ಕ್ಯಾಚ್, ಬೌಲ್ಡ್, ಸ್ಟಂಪ್ಡ್, ಎಲ್​ಬಿಡಬ್ಲ್ಯೂ – 10 OUT ನಿಯಮಗಳಲ್ಲಿ ನಿಮಗೆಷ್ಟು ಗೊತ್ತು?
ಕ್ರಿಕೆಟ್​ನಲ್ಲಿ ಹಿಂಗೆಲ್ಲಾ ವಿಕೆಟ್ ತೆಗೆಯಬಹುದಾ?

ಕ್ಯಾಚ್, ಬೌಲ್ಡ್, ಸ್ಟಂಪ್ಡ್, ಎಲ್​ಬಿಡಬ್ಲ್ಯೂ – 10 OUT ನಿಯಮಗಳಲ್ಲಿ ನಿಮಗೆಷ್ಟು ಗೊತ್ತು?ಕ್ರಿಕೆಟ್​ನಲ್ಲಿ ಹಿಂಗೆಲ್ಲಾ ವಿಕೆಟ್ ತೆಗೆಯಬಹುದಾ?

ಕ್ರಿಕೆಟ್.. ಭಾರತೀಯರ ಕಣಕಣದಲ್ಲೂ ಬೆರೆತು ಹೋಗಿರೋ ಗೇಮ್. ಇಲ್ಲಿ ಬ್ಯಾಟ್, ಬಾಲ್ ಜೊತೆ ಆಡೋ ಆಟಗಾರರಿಗೆ ಇರೋವಷ್ಟು ಪ್ರೀತಿ, ಗೌರವ, ಸವಲತ್ತು ಮತ್ಯಾವ ಕ್ರೀಡಾಪಡುಗಳಿಗೂ ಸಿಗೋದಿಲ್ಲ. ವಿಶ್ವಕ್ರಿಕೆಟ್​​ನಲ್ಲಿ ದೊಡ್ಡಣ್ಣನಾಗಿ ಮೆರೆಯುತ್ತಿರೋ ಟೀಂ ಇಂಡಿಯಾ ಐತಿಹಾಸಿಕ ದಾಖಲೆಗಳನ್ನೇ ಬರೆದಿದೆ. 16ನೇ ಶತಮಾನದಲ್ಲಿ ಶುರುವಾದ ಕ್ರಿಕೆಟ್ ಅನ್ನೋ ಕ್ರೇಜ್ ಇಂದು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೇ ಕ್ರೀಡೆಯಾಗಿದೆ. ದಿನ ಕಳೆದಂತೆ ಕ್ರಿಕೆಟ್​ ಆರಾಧಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾರತದಲ್ಲಂತೂ  ಕ್ರಿಕೆಟ್‌ ಪ್ರಿಯರ ಸಂಖ್ಯೆ ಇನ್ನೂ ಒಂದು ಕೈ ಜಾಸ್ತಿನೇ ಇದೇ. ಗಲ್ಲಿ ಗಲ್ಲಿಯಲ್ಲೂ ಈಗ ಮಕ್ಕಳ ಕೈಯಲ್ಲಿ ಬ್ಯಾಟ್, ಬಾಲ್ ಇದೆ. ಬಟ್ ಇದೇ ಕ್ರಿಕೆಟ್ ನಲ್ಲಿ ನಿಮಗೆ ಅಚ್ಚರಿ ಅನ್ನಿಸೋ ನಿಯಮಗಳೂ ಇವೆ. ಭಾರತದ ಫೇವರೆಟ್ ಗೇಮ್ ಬಗೆಗಿನ ಒಂದು ಅಚ್ಚರಿಯ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕ್ರಿಕೆಟ್​ಗೆ ಗಬ್ಬರ್ ಸಿಂಗ್ ಗುಡ್ ಬೈ – ರೋಹಿತ್​ರನ್ನೇ ಮೀರಿಸಿದ್ದೇಗೆ Mr. ICC?

