ನಿವೃತ್ತಿ ನೋವಿಗೆ ಕೊಹ್ಲಿ ಬ್ಯಾಟ್ ಬೂಸ್ಟ್ – ಹಸನ್ ನಿವೃತ್ತಿಗೆ ಕಿಂಗ್ ವಿರಾಟ್ ಗಿಫ್ಟ್
ಆಕಾಶ್, ರಿಂಕು ಕೂಡ ಲಕ್ಕಿ ಹೇಗೆ?

ನಿವೃತ್ತಿ ನೋವಿಗೆ ಕೊಹ್ಲಿ ಬ್ಯಾಟ್ ಬೂಸ್ಟ್ – ಹಸನ್ ನಿವೃತ್ತಿಗೆ ಕಿಂಗ್ ವಿರಾಟ್ ಗಿಫ್ಟ್ಆಕಾಶ್, ರಿಂಕು ಕೂಡ ಲಕ್ಕಿ ಹೇಗೆ?

ಬ್ಯಾಟಿಂಗ್ ಮೂಲಕ ವಿರಾಟ್ ಕೊಹ್ಲಿ ಆನ್ ಫೀಲ್ಡ್​​ನಲ್ಲಿ ಧೂಳೆಬ್ಬಿಸಿದ್ರೆ ಆಫ್ ದಿ ಫೀಲ್ಡ್​​ನಲ್ಲೂ ಅವ್ರ ಬ್ಯಾಟ್ ಸದಾ ಸದ್ದು ಮಾಡ್ತಿರುತ್ತೆ. ಕ್ರಿಕೆಟ್ ಲೋಕದ ಕಿಂಗ್ ಆಗಿರುವ ವಿರಾಟ್ ಕೊಹ್ಲಿಯವ್ರಿಂದ ಒಂದು ಬ್ಯಾಟ್​ನ ಗಿಫ್ಟ್ ಆಗಿ ಪಡೆಯಬೇಕು ಅನ್ನೋದು ಅದೆಷ್ಟೋ ಕ್ರಿಕೆಟಿಗರ ಕನಸು. ಅದು ಭಾರತದ ಆಟಗಾರರೇ ಇರಲಿ ಅಥವಾ ವಿದೇಶಿ ಆಟಗಾರರಿಗೂ ಇದು ಹೊರತಾಗಿಲ್ಲ. ಇದೀಗ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಇದೇ ಆಗಿದೆ. ಬಾಂಗ್ಲಾ ಆಟಗಾರನಿಗೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟನ್ನ ಗಿಫ್ಟ್ ಆಗಿ ನೀಡಿದ್ದಾರೆ. ಅದೂ ಕೂಡ ಸ್ಪೆಷಲ್ ಮೂಮೆಂಟ್ ನಲ್ಲಿ. ಅಷ್ಟಕ್ಕೂ ಯಾರು ಆ ಆಟಗಾರ? ಯಾಕೆ ಬ್ಯಾಟ್ ಗಿಫ್ಟ್ ಕೊಟ್ರು? ವಿರಾಟ್ ಕೊಹ್ಲಿಯವ್ರ ಬ್ಯಾಟ್ ಅಂದ್ರೆ ಯಾಕಷ್ಟು ಕ್ರೇಜ್ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾರ್ವತಿ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್​.. –  ಹೊಸ ಬಾಂಬ್‌ ಸಿಡಿಸಿದ ಹೆಚ್‌ಡಿಕೆ!

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದೆ. ಮೊದಲ ಇನಿಂಗ್ಸ್​ನಲ್ಲಿ 52 ರನ್​ಗಳ ಮುನ್ನಡೆ ಪಡೆದಿದ್ದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ 95 ರನ್​ಗಳ ಸುಲಭ ಗುರಿ ಪಡೆದಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಅಂತಿಮವಾಗಿ 17.2 ಓವರ್​ಗಳಲ್ಲಿ 98 ರನ್ ಬಾರಿಸಿ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಡ್ರಾನಲ್ಲಿ ಅಂತ್ಯ ಕಾಣ್ಬೇಕಿದ್ದ ಮ್ಯಾಚ್​ನ ಭಾರತ ಗೆದ್ದುಕೊಂಡಿದೆ. ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಅತ್ಯುತ್ತಮ ಪ್ರದರ್ಶನಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ್ರೆ ಯಶಸ್ವಿ ಜೈಸ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ್ರು. ಬಟ್ ಸರಣಿ ಬಳಿಕ ಉಭಯ ತಂಡಗಳ ಆಟಗಾರರು ಮಾತನಾಡುತ್ತಿರುವಾಗ ಸ್ವಾರಸ್ಯಕರ ಘಟನೆ ನಡೀತು. ಅದುವೇ ವಿರಾಟ್ ಕೊಹ್ಲಿ ನೀಡಿದ ಬ್ಯಾಟ್ ಗಿಫ್ಟ್.

