ಕೈಯಿಲ್ಲದ ಬಿಲ್ಲುಗಾರ್ತಿ! – ಕಾಲಿಂದಲೇ ಚಿನ್ನಕ್ಕೆ ಗುರಿ!
ಶೀತಲ್‌ ಬದುಕು ಬದಲಿಸಿದ ಬೆಂಗಳೂರು!

ಕೈಯಿಲ್ಲದ ಬಿಲ್ಲುಗಾರ್ತಿ! – ಕಾಲಿಂದಲೇ ಚಿನ್ನಕ್ಕೆ ಗುರಿ!ಶೀತಲ್‌ ಬದುಕು ಬದಲಿಸಿದ ಬೆಂಗಳೂರು!

ಕೈ, ಕಾಲು ಎಲ್ಲವೂ ಸರಿಯಿದ್ದು ಏನು ಸಾಧನೆ ಮಾಡ್ಲಿಕ್ಕಾಗಿಲ್ವಲ್ಲಾ ಅಂತಾ ಕೊರಗುವವರು ಅನೇಕರಿದ್ದಾರೆ. ಆದ್ರೆ ಈಕೆಗೆ ಕೈಗಳೇ ಇಲ್ಲ. ಹುಟ್ಟುವಾಗಲೇ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ಲು.. ಎಲ್ಲದಕ್ಕೂ ಬೇರೆಯವರಿಗೆ ಡಿಪೆಂಡ್ ಆಗೋ ಪರಿಸ್ಥಿತಿ ಅದು.. ಕೈಯಲ್ಲಿ ಮಾಡೋ ಕೆಲಸವನ್ನೆಲ್ಲಾ ಕಾಲಲ್ಲೇ ಮಾಡೋ ಅನಿರ್ವಾರ್ಯತೆ.. ಆದ್ರೀಗ ಈಕೆಯ ಸಾಧನೆಯನ್ನ ಇಡೀ ವಿಶ್ವವೇ ಕೊಂಡಾಡ್ತಿದೆ.. ಅತ್ಮಸ್ಥೈರ್ಯವೊಂದಿದ್ರೆ ಏನ್ ಬೇಕಾದ್ರೂ ಮಾಡ್ಬೋದು ಅಂತಾ ತೋರಿಸಿ ಕೊಟ್ಟಿದ್ದಾಳೆ. ಈಕೆ ಬೇರೆ ಯಾರು ಅಲ್ಲ ನಮ್ಮ ಭಾರತದ ಹೆಮ್ಮೆಯ ಕ್ರೀಡಾಪಟು ಶೀತಲ್ ದೇವಿ.. 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ ನ ಮೊದಲ ದಿನವೇ ಕಾಲಿನ ಮೂಲಕ ಬಿಲ್ಲುಗಾರಿಗೆ ಮಾಡಿ.. ದಾಖಲೆ ಬರೆದಿದ್ದಾರೆ.. ಅಷ್ಟಕ್ಕೂ ಶೀತಲ್ ದೇವಿ ಕೈಗಳಿಗೆ ಆಗಿದ್ದೇನು? ಸಣ್ಣ ವಯಸ್ಸಲ್ಲೇ ಆಕೆ ಎದುರಿಸಿದ ಸವಾಲುಗಳೇನು? ಇವೆಲ್ಲದ್ರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: BCCIನಲ್ಲಿ ಸ್ಟಾರ್ಸ್​​ಗೆ ರಾಜಾತಿಥ್ಯ – ₹7 ಕೋಟಿ ವೇತನ.. ಹೆಚ್ಚು ವಿಶ್ರಾಂತಿ

