3 ವರ್ಷದಿಂದ ಟೆಸ್ಟ್ ಗೆದ್ದಿಲ್ಲ PAK – ಬಾಬರ್ ಔಟ್.. ಹೊಸ ಕ್ಯಾಪ್ಟನ್ ಫೇಲ್
ಭಾರತಕ್ಕೆ ಟಕ್ಕರ್ ಕೊಡುತ್ತಾ ಬಾಂಗ್ಲಾ?

3 ವರ್ಷದಿಂದ ಟೆಸ್ಟ್ ಗೆದ್ದಿಲ್ಲ PAK – ಬಾಬರ್ ಔಟ್.. ಹೊಸ ಕ್ಯಾಪ್ಟನ್ ಫೇಲ್ಭಾರತಕ್ಕೆ ಟಕ್ಕರ್ ಕೊಡುತ್ತಾ ಬಾಂಗ್ಲಾ?

ಮೊದಲ ಟೆಸ್ಟ್​ನಲ್ಲಿ 10 ವಿಕೆಟ್​ಗಳ ಭರ್ಜರಿ ಜಯ. ಎರಡನೇ ಪಂದ್ಯದಲ್ಲಿ 5 ವಿಕೆಟ್​ಗಳ ಗೆಲುವು. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ತಂಡ ಪಾಕಿಸ್ತಾನದ ಎದುರು ಟೆಸ್ಟ್ ಕ್ರಿಕೆಟ್​ನಲ್ಲಿ ಸರಣಿ ಗೆದ್ದು ಬೀಗಿದೆ. ಅದೂ ಕೂಡ ಪಾಕ್​ ನೆಲದಲ್ಲೇ ಬಗ್ಗು ಬಡಿದು ದಾಖಲೆ ನಿರ್ಮಿಸಿದೆ. ವಿಶ್ವಕ್ರಿಕೆಟ್​ನಲ್ಲಿ ಪಾಕಿಸ್ತಾನದ ಮಾನ ಹರಾಜಾಗಿದ್ದು, ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಹದಿನೈದು ದಿನಗಳ ಹಿಂದೆ ಬಾಂಗ್ಲಾದೇಶದಿಂದ ರಾವಲ್ಪಿಂಡಿಗೆ ಬಂದಿಳಿದಾಗ, ಬಾಂಗ್ಲಾದೇಶ ಈ ಸರಣಿ ಗೆಲ್ಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಮೊದಲ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಹುಲಿಗಳು, 10 ವಿಕೆಟ್‌ಗಳಿಂದ ಗೆದ್ದು ದಾಖಲೆ ನಿರ್ಮಿಸಿದ್ದರು. ಆ ಬಳಿಕ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ 6 ವಿಕೆಟ್‌ಗೆ 26 ರನ್ ಗಳಿಸಿದ್ದ ತಂಡವು, ಪಂದ್ಯ ಮಾತ್ರವಲ್ಲದೆ ಸರಣಿ ಗೆಲ್ಲುತ್ತದೆ ಎಂದು ಬಹುತೇಕ ಹೆಚ್ಚಿನವರು ನಿರೀಕ್ಷಿಸಿರಲಿಲ್ಲ. ಆದರೆ, ಬಾಂಗ್ಲಾದೇಶ ಅದನ್ನ ಸಾಧಿಸಿದೆ. ಪಾಕಿಸ್ತಾನವನ್ನು ಎರಡನೇ ಟೆಸ್ಟ್‌ನಲ್ಲಿ 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ 2-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಟಿ-20 ವಿಶ್ವಕಪ್​ನಲ್ಲಿ ಕ್ರಿಕೆಟ್ ಶಿಶುಗಳ ಎದುರು ಮಂಡಿಯೂರಿದ್ದ ಪಾಕ್ ಕ್ರಿಕೆಟ್ ಸ್ಥಿತಿ ಅದೆಂಥಾ ಹೀನಾಯ ಮಟ್ಟಕ್ಕೆ ತಲುಪಿದೆ..? ಆಟವನ್ನೆ ಮರೆತ್ರಾ ಪ್ಲೇಯರ್ಸ್..? ರ್ಯಾಂಕಿಂಗ್ ಪಟ್ಟಿಯಲ್ಲಿ ಕುಸಿತ ಕಂಡಿದ್ದೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ – ಜಾಮೀನಿಗೆ ಅರ್ಜಿ ಸಲ್ಲಿಸಲು ದರ್ಶನ್ ಸಿದ್ಧತೆ

ಪಾಕ್ ಕ್ರಿಕೆಟ್ ದಿವಾಳಿ!

