ಬೆಂಗಳೂರು ಬುಲ್ಸ್ ಗೆ ಪರ್ದೀಪ್ ಬಲ – ಟ್ರೋಫಿಗಾಗಿ ಪಣ ತೊಟ್ಟ ಡುಬ್ಕಿ ಕಿಂಗ್
ಕಬಡ್ಡಿ ವೀರ ನರ್ವಾಲ್ ಜರ್ನಿ ಹೇಗಿತ್ತು?

ಬೆಂಗಳೂರು ಬುಲ್ಸ್ ಗೆ ಪರ್ದೀಪ್ ಬಲ – ಟ್ರೋಫಿಗಾಗಿ ಪಣ ತೊಟ್ಟ ಡುಬ್ಕಿ ಕಿಂಗ್ಕಬಡ್ಡಿ ವೀರ ನರ್ವಾಲ್ ಜರ್ನಿ ಹೇಗಿತ್ತು?

ಐಪಿಎಲ್ ಆಕ್ಷನ್ ರೂಲ್ಸ್, ಟೀಂ ಇಂಡಿಯಾ ಮ್ಯಾಚಸ್ ಅಂತಾ ಒಂದಷ್ಟು ಮಂದಿ ಕ್ರಿಕೆಟ್ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಬಟ್ ಇನ್ನೊಂದಷ್ಟು ಜನ ನಮ್ಮ ದೇಶೀ ಕ್ರೀಡೆ ಕಬಡ್ಡಿ ಖದರ್ ನೋಡೋಕೆ ಕಾಯ್ತಿದ್ದಾರೆ. ಪ್ರೊ ಕಬಡ್ಡಿ ಲೀಗ್‌ ಹನ್ನೊಂದನೇ ಆವೃತ್ತಿ ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದ್ದು, ಅಕ್ಟೋಬರ್‌ 18ರಂದು ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ. ಅದ್ರಲ್ಲೂ ಉದ್ಘಾಟನಾ ಪಂದ್ಯದಲ್ಲೇ ತೆಲುಗು ಟೈಟನ್ಸ್‌ ಹಾಗೂ ಬೆಂಗಳೂರು ಬುಲ್ಸ್‌ ನಡುವೆ ರಣರೋಚಕ ಕಾಳಗ ನಡೆಯಲಿದೆ. ಬಟ್ ಈ ಬಾರಿ ಬೆಂಗಳೂರು ಬುಲ್ಸ್ ಧಮಾಕೇಧಾರ್ ಪರ್ಫಾಮೆನ್ಸ್ ನೀಡೋದು ಪಕ್ಕಾ. ಯಾಕಂದ್ರೆ ಡುಬ್ಕಿ ಕಿಂಗ್ ಪರ್ದೀಪ್ ನರ್ವಾಲ್ ಗೂಳಿಗಳ ಗುಂಪಿನಲ್ಲಿದ್ದಾರೆ. ಆ 10 ಸೀಸನ್​ಗಳ ಪ್ರೋ ಕಬಡ್ಡಿ ಇತಿಹಾಸದಲ್ಲಿ ಬೆಂಗಳೂರು ಬುಲ್ಸ್ ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. 6ನೇ ಸೀಸನ್​ನಲ್ಲಿ ಕಪ್ ಗೆದ್ದಿದ್ದ ಗೂಳಿಗಳು ಕಳೆದ ನಾಲ್ಕು ವರ್ಷಗಳಿಂದ ಫೈನಲ್​ಗೂ ಕೂಡ ಎಂಟ್ರಿ ಕೊಟ್ಟಿಲ್ಲ. ಹೀಗಾಗಿ ಈ ಸಲ ಫೈನಲ್​ಗೆ ಹೋಗ್ಲೇಬೇಕು. ಟ್ರೋಫಿ ಎತ್ತಿ ಹಿಡಿಯಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಹಗಲು ರಾತ್ರಿ ಎನ್ನದೆ ಬೆವರಿಳಿಸ್ತಿದ್ದಾರೆ. ಅದ್ರಲ್ಲೂ ಕಬಡ್ಡಿ ಹಿಸ್ಟರಿಯಲ್ಲೇ ಅತ್ಯಂತ ಯಶಸ್ವಿ ರೈಡರ್ ಎನಿಸಿಕೊಂಡಿರುವ ಬಲಿಷ್ಠ ಆಟಗಾರ ಪರ್ದೀಪ್ ನರ್ವಾಲ್ ತಂಡದ ಪರ ಆಡುತ್ತಿರೋದು ಅಭಿಮಾನಿಗಳ ಜೋಶ್ ಡಬಲ್ ಮಾಡಿದೆ. ಲೀಗ್ ಇತಿಹಾಸದಲ್ಲಿ 3 ತಂಡಗಳ ಪರ ಆಡಿರುವ ಡೇಂಜರಸ್‌ ರೈಡರ್‌, ಈ ಬಾರಿ ಬುಲ್ಸ್‌ ಪರ ತೊಡೆ ತಟ್ಟಲು ಕಸರತ್ತು ನಡೆಸ್ತಿದ್ದಾರೆ. ಬೆಂಗಳೂರು ತಂಡದ ಪರದೇ ಪ್ರೊ ಕಬಡ್ಡಿ ಲೀಗ್‌ಗೆ ಪದಾರ್ಪಣೆ ಮಾಡಿದ್ದ ನರ್ವಾಲ್ ಈಗ ಅದೇ ತಂಡದ ಪರ ಪಿಕೆಎಲ್ ಸೀಸನ್​ಗೆ 11ನಲ್ಲಿ ಆಡಲಿದ್ದಾರೆ. ಅಲ್ದೇ ಈ ಬಾರಿ ಬುಲ್ಸ್ ಪಡೆಯನ್ನ ಚಾಂಪಿಯನ್ ಪಟ್ಟಕ್ಕೇರಿಸಬೇಕು ಅನ್ನೋ ಪಣ ತೊಟ್ಟಿದ್ದಾರೆ.

ಕಬಡ್ಡಿ ಕಿಂಗ್ ನರ್ವಾಲ್! 

ಕಬಡ್ಡಿಯನ್ನ ನೋಡುವ, ಪ್ರೀತಿಸುವ ಪ್ರತಿಯೊಬ್ಬ ಅಭಿಮಾನಿಗೂ ಪರ್ದೀಪ್ ನರ್ವಾಲ್ ಬಗ್ಗೆ ಗೊತ್ತೇ ಇರುತ್ತೆ. ಎದುರಾಳಿ ಪಡೆಯಲ್ಲಿ ಅದೆಂಥದ್ದೇ ಡಿಫೆಂಡರ್ ಇದ್ರೂ ಕೂಡ ಚಂಗನೆ ಜಿಗಿದು ಪಾಯಿಂಟ್ಸ್ ತರುವ ತಾಕತ್ತು ನರ್ವಾಲ್​ಗೆ ಇದೆ. ಪ್ರೊ ಕಬಡ್ಡಿಯ 3ನೇ ಮತ್ತು 5ನೇ ಸೀಸನ್‌ನ ಅತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಬಾಚಿಕೊಂಡಿರುವ ನರ್ವಾಲ್‌, ಸತತ ಮೂರು ಬಾರಿ ಟ್ರೋಫಿ ಗೆದ್ದ ಪಾಟ್ನಾ ಪೈರೇಟ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಾಟ್ನಾ ತಂಡವು 3, 4 ಮತ್ತು 5ನೇ ಆವೃತ್ತಿಗಳಲ್ಲಿ ಹ್ಯಾಟ್ರಿಕ್‌ ಪ್ರಶಸ್ತಿ ಗೆದ್ದಿತ್ತು. ಪಾಟ್ನಾ ಗೆಲ್ಲುವಲ್ಲಿ ಪರ್ದೀಪ್‌ ಪಾತ್ರವೇ ಮುಖ್ಯವಾಗಿತ್ತು. ಪಿಕೆಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ರೈಡ್‌‌ ಪಾಯಿಂಟ್ ಅಂದ್ರೆ 1690 ಪಾಯಿಂಟ್ಸ್ ಗಳಿಸಿರುವ ದಾಖಲೆಯನ್ನ ಹೊಂದಿದ್ದಾರೆ ನರ್ವಾಲ್. ಲೀಗ್‌ನಲ್ಲಿ ಈವರೆಗೆ 3 ತಂಡಗಳ ಪರ ಆಡಿದ್ದಾರೆ. ಪಿಕೆಎಲ್‌ 2ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಪರ ಕಾಲಿಟ್ಟಿದ್ರು. ಬೆಂಗಳೂರು ಬುಲ್ಸ್‌ ಪರ ಆಡಿದ ಚೊಚ್ಚಲ ಅಭಿಯಾನದಲ್ಲಿ ಪರ್ದೀಪ್ ನರ್ವಾಲ್ 6 ಪಂದ್ಯಗಳಲ್ಲಿ ಒಟ್ಟು 9 ಅಂಕಗಳನ್ನು ಗಳಿಸಿದ್ದರು. ಬಳಿಕ ಪಿಕೆಎಲ್‌ 3ರಿಂದ 7ನೇ ಆವೃತ್ತಿಯವರೆಗೆ ಸತತ ಐದು ವರ್ಷಗಳ ಕಾಲ ಪಾಟ್ನಾ ಪರ ತೊಡೆ ತಟ್ಟಿದ್ದರು. ಪ್ರೊ ಕಬಡ್ಡಿ ಮೂರನೇ ಋತುವಿನಲ್ಲಿ ಮೊದಲ ಬಾರಿಗೆ ಪೈರೇಟ್ಸ್ ತಂಡದ ಭಾಗವಾಗಿದ್ದ ಪರ್ದೀಪ್, 16 ಪಂದ್ಯಗಳಲ್ಲಿ ಒಟ್ಟು 121 ಅಂಕಗಳನ್ನು ಗಳಿಸಿ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ರು.   