ಏನಿದು ಮಹಿಷ ದಸರಾ ವಿವಾದ..? – ಮಹಿಷ ದಸರಾ ಇತಿಹಾಸವೇನು..?
ಪರ- ವಿರೋಧವೇನು..?, ಆಚರಣೆ ಹೇಗೆ?
ಅಂದ.. ಚೆಂದದೂರು ಮೈಸೂರು.. ರಾಜ್ಯದ ಸಾಂಸ್ಕೃತಿಕ ರಾಜಧಾನಿ.. ಪ್ರತಿ ವರ್ಷ ಮೈಸೂರಿನಲ್ಲಿ ನಡೆಯೋ ದಸರಾ ಆಚರಣೆ, ಜಂಬೂ ಸವಾರಿ ವಿಶ್ವ ಪ್ರಸಿದ್ಧ.. ಇದು ಎಲ್ಲರಿಗೂ ಗೊತ್ತಿರೋ ವಿಚಾರವೇ.. ಆದ್ರೆ, ಇತ್ತೀಚೆಗೆ ದಸರಾ ಹೊತ್ತಲ್ಲಿ ಹೊಸದೊಂದು ವಿವಾದ ತಲೆ ಎತ್ತುತ್ತಿದೆ. ಅದು ಮಹಿಷ ದಸರಾ.. ಮಹಿಷಾಸುರನ ದಸರಾ ಮಾಡಬೇಕು ಅನ್ನೋದು ಕೆಲವರ ವಾದ.. ಆದ್ರೆ, ಈ ವಾದಕ್ಕೆ ಪ್ರಬಲ ವಿರೋಧ ಕೂಡಾ ಇದೆ.. ಮಹಿಷಾಸುರನ ವಿಚಾರದಲ್ಲಿ ಇತಿಹಾಸ, ಪುರಾಣ ಸೇರಿದಂತೆ ಹಲವು ಚರ್ಚೆಗಳೂ ಬಂದು ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಮಹಿಷ ದಸರಾ ಇತಿಹಾಸ ಏನು? ಮಹಿಷ ದಸರಾ ಆಚರಣೆ ಹೇಗೆ? ಮಹಿಷ ದಸರಾ ಆಚರಣೆಗೆ ವಿರೋಧ ಏಕೆ? ಹಾಗೂ ಮಹಿಷ ದಸರಾ ಪರ ಇರುವವರ ವಾದವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗೋಬಿ, ಕಬಾಬ್ ಬಳಿಕ ಈಗ ಸ್ವೀಟ್ ಸರದಿ – ಗುಣಮಟ್ಟ ಪರೀಕ್ಷೆಗೆ ಮುಂದಾದ ಆಹಾರ ಸುರಕ್ಷತ ಇಲಾಖೆ!
ಮೈಸೂರಿನಲ್ಲಿ ದಸರಾ ಸಂಭ್ರಮ ಅಧಿಕೃತವಾಗಿ ಆರಂಭವಾಗಲು ಇನ್ನೂ ಒಂದು ವಾರ ಮಾತ್ರ ಬಾಕಿ ಇದೆ. ಈ ಹೊತ್ತಿನಲ್ಲೇ ಮಹಿಷ ದಸರಾ ವಿಚಾರವೂ ಮುನ್ನೆಲೆಗೆ ಬಂದಿದೆ. ಸೆಪ್ಟೆಂಬರ್ 29 ರಂದು ಮಹಿಷ ದಸರಾ ಮಾಡುತ್ತೇವೆ ಅಂತ ಮಹಿಷ ದಸರಾ ಆಚರಣ ಸಮಿತಿ ಹೇಳಿದೆ. ಚಾಮುಂಡಿ ಬೆಟ್ಟದಲ್ಲಿನ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಹಿಷ ದಸರಾ ಮಾಡುತ್ತೇವೆ. ಅಲ್ಲದೇ ಈ ಬಾರಿಯಿಂದ ಮಹಿಷಾ ದಸರಾ ಬದಲು ಮಹಿಷ ಮಂಡಲೋತ್ಸವ’ ಎಂದು ಹೊಸ ಹೆಸರು ಇಟ್ಟಿದ್ದೇವೆ ಅಂತ ಹೇಳಿದೆ. ಮಹಿಷ ದಸರಾ ವಿಚಾರ ಸಹಜವಾಗಿಯೇ ಬಿಜೆಪಿ ನಾಯಕರನ್ನು ಸಿಟ್ಟಿಗೇಳುವಂತೆ ಮಾಡಿದೆ. ಮೊದಲಿಂದಲೂ ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಈ ಬಾರಿಯೂ ಧ್ವನಿ ಜೋರು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಮಾಡಲು ಬಿಡಲ್ಲ. ಒಂದು ವೇಳೆ ಅವರು ಅಲ್ಲೇ ಆಚರಿಸಲು ಹೊರಟರೆ ನಾವು ಕೂಡ ಚಾಮುಂಡಿ ಚಲೋ ಮಾಡ್ತಿವಿ. ನಾವಾ ಅವರ ನೋಡೇಬಿಡೋಣಾ ಅಂತ ಸವಾಲು ಹಾಕಿದ್ದಾರೆ.
