ಕೋರ್ಟ್ನಲ್ಲಿ ಕಾಂತಾರಗೆ ಗೆಲುವು.. ‘ವರಾಹರೂಪಂ’ ಹಾಡಿನ ನಿಷೇಧ ತೆರವು!
ಕೇರಳ ಮ್ಯೂಸಿಕ್ ಬ್ಯಾಂಡ್ಗೆ ಮುಖಭಂಗ!
ವರಾಹರೂಪಂ ಹಾಡಿನ ವಿವಾದಕ್ಕೆ ಸಂಬಂಧಿಸಿ ಕಾಂತಾರ ಚಿತ್ರತಂಡಕ್ಕೆ ಕೇರಳ ಕೋರ್ಟ್ನಲ್ಲಿ ಗೆಲುವು ಸಿಕ್ಕಿದೆ. ವರಾಹರೂಪಂ ಹಾಡಿನಲ್ಲಿ ನವರಸಂ ಹಾಡಿನ ಮ್ಯೂಸಿಕ್ನ್ನ ಕದಿಯಲಾಗಿದೆ ಅಂತಾ ಆರೋಪಿಸಿ ಮಲಯಾಳಂನ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಮ್ ಬ್ರಿಡ್ಜ್ ಆರೋಪ ಮಾಡಿತ್ತು. ಕಾಪಿರೈಟ್ ಉಲ್ಲಂಘನೆಯಾಗಿದ್ದು, ವರಾಹರೂಪಂ ಹಾಡಿನ ನಿರ್ದೇಶಕ ಅಜನೀಶ್ ವಿರುದ್ಧ ಕ್ರಮಕೈಗೊಳ್ಳಬೇಕು ಅಂತಾ ಆಗ್ರಹಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ ತಾತ್ಕಾಲಿಕವಾಗಿ ವರಾಹರೂಪಂ ಹಾಡಿಗೆ ನಿಷೇಧ ಹೇರಲಾಗಿತ್ತು. ಆದರೆ ಇಂದು ಕೇರಳದ ಕೋಯಿಕ್ಕೋಡ್ ಜಿಲ್ಲಾ ನ್ಯಾಯಾಲಯ ಹಾಡಿನ ಮೇಲಿನ ನಿಷೇಧವನ್ನು ಹಿಂಪಡೆದಿದೆ. ಕಾಂತಾರ ಚಿತ್ರತಂಡದ ವಿರುದ್ಧದ ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ, ಆರೋಪವನ್ನ ಸಾಬೀತುಪಡಿಸುವಲ್ಲಿ ತೈಕ್ಕುಡಮ್ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ವಿಫಲವಾಗಿದೆ. ಹೀಗಾಗಿ ಕೋರ್ಟ್ ಕಾಂತಾರ ಚಿತ್ರತಂಡದ ಪರವಾಗಿ ಅಂತಿಮ ಆದೇಶ ನೀಡಿದೆ.
ಈ ನಡುವೆ, ಕಾಂತಾರ ಚಿತ್ರ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಕೂಡ ರಿಲೀಸ್ ಆಗಿದೆ. ಆದರೆ, ಚಿತ್ರದಲ್ಲಿ ವರಾಹರೂಪಂ ಹೊಸ ನಿರೂಪಣೆಯ ಹಾಡನ್ನು ಕಾಂತಾರ ಚಿತ್ರದಲ್ಲಿ ಅಳವಡಿಸಲಾಗಿದೆ. ಈ ಬಗ್ಗೆ ನೆಟ್ಟಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಒರಿಜಿನಲ್ ಹಾಡನ್ನೇ ಬಳಸುವಂತೆ ಒತ್ತಾಯಿಸುತ್ತಿದ್ದಾರೆ. ಈಗ ಕೋರ್ಟ್ನಿಂದಲೂ ವರಾಹರೂಪಂ ಒರಿಜಿನಲ್ ಹಾಡಿಗೆ ಗ್ರೀನ್ ಸಿಗ್ನಲ್ ದೊರಕಿರುವುದರಿಂದ ಮುಂದಿನ ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿರೋ ಕಾಂತಾರ ಚಿತ್ರದಲ್ಲಿ ಇದೇ ಹಾಡನ್ನು ಮರುಸ್ಥಾಪನೆಗೊಳಿಸಲಾಗುತ್ತಾ ಕಾದು ನೋಡಬೇಕಿದೆ.
ಸೆಪ್ಟೆಂಬರ್ 30ರಂದು ತೆರೆಕಂಡಿದ್ದ ಕಾಂತಾರ ಚಿತ್ರ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಭಾರಿ ಸದ್ದು ಮಾಡಿದೆ. ಬಾಕ್ಸಾಫೀಸ್ ಧೂಳಿಪಟ ಮಾಡಿರುವ ಕಾಂತಾರ ಚಿತ್ರ ಇದುವರೆಗೆ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಲವು ದಾಖಲೆಗಳನ್ನು ಧೂಳಿಪಟ ಮಾಡಿದೆ. ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ.