ರಾಹುಲ್ ಭೇಟಿಯಾದ ಭಜರಂಗ್ ಪುನಿಯಾ, ವಿನೇಶ್ ಫೋಗಟ್! – ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರಾ ಕುಸ್ತಿಪಟುಗಳು?

ಕುಸ್ತಿ ಪಟುಗಳಾದ ವಿನೇಶ್ ಪೋಗಟ್ ಹಾಗೂ ಬಜರಂಗ್ ಪುನಿಯಾ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಹೊತ್ತಲ್ಲೇ ಕುಸ್ತಿಪಟುಗಳು ಕಾಂಗೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಂಚಿತವಾಗಿ ಇವರಿಬ್ಬರು ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದು ಅವರು ಕಾಂಗ್ರೆಸ್ ಟಿಕೆಟ್ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮತ್ತೊಂದು ಮದುವೆಗೆ ಮುರಳಿ ರೆಡಿ! – ಮಂಟಪಕ್ಕೆ ಬಂದ ಸಹನಾ
ವಿನೇಶ್ ಪೋಗಟ್ ಹಾಗೂ ಬಜರಂಗ್ ಪುನಿಯಾ ರಾಹುಲ್ ಗಾಂಧಿ ಭೇಟಿ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರ ನಿವಾಸಕ್ಕೆ ತೆರಳಿ, ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಆದರೆ, ಯಾವ ವಿಚಾರ ಕುರಿತು ಮಾತನಾಡಿದ್ದಾರೆ ಎಂಬುದರ ವಿವರ ತಿಳಿದುಬಂದಿಲ್ಲ. ಅವರು ತಮ್ಮ ಪ್ರಸ್ತುತ ಸ್ಥಾನಗಳಿಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಈ ಹಿಂದೆ, ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹಿಂದಿರುಗಿದ ನಂತರ, ವಿನೇಶ್ ಫೋಗಟ್ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಭೇಟಿಯಾಗಿದ್ದರು. ಅಂದಹಾಗೆ ಪಕ್ಷಕ್ಕೆ ಸೇರಲು ಬಯಸುವ ಯಾರನ್ನಾದರೂ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದಿದ್ದರು ಹೂಡಾ.
ಇನ್ನು ಹರ್ಯಾಣ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೇರುವ ಗುರಿ ಹೊಂದಿದೆ, ಆದರೆ ಕಾಂಗ್ರೆಸ್ ಆಡಳಿತ ಪಕ್ಷದಿಂದ ಅಧಿಕಾರವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ. ಶನಿವಾರದಂದು, ಭಾರತದ ಚುನಾವಣಾ ಆಯೋಗವು ಹರ್ಯಾಣ ವಿಧಾನಸಭಾ ಚುನಾವಣೆಯನ್ನು ಮರುನಿಗದಿಪಡಿಸಿತು. ಈ ಹಿಂದೆ ಅಕ್ಟೋಬರ್ 1 ರಂದು ನಿಗದಿಯಾಗಿದ್ದ ಚುನಾವಣೆಯನ್ನು ಚುನಾವಣಾ ಆಯೋಗ ಅಕ್ಟೋಬರ್ 5 ಕ್ಕೆ ಮುಂದೂಡಿತ್ತು.