ಏನಿದು ಮಹಿಷ ದಸರಾ..? ಇತಿಹಾಸ ಏನು ಹೇಳುತ್ತೆ..?
ಮೈಸೂರು ದಸರಾ ಅಂದ್ರೆ ಪ್ರತಿಯೊಬ್ಬರಿಗೂ ಗೊತ್ತು.. ಇದಕ್ಕೆ ತನ್ನದೇ ಇತಿಹಾಸವಿದೆ.. ಆದ್ರೆ ಈ ಮಹಿಷ ದಸರಾ ಅಂದ್ರೆ ಏನು? ಈ ವಿಚಾರ ಇತ್ತೀಚೆಗಷ್ಟೇ ಯಾಕೆ ಸದ್ದು ಮಾಡ್ತಿದೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ.. ಆದ್ರೆ, ಮಹಿಷ ದಸರಾ ಆಯೋಜಕರ ಪ್ರಕಾರ ಕಳೆದ 50 ವರ್ಷಗಳಿಂದ ಮಹಿಷ ದಸರಾ ಆಚರಣೆ ಮಾಡ್ತಿದ್ದಾರಂತೆ. ತಮ್ಮ ಆಚರಣೆ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿತ್ತು ಅನ್ನೋದು ಮಹಿಷ ದಸರಾ ಆಯೋಜಕರ ವಾದ. ಮಹಿಷ ದಸರಾವನ್ನ ಮಂಟೇಲಿಂಗಯ್ಯ ಎಂಬುವರು ಮೊದಲು ಆರಂಭ ಮಾಡಿದ್ದರಂತೆ. ಇದಾದ ಬಳಿಕ 2014 ರಿಂದ 2018ರವರೆಗೆ ಚಾಮುಂಡಿ ಬೆಟ್ಟದಲ್ಲೇ ಮಹಿಷ ದಸರಾ ಆಚರಣೆ ಮಾಡಿದ್ರು. ಬಿಜೆಪಿ ಸರ್ಕಾರ ಬಂದ ನಂತ್ರ ಮಹಿಷ ದಸರಾಕ್ಕೆ ಬ್ರೇಕ್ ಬಿದ್ದಿತ್ತು.. ನಂತ್ರ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತ್ತೆ ಮಹಿಷ ದಸರಾ ಆಚರಣೆ ನಡೆದುಕೊಂಡು ಬರುತ್ತಿದ್ದು, ಬಿಜೆಪಿ ಮತ್ತೆ ಕೊತ ಕೊತ ಕುದಿಯುವಂತೆ ಮಾಡಿದೆ.
ಒಬ್ಬ ರಾಕ್ಷಸನನ್ನ ಪೂಜೆ ಮಾಡೋದು ಸರಿನಾ..? ತಪ್ಪಾ..?
ಮಹಿಷ ಅಂದ್ರೆ ಕೋಣದ ರೂಪದಲ್ಲಿದ್ದ ರಾಕ್ಷಸ.. ಈತ ದೇವತೆಗಳ ವಿರುದ್ಧ ಯುದ್ದ ಮಾಡಿದ್ನಂತೆ. ತನ್ನನ್ನು ಯಾವುದೇ ಮನುಷ್ಯ ಕೊಲ್ಲೋಕೆ ಸಾಧ್ಯವೇ ಇಲ್ಲದಂಥಾ ವರವನ್ನೂ ಪಡೆದಿದ್ದನಂತೆ. ಈತನ ಆರ್ಭಟಕ್ಕೆ ಇಂದ್ರ ಸೇರಿದಂತೆ ಎಲ್ಲ ದೇವತೆಗಳೂ ಸೋತು ಹೋದರಂತೆ. ನಂತರ ಈ ಎಲ್ಲಾ ದೇವತೆಗಳೂ ಪರ್ವತದಲ್ಲಿ ಒಂದಾದರು. ಎಲ್ಲ ದೈವಿಕ ಶಕ್ತಿಗಳೂ ಒಂದಾದ ಬಳಿಕ ದುರ್ಗಾ ದೇವಿಯ ಅವತಾರವಾಯ್ತಂತೆ. ದುರ್ಗೆಯು ಸಿಂಹದ ಮೇಲೆ ಸವಾರಿ ಮಾಡುತ್ತಾ ಬಂದು ತನ್ನ ತ್ರಿಷೂಲದಿಂದ ಮಹಿಷಾಸುರನನ್ನು ಕೊಂದಳು. ಹೀಗಾಗಿ ಆಕೆಗೆ ಮಹಿಷಾಸುರ ಮರ್ದಿನಿ ಅನ್ನೋ ಹೆಸರು ಬಂತು. ಆಕೆಯೇ ಚಾಮುಂಡಿ ದೇವಿ.. ಇಂದಿಗೂ ಚಾಮುಂಡಿ ಬೆಟ್ಟದಲ್ಲಿ ಆಕೆ ನೆಲೆಯಾಗಿದ್ದಾಳೆ ಅನ್ನೋದು ಪುರಾಣ ಕಥೆ.. ಮಾರ್ಕಂಡೇಯ ಪುರಾಣದಲ್ಲಿ ಈ ಕಥೆ ಇದೆ. ಈ ಕಥೆಯ ಪ್ರಕಾರ ಮಹಿಷಾಸುರ ಒಬ್ಬ ರಾಕ್ಷಸ.. ಇಂಥಾ ರಾಕ್ಷಸನನ್ನು ಪೂಜೆ ಮಾಡೋದು ಏಕೆ ಅನ್ನೋದು ಬಿಜೆಪಿ ಪ್ರಶ್ನೆ. ಮಹಿಷ ದಸರಾ ಆಚರಣೆ ಮಾಡೋದು ಚಾಮುಂಡಿ ತಾಯಿಗೆ ಮಾಡುವ ಅವಮಾನ ಎಂದು ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ ನಾಯಕರು ಕಿಡಿ ಕಾರುತ್ತಿದ್ದಾರೆ.
ಮಹಿಷ ದಸರಾ ಅನ್ನೋದು ಸಂಪ್ರದಾಯದ ಪ್ರಕಾರ 13 ದಿನ ನಡೆಯೋ ಕಾರ್ಯಕ್ರಮ ಅಲ್ಲ. ಕೇವಲ 1 ದಿನದ ಕಾರ್ಯಕ್ರಮ ಆಗಿದೆ. ಆದ್ರೆ ಇದು ಸರಿ ಅಲ್ಲ ಅನ್ನೋದು ಸಾಕಷ್ಟು ಜನರವಾದವಾಗಿದೆ. ಮಹಿಷ ದಸರಾದ ದಿನ ಚಾಮುಂಡಿ ಬೆಟ್ಟದಲ್ಲಿರೋ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಗುತ್ತೆ. ನಂತರ ಬೆಟ್ಟದ ಕೆಳಗೆ ಇರೋ ತಾವರೆ ಕಟ್ಟೆ ಬಳಿ ಟ್ಯಾಬ್ಲೋ ಮೆರವಣಿಗೆ ಆರಂಭ ಆಗುತ್ತೆ. ಜೊತೆಗೆ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನವೂ ಇರುತ್ತೆ. ಮೈಸೂರಿನ ಟೌನ್ ಹಾಲ್ ಸರ್ಕಲ್‌ನಲ್ಲಿ ಈ ಮೆರವಣಿಗೆ ಅಂತ್ಯವಾಗುತ್ತೆ. ಆದ್ರೆ ಈ ಬಾರಿ ಇಷ್ಟು ದೊಡ್ಡ ಮಟ್ಟದಲ್ಲಿ ಮಹಿಷ ದಸರಾ ನಡೆಸಲು ಅನುಮತಿ ಸಿಗೋದು ಡೌಟ್.. ಯಾಕಂದ್ರೆ ಈಗಾಗಲೇ ಮಹಿಷ ದಸರಾ ನಡೆಸದಂತೆ ಕಮಲ ನಾಯಕರು ಸಿಡಿದೆದ್ದಿದ್ದಾರೆ . ಮೈಸೂರು ದಸರಾ ಸಂಭ್ರಮದ ನಡುವೆ ಮಹಿಷ ದಸರಾದ ಕಿಚ್ಚು ಹೊತ್ತಿಕೊಂಡಿದೆ.. ಆದ್ರೆ ಇದು ಪರ ವಿರೋಧ ಚರ್ಚೆಗೆ ಕಾರಣವಾಗಿದ್ದು, ಈ ವಿಚಾರದಲ್ಲಿ ಸರ್ಕಾರದ ನಡೆ ಏನು ಅನ್ನೋದನ್ನ ಕಾದು ನೋಡಬೇಕಿದೆ.