‘ಫ್ಯಾನ್’ ಇಂಡಿಯಾ ಲಡ್ಡು ಮುತ್ಯಾ ಯಾರು..? – ಪವಾಡ ಪುರುಷನ ಹೆಸರಲ್ಲಿ ಮಹಾ ಮೋಸ..!
ಟ್ರೋಲ್, ರೀಲ್ಸ್, ಮೋದಿ ಬಾಯಿಯಲ್ಲೂ ಹಾಡು

‘ಫ್ಯಾನ್’ ಇಂಡಿಯಾ ಲಡ್ಡು ಮುತ್ಯಾ ಯಾರು..? – ಪವಾಡ ಪುರುಷನ ಹೆಸರಲ್ಲಿ ಮಹಾ ಮೋಸ..!ಟ್ರೋಲ್, ರೀಲ್ಸ್, ಮೋದಿ ಬಾಯಿಯಲ್ಲೂ ಹಾಡು

ಸೋಷಿಯಲ್ ಮೀಡಿಯಾ ಬಂದ್ರೂ ಮೇಲೆ ಎಷ್ಟೋ ಜನ ರಾತ್ರೋ ರಾತ್ರಿ ಸ್ಟಾರ್ ಆಗುತ್ತಿದ್ದಾರೆ.. ಸಖತ್ ವೈರಲ್ ಆಗುತ್ತಿದ್ದಾರೆ. ತಮ್ಮ ವಿಡಿಯೋದ ಮೂಲಕ ದೇಶ ಮಟ್ಟದಲ್ಲೂ ಗುರುತಿಸಿಕೊಳ್ಳುತ್ತಾರೆ. ಇದ್ರೆ ಈಗ ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಹತ್ತಾರು ಲಡ್ಡು ಮುತ್ಯಾನ   ರೀಲ್ಸ್ಗಳು ಸಾಲು ಸಾಲಾಗಿ ಬರುತ್ತವೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ  ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನು ವಿಭೂತಿ ರೀತಿ ಭಕ್ತರ ಹಣೆಗೆ ಹಚ್ಚುವ ನಕಲಿ ಲಡ್ಡು ಮುತ್ಯಾನ ರೀಲ್ಸ್ಗಳು ಹರಿದಾಡುತ್ತಿವೆ. ವಿಕಲಚೇತನನೋರ್ವ ಮಾಡಿದ ಈ ರೀಲ್ಸ್ ಭಾರೀ ವೈರಲ್ ಆಗಿದ್ದು ಹತ್ತಾರು ಜನ ಅದನ್ನು ಅನುಕರಣೆ ಮಾಡಿ ರೀಲ್ಸ್ ಮಾಡ್ತಿದ್ದಾರೆ. ಮೋದಿ ಕೂಡ ಹಾಡು ಹೇಳಿದ್ದಂತೆ ವೈರಲ್ ಆಗುತ್ತಿದೆ.

ಇದನ್ನೂ ಓದಿ :ಸಿಎಂ ಏನು ದೆವ್ವಾನಾ ನಾನು ಹೆದರೋಕೆ – ಸಿದ್ದರಾಮಯ್ಯಗೆ ಹೆಚ್‌ಡಿಕೆ ತಿರುಗೇಟು

ವಿಶೇಷ ಚೇತನ ವ್ಯಕ್ತಿಯನ್ನ ನಾಲ್ಕು ಜನ ಎತ್ತಿಕೊಂಡಿರುತ್ತಾರೆ.. ಆತ ತಿರುಗುತ್ತಿರೋ ಫ್ಯಾನ್ಗೆ ಕೈ ಹಾಕಿ ಅದನ್ನ ನಿಲ್ಲಿಸುತ್ತಾನೆ.. ನಂತ್ರ ಗೆ ಫ್ಯಾನ್ನಲ್ಲಿದ್ದ ದೂಳನ್ನ ಇಬ್ಬರ ಹಣೆಗೆ ಒರೆಸುತ್ತಾನೆ..  ಹೀಗೆ “ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ” ಎಂಬ ಹಾಡಿನೊಂದಿಗೆ ವಿಕಲಚೇತನ ವ್ಯಕ್ತಿ ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ. ಸಾಕಷ್ಟು ಜನ ಇದನ್ನೇ ರೀಲ್ಸ್ ಮಾಡುತ್ತಾ ತಮಾಷೆ ಮಾಡುತ್ತಿದ್ದಾರೆ.. ಟ್ರೋಲ್ ಮಾಡುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಇದು ಸುದ್ದಿ ಮಾಡುತ್ತಿದೆ.. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ , ಆಂಧ್ರ, ತಮಿಳುನಾಡು , ಮಹಾರಾಷ್ಟ್ರ ಪಂಜಾಬ್ ಸೇರಿದಂತೆ ಸಾಕಷ್ಟು ರಾಜ್ಯದಲ್ಲಿ ಲಡ್ಡು ಮುತ್ಯಾನ ಹಾಡು ಹಾಗೂ ಈ ವ್ಯಕ್ತಿ ಮಾಡಿರೋ ರೀಲ್ಸ್ ವೈರಲ್ ಆಗುತ್ತಿದೆ.. ಇದು ನಿಜವಾದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.. ಲಡ್ಡು ಮುತ್ಯಾನ ಹೆಸರಿನಲ್ಲಿ ಫ್ಯಾನ್ ನಿಲ್ಲಿಸುವ ಯುವಕನನ್ನು ‘ಆಧುನಿಕ ಲಡ್ಡು ಮುತ್ಯಾ’ ಎಂದು ಬಿಂಬಿಸುತ್ತಿರುವುದಕ್ಕೆ ಮೂಲ ಲಡ್ಡು ಮುತ್ಯಾನ ಭಕ್ತರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ನಿಜವಾದ ಲಡ್ಡು ಮುತ್ಯಾ ಯಾರು..?

ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿ ಪವಾಡ ಪುರುಷರೆಂದೆ ಹೆಸರಾಗಿದ್ದರು ಲಡ್ಡು ಮುತ್ಯಾ. ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬಳಿ ಲಡ್ಡು ಮುತ್ಯಾನ ನೈಜ ‌ಮಠವಿದೆ. ಲಡ್ಡು ಮುತ್ಯಾ ಅವರು 1993ರ ಆಗಸ್ಟ್ 2ರಂದು ಲಿಂಗೈಕ್ಯರಾದರು. ಇಂದಿಗೂ ಸಾವಿರಾರು ಭಕ್ತರು ಅಜ್ಜನ ದರ್ಶನ ಪಡೆಯುತ್ತಾರೆ. ಇವರು ತಲೆಗೆ ಮೈಗೆ ಗೋಣಿ ಚೀಲದ ತಟ್ಟು ಸುತ್ತಿಕೊಳ್ತಿದ್ದರು. ತಟ್ಟಿಗೆ ಲಡ್ ಅಂತ ಕೂಡ ಇವರನ್ನು ಕರೆಯಲಾಗುತ್ತಿತ್ತು. ಈ‌ ಕಾರಣಕ್ಕೆ ಲಡ್ಡು ಮುತ್ಯಾ ಎಂಬ ಹೆಸರು ಬಂತು. ಲಡ್ಡು ಮುತ್ಯಾ ಅವರ ಮೂಲ ಹೆಸರು ಮಲ್ಲಯ್ಯ. 1970-1990ರ ದಶಕದಲ್ಲಿ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಲಡ್ಡು ಮುತ್ಯಾ ಅವರನ್ನು ಪವಾಡ ಪುರುಷ ಎಂದು ಪೂಜಿಸುತ್ತಿದ್ದರು. ಇವರು ಮದುವೆಯಾದ ಬಳಿಕ ಪತ್ನಿ ತ್ಯಜಿಸಿ ವಿರಾಗಿಯಾಗಿದ್ದರು. ಮೈಮೇಲೆ‌ ಬರಿ ಗೋಣಿ ಚೀಲದ ತಟ್ಟು ಸುತ್ತಿಕೊಳ್ಳುತ್ತಿದ್ದರು. ತಮ್ಮ ಮೈಮೇಲಿದ್ದ ಗೋಣಿ ಚೀಲದ ತುಂಡಿನಿಂದಲೇ ಪವಾಡಗಳನ್ನು ಮಾಡುತ್ತಿದ್ದರು. ಇವರು ಆಡಿದ ಮಾತುಗಳು ನಿಜವಾಗ್ತಿದ್ದವು. ಅವರು ಯಾವ ಅಂಗಡಿಗೆ ಬಂದು ಹೋಗ್ತಾರೆ ಅವರಿಗೆ ಭಾರಿ ಲಾಭವಾಗ್ತಿತ್ತು. ಅವರ ಭಾಗ್ಯದ ಬಾಗಿಲು ತೆರೆಯುತ್ತಿತ್ತು. ಅವರು ಯಾರ ಮನೆಗೆ ಕಾಲಿಡ್ತಾರೆ ಅವರಿಗೆ ಅದೃಷ್ಟ ದೇವತೆ ಒಲಿಯುತ್ತಿದ್ದಳು. ಅವರ ಕುಟುಂಬ ಅಭಿವೃದ್ಧಿ ಆಗ್ತಿತ್ತು ಎಂಬ ನಂಬಿಕೆ ಇತ್ತು.

ವೈರಲ್, ಟ್ರೋಲ್ ಮಾಡದಂತೆ ಭಕ್ತರ ಮನವಿ

ಲಡ್ಡು ಮುತ್ಯಾನ ಮಠಕ್ಕೆ ಅಮವಾಸ್ಯೆಯಂದು ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, ಇದೀಗ ಪವಾಡ ಪುರುಷ ಬಾಗಲಕೋಟೆಯ ಆರಾಧ್ಯ ದೈವ ಲಡ್ಡು ಮುತ್ಯಾರ ಬಗ್ಗೆ ಇಲ್ಲ ಸಲ್ಲದ ಟ್ರೋಲ್ ಮಾಡಲಾಗುತ್ತಿದೆ. ನಿಜವಾದ ಪವಾಡ ಪುರುಷ  ಲಡ್ಡು ಮುತ್ಯಾರು ಎಂದಿಗೂ ಫ್ಯಾನ್ ಮುಟ್ಟಲಿಲ್ಲ. ಲಡ್ಡು ಮುತ್ಯಾರ ಬಗ್ಗೆ ಅಪಾರ ಗೌರವ, ಭಕ್ತಿ ಈ ಭಾಗದಲ್ಲಿ ಇದೆ. ಬಾಗಲಕೊಟೆ, ಬೆಳಗಾವಿ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ ಸೇರಿ ಉತ್ತರ ಕರ್ನಾಟಕದ ಭಾಗದಲ್ಲಿ ಲಡ್ಡು ಮುತ್ಯಾ ಅಪಾರ ಭಕ್ತರ ಸಮೂಹ ಹೊಂದಿದ್ದಾರೆ. ಹೀಗಾಗಿ, ಲಡ್ಡು ಮುತ್ಯಾರನ್ನು ಅವಮಾನಿಸಬೇಡಿ ಎಂದು ಮೂಲ ಲಡ್ಡು ಮುತ್ಯಾ ಅವರ ಭಕ್ತರು ಮನವಿ ಮಾಡಿದ್ದಾರೆ. ಟ್ರೋಲ್ ಬೆನ್ನಲ್ಲೆ ಮೂಲ ಲಡ್ಡು ಮುತ್ಯಾನ ಭಕ್ತ ಸಮೂಹದವರು, ಲಡ್ಡು ಮುತ್ಯಾನ ಉತ್ತರಾಧಿಕಾರಿಗಳು ಎಂದು ಯಾರೂ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡದಂತೆ ಮೂಲ ಭಕ್ತರಿಂದ ಸಾರ್ವಜನಿಕ ಮನವಿ ಮಾಡಲಾಗಿದೆ. ದೇಶದಲ್ಲಿ ಬೇರೆ ಬೇರೆ ರಾಜ್ಯದ ಜನರಿಂದ ಆಗುತ್ತಿರುವ ಟ್ರೋಲ್ ಗಳನ್ನೂ ಸಹ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಸೀಮಿಕೇರಿಯ ಮೂಲ ಲಡ್ಡು‌ಮುತ್ಯಾಗೂ ಫ್ಯಾನ್ ಇಂಡಿಯಾ ಮುತ್ಯಾಗೂ ಯಾವುದೇ ಸಂಬಂಧವಿಲ್ಲ ಅಂತಾ ಮಠದ ಆಡಳಿತ ಮಂಡಳಿಯವ್ರು ಹೇಳುತ್ತಿದ್ದಾರೆ. ನಮ್ಮ ಮಠದಿಂದ ಬೇರೆ ಎಲ್ಲೂ ಯಾವುದೇ ಶಾಖಾ ಮಠವಿಲ್ಲ ಅಂತಾ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ಫ್ಯಾನ್ ಮುಟ್ಟಿ ವೈರಲ್ ಆದ ವ್ಯಕ್ತಿ ಎಲ್ಲಿಯವನು..?  

