WTC ಫೈನಲ್.. ಭಾರತಕ್ಕೆ ಸವಾಲೆಷ್ಟು? – ಟೀಂ ಇಂಡಿಯಾ ಮುಂದಿನ ಪಂದ್ಯಗಳೆಷ್ಟು?
9 ಟೆಸ್ಟ್ ಮ್ಯಾಚ್​ ಗಳಲ್ಲಿ ಎಷ್ಟು ಗೆಲ್ಲಬೇಕು?

WTC ಫೈನಲ್.. ಭಾರತಕ್ಕೆ ಸವಾಲೆಷ್ಟು? – ಟೀಂ ಇಂಡಿಯಾ ಮುಂದಿನ ಪಂದ್ಯಗಳೆಷ್ಟು?9 ಟೆಸ್ಟ್ ಮ್ಯಾಚ್​ ಗಳಲ್ಲಿ ಎಷ್ಟು ಗೆಲ್ಲಬೇಕು?

ಮೂರನೇ ಬಾರಿಗೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್​ಗೆ ಎಂಟ್ರಿ ಕೊಡೋಕೆ ಕಾಯ್ತಿರೋ ಟೀಂ ಇಂಡಿಯಾಗೆ ಮುಂದಿನ ಒಂದೊಂದು ಟೆಸ್ಟ್ ಪಂದ್ಯಗಳೂ ಕೂಡ ತುಂಬಾನೇ ಇಂಪಾರ್ಟೆಂಟ್. ಈಗಾಗ್ಲೇ ಭಾರತದಲ್ಲಿ ಬಾಂಗ್ಲಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಮ್ಯಾಚ್​ನ ಗೆದ್ದುಕೊಂಡು ಆಗಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಮೂರನೇ ಆವೃತ್ತಿಯ ಡಬ್ಲ್ಯೂಟಿಸಿ ಫೈನಲ್ ಪಂದ್ಯಕ್ಕೆ ಟಿಕೆಟ್ ಪಡೆಯಲು ಟೀಂ ಇಂಡಿಯಾ ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು? ರೋಹಿತ್ ಪಡೆ ಈಗ ಎಷ್ಟು ಪಂದ್ಯಗಳನ್ನು ಆಡಿದೆ? ಮುಂದೆ ಯಾವ್ಯಾವ ತಂಡಗಳ ವಿರುದ್ಧ ಸೆಣಸಾಡಲಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: KKR ಸಾರಥ್ಯದಿಂದ ಶ್ರೇಯಸ್ ಔಟ್? – ರೋಹಿತ್ & ಸೂರ್ಯ & ಕಮಿನ್ಸ್ ರೇಸ್

ಭಾರತವೇ ಸಾರ್ವಭೌಮ!

2025ರಲ್ಲಿ ಟೀಂ ಇಂಡಿಯಾ ಪಾಲಿಗೆ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ತುಂಬಾನೇ ಇಂಪಾರ್ಟೆಂಟ್. 2023-25ರ ಡಬ್ಲ್ಯೂಟಿಸಿ ಪಾಯಿಂಟ್‌ ಪಟ್ಟಿಯಲ್ಲಿ ಪ್ರಸ್ತುತ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಬಾಂಗ್ಲಾದೇಶ ವಿರುದ್ಧದ ಗೆಲುವಿನ ನಂತರ ಟೀಂ ಇಂಡಿಯಾ 86 ರೇಟಿಂಗ್ ಅಂಕಗಳನ್ನು ಗಳಿಸಿದ್ದು, ತಂಡದ ಗೆಲುವಿನ ಶೇಕಡಾವಾರು 71.67 ಆಗಿದೆ. ಮೂರನೇ ಆವೃತ್ತಿಯ ಡಬ್ಲ್ಯುಟಿಸಿಯಲ್ಲಿ ಟೀಂ ಇಂಡಿಯಾ ಇದುವರೆಗೆ ವೆಸ್ಟ್ ಇಂಡೀಸ್ ತಂಡವನ್ನು 1-0 ಅಂತರದಲ್ಲಿ ಹಾಗೂ ಇಂಗ್ಲೆಂಡ್ ತಂಡವನ್ನು 4-1 ಅಂತರದಿಂದ ಸೋಲಿಸಿದೆ. ಇದೀಗ ಟೀಂ ಇಂಡಿಯಾ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶವನ್ನು 1-0 ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ ಪ್ರಸ್ತುತ ಬಾಂಗ್ಲಾದೇಶ ವಿರುದ್ಧ 1, ನ್ಯೂಜಿಲೆಂಡ್ ವಿರುದ್ಧ 3 ಮತ್ತು ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಟೀಂ ಇಂಡಿಯಾ ಇದುವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ 1-1 ರಿಂದ ಸರಣಿಯನ್ನು ಡ್ರಾ ಮಾಡಿಕೊಂಡಿದೆ. ಉಳಿದಂತೆ ಭಾರತ ಯಾವ ಪಂದ್ಯವನ್ನು ಇದುವರೆಗೆ ಸೋತಿಲ್ಲ. ಐಸಿಸಿ ವರದಿಯ ಪ್ರಕಾರ ಟೀಂ ಇಂಡಿಯಾ ಡಬ್ಲ್ಯುಟಿಸಿ ಫೈನಲ್​ಗೆ ಅರ್ಹತೆ ಪಡೆಯಬೇಕಿಂದರೆ ಮುಂದಿನ 9 ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇದರಲ್ಲಿ ಭಾರತ ತನ್ನ ತವರು ನೆಲದಲ್ಲಿ ಬಾಂಗ್ಲಾದೇಶ ವಿರುದ್ಧ 1 ಮತ್ತು ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆ ಬಳಿಕ ತಂಡವು ವಿದೇಶಿ ನೆಲದಲ್ಲಿ ಅಂದರೆ ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳನ್ನು ಆಡಬೇಕಾಗಿದೆ. ಫೈನಲ್‌ಗೆ ತಲುಪಲು ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ-2 ರಲ್ಲಿರಬೇಕು. ಹೀಗಾಗಿ ಭಾರತ 5 ಪಂದ್ಯ ಗೆದ್ದು 1 ಪಂದ್ಯವನ್ನು ಡ್ರಾ ಮಾಡಿಕೊಂಡರೂ ಫೈನಲ್‌ಗೆ ಟಿಕೆಟ್ ಪಡೆಯಲಿದೆ. ಹಾಗೇ ಡಬ್ಲ್ಯುಟಿಸಿ ಫೈನಲ್​ಗೆ ಪ್ರಬಲ ಸ್ಪರ್ಧಿ ಎನಿಸಿಕೊಂಡಿರುವ ಆಸ್ಟ್ರೇಲಿಯಾ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಫೈನಲ್ ತಲುಪಲು ಆಸ್ಟ್ರೇಲಿಯಾ 4 ಪಂದ್ಯಗಳನ್ನು ಗೆಲ್ಲಬೇಕು ಅಥವಾ 3 ಪಂದ್ಯಗಳನ್ನು ಗೆದ್ದು 1 ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕು.

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್​ಶಿಫ್ ಫೈನಲ್ ಪ್ರವೇಶಿಸುವ ತಂಡಗಳು ಮುಂದಿನ ವರ್ಷ ಜೂನ್ 11 ರಿಂದ 15 ರವರೆಗೆ ಇಂಗ್ಲೆಂಡ್​ನ ಲಾರ್ಡ್ಸ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದೆ.  ಇದೆಲ್ಲದ್ರ ನಡುವೆ ರೇಸ್​ಗೆ ಶ್ರೀಲಂಕಾ ತಂಡ ಕೂಡ ಎಂಟ್ರಿ ಕೊಟ್ಟಿದೆ. ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಭೂತಪೂರ್ವ ಗೆಲುವು ದಾಖಲಿಸುವುದರೊಂದಿಗೆ ಶ್ರೀಲಂಕಾ ತಂಡವು WTC ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಗಳ ಫಲಿತಾಂಶ ಫೈನಲ್ ಪ್ರವೇಶಿಸುವ ತಂಡಗಳ ಭವಿಷ್ಯವನ್ನ ನಿರ್ಧಾರ ಮಾಡಲಿದೆ.

Shwetha M