ಪಾಕ್​ಗೆ ಕಾಲಿಡಲ್ಲ ಟೀಂ ಇಂಡಿಯಾ – ಚಾಂಪಿಯನ್ಸ್ ಟ್ರೋಫಿ ಟೂರ್ನಿ ಎತ್ತಂಗಡಿ
ICC ಬಾಸ್ ಜಯ್ ಶಾ ಪ್ಲ್ಯಾನ್ ಏನು?

ಪಾಕ್​ಗೆ ಕಾಲಿಡಲ್ಲ ಟೀಂ ಇಂಡಿಯಾ – ಚಾಂಪಿಯನ್ಸ್ ಟ್ರೋಫಿ ಟೂರ್ನಿ ಎತ್ತಂಗಡಿICC ಬಾಸ್ ಜಯ್ ಶಾ ಪ್ಲ್ಯಾನ್ ಏನು?

ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪ್ರಾಬಲ್ಯ ಮತ್ತೊಂದು ಮಟ್ಟಕ್ಕೆ ಏರಿಕೆಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಯ್ ಶಾಗೆ ಇಡೀ ಕ್ರಿಕೆಟ್ ಜಗತ್ತೇ ಅಭಿನಂದನೆ ತಿಳಿಸ್ತಿದೆ. ಆದ್ರೆ ಅಮಿತ್ ಶಾ ಪುತ್ರನಿಗೆ ಗದ್ದುಗೆ ಸಿಕ್ಕಿರೋದಕ್ಕೆ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಎತ್ತಂಗಡಿಯಾಗುವ ಭೀತಿ ಕಾಡ್ತಿದೆ. ಹಾಗಾದ್ರೆ ಪಾಕ್​ಗೆ ಕಾಲಿಡಲು ಶತಾಯ ಗತಾಯ ಒಪ್ಪದ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನೇ ಶಿಫ್ಟ್ ಮಾಡುತ್ತಾ? ಭಾರತದ ಮುಂದೆ ಪಾಕ್​ಗೆ ಮತ್ತೊಮ್ಮೆ ಮುಖಭಂಗ ಫಿಕ್ಸಾ? ಜಯ್ ಶಾ ಹೆಣೆದಿರೋ ತಂತ್ರ ಎಂಥಾದ್ದು? ಈ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮದುವೆ ದಿನ ಮದುಮಗ ಲಾಕ್ – ತಾಂಡವ್ ಇಲ್ಲದೆ ಶ್ರೇಷ್ಠಾ ಮದುವೆ

ಐಸಿಸಿ ಟಿ-20 ವಿಶ್ವಕಪ್ ಗೆದ್ದಿರೋ ಟೀಂ ಇಂಡಿಯಾದ ನೆಕ್ಸ್ಟ್​​ ಟಾರ್ಗೆಟ್ ಇರೋದೇ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮೇಲೆ. ಈಗಾಗ್ಲೇ ಈ ಟೂರ್ನಿಯಲ್ಲಿ ಪಾಕಿಸ್ತಾನದಲ್ಲಿ ನಡೆಸೋಕೆ ಐಸಿಸಿ ಒಪ್ಪಿಗೆ ನೀಡಿದ್ದು ಅದ್ರಂತೆ ಕರಡು ವೇಳಾಪಟ್ಟಿಯೂ ಔಟ್ ಆಗಿದೆ. ಫೆಬ್ರವರಿ 19 ರಿಂದ ಪಂದ್ಯಾವಳಿ ಶುರುವಾಗಲಿದೆ. ಇನ್ನು ಮಾರ್ಚ್ 1 ರಂದು 11ನೇ ಪಂದ್ಯ ನಡೆಯಲಿದ್ದು, ಇಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿವೆ. ಹಾಗೆಯೇ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಸೋ ಇದಿಷ್ಟು ಟೂರ್ನಿಯ ಹೈಲೇಟ್ಸ್. ಬಟ್ ಈಗ ಇರೋ ಪ್ರಶ್ನೆ ಅಂದ್ರೆ ನಿಜಕ್ಕೂ ಪಾಕಿಸ್ತಾನದಲ್ಲೇ ಟೂರ್ನಿ ನಡೆಯುತ್ತಾ ಅನ್ನೋದು. ಯಾಕಂದ್ರೆ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್​ನ​ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗಿದ್ದು, ಈ ಆಯ್ಕೆಯೇ ಈಗ ಪಾಕಿಸ್ತಾನ್ ಬೋರ್ಡ್​ನ ಚಿಂತೆ ಹೆಚ್ಚಿಸಿದೆ. ಅದಕ್ಕೆ ಕಾರಣ ಏನು ಅನ್ನೋದನ್ನೇ ಹೇಳ್ತೇನೆ ನೋಡಿ.

ಪಾಕ್ ಗೆ ಶಾಕ್! 

