ಸಾಲದ ಶೂಲದಲ್ಲಿ ಪಾಕ್ ಸರ್ಕಾರ – ಐಎಂಎಫ್ ಹಾಕಿದ ಷರತ್ತುಗಳೇನು?
ಎಷ್ಟಿದೆ ಗೊತ್ತಾ ‘ಪಾಪಿ’ಗಳ ಸಾಲ..?
ಭಾರತದ ನೆರೆಯ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕಳೆದ ವರ್ಷ, ಶ್ರೀಲಂಕಾದಲ್ಲಿ ನಿರುದ್ಯೋಗ, ಹಣದುಬ್ಬರ, ಅಗತ್ಯ ವಸ್ತುಗಳ ಕೊರತೆಯಿಂದಾಗಿ ಜನ ಅಲ್ಲಿನ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ಬಾಂಗ್ಲಾದೇಶದಲ್ಲೂ ಅಲ್ಲೋಲ-ಕಲ್ಲೋಲವೇ ಸೃಷ್ಟಿಯಾಗಿತ್ತು. ಇದೀಗ, ಶ್ರೀಲಂಕಾ ಆರ್ಥಿಕ ಚೇತರಿಕೆಯ ಹಾದಿಯಲ್ಲಿದೆ. ಆದ್ರೆ ಸಂದರ್ಭದಲ್ಲಿ ಪಾಕಿಸ್ತಾನವೂ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಭಾರೀ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತದೆ. ಪಾಕಿಸ್ತಾನದ ರೂಪಾಯಿ ಮೌಲ್ಯ ತೀವ್ರ ಕುಸಿತ ಕಾಣುತ್ತಿದೆ. ನಿರಂತರವಾಗಿ ಸಾಲ ತೆಗೆದೇ ಅಲ್ಲಿನ ಸರ್ಕಾರ ನಡೆಸಲಾಗುತ್ತಿದೆ. ಐಎಂಎಫ್ನಿಂದ ಭಾರೀ ಮೊತ್ತದ ಸಾಲವನ್ನು ಪಾಕಿಸ್ತಾನ ಪಡೆದುಕೊಂಡಿದೆ. ಮತ್ತೆ ಐಎಂಎಫ್ ಪಾಕಿಸ್ತಾನಕ್ಕೆ ಸಾಲ ನೀಡಬೇಂದರೆ, ಹಲವು ಶರತ್ತುಗಳನ್ನು ವಿಧಿಸುತ್ತಿದೆ.
ಇದನ್ನೂ ಓದಿ: ಮೋದಿ ಹೆಸರಲ್ಲೂ ಕಾಶ್ಮೀರ ‘ಕೈ’ವಶ! – ‘ಜುಲನಾ ದಂಗಲ್’ ಗೆದ್ದ ವಿನೇಶ್
ಸಾಲದ ಶೂಲದಲ್ಲಿ ಪಾಕಿಸ್ತಾನ
ಪಾಕಿಸ್ತಾನ ಸ್ವಾತಂತ್ರ್ಯ ನಂತರದಲ್ಲಿ ಐಎಂಎಫ್ ನಿಂದ ಬರೋಬ್ಬರಿ 25 ಬಾರಿ ಸಾಲ ಪಡೆದುಕೊಂಡಿದೆ. ಸಾಲದ ಮೇಲೆ ಸಾಲ ಪಡೆದು, ಪಾಕಿಸ್ತಾನ ಸಾಲದ ಋಣವನ್ನೂ ಹೆಚ್ಚಿಸಿಕೊಂಡಿದೆ. ಹೀಗಾಗಿ, ಮತ್ತೆ ಸಾಲ ಕೊಡಲು ಐಎಂಎಫ್ ಹಿಂದೇಟು ಹಾಕುತ್ತಿದ್ದು, ಪಾಕಿಸ್ತಾನದ ಮೇಲೆ ಕೆಲ ಷರತ್ತುಗಳನ್ನು ಹೇರಿದೆ. ಹಲವು ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿ, ಸರ್ಕಾರವು ತನ್ನ ಬೊಕ್ಕಸದಲ್ಲಿ ಹೆಚ್ಚು ಹಣವನ್ನು ಇಟ್ಟುಕೊಳ್ಳಬೇಕು ಎಂದು ಐಎಂಎಫ್ ಷರತ್ತು ವಿಧಿಸಿತ್ತು. ಹೀಗಾಗಿಯೇ, ಪಾಕಿಸ್ತಾನ ಈಗಾಗಲೇ ಆರು ಸಚಿವಾಲಯಗಳನ್ನು ರದ್ದುಗೊಳಿಸಿ, ಇನ್ನೆರಡು ಸಚಿವಾಲಯಗಳ ವಿಲೀನ ಮಾಡುವ ನಿರ್ಧಾರವನ್ನು ಪಾಕ್ ಸರ್ಕಾರ ಘೋಷಣೆ ಮಾಡಿದೆ. ಅದಾಗ್ಯೂ ಆರ್ಥಿಕತೆ ಸರಿದಾರಿಗೆ ಬರುವಲ್ಲಿ ಎಡವಿದೆ. ಪ್ರಸ್ತುತ, ಆರ್ಥಿಕ ವೆಚ್ಚವನ್ನ ಕಡಿಮೆ ಮಾಡಲು ಸುಮಾರು ಒಂದುವರೆ ಲಕ್ಷ ಸರ್ಕಾರಿ ಉದ್ಯೋಗಗಳನ್ನ ಕಡಿತಗೊಳಿಸಲು ಪಾಕ್ ಸರ್ಕಾರ ನಿರ್ಧಾರ ಮಾಡಿದೆ. ಜೊತೆಗೆ, ಕೆಲವು ಖರ್ಚುಗಳನ್ನು ಕಡಿತಗೊಳಿಸಲು, ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸಲು, ಕೃಷಿ ಮತ್ತು ರಿಯಲ್ ಎಸ್ಟೇಟ್ನ್ನು ಮಿತಿಗೊಳಿಸಲು ಹಾಗೂ ಕೆಲವು ಹಣಕಾಸಿನ ಜವಾಬ್ದಾರಿಗಳನ್ನು ಆಯಾ ಪ್ರಾಂತ್ಯಗಳಿಗೆ ವರ್ಗಾಯಿಸಲು ಪಾಕ್ ಸರ್ಕಾರ ಮುಂದಾಗಿದೆ. ಪಾಕಿಸ್ತಾನ ಇಷ್ಟೆಲ್ಲ ಕಸರತ್ತುಗಳನ್ನು ಮಾಡಿದ ಬಳಿಕ ಐಎಂಎಫ್ ಮತ್ತೆ ಪಾಕಿಸ್ತಾನಕ್ಕೆ ಸಾಲ ನೀಡಲು ಸೆ.26ರಂದು ಒಪ್ಪಿಕೊಂಡಿದೆ. ಒಟ್ಟು 7 ಬಿಲಿಯನ್ ಡಾಲರ್ ಸಾಲ ನೀಡಲು ಐಎಂಎಫ್ ಒಪ್ಪಿಕೊಂಡಿದೆ. ಅದರಲ್ಲಿ ಮೊದಲ ಕಂತಿನಲ್ಲಿ 1 ಬಿಲಿಯನ್ ಡಾಲರ್ ಹಣವನ್ನೂ ಬಿಡುಗಡೆ ಮಾಡಿದೆ. ಐಎಂಎಫ್ನಿಂದ ಸಾಲ ಪಡೆದಿರುವ ಪಾಕ್, ಕೆಲವು ಆರ್ಥಿಕ ಸುಧಾರಣೆಯ ಕ್ರಮಗಳನ್ನು ಕೈಗೊಂಡಿದೆ. ದೇಶದ ಸ್ಥಿತಿಯನ್ನು ಮತ್ತೆ ಹಳಿಗೆ ತರಲು ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.
ಪಾಕಿಸ್ತಾನವು 1950ರ ನಂತರ ಈವರೆಗೆ, ಒಟ್ಟು 223.86 ಶತಕೋಟಿ ಡಾಲರ್ ಸಾಲ ಮಾಡಿದೆ. ಇದು, ಪಾಕಿಸ್ತಾನದ ಜಿಡಿಪಿಯ 74.3% ಆಗಿದೆ. ಈ ಪ್ರಮಾಣದ ಬೃಹತ್ ಸಾಲ ಮಾಡಿರುವ ಪಾಕಿಸ್ತಾನ, ಆರ್ಥಿಕವಾಗಿ ಸುಧಾರಿಸಿಕೊಳ್ಳುವುದು, ಜೊತೆಗೆ ಋಣಮುಕ್ತವಾಗುವುದು ಸವಾಲಾಗಿದೆ.