SLKಗೆ ಟ್ರೋಫಿ ಗೆದ್ದುಕೊಟ್ಟ ಫಾಫ್ – RCBಯಲ್ಲೇ ಉಳೀತಾರಾ ಡುಪ್ಲೆಸಿಸ್?
ಕೊಹ್ಲಿ ಜೊತೆ ಸೇಫ್ ಆಗೋದ್ಯಾರು?

SLKಗೆ ಟ್ರೋಫಿ ಗೆದ್ದುಕೊಟ್ಟ ಫಾಫ್ – RCBಯಲ್ಲೇ ಉಳೀತಾರಾ ಡುಪ್ಲೆಸಿಸ್?ಕೊಹ್ಲಿ ಜೊತೆ ಸೇಫ್ ಆಗೋದ್ಯಾರು?

ಐಪಿಎಲ್ ಆಕ್ಷನ್ ರೂಲ್ಸ್ ರಿಲೀಸ್ ಆದಾಗ್ಲಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿ ಲೆಕ್ಕಾಚಾರಗಳು ಜೋರಾಗಿವೆ. 5+1 ರೂಲ್ಸ್ ಅಡಿ ಯಾರನ್ನ ಉಳಿಸಿಕೊಳ್ಬೇಕು? ಯಾರನ್ನ ರಿಲೀಸ್ ಮಾಡ್ಬೇಕು ಅನ್ನೋ ಬಗ್ಗೆ ಅಳೆದು ತೂಗಿ ಫೈನಲ್ ಮಾಡ್ತಿದ್ದಾರೆ. ಈ ಚರ್ಚೆಯ ನಡುವೆ ಒಂದಷ್ಟು ಹೆಸರುಗಳೂ ಕೂಡ ಬಂದು ಹೋಗ್ತಿವೆ. ಬಟ್ ಎಲ್ಲೂ ಕೂಡ ನಾಯಕ ಫಾಫ್ ಡುಪ್ಲೆಸಿಸ್​ರನ್ನ ಉಳಿಸಿಕೊಳ್ಳೋ ಬಗ್ಗೆ ಚರ್ಚೆಯಾಗಿಲ್ಲ. ಆದ್ರೆ ಅದೊಂದು ಚಾಂಪಿಯನ್ ಪಟ್ಟ ಬೆಂಗಳೂರು ಫ್ರಾಂಚೈಸಿ ಮಾಲೀಕರಿಗೆ ತಲೆಬಿಸಿ ತಂದಿಟ್ಟಿದೆ. ಫಾಫ್ ಬೇಕೋ ಬೇಡ್ವೋ ಅನ್ನೋ ಕನ್ಫ್ಯೂಷನ್ ಕ್ರಿಯೇಟ್ ಮಾಡಿದೆ. ಅಷ್ಟಕ್ಕೂ ಯಾರೋ ಚಾಂಪಿಯನ್ ಆದ್ರೆ ಆರ್​ಸಿಬಿ ಫ್ರಾಂಚೈಸಿ ಯಾಕೆ ತಲೆ ಕೆಡಿಸಿಕೊಳ್ಬೇಕು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೂರ್ಯ ಸಿಡಿಲು.. ಪಾಂಡ್ಯ ಮಿಂಚು – ಬಾಂಗ್ಲಾ ಬಾಯ್ಸ್ ಸದೆ ಬಡಿದ ಭಾರತ

ಫಾಫ್ ಡುಪ್ಲೆಸಿಸ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್. 2024 ರಲ್ಲಿ ಫಾಫ್ ಡುಪ್ಲೆಸಿಸ್ ನಾಲ್ಕು ತಂಡಗಳನ್ನು ಲೀಡ್ ಮಾಡಿದ್ರು. ಈ ನಾಲ್ಕೂ ತಂಡಗಳು ಕೂಡ ಪ್ಲೇಆಫ್ ಹಂತಕ್ಕೇರಿವೆ. ಅದರಲ್ಲೂ ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಎಲಿಮಿನೇಟರ್​ ಪಂದ್ಯವಾಡಿತ್ತು. ಇದೀಗ ಫಾಫ್ ಡುಪ್ಲೆಸಿಸ್ ನೇತೃತ್ವದ ಸೇಂಟ್ ಲೂಸಿಯಾ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್​ನ 12ನೇ ಸೀಸನ್ನಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರಿದೆ. ಕಳೆದ 11 ಸೀಸನ್​ಗಳಲ್ಲಿ ಸತತ ಫೇಲ್ಯೂರ್ ಕಂಡಿದ್ದ ಲೂಸಿಯಾ ಕಿಂಗ್ಸ್ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದು ಕೊಡುವಲ್ಲಿ ಕೊನೆಗೂ ಡುಪ್ಲೆಸಿಸ್ ಯಶಸ್ವಿಯಾಗಿದ್ದಾರೆ. ಇದೇ ಯಶಸ್ಸು ಈಗ ಡುಪ್ಲೆಸಿಸ್ ಆರ್​ಸಿಬಿಗೂ ಕಪ್ ಗೆಲ್ಲಿಸಿಕೊಡ್ತಾರೆ ಎನ್ನುವಂಥ ಆಸೆ ಚಿಗುರಿಸಿದೆ.

ಡುಪ್ಲೆಸಿಸ್ ರನ್ನ ತಂಡದಲ್ಲಿ ಉಳಿಸಿಕೊಳ್ಳುತ್ತಾ ಬೆಂಗಳೂರು ಫ್ರಾಂಚೈಸಿ?

ಐಪಿಎಲ್​ನಲ್ಲಿ ಈ ಬಾರಿ ಮೆಗಾ ಹರಾಜು ಪ್ರಕ್ರಿಯೆ ನಡೀತಾ ಇರೋದ್ರಿಂದ ಯಾರೆಲ್ಲಾ ತಂಡದಲ್ಲಿ ಉಳಿದುಕೊಳ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಇಷ್ಟು ದಿನ ಫಾಫ್ ಡುಪ್ಲೆಸಿಸ್​​ರನ್ನ ಫ್ರಾಂಚೈಸಿ ಉಳಿಸಿಕೊಳ್ಳುತ್ತೆ ಅನ್ನೋ ಬಗ್ಗೆ ಚರ್ಚೆಯೇ ಇರಲಿಲ್ಲ. ಆದ್ರೀಗ ಲೂಸಿಯಾ ಕಿಂಗ್ಸ್ ಗೆಲುವಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮುಂದಿನ ನಡೆಯೇನು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಲ್ದೇ ಲೀಗ್ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಡುಪ್ಲೆಸಿಸ್, 12 ಪಂದ್ಯಗಳನ್ನ ಆಡಿ 4 ಅರ್ಧಶತಕಗಳೊಂದಿಗೆ ಒಟ್ಟು 405 ರನ್ ಕಲೆಹಾಕಿದ್ದಾರೆ. ಈ ಮೂಲಕ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಡುಪ್ಲೆಸಿಸ್ ಅವರನ್ನು ಆರ್​ಸಿಬಿ ಕೈ ಬಿಡಲಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಡುಪ್ಲೆಸಿಸ್ ಮುನ್ನಡೆಸಿದ್ದ ನಾಲ್ಕೂ ತಂಡಗಳು ಪ್ಲೇ ಆಫ್ ಗೆ ಲಗ್ಗೆ!

ಅಷ್ಟಕ್ಕೂ ಫಾಫ್ ಡುಪ್ಲೆಸಿಸ್ 2024 ರಲ್ಲಿ ನಾಲ್ಕು ತಂಡಗಳನ್ನ ಮುನ್ನಡೆಸಿದ್ದು ನಾಲ್ಕೂ ತಂಡಗಳೂ ಪ್ಲೇಆಫ್ ಹಂತಕ್ಕೇರಿದೆ. ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್ ಕ್ವಾಲಿಫೈಯರ್-2 ವರೆಗೂ ತಂಡವನ್ನು ಕೊಂಡೊಯ್ದಿದ್ದರು. ಹಾಗೆಯೇ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಫಾಫ್ ನೇತೃತ್ವದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು ಕ್ವಾಲಿಫೈಯರ್-2 ಹಂತಕ್ಕೇರಿತ್ತು. ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಪ್ಲೇ ಆಫ್ ಹಂತಕ್ಕೇರಿತ್ತು. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿಯೇ ಯಶಸ್ಸಿನ ಹಾದಿಯಲ್ಲಿರುವ ಡುಪ್ಲೆಸಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಯಕನಾಗಿ ಮುಂದುವರೆಸಲಿದೆಯಾ? ಅಥವಾ ತಂಡದಿಂದ ಕೈ ಬಿಡಲಿದೆಯಾ ಎಂಬ ಕುತೂಹಲ ಹುಟ್ಟಿಕೊಂಡಿದೆ.

ಆರ್ ಸಿಬಿ ಉಳಿಸಿಕೊಳ್ಳೋ ಲಿಸ್ಟ್ ನಲ್ಲಿಲ್ಲ ಫಾಫ್ ಡುಪ್ಲೆಸಿಸ್!