ಸಾಮಾಜಿಕ ಜಾಲತಾಣದಲ್ಲಿ ತಿರುಗುವ ಫ್ಯಾನ್ ಕೈಯಿಂದ ನಿಲ್ಲಿಸಿ, ಅದೇ ಕೈಯಿಂದ ಎಲ್ಲರ ತಲೆಯನ್ನು ಮುಟ್ಟಿ ಆಶೀರ್ವಾದ ಮಾಡುವ ವಿಡಿಯೋಗಳು ಹರಿದಾಡುತ್ತಿವೆ. ಈ ವಿಡಿಯೋದಲ್ಲಿ ಜನರು ಲಡ್ಡು ಮುತ್ಯಾ ಅಂತ ಹೇಳಿ ಆಶೀರ್ವಾದ ಪಡೆಯುತ್ತಿದ್ದಾರೆ. ಆದರೆ, ವಿಶೇಷ ಚೇತನ ವ್ಯಕ್ತಿ ವಯಸ್ಸಾದವರಂತೆ ಕಂಡರೂ ಮಕ್ಕಳಂತೆ ವರ್ತಿಸುತ್ತಾರೆ. ಅವರ ತೊದಲ ಮಾತು ನಿಜವಾಗಿವೆಯಂತೆ. ಹಾಗಾಗಿಯೇ ಈ ವಿಶೇಷ ಚೇತನ ವ್ಯಕ್ತಿಯ ಬಗ್ಗೆಯೂ ಒಂದಷ್ಟು ಜನಕ್ಕೆ ನಂಬಿಕೆ ಇದೆ. ಆದರೆ, ಮೂಲ ಲಡ್ಡು ಮುತ್ಯಾನ ಹೆಸರಲ್ಲಿ ವಿಶೇಷ ಚೇತನ ವ್ಯಕ್ತಿ ಮೋಸ ಮಾಡುತ್ತಿದ್ದಾರಾ? ಅಥವಾ ಈ ವಿಶೇಷ ಚೇತನ ವ್ಯಕ್ತಿಯನ್ನ ಮುಂದಿಟ್ಟುಕೊಂಡು ಯಾರಾದ್ರೂ ಜನರನ್ನ ಮರಳು ಮಾಡುತ್ತಿದ್ದಾರಾ? ಇಂಥದ್ದೊಂದು ಅನುಮಾನ ಕೂಡ ಎದ್ದಿದೆ. ಭಕ್ತರೇ ಕೊಟ್ಟಿದ್ದಾರೆ ಎನ್ನಲಾದ ಲಕ್ಷಾಂತರ ಬೆಲೆಯ ಕಾರಿನಲ್ಲಿ ಓಡಾಡೋ ವಿಶೇಷ ಚೇತನ ಎಲ್ಲಿ? ಗೋಣಿ ಚೀಲವನ್ನೇ ತೊಟ್ಟು ಪವಾಡ ಮಾಡುತ್ತಿದ್ದ ಲಡ್ಡು ಮುತ್ಯಾ ಎಲ್ಲಿ? ಅನ್ನೋ ಪ್ರಶ್ನೆ ಕೂಡ ಎದ್ದಿದೆ. ತಾವು ವೈರಲ್ ಆಗೋಕೋ, ಅಥವಾ ಒಂದಿಷ್ಟು ಹಣ ಮಾಡೋಕೆ ದೇವರ ಹೆಸರಲ್ಲಿ ಅಥವಾ ಪವಾಡ ಪುರುಷರ ಹೆಸರಲ್ಲಿ ರೀಲ್ಸ್ ಮಾಡಿ ತಮಾಷೆ ಮಾಡೋದು ತಪ್ಪು. ಬೇರೆಯವರ ನಂಬಿಕೆ ಜೊತೆ ಆಟ ಆಡೋದು ತಪ್ಪು ಅನ್ನೋದು ಎಲ್ಲರ ಅನಿಸಿಕೆ.

Kishor KV

Leave a Reply

Your email address will not be published. Required fields are marked *