ಹಸನ್ ಗೆ ಬ್ಯಾಟ್ ನೀಡಿದ ಕೊಹ್ಲಿ!

ಬಾಂಗ್ಲಾ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾಗೂ ಮಾಜಿ ನಾಯಕ ಶಕಿಬ್ ಅಲ್‌ ಹಸನ್‌ ಅವ್ರಿಗೆ ಟೀಂ ಇಂಡಿಯಾದ ಲೆಜೆಂಡರಿ ಆಟಗಾರ ಕಿಂಗ್ ವಿರಾಟ್ ಕೊಹ್ಲಿ ತಮ್ಮ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾನ್ಪುರದ  ಗ್ರೀನ್‌ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಣ ಟೆಸ್ಟ್‌ ಸರಣಿಯ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಸೆಪ್ಟೆಂಬರ್ 27ರಂದು ಆರಂಭವಾಗಿತ್ತು. ಆದ್ರೆ ಪಂದ್ಯದ ಆರಂಭಕ್ಕೂ ಮುನ್ನವೇ ಬಾಂಗ್ಲಾ ಆಟಗಾರ ಶಕಿಬ್ ಅಲ್‌ ಹಸನ್‌ ನಿವೃತ್ತಿ ಘೋಷಿಸಿದ್ರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಹಸನ್, ಟಿ-20 ವಿಶ್ವಕಪ್‌ನಲ್ಲಿ ನನ್ನ ಕೊನೆಯ ಟಿ-20 ಪಂದ್ಯವನ್ನು ಆಡಿದ್ದೇನೆ. ಭಾರತ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯ ನನ್ನ ವೃತ್ತಿ ಜೀವನದ ಅಂತಿಮ ಟೆಸ್ಟ್ ಪಂದ್ಯವಾಗಲಿದೆ. 2026 ರ ವಿಶ್ವಕಪ್​ಗೂ ಮೊದಲು ತಂಡ ಹೊಸ ಆಟಗಾರರ ಶೋಧ ನಡೆಸಬೇಕಿದೆ. ಹೀಗಾಗಿ ನಾನು ತಂಡದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಈ ಬಗ್ಗೆ ನಾನು ಬಾಂಗ್ಲಾದೇಶ ಕ್ರಿಕೆಟ್ ಸಮಿತಿ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದಿದ್ದರು. ಟಿ-20 ಹಾಗೂ ಟೆಸ್ಟ್ ಮಾದರಿಯಿಂದ ಹಿಂದೆ ಸರಿದಿದ್ದ ಹಸನ್, ಯುಎಇ ಮತ್ತು ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ಪರವಾಗಿ ಏಕದಿನದಲ್ಲಿ ಆಡಲಿದ್ದಾರೆ. ಇದು ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೂ ಆಗಲಿದೆ. ಹೀಗಾಗಿ ಟೆಸ್ಟ್ ಮ್ಯಾಚ್​ನಿಂದ ನಿವೃತ್ತಿ ಘೋಷಿಸಿರೋ ಹಸನ್​ಗೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್​ನ ಉಡುಗೊರೆಯಾಗಿ ನೀಡಿದ್ರು. ಮ್ಯಾಚ್ ಮುಗಿದ ಬಳಿಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಹಿಡಿದು ಹಸನ್ ರತ್ತ ಹೆಜ್ಜೆ ಹಾಕಿದ್ರು. ಹಿಂದೆಯಿಂದ ತೆರಳಿ ಹಸನ್ ಕೈಗೆ ಬ್ಯಾಟ್ ಕೊಟ್ಟ ವಿರಾಟ್ ಅವ್ರ ಹೆಗಲ ಮೇಲೆ ಕೈ ಹಾಕಿ ನಗು ನಗುತ್ತಲೇ ಮಾತನಾಡಿದ್ರು. ಮುಂದಿನ ಫ್ಯೂಚರ್​ಗೆ ವಿಷಸ್ ತಿಳಿಸಿ ಅಲ್ಲಿಂದ ತೆರಳಿದ್ರು. ಈ ಸುಂದರ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿರಾಟ್ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ವಿರಾಟ್ ಕೊಹ್ಲಿ ಹೀಗೆ ಬ್ಯಾಟ್ ಗಿಫ್ಟ್ ಕೊಡೋದು ಇದು ಮೊದಲೇನೂ ಅಲ್ಲ. ಅದು ಐಪಿಎಲ್ ಪಂದ್ಯವೇ ಇರಲಿ ಅಥವಾ ಟೀಂ ಇಂಡಿಯಾ ಮ್ಯಾಚ್ ಆಗಿರಲಿ. ವಿರಾಟ್ ಬ್ಯಾಟ್ ಗೆ ಸಾಕಷ್ಟು ಕ್ರಿಕೆಟರ್ಸ್ ಡಿಮ್ಯಾಂಡ್ ಮಾಡ್ತಾರೆ. ಕಳೆದ ಐಪಿಎಲ್ ವೇಳೆ ಕೆಕೆಆರ್ ಆಟಗಾರ ರಿಂಕು ಸಿಂಗ್ ಬ್ಯಾಟ್​ಗಾಗಿ ವಿರಾಟ್ ಕೊಹ್ಲಿಗೆ ದುಂಬಾಲು ಬಿದ್ದಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಇತ್ತೀಚೆಗಷ್ಟೇ ಬಾಂಗ್ಲಾ ವಿರುದ್ಧದ ಟೆಸ್ಟ್ ಮ್ಯಾಚ್​ಗೂ ಮುನ್ನ ಆಕಾಶ್ ದೀಪ್​ ಕೂಡ ಕೊಹ್ಲಿಯಿಂದ ಬ್ಯಾಟ್ ಗಿಫ್ಟ್ ಆಗಿ ಪಡೆದಿದ್ರು. ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರಿಂದ ಉಡುಗೊರೆಯಾಗಿ ಪಡೆದಿದ್ದ ಬ್ಯಾಟ್‌ ಅನ್ನು ಎಂದಿಗೂ ಬಳಸುವುದಿಲ್ಲ ಎಂದಿದ್ದ ಬೌಲರ್‌ ಆಕಾಶ್‌ ದೀಪ್‌, ಅದೇ ಬ್ಯಾಟ್‌ ಬಳಕೆ ಮಾಡಿ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಬ್ಯಾಕ್‌ ಟು ಬ್ಯಾಕ್‌ ಸಿಕ್ಸರ್‌ ಸಿಡಿಸಿ ಸದ್ದು ಮಾಡಿದ್ರು. ಒಟ್ನಲ್ಲಿ ಕ್ರಿಕೆಟ್‌ ಲೋಕ ಕಂಡ ಅಪ್ರತಿಮ ಆಲ್‌ರೌಂಡರ್‌ಗಳ ಪೈಕಿ ಶಕಿಬ್ ಅಲ್‌ ಹಸನ್‌ ಕೂಡ ಒಬ್ಬರು. ಬಾಂಗ್ಲಾದೇಶ ತಂಡಕ್ಕೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅದೆಷ್ಟೋ ಪಂದ್ಯಗಳನ್ನು ಗೆದ್ದುಕೊಟ್ಟ ಹೆಗ್ಗಳಿಕೆ ಅವರದ್ದು. ದಶಕಕ್ಕೂ ಹೆಚ್ಚು ಸಮಯ ಅವರು ಬಾಂಗ್ಲಾ ತಂಡದ ಪರ ಸೇವೆ ಸಲ್ಲಿಸಿದ್ದು, ಇದೀಗ ಕೊಹ್ಲಿ ಬ್ಯಾಟ್​ನೊಂದಿಗೆ ತಮ್ಮ ಟೆಸ್ಟ್ ಕರಿಯರ್ ಮುಗಿಸಿ ತಮ್ಮ ಕೊನೇ ಪಂದ್ಯದಲ್ಲಿ ಸ್ಪೆಷಲ್ ಆಗಿಸಿಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *