ಸೆಂಚುರಿ ಸ್ಟಾರ್ ಅಭಿಷೇಕ್ ಗಿಲ್ಲ ಚಾನ್ಸ್ – ಗಿಲ್ & ಜೈಸ್ವಾಲ್ ಮುಂದೆ ಸೈಡ್ ಲೈನ್
ಪ್ರತಿಭೆ ಇದ್ರೂ BCCIಗೆ ಲೆಕ್ಕಕ್ಕಿಲ್ವಾ?

ಸೆಂಚುರಿ ಸ್ಟಾರ್ ಅಭಿಷೇಕ್ ಗಿಲ್ಲ ಚಾನ್ಸ್ – ಗಿಲ್ & ಜೈಸ್ವಾಲ್ ಮುಂದೆ ಸೈಡ್ ಲೈನ್ಪ್ರತಿಭೆ ಇದ್ರೂ BCCIಗೆ ಲೆಕ್ಕಕ್ಕಿಲ್ವಾ?

2024ರ ಐಪಿಎಲ್​ನಲ್ಲಿ ಬ್ಯಾಟರ್​ಗಳ ಆರ್ಭಟ ಹೇಗಿತ್ತು ಅನ್ನೋದನ್ನ ನೀವೆಲ್ಲಾ ನೋಡೇ ಇದ್ದೀರಾ. 200+ ಸ್ಕೋರ್ ಲೆಕ್ಕನೇ ಇರ್ಲಿಲ್ಲ. ಚೇಸಿಂಗ್ ಕೂಡ ಕಷ್ಟನೂ ಆಗ್ತಿರಲಿಲ್ಲ. ಬ್ಯಾಟರ್​ಗಳ ಸಿಡಿಲಬ್ಬರಕ್ಕೆ ಬೌಲರ್ಸ್ ಹಿಗ್ಗಾಮುಗ್ಗಾ ಚಚ್ಚಿಸಿಕೊಂಡಿದ್ರು. ಟಿ-20 ಫಾರ್ಮೇಟ್ ಮ್ಯಾಚ್ ಅಂದ್ರೆ ಹಿಂಗಿರಬೇಕಪ್ಪ ಅಂತಾ ಫ್ಯಾನ್ಸ್ ಕೂಡ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು. ಐಪಿಎಲ್​ನಲ್ಲಿ ಧಮಾಕೇಧಾರ್ ಪರ್ಫಾಮೆನ್ಸ್ ನೀಡಿದ್ದ ಪ್ಲೇಯರ್ಸ್ ಟೀಂ ಇಂಡಿಯಾದಲ್ಲೂ ಭರ್ಜರಿ ಪ್ರದರ್ಶನ ನೀಡೋ ಕನಸು ಕಂಡಿದ್ರು. ಆದ್ರೆ ಅವಕಾಶ ಕೊಟ್ಟೂ ಕೊಡದಂತೆ ಮಾಡ್ತಿರೋ ಬಿಸಿಸಿಐ ನಡೆಯಿಂದ ಅವ್ರ ಭವಿಷ್ಯವೇ ಅಡಕತ್ತರಿಯಲ್ಲಿ ಸಿಲುಕಿದೆ. ಈ ಪೈಕಿ ಫ್ಯೂಚರ್ ಸ್ಟಾರ್ ಅಭಿಷೇಕ್ ಶರ್ಮಾ ಕೂಡ ಒಬ್ರು. ಅಷ್ಟಕ್ಕೂ ಅಭಿಷೇಕ್ ಯಾಕೆ ಸೈಡ್​ಲೈನ್ ಆಗ್ತಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೈಯಿಲ್ಲದ ಬಿಲ್ಲುಗಾರ್ತಿ! – ಕಾಲಿಂದಲೇ ಚಿನ್ನಕ್ಕೆ ಗುರಿ!

ಟೀಂ ಇಂಡಿಯಾದಲ್ಲಿ ಸ್ಟಾರ್ ಪ್ಲೇಯರ್​ಗಳ ದಂಡು ಇರೋದು ನಿಮ್ಗೆಲ್ಲಾ ಗೊತ್ತೇ ಇದೆ. ಓಪನರ್ ಸ್ಲಾಟ್, 3, 4ನೇ ಕ್ರಮಾಂಕ, ಹಾಗೇ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್, ಫಿನಿಶರ್, ಆಲ್​ರೌಂಡರ್ ಹೀಗೆ ಎಲ್ಲಾ ವಿಭಾಗಗಳಲ್ಲೂ ಒಂದೊಂದು ಸ್ಲಾಟ್​ಗೆ ಮೂರ್ನಾಲ್ಕು ಆಟಗಾರರ ನಡುವೆ ರೇಸ್ ನಡೀತಿದೆ. ಅಂತಿಮವಾಗಿ ಯಾರನ್ನ ಕಣಕ್ಕಿಳಿಸಬೇಕು ಅನ್ನೋದೇ ಬಿಸಿಸಿಐ ಮತ್ತು ಮ್ಯಾನೇಜ್​ಮೆಂಟ್​ಗೆ ದೊಡ್ಡ ತಲೆ ನೋವಾಗಿದೆ. ಹೀಗಾಗಿ ಪ್ರತಿಭೆ ಇದ್ರೂ ಕೂಡ ಕೆಲವ್ರನ್ನ ಬೆಂಚ್​ಗೆ ಸೀಮಿತ ಮಾಡಲಾಗ್ತಿದೆ. ಈ ಬೆಂಚ್ ಕಾಯಿಸೋರ  ಪಟ್ಟಿಯಲ್ಲಿ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ಇದ್ದಾರೆ. ಟೀಂ ಇಂಡಿಯಾ ತನ್ನ ಮುಂದಿನ ಸರಣಿಯನ್ನು ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19 ರಿಂದ ಆಡಲಿದೆ. ಈ ಸರಣಿಯಲ್ಲಿ ಭಾರತ 2 ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ನಂತರ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ​, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಹಾಗೂ ಆಸ್ಟ್ರೇಲಿಯಾ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಆದ್ರೆ ಟಿ-20 ತಂಡಕ್ಕೆ ಅಭಿಷೇಕ್ ಶರ್ಮಾ ಆಯ್ಕೆಯಾಗೋದು ಡೌಟಿದೆ. ಯಾಕೆ ಅನ್ನೋದನ್ನೇ ಹೇಳ್ತೇನೆ ನೋಡಿ.

ಮಂಕಾದ ಅಭಿಷೇಕ್ ಶರ್ಮಾ! 

