ಸಚಿನ್​ರನ್ನೇ ಸೈಡ್ ಹೊಡೆದ ಕಿಂಗ್ – ಟ್ರೋಫಿ, ಸೆಂಚುರಿ, ಸರಣಿಶ್ರೇಷ್ಠ ರೆಕಾರ್ಡ್ಸ್
ಕೊಹ್ಲಿಯ 5 ದಾಖಲೆ ಬ್ರೇಕ್ ಆಗಲ್ವಾ?

ಸಚಿನ್​ರನ್ನೇ ಸೈಡ್ ಹೊಡೆದ ಕಿಂಗ್ – ಟ್ರೋಫಿ, ಸೆಂಚುರಿ, ಸರಣಿಶ್ರೇಷ್ಠ ರೆಕಾರ್ಡ್ಸ್ಕೊಹ್ಲಿಯ 5 ದಾಖಲೆ ಬ್ರೇಕ್ ಆಗಲ್ವಾ?

ಕ್ರಿಕೆಟ್ ಅಂದ್ರೇನೇ ಭಾರತೀಯರಿಗೆ ಹಬ್ಬ. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡ್ತಿದ್ದಾರೆ ಅಂದ್ರೆ ಅದ್ರ ಕ್ರೇಜ್ ಇನ್ನೊಂದು ಲೆವೆಲ್ ಜಾಸ್ತಿನೇ ಇರುತ್ತೆ. ಇನ್ನು ವಿರಾಟ್ ಕೊಹ್ಲಿ ಬಗ್ಗೆ ಹೇಳೋದೇ ಬೇಡ. ಮೈದಾನಕ್ಕೆ ಎಂಟ್ರಿ ಕೊಡ್ತಿದ್ದಾರೆ ಅಂದಾಗ್ಲೇ ಅಭಿಮಾನಿಗಳ ಜೋಶ್ ಡಬಲ್ ಆಗುತ್ತೆ. ಆದ್ರೆ ವಿಶ್ವಕ್ರಿಕೆಟ್​ನ ಕಿಂಗ್ ಆಗಿ ಮೆರೆಯುತ್ತಿರೋ ವಿರಾಟ್ ಕಳೆದ ಕೆಲ ಪಂದ್ಯಗಳಿಂದ ಡಲ್ ಆಗಿದ್ದಾರೆ. ಬ್ಯಾಟ್ ಬೀಸೋಕೆ ಒದ್ದಾಡ್ತಿದ್ದಾರೆ. ಆದ್ರೂ ಕೂಡ ಜನರಿಗೆ ವಿರಾಟ್ ಮೇಲಿನ ಅಭಿಮಾನ ಕಿಂಚಿತ್ತೂ ಕಮ್ಮಿ ಆಗಿಲ್ಲ. ಅದಕ್ಕೆ ಕಾರಣ ವಿರಾಟ್​ರ ಅಸಮಾನ್ಯ ಪ್ರದರ್ಶನ. ದಶಕದಿಂದಲೂ ಸ್ಟೇಡಿಯಂ ಸುಲ್ತಾನನಾಗಿ ಮೆರೆಯುತ್ತಿರೋ ವಿರಾಟ್ ದಾಖಲೆಗಳ ಶಿಖರವನ್ನೇರಿದ್ದಾರೆ. ವಿರಾಟ್ ಬರೆದಿರುವ ದಾಖಲೆಗಳನ್ನ ಬ್ರೇಕ್ ಮಾಡೋಕೆ ಕಷ್ಟ ಎನ್ನುವಂತಿದೆ. ಸಚಿನ್ ತೆಂಡೂಲ್ಕರ್​ರನ್ನೇ ಹಿಂದಿಕ್ಕಿರೋ ವಿರಾಟ್ ಬಗೆಗಿನ ರೋಚಕ ಸಂಗತಿ ಇಲ್ಲಿದೆ.

ಇದನ್ನೂ ಓದಿ: ಸ್ಟಾರ್ ಬೌಲರ್ ಬುಮ್ರಾಗಿಲ್ಲ ಕ್ಯಾಪ್ಟನ್ಸಿ – ಟೀಂ ಇಂಡಿಯಾದಲ್ಲಿ ಆಟಗಾರ ಅಷ್ಟೇನಾ?

ದಾಖಲೆಗಳ ವೀರ ಕೊಹ್ಲಿ!

ಭಾರತದ ಪರ ಅಂಡರ್ 19 ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈವರೆಗೂ 113 ಟೆಸ್ಟ್ ಪಂದ್ಯಗಳನ್ನ ಆಡಿದ್ದು 49.1 ಸರಾಸರಿಯಲ್ಲಿ 8848 ರನ್ ಗಳಿಸಿದ್ದಾರೆ. ಈ ವೇಳೆ 29 ಶತಕ ಮತ್ತು 30 ಅರ್ಧ ಶತಕಗಳು ಬಂದಿವೆ. ಏಕದಿನದಲ್ಲಿ ವಿರಾಟ್ 295 ಪಂದ್ಯಗಳಲ್ಲಿ 58.2 ಸರಾಸರಿಯಲ್ಲಿ 13906 ರನ್ ಗಳಿಸಿದ್ದಾರೆ. ಇಲ್ಲಿ 50 ಶತಕ ಮತ್ತು 72 ಅರ್ಧ ಶತಕಗಳನ್ನು ಗಳಿಸಿದ್ದಾರೆ. 125 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ 48.7ರ ಸರಾಸರಿಯಲ್ಲಿ 4188 ರನ್ ಗಳಿಸಿದ್ದಾರೆ. ಎಲ್ಲಾ ಮೂರು ODI ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು T20 ವಿಶ್ವಕಪ್ ಗೆದ್ದ ಕೆಲವೇ ಭಾರತೀಯ ಆಟಗಾರರಲ್ಲಿ ವಿರಾಟ್‌ ಕೂಡ ಒಬ್ಬರು. ವಿರಾಟ್ ಕೊಹ್ಲಿ ಏಕದಿನದಲ್ಲಿ 50 ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಮುರಿದಿದ್ದಾರೆ.  ಹಾಗೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ.  2023ರ ಏಕದಿನ ವಿಶ್ವಕಪ್​ನಲ್ಲಿ 11 ಪಂದ್ಯಗಳಲ್ಲಿ 765 ರನ್‌ ಗಳಿಸಿದ್ರು. ಈ ಮೂಲಕ  2003 ರ ವಿಶ್ವಕಪ್​ನ ಸಚಿನ್ ತೆಂಡೂಲ್ಕರ್ ಅವರ 673 ರನ್​ಗಳ ದಾಖಲೆಯನ್ನು ಹಿಂದಿಕ್ಕಿದರು. ಹಾಗೇ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 2016 ರ ಸೀಸನ್​ನಲ್ಲಿ 973 ರನ್ ಗಳಿಸಿದ್ದರು. ಇದು ಒಂದೇ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ. 2023 ರಲ್ಲಿ 890 ರನ್‌ಗಳೊಂದಿಗೆ ಈ ದಾಖಲೆಯನ್ನು ಮುರಿಯಲು  ಶುಭಮನ್ ಗಿಲ್ ಪ್ರಯತ್ನಿಸಿದರೂ ಕೂಡ ಸಾಧ್ಯವಾಗಲಿಲ್ಲ. ಇನ್ನು  ರನ್ ಚೇಸ್​ನಲ್ಲಿ ಬ್ಯಾಟಿಂಗ್ ಮಾಡುವಾಗ ಏಕದಿನದಲ್ಲಿ ಕೊಹ್ಲಿ  27 ಶತಕಗಳನ್ನು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್‌ 17 ಶತಕ ಗಳಿಸಿದ್ದಾರೆ.  ಅಲ್ದೇ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರ ವಿರಾಟ್. ಇದರಲ್ಲಿ ಏಕದಿನದಲ್ಲಿ 11, ಟೆಸ್ಟ್​ನಲ್ಲಿ 3 ಮತ್ತು ಟಿ20ಯಲ್ಲಿ 7 ಪ್ರಶಸ್ತಿಗಳು ಸೇರಿವೆ. 20 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ಸಚಿನ್ ಎರಡನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿಯವ್ರ ಇದೇ ಪ್ರದರ್ಶನದಿಂದ ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಐಪಿಎಲ್​ನಲ್ಲಂತೂ ವಿರಾಟ್ ಪಾಪ್ಯುಲಾರಿಟಿ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಅಲ್ದೇ ಐಪಿಎಲ್​ನಲ್ಲೂ ಸಾಕಷ್ಟು ದಾಖಲೆಗಳನ್ನ ಮಾಡಿದ್ದಾರೆ. ಆರಂಭದಿಂದಲೂ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಎಲ್ಲಾ ಆವೃತ್ತಿಯಲ್ಲಿ ಆಡಿದ ಏಕೈಕ ಆಟಗಾರ ಕೊಹ್ಲಿ ಮಾತ್ರ. ವಿಚಿತ್ರವೆಂದರೆ ರನ್ ಮಷಿನ್​ ವಿರಾಟ್ ಕೊಹ್ಲಿ ಮೊದಲ ಸೀಸನ್‌ನಿಂದ ಇಲ್ಲಿಯವರೆಗೂ ಒಮ್ಮೆಯೂ ಐಪಿಎಲ್ ಹರಾಜಿನಲ್ಲಿ ಸ್ಥಾನ ಪಡೆದಿರಲಿಲ್ಲ. ಹಾಗೇನಾದ್ರೂ ವಿರಾಟ್ ಹರಾಜಿಗೆ ಬಂದಿದ್ದೇ ಆಗಿದ್ರೆ ಕೋಟಿಗಳಿಗೆ ಲೆಕ್ಕವೇ ಇರ್ತಿರಲಿಲ್ವೇನೋ. ಸ್ಟಾರ್ ಆಟಗಾರನ ಖರೀದಿಗೆ ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದು ಜಿದ್ದಿಗೆ ಬಿದ್ದವ್ರಂತೆ ಬಿಡ್ ಮಾಡುತ್ತಿದ್ರು.

Shwetha M

Leave a Reply

Your email address will not be published. Required fields are marked *