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಕೈಯಲ್ಲಿದೆ. ಎಲ್ಲಾ ಪಂದ್ಯಗಳನ್ನೂ ನಮ್ಮ ನೆಲದಲ್ಲೇ ನಡೆಸೋದಾಗಿ ಪಿಸಿಬಿ ವೇಳಾಪಟ್ಟಿ ರಿಲೀಸ್ ಮಾಡಿದೆ. ಆದ್ರೆ 2008ರ ಬಳಿಕ ಪಾಕ್​ಗೆ ಕಾಲಿಡದ ಟೀಂ ಇಂಡಿಯಾ ಈ ಸಲ ಟೂರ್ನಿಗಾಗಿ ಪಾಕಿಸ್ತಾನಕ್ಕೆ ಹೋಗ್ಬೇಕೋ ಬೇಡ್ವೋ ಅನ್ನೋ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ ಭದ್ರತೆಯ ಕಾರಣ ನೀಡಿ ಭಾರತ ತಂಡವು ಹಿಂದೆ ಸರಿಯುವ ಸಾಧ್ಯತೆಯಿದೆ. ಆದ್ರೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಬೇಕಿದ್ದರೆ ಐಸಿಸಿ ಮುಂದೆ ನಿರ್ದಿಷ್ಟ ಕಾರಣಗಳನ್ನು ನೀಡ್ಬೇಕು. ಕಹಾನಿ ಮೇ ಟ್ವಿಸ್ಟ್ ಅಂದ್ರೆ ಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಜಯ್ ಶಾ ಬಂದು ಕೂತಿದ್ದಾರೆ. ಇದರಿಂದ ಬಿಸಿಸಿಐ ಹಾದಿ ಮತ್ತಷ್ಟು ಸುಗಮವಾಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಹಕ್ಕು ಕೈತಪ್ಪುವ ಭೀತಿ ಪಾಕ್ ಕ್ರಿಕೆಟ್ ಬೋರ್ಡ್​ಗೆ ಎದುರಾಗಿದೆ. ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದರೆ ಸುರಕ್ಷತೆಯ ದೃಷ್ಟಿಯಿಂದ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂಬ ವಾದವನ್ನು ಬಿಸಿಸಿಐ ಮುಂದಿಡಬಹುದು. ಇದಕ್ಕೆ ಪರ್ಯಾಯಾ ಮಾರ್ಗಗಳನ್ನು ಕಂಡುಕೊಳ್ಳಲು ಐಸಿಸಿ ಮುಂದಾಗಲಿದೆ. ಇಲ್ಲಿ ಐಸಿಸಿ ಭಾರತಕ್ಕೆ ಹೈಬ್ರಿಡ್ ಮಾದರಿಯ ಆಯ್ಕೆ ನೀಡುವ ಸಾಧ್ಯತೆಯಿದೆ. ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆದರೆ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿದೆ. ಆದರೆ ಭಾರತದ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಇಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇ ನಲ್ಲಿ ಆಯೋಜನೆಗೊಳ್ಳಬಹುದು. ಭಾರತವು ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಮನವಿ ಮಾಡಿದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಕೂಡ ಒಪ್ಪಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಇಡೀ ಟೂರ್ನಿಯು ಕೈ ತಪ್ಪುವ ಸಾಧ್ಯತೆಯಿದೆ. ಹೀಗಾಗಿ ಬಿಸಿಸಿಐ ಮನವಿಗೆ ಪಿಸಿಬಿ ಮಣಿಯಲೇಬೇಕಾದ ಒತ್ತಡದಲ್ಲಿದೆ. ಹಾಗೇನಾದ್ರೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಮುಂದಾಗದಿದ್ದರೆ ಟೂರ್ನಿಯನ್ನೇ ಸ್ಥಳಾಂತರಿಸಬಹುದು. ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದು ಐಸಿಸಿ ಚೇರ್ಮನ್ ಕಮಿಟಿ. ಇಂಥ ಐಸಿಸಿ ಅಧ್ಯಕ್ಷ ಪಟ್ಟಕ್ಕೆ ಜಯ್ ಶಾ ಬಂದು ಕೂತಿರೋದೇ ಪಾಕ್ ನಿದ್ದೆಗೆಡಿಸಿದೆ.

2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣೆಸಲಿವೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಕಾದಾಟ ನಡೆಸಲಿವೆ. ಎಂಟು ತಂಡಗಳ ಪಂದ್ಯಗಳನ್ನು ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ಆಯೋಜಿಸಲಾಗುತ್ತದೆ. ಭಾರತದ ಪಂದ್ಯಗಳನ್ನ ಲಾಹೋರ್​ನಲ್ಲಿ ನಡೆಸೋದಾಗಿ ಪಾಕಿಸ್ತಾನ ಹೇಳಿದೆ. ಆದ್ರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸೇರ್ಪಡೆ ದೃಢಪಟ್ಟಿದ್ದರೂ, ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡುವ ಬಗ್ಗೆ ಇನ್ನು ಯಾವುದೇ ನಿಶ್ಚಯವಾಗಿಲ್ಲ. ಈಗಿರುವಾಗ್ಲೇ ಚಾಂಪಿಯನ್ಸ್ ಟ್ರೋಫಿಯ ಭವಿಷ್ಯ ಜಯ್ ಶಾ ಅವರ ಅಂಗಳದಲ್ಲಿದೆ. ಹೀಗಾಗಿಯೇ ಐಸಿಸಿ ಸೂಚಿಸುವ ಯಾವುದೇ ಆಯ್ಕೆಯನ್ನು ಒಪ್ಪಲೇಬೇಕಾದ ಅನಿವಾರ್ಯತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಿದೆ. ಒಟ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಕಲ ಸಿದ್ಧತೆಯಲ್ಲಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ಇದೀಗ ಜಯ್ ಶಾ ಅವರ ಆಯ್ಕೆಯು ನುಂಗಲಾರದ ತುತ್ತಾಗಿದೆ. ಇಲ್ಲದ ದುಡ್ಡಲ್ಲಿ ಕ್ರೀಡಾಂಗಣಗಳನ್ನ ಸಜ್ಜುಗೊಳಿಸ್ತಿರೋ ಪಾಕ್ ಮುಂದೇನು ಅನ್ನೋ ಕನ್ಫ್ಯೂಷನ್​ನಲ್ಲಿದೆ.

Shwetha M

Leave a Reply

Your email address will not be published. Required fields are marked *