ಶಾಂತ ಸ್ವಭಾವದ ದಸರಾ ಆನೆ ಗೋಪಾಲಸ್ವಾಮಿ ಇನ್ನು ನೆನಪು ಮಾತ್ರ
ಕಾಡಾನೆ ಜೊತೆ ಕಾದಾಟದಲ್ಲಿ ಅಸ್ವಸ್ಥಗೊಂಡಿದ್ದ ಗೋಪಾಲಸ್ವಾಮಿ ಇನ್ನಿಲ್ಲ

ಶಾಂತ ಸ್ವಭಾವದ ದಸರಾ ಆನೆ ಗೋಪಾಲಸ್ವಾಮಿ ಇನ್ನು ನೆನಪು ಮಾತ್ರಕಾಡಾನೆ ಜೊತೆ ಕಾದಾಟದಲ್ಲಿ ಅಸ್ವಸ್ಥಗೊಂಡಿದ್ದ ಗೋಪಾಲಸ್ವಾಮಿ ಇನ್ನಿಲ್ಲ

ಮೈಸೂರು : 14 ಬಾರಿ ನಾಡಹಬ್ಬ ದಸರೆಯಲ್ಲಿ ಪಾಲ್ಗೊಂಡಿದ್ದ ಶಾಂತಸ್ವಭಾವದ ಆನೆ ಗೋಪಾಲಸ್ವಾಮಿ ಇನ್ನು ನೆನಪು ಮಾತ್ರ. ಕಾಡಾನೆ ಜೊತೆ ಕಾದಾಟದಲ್ಲಿ ಗಾಯಗೊಂಡಿದ್ದ ದಸರಾ ಗಜಪಡೆಯ ಆನೆ ಗೋಪಾಲಸ್ವಾಮಿ ಬುಧವಾರ ಕೊನೆಯುಸಿರೆಳಿದಿದೆ. ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಗೋಪಾಲಸ್ವಾಮಿ ಆನೆ ಮಂಗಳವಾರ ಕಾಡಿಗೆ ಮೇಯಲು ಹೋಗಿದ್ದಾಗ ಕಾಡಾನೆ ಜೊತೆಗೆ ಕಾದಾಟ ನಡೆಸಿತ್ತು. ಈ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದೆ.

ಇದನ್ನೂ ಓದಿ :  ಖ್ಯಾತ ನಟ ನವೀನ್ ಡಿ ಪಡೀಲ್ ಆಸ್ಪತ್ರೆಗೆ ದಾಖಲು – ಮೂರು ತಿಂಗಳು ವಿಶ್ರಾಂತಿಗೆ ವೈದ್ಯರ ಸೂಚನೆ

ಮಸ್ತಿಗೆ ಬಂದಿದ್ದ ಗೋಪಾಲಸ್ವಾಮಿ ಆನೆಯನ್ನು ಮಂಗಳವಾರ ಕಾಡಿಗೆ ಬಿಡಲಾಗಿತ್ತು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿ ಬಳಿ ಕಾಡಾನೆ ಜೊತೆ ಗೋಪಾಲಸ್ವಾಮಿ ಕಾದಾಟಕ್ಕೆ ಇಳಿದಿದ್ದಾನೆ. ಧೃಡಕಾಯದ ಕಾಡಾನೆಯ ದಾಳಿಗೆ ತತ್ತರಿಸಿದ ಗೋಪಾಲಸ್ವಾಮಿ ತೀವ್ರವಾಗಿ ಅಸ್ವಸ್ಥಗೊಂಡಿದೆ. ಕಾಡಾನೆ ಮತ್ತು ಗೋಪಾಲಸ್ವಾಮಿಯ ಕಾದಾಟವನ್ನು ಕಣ್ಣಾರೆ ಕಂಡ ಮಾವುತರು ಅರಣ್ಯಾಧಿಕಾರಿಗಳಿಗೆ ತಿಳಿಸಿ ಸ್ಥಳಕ್ಕೆ ಬರುವಷ್ಟರಲ್ಲಿ ಗೋಪಾಲಸ್ವಾಮಿಗೆ ತೀವ್ರವಾದ ಏಟು ಬಿದ್ದಿತ್ತು. ವೈದ್ಯರು ಎಷ್ಟೇ ನಿಗಾವಹಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.

ಈ ಬಾರಿಯ ದಸರಾ ಗಜಪಡೆಗಳಲ್ಲೊಂದಾದ ಗೋಪಾಲಸ್ವಾಮಿ ಆನೆ ಮರದ ಅಂಬಾರಿ ಹೊತ್ತಿತ್ತು.  14 ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಗೋಪಾಲಸ್ವಾಮಿಯದ್ದು ಶಾಂತ ಸ್ವಭಾವ. ಜೊತೆಗೆ ಗಜಪಡೆಯಲ್ಲಿ ಕೇಂದ್ರಬಿಂದುವಾಗಿದ್ದ ಗೋಪಾಲಸ್ವಾಮಿ ಎಲ್ಲರಿಗೂ ಅಚ್ಚುಮೆಚ್ಚಿನ ಆನೆ. ಅಂಬಾರಿ ಆನೆ ಅಭಿಮನ್ಯುವಿಗೆ ಪರ್ಯಾಯವೆಂದೇ ಗೋಪಾಲಸ್ವಾಮಿಯನ್ನು ಪರಿಗಣಿಸಲಾಗಿತ್ತು. ಅಷ್ಟೇ ಅಲ್ಲ, ಶ್ರೀರಂಗಪಟ್ಟಣ ದಸರೆಯಲ್ಲೂ ಜಂಬೂಸವಾರಿಯ ಕ್ಯಾಪ್ಟನ್ ಆಗಿಯೂ ಪಾಲ್ಗೊಂಡಿದ್ದ. ಈ ಬಾರಿಯ 2022ರ ದಸರೆಯಲ್ಲೂ ಸಾಲಾನೆ ಜವಾಬ್ದಾರಿಯನ್ನು ಗೋಪಾಲಸ್ವಾಮಿ ನಿರ್ವಹಿಸಿ ಸೈ ಅನ್ನಿಸಿಕೊಂಡಿದ್ದ. ಅಲ್ಲದೇ, ಹುಲಿ, ಕಾಡಾನೆ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗೋಪಾಲಸ್ವಾಮಿ ಆನೆಯನ್ನು ಬಳಸುತ್ತಿದ್ದರು.

suddiyaana