ಗುಜರಾತ್ ಚುನಾವಣೆ – ಕ್ರಿಮಿನಲ್ ಕೇಸ್ ಎದುರಿಸುತ್ತಿರುವವರಿಂದಲೇ ಸ್ಪರ್ಧೆ!
ಅಖಾಡದಲ್ಲಿ ಕೋಟಿಪತಿಗಳದ್ದೇ ಕಾರುಬಾರು!

ಗುಜರಾತ್ ಚುನಾವಣೆ – ಕ್ರಿಮಿನಲ್ ಕೇಸ್ ಎದುರಿಸುತ್ತಿರುವವರಿಂದಲೇ ಸ್ಪರ್ಧೆ!ಅಖಾಡದಲ್ಲಿ ಕೋಟಿಪತಿಗಳದ್ದೇ ಕಾರುಬಾರು!

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಕ್ರಿಮಿನಲ್ ಹಿನ್ನಲೆಯುಳ್ಳ ಅಭ್ಯರ್ಥಿಗಳ ದೊಡ್ಡ ದಂಡೇ ಅಖಾಡಕ್ಕೆ ಇಳಿದಿದೆ.  ಈ ಚುನಾವಣೆಯ ಮೊದಲ ಹಂತದ 89 ಸ್ಥಾನಗಳಿಗೆ ಸ್ಪರ್ಧಿಸಿರುವ 788 ಅಭ್ಯರ್ಥಿಗಳ ಪೈಕಿ ಒಟ್ಟು 167 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಗಳು ದಾಖಲಾಗಿವೆ. ಈ ಪೈಕಿ 100 ಮಂದಿ ಕೊಲೆ ಮತ್ತು ಅತ್ಯಾಚಾರದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಟಿಸಿದ ವರದಿಯಲ್ಲಿ (ಎಡಿಆರ್) ಬಹಿರಂಗವಾಗಿದೆ.

ಇದನ್ನೂ ಓದಿ: ಅನುಮತಿಯಿಲ್ಲದೇ ಅಮಿತಾಭ್ ಬಚ್ಚನ್ ಫೋಟೋ, ಧ್ವನಿ ಬಳಸುವಂತಿಲ್ಲ- ಹೈಕೋರ್ಟ್ ತೀರ್ಪು

ಕ್ರಿಮಿನಲ್ ಕೇಸ್ ಗಳಲ್ಲಿ ಆಪ್ ನಂ.1

ಮೊದಲ ಹಂತದ ಮತದಾನದಲ್ಲಿ ಆಮ್ ಆದ್ಮಿ ಪಾರ್ಟಿಯ ಶೇಕಡಾ 21 ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿದ್ದು, ಅವರಲ್ಲಿ ಶೇಕಡಾ 13 ರಷ್ಟು ಮಂದಿ “ಗಂಭೀರ ಆರೋಪಗಳನ್ನು” ಎದುರಿಸುತ್ತಿದ್ದಾರೆ. ಎಂದು ಈ ವರದಿಯಲ್ಲಿ ಉಲ್ಲೇಖವಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 89 ಕ್ಷೇತ್ರಗಳ ಪೈಕಿ 88 ಸ್ಥಾನಗಳಲ್ಲಿ ಆಪ್ ಸ್ಪರ್ಧಿಸುತ್ತಿದೆ. ಕೊಲೆ, ಅತ್ಯಾಚಾರ, ಹಲ್ಲೆ, ಅಪಹರಣದಂತಹ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ 32 ಅಭ್ಯರ್ಥಿಗಳಿಗೆ ಆಪ್ ಟಿಕೆಟ್ ನೀಡಿದೆ ಎಂದು ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ.

ಇನ್ನು ಕಾಂಗ್ರೆಸ್ ಕ್ರಿಮಿನಲ್ ಪ್ರಕರಣ ಹೊಂದಿರುವ ಶೇಕಡಾ 35 ರಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಂತಹ ಅಭ್ಯರ್ಥಿಗಳಲ್ಲಿ ಶೇಕಡ 20 ಮಂದಿ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಒಟ್ಟು 89 ಅಭ್ಯರ್ಥಿಗಳ ಪೈಕಿ 31 ಮಂದಿ ವಿರುದ್ದ ಕ್ರಿಮಿನಲ್ ಕೇಸ್ ಗಳಿರುವ ವಿಚಾರ ವರದಿಯಿಂದ ಬಹಿರಂಗವಾಗಿದೆ.  ಅಲ್ಲದೇ ಬಿಜೆಪಿಯ 12 ಅಭ್ಯರ್ಥಿಗಳು, 61 ಮಂದಿ ಪಕ್ಷೇತರ ಅಭ್ಯರ್ಥಿಗಳ ವಿರುದ್ಧವೂ ಕ್ರಿಮಿನಲ್ ಕೇಸ್ ಗಳಿವೆ ಎಂದು ವರದಿಯಲ್ಲಿ ಉಲ್ಲೇಖವಿದೆ.

ಎಲ್ಲಾ 788 ಅಭ್ಯರ್ಥಿಗಳ ಅಫಿಡವಿಟ್ ಪರಿಶೀಲಿಸಿ ಈ ವರದಿಯನ್ನು ಸಿದ್ದಪಡಿಸಲಾಗಿದೆ. ಮೊದಲ ಹಂತದಲ್ಲಿ ಸ್ಪರ್ಧಿಸಿರುವ 788 ಅಭ್ಯರ್ಥಿಗಳಲ್ಲಿ 211 ಮಂದಿ ಕೋಟ್ಯಧಿಪತಿಗಳಿದ್ದಾರೆ. ಈ ಪೈಕಿ ಬಿಜೆಪಿಯ 79 ಮಂದಿ, ಕಾಂಗ್ರೆಸ್ ನ 65 ಮಂದಿ ಮತ್ತು ಆಮ್ ಆದ್ಮಿ ಪಕ್ಷದ 33 ಅಭ್ಯರ್ಥಿಗಳು ಕೋಟಿಪತಿಗಳಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

suddiyaana