ಸಚಿನ್, ದ್ರಾವಿಡ್ ಗಿಲ್ಲ T-20I ಲಕ್ – ಲೆಜೆಂಡ್ಸ್ ಆಡಿದ್ದು ಒಂದೇ ಚುಟುಕು ಸಮರ
ಟೆಸ್ಟ್, ಏಕದಿನದಂತೆ ಮೆರೆಯಲಿಲ್ಲ ಯಾಕೆ?

ಸಚಿನ್, ದ್ರಾವಿಡ್ ಗಿಲ್ಲ T-20I ಲಕ್ – ಲೆಜೆಂಡ್ಸ್ ಆಡಿದ್ದು ಒಂದೇ ಚುಟುಕು ಸಮರಟೆಸ್ಟ್, ಏಕದಿನದಂತೆ ಮೆರೆಯಲಿಲ್ಲ ಯಾಕೆ?

ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಟಿ-20 ಕ್ರಿಕೆಟ್ ಫಾರ್ಮೇಟ್ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿದೆ. ಗಂಟೆಗಟ್ಟಲೆ ಕೂತು ಒನ್ ಡೇ ಹಾಗೇ ಟೆಸ್ಟ್ ಮಾದರಿ ಕ್ರಿಕೆಟ್ ನೋಡೋಕೆ ಫ್ಯಾನ್ಸ್​ಗೆ ಇಂಟ್ರೆಸ್ಟ್ ಇಲ್ಲ. ಬದ್ಲಿಗೆ ಮೂರೂವರೆ ಗಂಟೆಯಲ್ಲಿ ಮುಗಿಯೂ ಚುಟುಕು ಸಮರ ಹಾಗೇ ಅದ್ರಲ್ಲಿನ ಹೊಡಿಬಡಿ ಆಟ ನೋಡೋದೇ ಮಜಾ. ವಿಶ್ವಕ್ರಿಕೆಟ್​ನ ಆಳುತ್ತಿರೋ ಟಿ20 ಮಾದರಿಯು ಕ್ರೀಡೆಯನ್ನ ಹಾಗೂ ಕ್ರಿಕೆಟಿಗರನ್ನು ಫೈನಾನ್ಶಿಯಲಿ ಸ್ಟ್ರಾಂಗ್ ಮಾಡ್ತಿದೆ. 2004ರಲ್ಲಿ ಮೊದಲ ಟಿ20 ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ 2004 ರಲ್ಲಿ ನಡೆದಿತ್ತು. ಆ ನಂತರ ಟಿ-20 ಫಾರ್ಮೇಟ್​​ನಲ್ಲಿ ನಡೆಯೋ ಲೀಗ್​ಗಳಿಗಂತೂ ಲೆಕ್ಕನೇ ಇಲ್ಲ. ಬಟ್ ಈ ಮಾದರಿಯ ಕ್ರಿಕೆಟ್ ಬಗ್ಗೆ ನಿಮ್ಗೆ ಗೊತ್ತಿಲ್ಲದೇ ಇರೋ ಅಚ್ಚರಿಯ ವಿಚಾರವೊಂದಿದೆ. ಟೀಂ ಇಂಡಿಯಾ ಸೇರಿದಂತೆ ವಿಶ್ವಕ್ರಿಕೆಟ್​​ನ ಲೆಜೆಂಜರಿ ಕ್ರಿಕೆಟರ್ಸ್ ಎನಿಸಿಕೊಂಡವರು, ಟೆಸ್ಟ್ ಮತ್ತು ODI ಸ್ವರೂಪಗಳಲ್ಲಿ ಇತಿಹಾಸ ಸೃಷ್ಟಿಸಿದವರ  ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ಅಥವಾ ಎರಡು T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.  ನಮ್ಮ ಭಾರತದಲ್ಲೂ ದಿಗ್ಗಜ ಆಟಗಾರರು ಎನಿಸಿಕೊಂಡವರೂ ಈ ಸಾಲಿಗೆ ಸೇರಿದ್ದಾರೆ.

ಇದನ್ನೂ ಓದಿ: ಭಾರತ U-19 ತಂಡಕ್ಕೆ ಸಮಿತ್ ದ್ರಾವಿಡ್ – ಆಸಿಸ್ ಸರಣಿಗೆ ನಾಲ್ವರು ಕನ್ನಡಿಗರಿಗೆ ಚಾನ್ಸ್

ಆಡಿದ್ದು ಒಂದೇ ಟಿ-20ಐ ಪಂದ್ಯ!

ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳೋ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾಡಿರೋ ದಾಖಲೆಗಳು ಅಷ್ಟಿಷ್ಟಲ್ಲ. ಟೆಸ್ಟ್ ಮತ್ತು ODI ಕ್ರಿಕೆಟ್ ಎರಡರಲ್ಲೂ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಲೆಜೆಂಡರಿ ಬ್ಯಾಟರ್​ 100 ಅಂತರರಾಷ್ಟ್ರೀಯ ಶತಕಗಳನ್ನು ಸಿಡಿಸಿದ ಏಕೈಕ ಬ್ಯಾಟ್ಸ್​ಮನ್​ ಆಗಿದ್ದಾರೆ. ಆದರ ಈ ದಂತಕಥೆ, ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಕೇವಲ ಒಂದು T20ಐ ಮಾತ್ರ ಆಡಿದ್ದಾರೆ. ಭಾರತದ ಮೊದಲ ಟಿ20 ಪಂದ್ಯ 2006 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿತ್ತು. ಇದು ಅವರ ಚೊಚ್ಚಲ ಹಾಗೂ ಕೊನೆಯ ಟಿ20 ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಸಚಿನ್ 10 ರನ್​ಗಳಿಸಿದ್ದರು. ಆ ಬಳಿಕ ಟಿ-20ಐ ಫಾರ್ಮೆಟ್ ಆಡಲೇ ಇಲ್ಲ. ಇನ್ನು ದಿ ವಾಲ್ ಅಂತಾ ಕರೆಸಿಕೊಳ್ಳೋ ರಾಹುಲ್ ದ್ರಾವಿಡ್​ ಕೂಡ ಇದೇ ಸಾಲಿಗೆ ಸೇರಿದ್ದಾರೆ. ಸಚಿನ್​ ನಂತರ ಭಾರತದ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ನಿಲ್ಲುವ ದ್ರಾವಿಡ್ ಕೇವಲ 1 ಟಿ20ಐ ಪಂದ್ಯವನ್ನಾಡಿದ್ದಾರೆ. 2011ರಲ್ಲಿ ಇಂಗ್ಲೆಂಡ್ ವಿರುದ್ಧ 21 ಎಸೆತಗಳಲ್ಲಿ 31 ರನ್​ಗಳಿಸಿದ್ದರು. ಇದು ಅವರ ಕೊನೆಯ ಟಿ20 ಪಂದ್ಯವಾಗಿತ್ತು. ವಿಶೇಷವೆಂದರೆ ಈ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸ್​ ಸಿಡಿಸಿ ಗಮನ ಸೆಳೆದಿದ್ದರು. ಹಾಗೇ ಪಾಕಿಸ್ತಾನದ ಮಾಜಿ ನಾಯಕ ಮತ್ತು 1992 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿರುವ ಇಂಜಮಾಮ್-ಉಲ್-ಹಕ್ ಈ ಪಟ್ಟಿಯಲ್ಲಿರುವ ಮತ್ತೊಬ್ಬ ಆಟಗಾರ. 2006 ರಲ್ಲಿ ಬ್ರಿಸ್ಟಲ್‌ನಲ್ಲಿ ನಡೆದ ತಮ್ಮ ಚೊಚ್ಚಲ T20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನವನ್ನು ಮುನ್ನಡೆಸಿದ್ದರು. ಇನ್ನು ಆಸ್ಟ್ರೇಲಿಯನ್  ಮಾಜಿ ವೇಗದ ಬೌಲರ್ ಜೇಸನ್ ಗಿಲ್ಲಿಸ್ಪಿ ಕೂಡ 2005 ರಲ್ಲಿ  ಇಗ್ಲೆಂಡ್ ವಿರುದ್ಧ ಒಂದೇ ಒಂದು ಪಂದ್ಯ ಆಡಿದ್ರು. ಇಂಗ್ಲೆಂಡ್ ತಂಡದ ಸ್ಪಿನ್ನರ್​ ಮಾಂಟಿ ಪನೇಸರ್ ಕೂಡ ಕೇವಲ 1 ಟಿ20ಐ ಪಂದ್ಯವನ್ನಾಡಿದ್ದಾರೆ. ಇಂಗ್ಲೆಂಡ್ ಕಂಡಂತಹ ಶ್ರೇಷ್ಠ ಸ್ಪಿನ್ನರ್ ಆಗಿರುವ ಅವರು 50 ಟೆಸ್ಟ್ ಪಂದ್ಯಗಳಲ್ಲಿ 167 ವಿಕೆಟ್ ಪಡೆದಿದ್ದಾರೆ. ಅವರು 2007ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಏಕೈಕ ಟಿ20 ಪಂದ್ಯವನ್ನಾಡಿ 2 ವಿಕೆಟ್ ಪಡೆದಿದ್ದರು. ಬಾಂಗ್ಲಾದೇಶದ ಪರ 100 ಟೆಸ್ಟ್ ವಿಕೆಟ್ ಪಡೆದ ಮೊದಲ ಬಾಂಗ್ಲಾದೇಶದ ಬೌಲರ್ ಆಗಿರುವ ಮೊಹಮ್ಮದ್ ರಫೀಕ್​ ಜಿಂಬಾಬ್ವೆ ವಿರುದ್ಧ ಏಕೈಕ ಟಿ20 ಪಂದ್ಯವನ್ನಾಡಿದ್ದರು.

ಸದ್ಯ ಟಿ20 ಕ್ರಿಕೆಟ್​ ಪ್ರಸ್ತುತ ಕ್ರಿಕೆಟ್​ ಲೋಕವನ್ನ ಆಳುತ್ತಿದೆ. ಅಂತಾರಾಷ್ಟ್ರೀಯ ಮಾತ್ರವಲ್ಲದೆ ದೇಶೀಯವಾಗಿಯೇ ಹಲವು ಲೀಗ್​ಗಳು ಜನಮನ್ನಣೆ ಪಡೆದಿವೆ. ಬಹುಶಃ ಇದೇ ಫಾರ್ಮೇಟ್ ಹಿಂದಿನಿಂದಲೇ ಇದ್ದಿದ್ರೆ ಭಾರತದ ಹಲವು ಕ್ರಿಕೆಟರ್ಸ್ ಇನ್ನಷ್ಟು ಜಗದ್ವಿಖ್ಯಾತಿ ಗಳಿಸುತ್ತಿದ್ರೋ ಏನೋ.

Shwetha M