ಬೆಂಗಳೂರು ಫ್ರಾಂಚೈಸಿ ಈವರೆಗೂ ಉಳಿಸಿಕೊಳ್ಳಬಹುದಾದ ಆಟಗಾರರ ಲಿಸ್ಟ್ ನಲ್ಲಿ ಫಾಫ್ ಡುಪ್ಲೆಸಿಸ್ ಹೆಸರಿಲ್ಲ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಮೊದಲ ಆಯ್ಕೆಯ ಆಟಗಾರನನ್ನಾಗಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಉಳಿಸಿಕೊಳ್ಳಲಿದೆ. 2008ರಿಂದ ಈವರೆಗೆ ಎಲ್ಲ ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಬ್ಯಾಟ್‌ ಬೀಸಿರುವ ವಿರಾಟ್‌ ಕೊಹ್ಲಿ, 38.76ರ ಸರಾಸರಿಯಲ್ಲಿ 8000ಕ್ಕೂ ಅಧಿಕ ರನ್‌ ಬಾರಿಸಿದ್ದಾರೆ.  2024ರ ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ನೀಡಿ ಆರೆಂಜ್‌ ಕ್ಯಾಪ್‌ ಗೆದ್ದಿದ್ದರು. 15 ಪಂದ್ಯಗಳಿಂದ 741 ರನ್‌ ಬಾರಿಸಿದ್ದರು. ಕೊಹ್ಲಿ ಜೊತೆ ಕ್ಯಾಮರಾನ್ ಗ್ರೀನ್ ಕೂಡ ಈಈ ಪಟ್ಟಿಯಲ್ಲಿದ್ದಾರೆ. ಆಡಿದ 13 ಪಂದ್ಯಗಳಲ್ಲಿ 255 ರನ್‌ಗಳನ್ನು ಬಾರಿಸಿದ ಗ್ರೀನ್‌ 143.26ರ ಸರಾಸರಿ ಸ್ಟ್ರೈಕ್‌ರೇಟ್‌ ಕೂಡ ಕಾಯ್ದುಕೊಂಡಿದ್ರು.  ಇನ್ನು ಮತ್ತೊಬ್ಬ ಆಟಗಾರ ವಿಲ್ ಜಾಕ್ಸ್. ಗುಜರಾತ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಜಾಕ್ಸ್ ಕೂಡ ಫ್ರಾಂಚೈಸಿಯಲ್ಲಿ ಉಳಿಯಬಹುದು. ಹಾಗೇ ಆರ್‌ಸಿಬಿ ತಂಡದಲ್ಲಿ ಅರಳಿದ ಪ್ರತಿಭೆ ಮೊಹಮ್ಮದ್‌ ಸಿರಾಜ್‌ ಈಗ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ ಮೊದಲ ಆಯ್ಕೆಯ ಫಾಸ್ಟ್‌ ಬೌಲರ್‌ಗಳ ಪೈಕಿ ಒಬ್ಬರಾಗಿದ್ದಾರೆ. ಅವರೊಟ್ಟಿಗೆ ಒಪ್ಪಂದ ವಿಸ್ತರಿಸಿ ಬಲಿಷ್ಠ ದೇಶಿ ಬೌಲಿಂಗ್ ವಿಭಾಗ ಹೊಂದುಲು ಆರ್‌ಸಿಬಿ ಎದುರು ನೋಡುತ್ತಿದೆ. ಸಿರಾಜ್‌ ಈವರೆಗೆ ಆಡಿರುವ 93 ಪಂದ್ಯಗಳಲ್ಲಿ ಅಷ್ಟೇ ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ದೇ ಐಪಿಎಲ್‌ 2024 ಟೂರ್ನಿಯಲ್ಲಿ ತಮ್ಮ ಶ್ರೇಷ್ಠ ಆಟ ಹೊರತಂದ ರಜತ್‌ ಪಾಟಿದಾರ್‌ ಕೂಡ ಇಂಪ್ರೆಸ್ಸಿವ್ ಪ್ಲೇಯರ್ ಆಗಿದ್ದಾರೆ. ಆಡಿದ 15 ಪಂದ್ಯಗಳಲ್ಲಿ 395 ರನ್‌ಗಳನ್ನು ಬಾರಿಸಿದ್ರು. 177.13ರ ಸ್ಟ್ರೈಕ್‌ರೇಟ್‌ ಕಾಯ್ದುಕೊಂಡ ರಜತ್‌ ಪಾಟಿದಾರ್‌, ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬೆನ್ನೆಲುಬಾಗಬಲ್ಲರು. ಇನ್ನು ಇದೇ ಲಿಸ್ಟ್​​ನಲ್ಲಿರೋ ಮತ್ತೊಬ್ಬ ಆಟಗಾರ ಯುವ ಎಡಗೈ ವೇಗದ ಬೌಲರ್‌ ಯಶಸ್‌ ದಯಾಳ್‌, ಐಪಿಎಲ್‌ 2024 ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡದ ಯಶಸ್ಸಿಗೆ ಬಲವಾಗಿದ್ದರು. ಪ್ರತಿಭಾನ್ವಿತ ಯುವ ವೇಗಿಯ ಮೇಲೆ ಆರ್‌ಸಿಬಿ ಭರವಸೆ ಇಟ್ಟು ಮತ್ತೊಂದು ಅವಕಾಶ ಕೊಡುವ ಸಾಧ್ಯತೆ ಇದೆ. ಯಶ್‌ ದಯಾಳ್‌, ಇತ್ತೀಚೆಗೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆಯಾಗಿದ್ದರು. ಹೀಗೆ ಈ ಆರು ಆಟಗಾರರನ್ನ ಬೆಂಗಳೂರು ಫ್ರಾಂಚೈಸಿ ಉಳಿಸಿಕೊಳ್ಳೋ ಸಾಧ್ಯತೆ ಇದೆ. ಉಳಿದಂತೆ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಫಾಫ್ ಡುಪ್ಲೆಸಿಸ್ ರನ್ನ ತಂಡದಿಂದ ಕೈ ಬಿಡಬಹುದು. ಆದ್ರೆ ಅಂತಿಮವಾಗಿ ಉಳಿಯೋದು ಯಾರು ಅನ್ನೋ ಪ್ರಶ್ನೆಗೆ ಅಕ್ಟೋಬರ್ 31 ರೊಳಗೆ ಸ್ಪಷ್ಟ ಉತ್ತರ ಸಿಗಲಿದೆ. ಯಾಕಂದ್ರೆ ಈ ತಿಂಗಳ ಅಂತ್ಯದೊಳಗೆ ಎಲ್ಲಾ ಫ್ರಾಂಚೈಸಿಗಳು ರಿಲೀಸ್ ಮಾಡುವ ಆಟಗಾರರ ಲಿಸ್ಟ್ ರಿಲೀಸ್ ಮಾಡ್ಬೇಕು.

Shwetha M