಳಲ್ಲಿ ಟೀಂ ಇಂಡಿಯಾ ಬಾಯ್ಸ್ ಅದ್ಭುತ ಪ್ರದರ್ಶನ ನೀಡಿದ್ರು. ಚೆನ್ನೈ ಮತ್ತು ಕಾನ್ಪುರದಲ್ಲಿ ನಡೆದ ಎರಡು ಪಂದ್ಯಗಳಲ್ಲೂ ಗೆದ್ದು ಅತಿಥೇಯ ತಂಡವನ್ನ ವೈಟ್ ವಾಶ್ ಮಾಡಿದ್ರು. ಗೆಲುವಿನ ಗುಂಗಲ್ಲೇ ರೆಸ್ಟ್ ಮೂಡ್ಗೆ ಜಾರಿರೋ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಮುಂದಿನ ವಾರ ನ್ಯೂಜಿಲೆಂಡ್ ಟಾಸ್ಕ್ ಎದುರಾಗಲಿದೆ. ಉಭಯ ತಂಡಗಳ ನಡುವೆ ಮೂರು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಅಕ್ಟೋಬರ್ 16 ರಂದು ಬೆಂಗಳೂರಿನಲ್ಲಿ ನಡೆದ್ರೆ 2ನೇ ಮ್ಯಾಚ್ ಅಕ್ಟೋಬರ್ 24 ರಿಂದ ಪುಣೆಯಲ್ಲಿ ನಡೆಯಲಿದೆ. ಸರಣಿಯ ಕೊನೆಯ ಪಂದ್ಯವು ನವೆಂಬರ್ 1 ರಿಂದ ಮುಂಬೈನಲ್ಲಿ ಶುರುವಾಗಲಿದೆ. 2021ರ ನಂತರ ಕಿವೀಸ್ ತಂಡ ಭಾರತದಲ್ಲಿ ಟೆಸ್ಟ್ ಸರಣಿ ಆಡೋಕೆ ರೆಡಿಯಾಗಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.
ವಿರಾಟ್ ಕೊಹ್ಲಿ & ಕೆಎಲ್ ರಾಹುಲ್ ಕಮಾಲ್ ನೋಡಲು ಕಾತರ!
ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಲ್ಲಿ ನಡೀತಿರೋದ್ರಿಂದ ಕಿಂಗ್ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ಗೆ ತುಂಬಾನೇ ಸ್ಪೆಷಲ್ ಆಗಿದೆ. ಯಾಕಂದ್ರೆ ಐಪಿಎಲ್ನಲ್ಲಿ ಕೊಹ್ಲಿ ಪ್ರತಿನಿಧಿಸೋದು ಕರ್ನಾಟಕದ ತಂಡವನ್ನೇ. ಬೆಂಗಳೂರು ಜೊತೆ ಅಟ್ಯಾಚ್ಮೆಂಟ್ ಹೊಂದಿರೋ ಕೊಹ್ಲಿಗೆ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಆಡೋದಂದ್ರೆ ಅಚ್ಚುಮೆಚ್ಚು. ಹಾಗೇ ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಚಾನ್ಸ್ ಪಡೆಯೋ ನಿರೀಕ್ಷೆಯಲ್ಲಿರೋ ಕೆಎಲ್ ರಾಹುಲ್ಗೆ ಬೆಂಗಳೂರು ಹೋಮ್ ಟೌನ್. ಇಲ್ಲಿ ಆಡೋದು ಕೆಎಲ್ಗೆ ತುಂಬಾನೇ ಇಷ್ಟ. ಅದ್ರಲ್ಲೂ ಈ ಬಾರಿ ಐಪಿಎಲ್ನಲ್ಲಿ ಇಬ್ಬರೂ ಆಟಗಾರರು ಆರ್ಸಿಬಿ ಪರ ಆಡ್ಬೇಕು ಅನ್ನೋದು ಅಭಿಮಾನಿಗಳ ಆಶಯ. ಹೀಗಾಗಿ ಕೊಹ್ಲಿ ಮತ್ತು ಕೆಎಲ್ರನ್ನ ನೋಡೋಕೆ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಸೇರೋ ನಿರೀಕ್ಷೆ ಕೂಡ ಇದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್!
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡಕ್ಕೆ ಫೈನಲ್ ಕಾಯ್ದುಕೊಳ್ಳಲು ನ್ಯೂಜಿಲೆಂಡ್ ವಿರುದ್ಧದ ಸರಣಿ ಕೂಡ ಇಂಪಾರ್ಟೆಂಟ್. ಭಾರತ ಫೈನಲ್ನಲ್ಲಿ ಉಳೀಬೇಕು ಅಂದ್ರೆ ಇನ್ನುಳಿದ 8 ಟೆಸ್ಟ್ಗಳಲ್ಲಿ 4 ಟೆಸ್ಟ್ ಪಂದ್ಯಗಳನ್ನು ಗೆದ್ದು, ಒಂದು ಟೆಸ್ಟ್ ಡ್ರಾ ಮಾಡಿಕೊಳ್ಳಬೇಕಿದೆ. ನ್ಯೂಜಿಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡುವುದು ಖಚಿತವಾಗಲಿದೆ. ತವರಿನಲ್ಲಿ ಭಾರತದ ಎದುರು ಯಾವ ತಂಡಗಳು ಕೂಡ ಗೆಲ್ಲುವುದು ಅಷ್ಟು ಸುಲಭವಲ್ಲ. ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನು ಸೋತ ಬಳಿಕ, ಭಾರತದ ವಿರುದ್ಧ ಟೆಸ್ಟ್ ಸರಣಿ ಆಡಲು ಆಗಮಿಸುತ್ತಿದೆ. ಬಾಂಗ್ಲಾದೇಶ ವಿರುದ್ಧ ಸರಣಿ ಕ್ಲೀನ್ಸ್ವೀಪ್ ಮಾಡಿರುವ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿದ್ದು, ಕಿವೀಸ್ ವಿರುದ್ಧ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ.
ಒಮ್ಮೆ ಟಿಕೆಟ್ ಖರೀದಿ ಮಾಡಿದ್ರೆ 5 ದಿನಗಳ ಪಂದ್ಯಕ್ಕೆ ಪ್ರವೇಶ!
ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಅಕ್ಟೋಬರ್ 5ರಿಂದ ಟಿಕೆಟ್ ಮಾರಾಟ ಆರಂಭಿಸಲಾಗಿದೆ. ಆನ್ಲೈನ್ ಮೂಲಕ ಪೇಟಿಎಂ ಇನ್ಸೈಟರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಮೂಲಕ ಟೆಸ್ಟ್ ಪಂದ್ಯಕ್ಕೆ ಟಿಕೆಟ್ಗಳನ್ನು ಖರೀದಿ ಮಾಡಬಹುದು. ಒಮ್ಮೆ ಟಿಕೆಟ್ ಖರೀದಿ ಮಾಡಿದರೆ 5 ದಿನಗಳ ಪಂದ್ಯಕ್ಕೆ ಪ್ರವೇಶ ಸಿಗಲಿದೆ. ಮೊದಲ ಟೆಸ್ಟ್ ಪಂದ್ಯದ ಟಿಕೆಟ್ ಬೆಲೆಗಳು 600 ರೂಪಾಯಿಗಳಿಂದ ಆರಂಭವಾಗಲಿದ್ದು, ಗರಿಷ್ಠ ಟಿಕೆಟ್ ದರ 7,500 ರೂಪಾಯಿ ಆಗಿದೆ. ಹೆಚ್ ಕೆಳಗಿನ ಸ್ಟಾಂಡ್ ಟಿಕೆಟ್ ಬೆಲೆ 600 ರೂಪಾಯಿ, ಸಿ ಸ್ಟಾಂಡ್ 1,200 ರೂಪಾಯಿ, ಬಿ ಸ್ಟಾಂಡ್ 2,000 ರೂಪಾಯಿ, ಡಿ ಕಾರ್ಪೊರೇಟ್ 2000 ರೂಪಾಯಿ, ಎನ್ ಸ್ಟಾಂಡ್ 2,500 ರೂಪಾಯಿ, ಪಿ4 ಸ್ಟಾಂಡ್ ಟಿಕೆಟ್ ಬೆಲೆ 2,000 ರೂಪಾಯಿಗಳಾಗಿದೆ. ಪಿ ಟೆರೇಸ್ ಟಿಕೆಟ್ಗಳ ಬೆಲೆಯನ್ನು 7,500 ರೂಪಾಯಿಗೆ ನಿಗದಿ ಮಾಡಲಾಗಿದೆ. ಇನ್ನು 2022ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ನಡೆದಿತ್ತು. ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 238 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. 2 ವರ್ಷಗಳ ಬಳಿಕ ಭಾರತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ಅಭಿಮಾನಿಗಳು ಟೆಸ್ಟ್ ಪಂದ್ಯ ವೀಕ್ಷಿಸಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.
ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್ ತಂಡ ಪ್ರಕಟ!
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಅಕ್ಟೋಂಬರ್ 16 ರಿಂದ ಆರಂಭವಾಗಲಿದೆ. ಈ ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟಿಸಿದೆ. ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವೇಗದ ಬೌಲರ್ ಟಿಮ್ ಸೌಥಿ ನ್ಯೂಜಿಲೆಂಡ್ನ ಟೆಸ್ಟ್ ನಾಯಕತ್ವವನ್ನು ತೊರೆದಿದ್ದರು. ಶ್ರೀಲಂಕಾ ವಿರುದ್ಧದ ಹೀನಾಯ ಸೋಲಿನ ನಂತರ ಸೌಥಿ ಈ ನಿರ್ಧಾರ ಕೈಗೊಂಡಿದ್ದರು. ಇದಾದ ಬಳಿಕ ಸ್ಟಾರ್ ಬ್ಯಾಟರ್ ಟಾಮ್ ಲ್ಯಾಥಮ್ ಅವರನ್ನು ನಾಯಕ ಎಂದು ಘೋಷಿಸಲಾಗಿತ್ತು. ಈಗಾಗಲೇ ಲ್ಯಾಥಮ್ ಅವರು ಏಕದಿನ ಮತ್ತು ಟಿ20 ತಂಡಗಳ ನಾಯಕರಾಗಿದ್ದು, ಭಾರತ ವಿರುದ್ಧ ಟೆಸ್ಟ್ ಸರಣಿಯಿಂದ ನ್ಯೂಜಿಲೆಂಡ್ ತಂಡವನ್ನು ಮೂರು ಮಾದರಿಯಲ್ಲೂ ಮುನ್ನಡೆಸಲಿದ್ದಾರೆ. ಲಂಕಾ ವಿರುದ್ಧದ ಸೋಲನ್ನ ಭಾರತದ ವಿರುದ್ಧ ಗೆದ್ದು ತೀರಿಸಿಕೊಳ್ಳೋ ತವಕದಲ್ಲಿದೆ ಕಿವೀಸ್ ಪಡೆ. ಮತ್ತೊಂದೆಡೆ ಬಿಸಿಸಿಐ ಇನ್ನೂ ಕೂಡ ಟೀಂ ಅನೌನ್ಸ್ ಮಾಡಿಲ್ಲ. ಬಟ್ ಬಾಂಗ್ಲಾ ವಿರುದ್ಧ ಕಣಕ್ಕಿಳಿದ ಬಳಗವೇ ನ್ಯೂಜಿಲೆಂಡ್ ವಿರುದ್ಧವೂ ಆಡುವ ಸಾಧ್ಯತೆ ಇದೆ.