ಸಮಿತ್ ದ್ರಾವಿಡ್ IPLಗೆ ನೋ ಎಂಟ್ರಿ – ರಾಹುಲ್ ಮಗನಿಗೆ ಯಾಕಿಲ್ಲ ಚಾನ್ಸ್?
ಈ ನಿಯಮವೇ ಕನ್ನಡಿಗನಿಗೆ ಅಡ್ಡಿ?
ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಸಂಚಲನ ಸೃಷ್ಟಿಸಿದ್ದಾರೆ. ದೊಡ್ಡ ಮಟ್ಟಿಗೆ ಇನ್ನಿಂಗ್ಸ್ ಕಟ್ಟದಿದ್ರೂ ಹೊಡೆದಿರೋ ಸಿಕ್ಸರ್, ಫೋರ್ ಗಳಿಂದಲೇ ಸಮಿತ್ ಒಂದ್ ರೇಂಜಿಗೆ ಹವಾ ಕ್ರಿಯೇಟ್ ಮಾಡಿದ್ದಾರೆ. ಈಗ ಫ್ಯಾನ್ಸ್ ತಲೆಯಲ್ಲಿ ಓಡಾಡ್ತಿರೋದು ಅದೊಂದೇ ವಿಚಾರ. ಅದೇ ಸಮಿತ್ ದ್ರಾವಿಡ್ ಐಪಿಎಲ್ ಗೆ ಎಂಟ್ರಿಕೊಡ್ತಾರಾ ಅನ್ನೋದು. ಆ ವಿಚಾರ ಅಷ್ಟೊಂದು ಈಸಿಯಲ್ಲ. ಐಪಿಎಲ್ ಗೆ ಎಂಟ್ರಿ ಕೊಡಲು ಸಮಿತ್ ಗೆ ಈಗ್ಲೇ ಸಾಧ್ಯವಿಲ್ಲ ಅನ್ನೋದನ್ನ ನಂಬಲೇಬೇಕು. ಹಾಗಾದ್ರೆ, ಸಮಿತ್ ದ್ರಾವಿಡ್ ಈ ಬಾರಿ ಐಪಿಎಲ್ಗೆ ಎಂಟ್ರಿಕೊಡೋದಿಲ್ವಾ? ಐಪಿಎಲ್ ಗೆ ಎಂಟ್ರಿ ಕೊಡಲು ಏನೆಲ್ಲಾ ರೂಲ್ಸ್ ಫಾಲೋ ಮಾಡ್ಬೇಕು?, ಸಮಿತ್ ದ್ರಾವಿಡ್ ಮುಂದಿನ ನಡೆಯೇನು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕ್ರಿಕೆಟ್ಗೆ ಗಬ್ಬರ್ ಸಿಂಗ್ ಗುಡ್ ಬೈ – ರೋಹಿತ್ರನ್ನೇ ಮೀರಿಸಿದ್ದೇಗೆ Mr. ICC?
ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಸುಪುತ್ರ ಸಮಿತ್ ಕರ್ನಾಟಕ ಟಿ20 ಲೀಗ್ನಲ್ಲಿ ಮೈಸೂರು ವಾರಿಯರ್ಸ್ ಪರ ಆಡುತ್ತಿದ್ದಾರೆ. ಪವರ್ ಹಿಟ್ಟಿಂಗ್ ನಿಂದಲೇ ಪವರ್ ಫುಲ್ ಫರ್ಫಾಮೆನ್ಸ್ ಕೊಡ್ತಿರೋ ಸಮಿತ್ ದ್ರಾವಿಡ್ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಹರಿದಾಡ್ತಿದೆ. ಆದ್ರೆ, ಐಪಿಎಲ್ 2025ರ ಹರಾಜಿನಲ್ಲಿ ಕಾಣಿಸಿಕೊಳ್ಳಲು ಅವರು ಅರ್ಹತೆ ಹೊಂದಿಲ್ಲ. , ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲು ಕೆಲವೊಂದು ನಿಯಮಗಳಿವೆ. ಐಪಿಎಲ್ ನಿಯಮಗಳ ಪ್ರಕಾರ, ಆಟಗಾರನು ಹರಾಜಿನಲ್ಲಿ ಭಾಗವಹಿಸಲು ಕನಿಷ್ಠ ಎರಡು ಲಿಸ್ಟ್ ಎ ಅಥವಾ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಹಾಗೆಯೇ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಬೇಕು. ಇಲ್ಲಿ ಸಮಿತ್ ದ್ರಾವಿಡ್ ಅವರ ಹೆಸರು ರಾಜ್ಯ ಕ್ರಿಕೆಟ್ ಸಂಸ್ಥೆಯಡಿಯಲ್ಲಿ ನೋಂದಾಯಿತವಾಗಿದೆ. ಆದರೆ ಅವರು ಕರ್ನಾಟಕ ಪರ ಯಾವುದೇ ಲಿಸ್ಟ್ ಎ ಅಥವಾ ಪ್ರಥಮ ದರ್ಜೆ ಪಂದ್ಯಗಳನ್ನಾಡಿಲ್ಲ.
ಬಿಸಿಸಿಐ ನಿಯಮದ ಪ್ರಕಾರ, ಐಪಿಎಲ್ನಲ್ಲಿ ಭಾಗವಹಿಸಬೇಕಾದ ಆಟಗಾರನು ಭಾರತೀಯ ಕ್ರಿಕೆಟ್ ಮಂಡಳಿ ಆಯೋಜಿಸುವ ಟೂರ್ನಿಯ ಯಾವುದಾರೂ ಎರಡು ಪಂದ್ಯಗಳನ್ನಾಡುವುದು ಕಡ್ಡಾಯ. ಆದರೆ ಇತ್ತ ಸಮಿತ್ ದ್ರಾವಿಡ್ ಕರ್ನಾಟಕ ಸೀನಿಯರ್ ತಂಡದ ಪರ ಯಾವುದೇ ಪ್ರಮುಖ ಟೂರ್ನಿ ಆಡಿಲ್ಲ. ಹೀಗಾಗಿ ಐಪಿಎಲ್ 2025ರ ಹರಾಜಿನಲ್ಲಿ ಕಾಣಿಸಿಕೊಳ್ಳಲು ಸಮಿತ್ ಅವರಿಗೆ ಸಾಧ್ಯವಿಲ್ಲ.
ಸಮಿತ್ ದ್ರಾವಿಡ್ 2023-24 ರ ಕೂಚ್ ಬೆಹರ್ ವಿಜೇತ ಅಂಡರ್19 ಕರ್ನಾಟಕ ತಂಡದ ಭಾಗವಾಗಿದ್ದರು. ಆಲೂರಿನಲ್ಲಿ ನಡೆದ ಪ್ರವಾಸಿ ಲಂಕಾಶೈರ್ ತಂಡದ ವಿರುದ್ಧ ಮೂರು ದಿನಗಳ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಮುಂಬರುವ ದಿನಗಳಲ್ಲಿ ಕರ್ನಾಟಕ ಸೀನಿಯರ್ ತಂಡದಲ್ಲಿ ಅವಕಾಶ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಒಂದು ವೇಳೆ ಮುಂಬರುವ ರಣಜಿ ಮತ್ತು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಸಮಿತ್ ದ್ರಾವಿಡ್ ಅವಕಾಶ ಪಡೆದರೆ, ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳಲು ಅರ್ಹರಾಗಲಿದ್ದಾರೆ. ಹೀಗಾಗಿ ಡಿಸೆಂಬರ್ ತಿಂಗಳೊಳಗೆ ಸಮಿತ್ ಕರ್ನಾಟಕ ಪರ ಕಣಕ್ಕಿಳಿದರೆ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ. ಸಧ್ಯಕ್ಕೆ ಸಮಿತ್ ದ್ರಾವಿಡ್ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರ ಕಣಕ್ಕಿಳಿದಿದ್ದಾರೆ. ವಾರಿಯರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಕಾಣಿಸಿಕೊಳ್ಳುತ್ತಿರುವ 18 ರ ಹರೆಯದ ಯುವ ದಾಂಡಿಗ ಬೌಲಿಂಗ್ ನಲ್ಲೂ ಸೈ ಅನಿಸಿಕೊಂಡಿದ್ದಾರೆ.