ಆ ಬಳಿಕ 4ನೇ ಋತುವಿನಲ್ಲಿ ಪಾಟ್ನಾ ಪರವೇ 16 ಪಂದ್ಯಗಳಲ್ಲಿ ಬರೋಬ್ಬರಿ 133 ಅಂಕಗಳನ್ನು ಗಳಿಸಿದ್ರು. 5ನೇ ಸೀಸನ್​ನಲ್ಲಿ 26 ಪಂದ್ಯಗಳನ್ನ ಆಡಿ ಗರಿಷ್ಠ 369 ಅಂಕಗಳನ್ನು ಗಳಿಸಿದ್ರು. ಇದು ದಾಖಲೆಯ ಅಂಕ ಗಳಿಕೆ ಕೂಡ. ಪಿಕೆಎಲ್‌ 6ರಲ್ಲಿ 21 ಪಂದ್ಯಗಳಲ್ಲಿ ಆಡಿ ಒಟ್ಟು 233 ಅಂಕಗಳನ್ನು ಗಳಿಸಿದ್ರು. 7ನೇ ಆವೃತ್ತಿಯಲ್ಲಿ ಕೊನೆಯ ಬಾರಿ ಪಾಟ್ನಾ ಪೈರೇಟ್ಸ್ ಪರ ಆಡಿದ್ದ ನರ್ವಾಲ್‌, 22 ಪಂದ್ಯಗಳಲ್ಲಿ ಒಟ್ಟು 304 ಅಂಕಗಳನ್ನು ಗಳಿಸಿದ್ರು. ಆ ಬಳಿಕ 8, 9 ಮತ್ತು 10ನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ಬಳಗ ಸೇರಿಕೊಂಡ ಪರ್ದೀಪ್‌ ಮತ್ತೆ ಅಬ್ಬರಿಸತೊಡಗಿದರು. ಲೀಗ್‌ನ 8ನೇ ಸೀಸನ್‌ನಲ್ಲಿ ಯುಪಿ ಯೋಧಾಸ್ ತಂಡದ ಭಾಗವಾಗಿದ್ದ ಪರ್ದೀಪ್ ನರ್ವಾಲ್, 24 ಪಂದ್ಯಗಳಲ್ಲಿ ಒಟ್ಟು 188 ಅಂಕಗಳನ್ನು ಗಳಿಸಿದರು. 9ನೇ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು 22 ಪಂದ್ಯಗಳಲ್ಲಿ 220 ಅಂಕಗಳನ್ನು ಗಳಿಸಿದರು. ಕಳೆದ, ಅಂದರೆ 10ನೇ ಋತುವಿನಲ್ಲಿ ಯೋಧಾಸ್ ಪರ ಕೊನೆಯ ಬಾರಿಗೆ ಆಡಿದ್ದ ಪರ್ದೀಪ್ 17 ಪಂದ್ಯಗಳಲ್ಲಿ ಒಟ್ಟು 122 ಅಂಕಗಳನ್ನು ದಾಖಲಿಸಿದ್ದರು. ಹೊಸ ಆವೃತ್ತಿಗೂ ಮುನ್ನ ಯುಪಿ ಅವರನ್ನು ರಿಲೀಸ್‌ ಮಾಡಿತ್ತು. ಇದೀಗ ಬುಲ್ಸ್‌ ಬಳಗ ಸೇರಿರುವ ನರ್ವಾಲ್ ತಂಡಕ್ಕೆ ಎರಡನೇ ಟ್ರೋಫಿ ಗೆದ್ದುಕೊಡುವ ಉತ್ಸಾಹದಲ್ಲಿದ್ದಾರೆ.

ಚೊಚ್ಚಲ ಆವೃತ್ತಿಯಲ್ಲಿ ಬೆಂಗಳೂರು ಬಳಗದಲ್ಲೇ ಕಣಕ್ಕಿಳಿದು ಕಬಡ್ಡಿ ಕರಿಯರ್ ಆರಂಭಿಸಿದ್ದ ನರ್ವಾಲ್ ಈಗ ಅದೇ ತಂಡದಲ್ಲಿದ್ದಾರೆ. ನರ್ವಾಲ್ ಎಂಟ್ರಿಯಿಂದ ಬೆಂಗಳೂರು ಗೂಳಿಗಳ ಜೋಶ್ ಕೂಡ ಹೆಚ್ಚಾಗಿದೆ. ಬಿಸಿಲು, ಮಳೆ ಎನ್ನದೆ ದೇಹವನ್ನ ದಂಡಿಸ್ತಿರೋ ಆಟಗಾರರು ಎದುರಾಳಿಗಳನ್ನ ಬೇಟೆಯಾಡೋಕೆ ಸರ್ವಸನ್ನದ್ಧರಾಗಿದ್ದಾರೆ.

Shwetha M