ಹಿಂದೆಂದಿಗಿಂತಲೂ ಟೀಂ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ. ಅನೇಕ ಯುವ ಆಟಗಾರರು ಐಪಿಎಲ್ ಮೂಲಕ ಗಮನ ಸೆಳೆಯುತ್ತಿದ್ರೂ ಕೂಡ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳೋದು ಸಾಮಾನ್ಯದ ಮಾತಲ್ಲ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಓಪನರ್ ಆಟಗಾರ ಅಭಿಷೇಕ್ ಶರ್ಮಾ ಈ ವರ್ಷದ ಐಪಿಎಲ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ರು. ಹೊಡಿಬಡಿ ಆಟದ ಮೂಲಕ ಬೌಲರ್​ಗಳ ಬೆವರಿಳಿಸಿದ್ರು. 16 ಪಂದ್ಯಗಳಲ್ಲ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ 36 ಫೋರ್, 42 ಸಿಕ್ಸ್​ ಸಮೇತ 484 ರನ್ ಕಲೆ ಹಾಕಿದ್ರು. ಅದೂ ಕೂಡ 204.22ರ ಸ್ಟ್ರೈಕ್​ರೇಟ್​​ನಲ್ಲಿ ಅನ್ನೋದು ವಿಶೇಷ. ಈ ಮೂಲಕ ಎಸ್​ಆರ್​ಹೆಚ್ ತಂಡ ಫಿನಾಲೆ ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಇದೇ ಪ್ರದರ್ಶನದ ಮೂಲಕ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರು. ಆ ಸರಣಿಯಲ್ಲೂ ಅಭಿಷೇಕ್ ಶರ್ಮಾ ಬಿರುಸಿನ ಆಟವಾಡಿ ಗಮನ ಸೆಳೆದಿದ್ದರು. ಪದಾರ್ಪಣೆ ಮಾಡಿದ ಎರಡನೇ ಪಂದ್ಯದಲ್ಲಿಯೇ ಶತಕ ಬಾರಿಸಿ ವಿಜೃಂಭಿಸಿದ್ದರು. ಆದ್ರೆ ಅಚ್ಚರಿ  ಅಂದ್ರೆ ಆನಂತರ ನಡೆದ ಶ್ರೀಲಂಕಾ ಪ್ರವಾಸಕ್ಕೆ ಅಭಿಷೇಕ್ ಶರ್ಮಾ ಆಯ್ಕೆಯಾಗಿರಲಿಲ್ಲ. ಅದಕ್ಕೆ ಕಾರಣ ಶುಭ್​ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್. ಟೀಂ ಇಂಡಿಯಾ ಗಿಲ್ ಮತ್ತು ಜೈಸ್ವಾಲ್ ಟಿ20 ರೂಪದಲ್ಲಿ ಪ್ರಥಮ ಆಯ್ಕೆಯ ಆರಂಭಿಕರಾಗಿದ್ದಾರೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಓಪನರ್ ಸ್ಲಾಟ್​​ನಲ್ಲಿ ಕಣಕ್ಕಿಳಿಯೋದು ಕಷ್ಟ ಇದೆ. 3ನೇ ಸ್ಥಾನಕ್ಕೆ ಋತುರಾಜ್ ಗಾಯಕ್ವಾಡ್ ಕೂಡ ರೇಸ್​​ನಲ್ಲಿ ಇರೋದ್ರಿಂದ ಅಭಿಷೇಕ್ ಶರ್ಮಾಗೆ ಅಷ್ಟು ಸುಲಭಕ್ಕೆ ಚಾನ್ಸ್ ಸಿಗಲ್ಲ. ಹೀಗಾಗಿ ಟೀಂ ಇಂಡಿಯಾದಲ್ಲಿ ಖಾಯಂ ಓಪನರ್ ಆಗಲು ಅಭಿಷೇಕ್ ಶರ್ಮಾ ಇನ್ನೂ ಕೆಲವು ದಿನ ಕಾಯಬೇಕಾಗಿದೆ. ಸದ್ಯ ದೇಶಿಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ, ಮುಂಬರುವ ಐಪಿಎಲ್‌ನಲ್ಲೂ ಮಿಂಚಿದರೆ, ಟೀಂ ಇಂಡಿಯಾದಲ್ಲಿ ಅಭಿಷೇಕ್ ಶರ್ಮಾ ಓಪನರ್ ಸ್ಥಾನ ಖಚಿತವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಅಭಿಷೇಕ್​ಗೆ ಚಾನ್ಸ್ ಸಿಗೋದು ಡೌಟಿದೆ.

2024ರ ಐಪಿಎಲ್ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಭಾರತ ಟಿ20 ತಂಡದಲ್ಲಿ ಚೊಚ್ಚಲ ಅವಕಾಶ ಪಡೆದಿದ್ದ ಅಭಿಷೇಕ್‌ ಶರ್ಮಾ ಮೊದಲನೇ ಪಂದ್ಯದಲ್ಲೇ ಡಕ್​ಔಟ್ ಆಗಿದ್ರು. ಬಟ್  ಎರಡನೇ ಪಂದ್ಯದಲ್ಲಿ  ಶತಕ ಸಿಡಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಅಷ್ಟಕ್ಕೂ ಅಭಿಷೇಕ್ ಶರ್ಮಾ ಪಳಗಿರೋದು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಗರಡಿಯಲ್ಲಿ. 2007ರ ಟಿ20 ವಿಶ್ವಕಪ್‌ ಮತ್ತು 2011ರ ಏಕದಿನ ವಿಶ್ವಕಪ್‌ ಈ ಟೂರ್ನಿಗಳಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದ ಯುವರಾಜ್‌ ಸಿಂಗ್ ಮಾರ್ಗದರ್ಶನದಲ್ಲೇ ಕ್ರಿಕೆಟ್​​ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಇಂತಹ ಪ್ರತಿಭಾವಂತ ಯುವ ಆಟಗಾರರನಿಗೆ ಹೆಚ್ಚೆಚ್ಚು ಚಾನ್ಸ್ ಸಿಗಲಿ ಅಂತಾ ಫ್ಯಾನ್ಸ್ ಕೂಡ ಕೇಳಿಕೊಳ್ತಿದ್ದಾರೆ.

Shwetha M