ಜನಾಂಗೀಯ ಹಿಂಸಾಚಾರದಲ್ಲಿ ನಲುಗಿದ ಮಣಿಪುರ – ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ

ಜನಾಂಗೀಯ ಹಿಂಸಾಚಾರದಲ್ಲಿ ನಲುಗಿದ ಮಣಿಪುರ – ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸೆ ಮರುಕಳಿಸಿದೆ. ಕೋಮು ಗಲಭೆಯಿಂದಾಗಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ತೌಬಲ್ ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಿಂದ ಸರ್ಕಾರಕ್ಕೆ ಲಾಭ? – ದೇಗುಲದ ಜಿಎಸ್​ಟಿ ಮೊತ್ತ 400 ಕೋಟಿ ರೂ?

ಸೆಪ್ಟೆಂಬರ್ 6 ರಂದು ರಾಜ್ಯದ ಬಿಷ್ಣುಪುರ್ ಜಿಲ್ಲೆಯ ಮೊಯಿರಾಂಗ್‌ನಲ್ಲಿ ಆರ್‌ಪಿಜಿ ದಾಳಿ ನಡೆದಿದ್ದು, ಮಣಿಪುರದ ಮೊದಲ ಮುಖ್ಯಮಂತ್ರಿ ಮೈರೆಂಬಮ್ ಕೊಯಿರೆಂಗ್ ಸಿಂಗ್ ಅವರ ನಿವಾಸದಲ್ಲಿ ಪೂಜೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.

ಸೆಪ್ಟೆಂಬರ್ 7 ರಂದು ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಕುಕಿ ಹೋರಾಟಗಾರರು ನಡೆಸಿದ ದೀರ್ಘ ಶ್ರೇಣಿಯ ರಾಕೆಟ್‌ ದಾಳಿಗೆ ಐವರು ಹತ್ಯೆಯಾಗಿದ್ದರು.ಈ ಘಟನೆಯ ನಂತರ ರಾಜ್ಯಾದ್ಯಂತ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಈ ಬಂಡಾಯ ಹೋರಾಟಗಾರರು ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆಗೆ ನುಗ್ಗಿ ನಿದ್ದೆಯಲ್ಲೇ ಗುಂಡಿಟ್ಟು ಕೊಂದ ಬಳಿಕ ಪರಿಸ್ಥಿತಿ ಹದಗೆಟ್ಟಿತ್ತು.

ಹಿಂದಿನ ಆದೇಶದಲ್ಲಿ, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಆಯಾ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆ 5 ರಿಂದ 10 ರವರೆಗೆ ಕರ್ಫ್ಯೂ ಸಡಿಲಿಸುವುದಾಗಿ ಘೋಷಿಸಿದ್ದರು. ಆದಾಗ್ಯೂ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸಡಿಲಿಕೆ ಆದೇಶವನ್ನು ರದ್ದುಗೊಳಿಸಲಾಗಿದೆ ಮತ್ತು ಎರಡೂ ಜಿಲ್ಲೆಗಳಲ್ಲಿ ಕರ್ಫ್ಯೂ ಮರು ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಸ್ತು ತಿರುಗಲು ಮತ್ತು ವೈಮಾನಿಕ ಸಮೀಕ್ಷೆ ನಡೆಸಲು ಮಿಲಿಟರಿ ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿದ್ದು, ಕೂಂಬಿಂಗ್ ಕಾರ್ಯಾಚರಣೆಯೂ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಗುಪ್ತಚರ ವಿಭಾಗದ ಪೊಲೀಸ್ ಮಹಾನಿರೀಕ್ಷಕ ಕೆ ಕಬೀಬ್ ಹೇಳಿದ್ದಾರೆ.

ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈಟೈಸ್ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

Shwetha M

Leave a Reply

Your email address will not be published. Required fields are marked *