ಸುರಂಗ ತೋಡಿ ರೈಲು ಇಂಜಿನ್ ಕದ್ದ ಖತರ್ನಾಕ್ ಗ್ಯಾಂಗ್!
ಬಿಹಾರದಲ್ಲಿ ಕಂಡು ಕೇಳರಿಯದ ಕಳವು!
ಪಾಟ್ನಾ: ದುರಸ್ತಿಗೆಂದು ಹಳಿಯಲ್ಲಿ ನಿಂತಿದ್ದ ರೈಲಿನ ಇಂಜಿನ್ ಗಳನ್ನೇ ಖತರ್ನಾಕ್ ಕಳ್ಳರು ಕದ್ದಿದ್ದಾರೆ. ಬಿಹಾರದ ಬುರೌನಿಯ ಗರ್‌ಹಾರ ಯಾರ್ಡ್ ನಲ್ಲಿ ರಿಪೇರಿಗೆಂದು ರೈಲನ್ನು ತಂದು ನಿಲ್ಲಿಸಲಾಗಿತ್ತು. ಈ ವೇಳೆ ಹಳಿಯ ಕೆಳಭಾಗದಲ್ಲಿ ಸುರಂಗ ಕೊರೆದು ರೈಲು ಇಂಜಿನ್ ನನ್ನೇ ಕಳಚಿ ಖದೀಮರು ಸಾಗಿಸಿದ್ದಾರೆ.
ಒಟ್ಟು 13 ದೊಡ್ಡ ಪ್ಯಾಕ್ ಮಾಡಿ ಮುಜಾಫರ್‌ಪುರದ ಗುಜರಿ ಮಳಿಗೆಯೊಂದಕ್ಕೆ ಇಂಜಿನ್ ಗಳನ್ನು ಸಾಗಿಸಲಾಗಿತ್ತು. ಈ ಬಗ್ಗೆ ಅನುಮಾನಗೊಂಡ ಪೊಲೀಸರು ಮೂವರನ್ನು ಬಂಧಿಸಿದಾಗ, ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಗುಜರಾತ್ ನಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದು ಬಿಜೆಪಿ – ಅಮಿತ್ ಶಾ
ರೈಲಿನ ಆವರಣದ ಬಳಿ ಸುರಂಗ ಮಾರ್ಗವೊಂದು ಸಿಕ್ಕಿದ್ದು, ಅದರ ಮೂಲಕ ಕಳ್ಳರು ಬಂದು ಇಂಜಿನ್ ಬಿಡಿಭಾಗಗಳನ್ನು ಕದ್ದು ಗೋಣಿ ಚೀಲಗಳಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲು ಇಂಜಿನ್ ಕದಿಯಲು ಖದೀಮರ ಗ್ಯಾಂಗ್ ಸುರಂಗ ಕೊರೆದಿತ್ತು. ವಾರಗಳ ಕಾಲ ಸುರಂಗದ ಮೂಲಕ ಇಂಜಿನ್ ನ ಬಿಡಿ ಭಾಗಗಳನ್ನು ಸಾಗಿಸಲಾಗುತ್ತು. ಅಚ್ಚರಿಯ ಸಂಗತಿ ಎಂದರೆ ಇದ್ಯಾವುದೂ ರೈಲ್ವೆ ಅಧಿಕಾರಿಗಳಿಗೆ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.
ಹಾಡಹಗಲೇ ಉಗಿಬಂಡಿ ಕದ್ದ ಖದೀಮರು
ಇಷ್ಟೇ ಅಲ್ಲ ಹಳೆಯ ಉಗಿಬಂಡಿ ರೈಲ್ ಅನ್ನು ಪುರ್ನಿಯಾ ನಿಲ್ದಾಣದ ಮುಂದೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು. ಅಂತಹದ್ದೇ ಉಗಿಬಂಡಿಯನ್ನು ಖದೀಮರು ನಕಲಿ ದಾಖಲೆ ಸೃಷ್ಟಿಸಿ ಹಾಡಹಗಲೇ ಹೊತ್ತೊಯ್ದಿದ್ದಾರೆ. ಡಿವಿಜಿನಲ್ ಮೆಕಾನಿಕ್ ಇಂಜಿನಿಯರ್ ಹೆಸರಲ್ಲಿ ನಕಲಿ ಹರಾಜು ಪತ್ರ ಸೃಷ್ಟಿಸಿ, ಕ್ಲಾಸಿಕ್ ವಿಂಟೇಜ್ ಅನ್ನು ಲಾರಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ.
ಕಬ್ಬಿಣದ ಸೇತುವೆಯನ್ನೇ ಹೊತ್ತೊಯ್ದ ಕಳ್ಳರು!
ಬಿಹಾರದ ಈಶಾನ್ಯ ಅರಾರಿಯಾ ಜಿಲ್ಲೆಯ ಸಿತಾಧರ್ ನದಿಯ ಮೇಲೆ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆಯನ್ನು ಮತ್ತೊಂದು ಗ್ಯಾಂಗ್ ಕದ್ದಿದೆ. ಸೇತುವೆಯ ಇತರ ಪ್ರಮುಖ ಭಾಗಗಳು ನಾಪತ್ತೆಯಾಗಿರುವುದು ಕಂಡು ಪೊಲೀಸರು ಕೂಡ ಅಚ್ಚರಿಗೊಳಗಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಸೇತುವೆಯ ರಕ್ಷಣೆಗಾಗಿ ಒಬ್ಬ ಪೇದೆಯನ್ನು ನಿಯೋಜನೆ ಮಾಡಿದ್ದಾರೆ. ಪಲ್ಟಾನಿಯಾ ಸೇತುವೆಯು ಫರ್ಬಿಸ್‌ಗಂಜ್ ನಗರವನ್ನು ರಾಣಿಗಂಜ್‌ಗೆ ಸಂಪರ್ಕಿಸುತ್ತದೆ.
ಅರಾರಿಯಾ ಜಿಲ್ಲೆಯಲ್ಲಿ ಸೀತಾರ್ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ನೂರಾರು ಟನ್ ತೂಕದ ಸ್ಟೀಲ್ ಬ್ರಿಡ್ಜ್ ಅನ್ನು ಕೂಡ ಎಗರಿಸಲು ಖದೀಮರ ಗ್ಯಾಂಗ್ ಯತ್ನಿಸಿದೆ. ಇಷ್ಟೇ ಅಲ್ಲ ಸೇತುವೆಯ ಆಧಾರ ಸ್ತಂಭಗಳನ್ನು ಕೂಡ ಕದ್ದೊಯ್ದಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ 45 ವರ್ಷ ಹಳೆಯ 500 ಟನ್ ತೂಕದ ಕಬ್ಬಿಣದ ಬ್ರಿಡ್ಜ್ ಅನ್ನು ಇಂಜಿನಿಯರ್ ಪಾಲುದಾರಿಕೆಯಲ್ಲಿ ದರೋಡೆಕೋರರು ಲೂಟಿ ಮಾಡಿದ್ದರು. ಈ ಎಲ್ಲಾ ಪ್ರಕರಣಗಳಲ್ಲಿ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರಿಗೆ ಖದೀಮರನ್ನು ಬಂಧಿಸುವುದು ಸವಾಲಿನ ಕೆಲಸ ಎನ್ನಿಸಿದೆ. ಸರಣಿ ಕಳ್ಳತನ ಪೊಲೀಸರ ನಿದ್ದೆಗೆಡಿಸುವಂತೆ ಮಾಡಿದೆ.