ಜಮ್ಮು ಕಾಶ್ಮೀರದ ಕ್ರಿಸ್ತ್ವಾರ್ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿ ಲಾಯಿಧರ್‌ ನವರು ಈ ಶೀತಲ್‌ ದೇವಿ…. 2007ರ ಜನವರಿ 10 ರಂದು ಹೆಣ್ಣು ಮಗು ಜನಿಸಿದಾಗ ಮನೆಗೆ ಮಹಾಲಕ್ಷ್ಮೀ ಬಂದ್ಲು ಅಂತಾ ಖುಷಿ ಪಡೋ ಹೊತ್ತಲ್ಲೇ ಆ ಕುಟುಂಬಕ್ಕೆ ಶಾಕ್  ಕಾದಿತ್ತು.. ಯಾಕಂದ್ರೆ ಹುಟ್ಟಿರೋ ಮಗು ವಿಚಿತ್ರ ಕಾಯಿಲೆಯಿಂದ ಬಳಲುತ್ತಿತ್ತು.  ‘ಫೋಕೊಮೆಲಿಯಾ ಎಂಬ ಕಾಯಿಲೆ ಅದು.. ಈ ಕಾಯಿಲೆ ಬಂದ್ರೆ ದೇಹದ ಪ್ರಮುಖ ಅಂಗಗಳು ಬೆಳೆಯುವುದೇ ಇಲ್ಲ. ಇದ್ರ ಪರಿಣಾಮ ಆಕೆಯ ಎರಡು ತೋಳುಗಳು ಬೆಳೆಯಲೇ ಇಲ್ಲ. ಇದ್ರಿಂದಾಗಿ ಶೀತಲ್ ದೇವಿ ಸಣ್ಣ ಸಣ್ಣ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬೇಕಾಯ್ತು.. ಕೈಗಳಿಂದ ಮಾಡ್ಬೇಕಾದ ಕೆಲಸವನ್ನೆಲ್ಲಾ ಕಾಲಲ್ಲೇ ಮಾಡ್ಬೇಕಾದ ಅನಿವಾರ್ಯತೆ. ಅಂತದ್ದೊಂದು ಸವಾಲಿನಲ್ಲೇ ಬೆಳೆದ ಶೀತಲ್‌ ದೇವಿ. ಇದೀಗ ಎರಡು ಕೈಗಳಿಲ್ಲದಿದ್ರೂ ಇಡೀ ವಿಶ್ವವೇ ಕೊಂಡಾಡುವಂತಹ ಸಾಧನೆ ಮಾಡಿದ್ದಾರೆ.

17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ ನ ಮೊದಲ ದಿನ ಬಿಲ್ಲುಗಾರಿಕೆಯಲ್ಲಿ ಶೀತಲ್ ದೇವಿ ದಾಖಲೆ ನಿರ್ಮಿಸಿದ್ದಾರೆ.. ಕಾಲಿನ ಮೂಲಕ ಬಿಲ್ಲುಗಾರಿಕೆ ನಡೆಸಿ ಶೀತಲ್ ದೇವಿ ಗುರುವಾರ ರ್ಯಾಂಕಿಂಗ್ ಸುತ್ತಿನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 17 ವರ್ಷದ ಶೀತಲ್ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ರ್ಯಾಂಕಿಂಗ್ ಸುತ್ತಿನಲ್ಲಿ 720ರ ಪೈಕಿ 703 ಅಂಕ ಗಳಿಸಿದರೆ, ಟರ್ಕಿಯ ಒಜ್ಜುರ್ ಗಿರ್ಡಿ ಕ್ಯೂರ್ 704 ಅಂಕ ಗಳಿಸಿದರು. ಇವರೆಡೂ ಪ್ಯಾರಾಲಿಂಪಿಕ್ಸ್ ಹಾಗೂ ವಿಶ್ವ ದಾಖಲೆ ಎನಿಸಿಕೊಂಡಿವೆ..

ಬಿಲ್ಲುಗಾರಿಕೆಯಲ್ಲಿ ಭಾಗವಿಸೋದು ಸುಲಭದ ಮಾತಲ್ಲ.. ಬಾಣವನ್ನು  ಫಿಕ್ಸ್ ಮಾಡಿ ದೃಷ್ಟಿ ಗುರಿಯ ಕಡೆಗೆ ಇರ್ಬೇಕು.. ಬಾಣ ಬಿಡೋವಾಗ ಕೈ ಒಂಚೂರು ಶೇಕ್ ಆದ್ರೂ ಗುರಿ ಮಿಸ್ ಆಗುತ್ತೆ. ಬಾಣ ಇನ್ನೆಲ್ಲೋ ಹೋಗಿರುತ್ತೆ.. ಆದ್ರೆ ಶೀತಲ್ ದೇವಿಗೆ ಇದು ನೀರು ಕುಡಿದಷ್ಟೇ ಈಸಿ.. ಗುರಿ ತಪ್ಪೋ ಮಾತೇ ಇಲ್ಲ.. ಶೀತಲ್ ದೇವಿ ತನ್ನ ಒಂದು ಕಾಲಿಂದ ಬಿಲ್ಲು ಹಿಡಿದು ಇನ್ನೊಂದು ಕಾಲಿನ ಬೆರಳುಗಳ ನಡುವೆ ಬಾಣವನ್ನು ಫಿಕ್ಸ್ ಮಾಡಿ ಗುರಿಯೆಡೆಗೆ ದೃಷ್ಟಿ ನೆಟ್ಟು ಬಾಣ ಬಿಟ್ಟರು ಎಂದರೆ ಅದು ನೇರವಾಗಿ ಗುರಿ ಮುಟ್ಟುತ್ತೆ.. ಇದನ್ನ ನೋಡುವುದೇ ಚೆಂದ.

ಶೀತಲ್ ದೇವಿ ಜರ್ನಿ ನಿಜಕ್ಕೂ ರೋಚಕ.. ಆಕೆಯ ತಂದೆ ಒಬ್ಬ ಸಣ್ಣ ಕೃಷಿಕ. ತಾಯಿ ಮೇಕೆಗಳನ್ನು ಸಾಕುತ್ತಿದ್ರು. ಮನೆಯಲ್ಲಿ ತೀವ್ರವಾದ ಬಡತನ.. ಇದ್ರ ಜೊತೆ ತನ್ನ ವಿಕಲತೆ.. ಇದ್ರಿಂದಾಗಿ ಶೀತಲ್ ದೇವಿ ಕುಸಿದು ಹೋಗಿದ್ದರು.. ಆದ್ರೆ ಮನೆಯಲ್ಲಿ ಬಡತನವಿದ್ದರೂ ತಂದೆ ತಾಯಿ ತಾವು ಹೆತ್ತ ಮಗುವಿನ ವಿಕಲತೆಯನ್ನೂ ಬದಿಗಿಟ್ಟು ಆಕೆಯಲ್ಲೇ ತಮ್ಮ ಭವಿಷ್ಯವನ್ನು ಹುಡುಕುತ್ತಾರೆ… ಆಕೆಯ ಮನಸ್ಸಿನಲ್ಲಿದ್ದ ಕೆಟ್ಟ ಆಲೋಚನೆಗಳಿಂದ ಹೊರ ಬರಲು ಸಹಾಯ ಮಾಡ್ತಾರೆ.. ಶೀತಲ್ ತಂಗಿ ಶಿವಾನಿ ಆಕೆಗೆ ಬೆಸ್ಟ್ ಫ್ರೆಂಡ್ ಆಗಿದ್ದಾಳೆ. ಮನೆಯ ಸಮಸ್ಯೆಗಳ ನಡುವೆ  ಶೀತಲ್ ಹತ್ತನೇ ತರಗತಿಯವರೆಗೆ ಓದುತ್ತಾರೆ. ಆಗ ಬೆಂಗಳೂರಿನ ಪ್ರೀತಿ ರೈ ಅವರು ಸ್ಥಾಪನೆ ಮಾಡಿದ BEING YOU ಎಂಬ NGO ಆಕೆಯ ನೆರವಿಗೆ ನಿಲ್ಲುತ್ತದೆ. ಆಕೆಗೆ ಬೇಕಾದ ತರಬೇತಿಗಳು ಮತ್ತು ಸಪೋರ್ಟ್ ಆ NGO ಮೂಲಕ ದೊರೆಯುತ್ತೆ. ಇಲ್ಲಿಂದಲೇ ಆಕೆಯ ಲೈಫ್ ಗೆ ಟರ್ನಿಂಗ್ ಪಾಯಿಂಟ್ ಸಿಗುತ್ತೆ..

ಹೌದು, ಶೀತಲ್ NGO ಗೆ ಸೇರಿದ ಬಳಿಕ ಒಬ್ರು ಕೋಚ್ ಪರಿಚಯ ಆಗ್ತಾರೆ.. ಅವರೇ ಕುಲದೇವ್ ವೆದ್ವಾನ್. ಅವರು ಆಕೆಯನ್ನು ಕರೆದುಕೊಂಡು ಬಂದು ವೈಷ್ಣೋದೇವಿ ದೇವಳದ ಆಡಳಿತಕ್ಕೆ ಒಳಪಟ್ಟ ಬಿಲ್ಲುಗಾರಿಕಾ ಆಕಾಡೆಮಿಗೆ ಸೇರಿಸುತ್ತಾರೆ. ಇಲ್ಲಿಗೆ ಒಂದು ಸೇರಿದ್ದೇ ಸೇರಿದ್ದು.. ಶೀತಲ್ ತನ್ನ ನ್ಯೂನ್ಯತೆ ಮರೆತೇ ಹೋಗುತ್ತೆ.. ಕಾಲಿನ ಮೂಲಕ ಬಿಲ್ಲುಗಾರಿಗೆ ಶುರುಮಾಡ್ತಾಳೆ.. ಬಳಿಕ ಯಾವುದೇ ನ್ಯೂನತೆ ಇಲ್ಲದ ಬಲಿಷ್ಠ ಬಿಲ್ಗಾರರ ಜೊತೆಗೆ ಸ್ಪರ್ಧೆಯನ್ನು ಎದುರಿಸ್ತಾಳೆ. ಅಲ್ಲಿ ಮ್ಯಾಟ್ ಸ್ಟುಟ್ಸಮನ್ ಎಂಬ ಆರ್ಚರಿ ಲೆಜೆಂಡ್ ಆಕೆಯ ಸೂಕ್ಷ್ಮ ತಪ್ಪುಗಳನ್ನು ತಿದ್ದುತ್ತಾ ಬಂದ್ರು.. ಇಲ್ಲಿಂದಲೇ ಆಕೆ ಉತ್ತಮ ಬಿಲ್ಲುಗಾರ್ತಿಯಾಗಿ ಹೊರ ಹೊಮ್ಮುತ್ತಾಳೆ. ಆಕೆಯ ಉತ್ಸಾಹವನ್ನು ಗಮನಿಸಿದ ಭಾರತೀಯ ಸೇನೆ ಆಕೆಯ ಶಿಕ್ಷಣದ ಮತ್ತು ತರಬೇತಿಯ ಖರ್ಚು ವೆಚ್ಚವನ್ನ ಭರಿಸೋದಾಗಿ ಹೇಳುತ್ತೆ. ಎಲ್ಲರ ಬೆಂಬಲ ಪಡೆದ ಶೀತಲ್ ದೇವಿ  2022ರ ಖೇಲೋ ಇಂಡಿಯಾ ಕೂಟದಲ್ಲಿ ಭಾಗವಹಿಸಿ ಬೆಳ್ಳಿಯ ಪದಕ ಗೆದ್ದರು. 2023 ರಲ್ಲಿ ಝೆಕ್ ಗಣರಾಜ್ಯದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ಯಾರಾ ಕೂಟದಲ್ಲಿ ಭಾಗವಹಿಸಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡರು. ಆ ಮೂಲಕ ಪ್ಯಾರಾ ಕೂಟದಲ್ಲಿ ಪದಕವನ್ನು ಗೆದ್ದ ಮೊದಲ ತೋಳಿಲ್ಲದ ಬಿಲ್ಗಾರ್ತಿ ಎಂಬ ವಿಶ್ವದಾಖಲೆ ಬರೆದರು.. ಪ್ರಪಂಚದಲ್ಲಿ ತೋಳು ಇಲ್ಲದ ಒಟ್ಟು ಆರು ಜನ ಬಿಲ್ಗಾರರು ಇದ್ದಾರೆ.. ಆ ಪಟ್ಟಿಯಲ್ಲಿ ಶೀತಲ್ ದೇವಿ ಒಬ್ಬರೇ ಮಹಿಳಾ ಬಿಲ್ಲುಗಾರ್ತಿಯಾಗಿದ್ದಾರೆ. ಇನ್ನು 2023 ರಲ್ಲಿ ಶೀತಲ್ ದೇವಿ ಪಾರಾ ಏಷಿಯನ್ ಗೇಮ್ಸ್  ನಲ್ಲಿಯೂ ಸ್ಪರ್ಧಿಸಿದ್ರು. ಬಿಲ್ಗಾರಿಕೆಯಲ್ಲಿ ಆಕೆ ಎರಡು ಚಿನ್ನ ಮತ್ತು ಒಂದು ಬೆಳ್ಳಿ  ಪಡೆದು ವಿಶ್ವದ ಗಮನ ಸೆಳೆದಿದ್ದಾರೆ.

ಇಷ್ಟೆಲ್ಲಾ ಸಾಧನೆ ಮಾಡಿದ ಶೀತಲ್ ದೇವಿಗೆ ಒಮ್ಮೆ ಕೃತಕ ಕೈಗಳನ್ನ ಜೋಡಿಸುವ ಪ್ರಯತ್ನ ಕೂಡ ಆಗುತ್ತೆ.. ಅದೂ ನಡೆದಿದ್ದು ನಮ್ಮ ಬೆಂಗಳೂರಿನಲ್ಲಿಯೇ.. 2021ರಲ್ಲಿ ಬೆಂಗಳೂರಿನ ಕ್ಲಿನಿಕ್ ಒಂದರಲ್ಲಿ ಆಕೆಗೆ ಕೃತಕ ಕೈ ಜೋಡಿಸುವ ಪ್ರಯತ್ನ ನಡೆದಿತ್ತು. ಆಗ ಬರಲಿರುವ ಕೈಗಳಿಗಾಗಿ ಕಾಯುತ್ತಿದ್ದ ಆಕೆಯ ಬಳಿ ಸರಳ ಪ್ರಶ್ನೆಯೊಂದನ್ನು ಕೇಳಲಾಗಿತ್ತು.. ಹೊಸ ಕೈಗಳು ಬರ್ತಾವಲ್ಲ. ಏನು ಮಾಡಬೇಕು ಅಂತ ಇದ್ದೀರಿ ಅಂತ.. ಅದಕ್ಕೆ ಶೀತಲ್‌ ಹೇಳಿದ್ದು.. ಏನೂ ಇಲ್ಲ, ಮೊದಲು ನಂಗೆ ಬಳೆ ತೊಟ್ಟುಕೊಳ್ಳಬೇಕು ಎಂಬ ಆಸೆ ಇದೆ ಎಂದು… ಆಕೆಯ ಮಾತುಗಳಿಗೆ ಅಲ್ಲಿದ್ದವರೆಲ್ಲಾ ಭಾವುಕರಾಗಿದ್ರು.. ಆದ್ರೆ ಆಕೆಗೆ ಕೈಜೋಡಿಸುವ ಪ್ರಯತ್ನ ವಿಫಲವಾಯ್ತು.. ಆದ್ರೂ ಕೂಡ ಆಕೆ ಧೃತಿಗೆಡಲಿಲ್ಲ.. ಬಂದ ಕಷ್ಟಗಳನ್ನೆಲ್ಲಾ ಸವಾಲಾಗಿ ತೆಗೆದುಕೊಂಡು ಮುನ್ನುಗ್ಗಿದ್ದಾರೆ.. ವಿಶ್ವವೇ ಮೆಚ್ಚುವಂತಹ ಸಾಧನೆ ಮಾಡಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಶೀತಲ್ ಅದ್ಭುತ ಸಾಧನೆ ಗುರುತಿಸಿ ಆಕೆಗೆ 2023ರ ಅರ್ಜುನ ಪ್ರಶಸ್ತಿ   ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.

Shwetha M