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಬಾಂಗ್ಲಾದೇಶ ಮೊನ್ನೆಯ ಸರಣಿವರೆಗೂ ಪಾಕ್ ಎದುರು ಗೆದ್ದಿದ್ದೇ ಇಲ್ಲ. ಆದ್ರೆ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಬಾಂಗ್ಲಾ ಗೆದ್ದುಕೊಂಡಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಿದ್ದ ಬಾಂಗ್ಲಾದೇಶ ತಂಡ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿದರೆ, ಎರಡನೇ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಮತ್ತು ಬೌಲಿಂಗ್ ತೀರ ಕಳಪೆಯಾಗಿತ್ತು. ಪಾಕ್ ಪಡೆಯು ಕಳೆದ 3 ವರ್ಷಗಳಲ್ಲಿ ತವರಿನಲ್ಲಿ 10 ಟೆಸ್ಟ್ ಪಂದ್ಯಗಳನ್ನಾಡಿದ್ದು, ಎಲ್ಲಾ ಪಂದ್ಯಗಳಲ್ಲೂ ಸೋಲನುಭವಿಸಿದೆ. ಅಂದರೆ ಪಾಕಿಸ್ತಾನ್ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದು ಬರೋಬ್ಬರಿ 1,303 ದಿನಗಳೇ ಕಳೆದಿವೆ. ಈ ಸರಣಿ ಸೋಲಿನ ಕಾರಣದಿಂದಲೇ ಪಾಕ್ ಟೆಸ್ಟ್​ ತಂಡದ ನಾಯಕತ್ವದಿಂದ ಬಾಬರ್ ಆಝಂ ಅವರನ್ನು ಕೆಳಗಿಳಿಸಲಾಗಿತ್ತು. ಇದೀಗ ಶಾನ್ ಮಸೂದ್ ಮುಂದಾಳತ್ವದಲ್ಲೂ ಬಾಂಗ್ಲಾದೇಶ್ ವಿರುದ್ಧ ಸರಣಿ ಸೋತಿದೆ. ಈ ಸೋಲಿನೊಂದಿಗೆ ಪಾಕಿಸ್ತಾನ್ ತಂಡವು ಭಾರೀ ಮುಖಭಂಗಕ್ಕೆ ಒಳಗಾಗಿದ್ದು, ತಂಡದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆ ಐಸಿಸಿ, ನೂತನ ಟೆಸ್ಟ್ ರ್ಯಾಂಕಿಂಗ್ ಪ್ರಕಟಿಸಿದ್ದು, ಬಾಂಗ್ಲಾದೇಶ ವಿರುದ್ಧ ತವರಿನಲ್ಲೇ 2-0 ಅಂತರದ ಹೀನಾಯ ಸೋಲು ಅನುಭವಿಸಿರುವ ಕಾರಣ  8ನೇ ಸ್ಥಾನಕ್ಕೆ ಕುಸಿದಿದೆ. ಬಾಂಗ್ಲಾ ಟೆಸ್ಟ್ ಸರಣಿಗೂ ಮೊದಲು, ಪಾಕಿಸ್ತಾನ ತಂಡವು ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿತ್ತು. 1965ರ ನಂತರ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡ ಇಷ್ಟೊಂದು ಕೆಟ್ಟ ಸ್ಥಿತಿಯಲ್ಲಿರುವುದು ಇದೇ ಮೊದಲು.

ಟೆಸ್ಟ್ ಇತಿಹಾಸದಲ್ಲಿ ಬಾಂಗ್ಲಾದೇಶ್ ತಂಡವು ಈವರೆಗೆ 144 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 10 ಟೆಸ್ಟ್ ಸರಣಿಗಳನ್ನು ಮಾತ್ರ. ಆದ್ರೀಗ ಶಾನ್‌ ಮಸೂದ್‌ ಸಾರಥ್ಯದ ಪಾಕಿಸ್ತಾನ ಎದುರು ಟೆಸ್ಟ್‌ ಸರಣಿ ಗೆದ್ದು ಆತ್ಮವಿಶ್ವಾಸದ ಅಲೆಯಲ್ಲಿರುವ ಬಾಂಗ್ಲಾದೇಶ ತಂಡ ಇದೇ ತಿಂಗಳಲ್ಲಿ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಭಾರತಕ್ಕೆ ಬರಲಿದೆ. ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ ಭಾಗವಾಗಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ಕ್ಲೀನ್‌ ಸ್ವೀಪ್‌ ಮಾಡೋಕೆ ಕಾಯ್ತಿದೆ. ಆದರೆ, ಪಾಕ್‌ ಎದುರು ಗೆದ್ದ ಆತ್ಮವಿಶ್ವಾಸದಲ್ಲಿರುವ ಬಾಂಗ್ಲಾ ಪಡೆ ಪ್ರಬಲ ಪೈಪೋಟಿ ನೀಡುವುದು ನಿಶ್ಚಿತ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಈವರೆಗೆ 13 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ 11-0 ಅಂತರದ ಗೆಲುವಿನ ದಾಖಲೆ ಹೊಂದಿದೆ. ಇನ್ನು ಎರಡು ಪಂದ್ಯಗಳು ಡ್ರಾ ಕಂಡಿವೆ. ಹೀಗಾಗಿ ಭಾರತ ಮತ್ತು ಬಾಂಗ್ಲಾ ಸರಣಿ ಬಾರೀ ಕುತೂಹಲ ಮೂಡಿಸಿದೆ.

Shwetha M