ಕ್ರಿಕೆಟ್​ನಲ್ಲಿ ಬ್ಯಾಟರ್ಸ್ ಶೈನ್ ಆದಷ್ಟು ಬೌಲರ್ಸ್ ಆಗೋದಿಲ್ಲ. ಹಾಗೇ ಫ್ಯಾನ್ಸ್ ವಿಚಾರಕ್ಕೆ ಬಂದ್ರೂ ಅಷ್ಟೇ. ಬೌಲಿಂಗ್ ಮಾಡೋರಿ​ಗಿಂತ ಬ್ಯಾಟರ್ಸ್​​ಗೆ ಸ್ವಲ್ಪ ಜಾಸ್ತಿ ಫ್ಯಾನ್ಸ್ ಇರ್ತಾರೆ. ಫಾರ್ ಎಕ್ಸಾಂಪಲ್ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವುಡ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಹೀಗೇ ಲಿಸ್ಟ್ ಬೆಳೀತಾನೇ ಹೋಗುತ್ತೆ. ಬಟ್ ಬೌಲಿಂಗ್​ನಲ್ಲಿ ಇಡೀ ಮ್ಯಾಚ್​ನೇ ಟರ್ನಿಂಗ್ ಮಾಡೋ ತಾಕತ್ತು ಇದ್ರೂ ಬೌಲರ್ಸ್​ ಅಷ್ಟೊಂದು ಫೇಮಸ್ ಆಗೋದಿಲ್ಲ. ಬಟ್ ಕ್ರಿಕೆಟ್ ಬಗ್ಗೆ ಬ್ಯಾಟಿಂಗ್ ಮತ್ತು ಬೌಲಿಂಗ್​ ಬಗ್ಗೆ ಅಭಿಮಾನಿಗಳಿಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳಿವೆ. ಅದ್ರಲ್ಲಿ ಔಟ್ ಕೂಡ ಒಂದು. ನಾರ್ಮಲ್ ಆಗಿ ನಾವು ನೀವು ಮ್ಯಾಚ್ ನೋಡೋವಾಗ ಐದಾರು ರೀತಿಯಲ್ಲಿ ಔಟ್ ಮಾಡೋದನ್ನ ನೋಡಿರ್ತೀವಿ. ಬಟ್ ಕ್ರಿಕೆಟ್ ನಿಯಮದ ಪ್ರಕಾರ ಒಬ್ಬ ಬ್ಯಾಟರ್​ನ ವಿಕೆಟ್​ ಪಡೆಯಲು 10 ವಿಧಾನಗಳಿವೆ. ಇದರಲ್ಲಿ ಹೆಚ್ಚಿನ ಜನರಿಗೆ ತಿಳಿದಿರುವುದು ಕ್ಯಾಚೌಟ್​, ಎಲ್​ಬಿಡಬ್ಲ್ಯೂ, ಸ್ಟಂಪ್​ ಔಟ್, ರನ್​ಔಟ್​ ಮತ್ತು ಬೌಲ್ಡ್​. ಆದ್ರೆ, ಇದನ್ನೂ ಹೊರತುಪಡಿಸಿಯೂ ಇನ್ನೂ 5 ರೀತಿಯಲ್ಲಿ ವಿಕೆಟ್​ ಪಡೆಯಬಹುದು. ಅದು ಹೇಗೆ ಅನ್ನೋದನ್ನ ಒಂದೊಂದಾಗೇ ಹೇಳ್ತಾ ಹೋಗ್ತೇನೆ ನೋಡಿ.

ನಂಬರ್ 1 – ಬೌಲ್ಡ್

ಯೆಸ್. ಬೌಲ್ಡ್.. ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡೋದು. ಹಾಗೇ ಬೌಲರ್​ನ ತಾಕತ್ತು ಎಂಥಾದ್ದು ಅನ್ನೋದನ್ನ ತೋರಿಸೋದೇ ಬೌಲ್ಡ್ ವಿಕೆಟ್. ಬೌಲರ್‌ ಎಸೆದ ಚೆಂಡು ನೇರವಾಗಿ ಬ್ಯಾಟರ್​ ಹಿಂದಿರುವ ಸ್ಟಂಪ್​ಗಳಿಗೆ ತಾಗಿದರೆ ಅದನ್ನು ಕ್ಲೀನ್​ ಬೌಲ್ಡ್ ಎಂದು ಪರಿಗಣಿಸಲಾಗುತ್ತೆ. ಒಂದು ವೇಳೆ ಚೆಂಡು ಕೈ ಅಥವಾ ಹೆಲ್ಮೆಟ್​ ಮತ್ತಿತರ ವಸ್ತುಗಳಿಗೆ ತಾಕಿದ ಬಳಿಕ ವಿಕೆಟ್​ಗೆ ತಾಗಿದರೆ ಅದನ್ನು ಬೌಲ್ಡ್​ ಎಂದು ಕರೆಯಲಾಗುತ್ತದೆ. ಆದ್ರೆ ನೋ ಬಾಲ್​ ಮತ್ತು ಡೆಡ್​ಬಾಲ್‌ನಿಂದ ಬ್ಯಾಟರ್​ ಅನ್ನು ಬೌಲ್ಡ್​ ಮಾಡೋಕೆ ಆಗಲ್ಲ. ಸೋ ಆಲ್ಮೋಸ್ಟ್ ಬೌಲ್ಡ್ ಆದಾಗ ಬ್ಯಾಟರ್ ಡೌಟೇ ಇಲ್ಲದೆ ಸೀದಾ ಕ್ರೀಸ್​ನಿಂದ ಹೊರ ನಡೆದು ಬಿಡ್ತಾರೆ.

ನಂಬರ್ 2 – ಕ್ಯಾಚ್ ಔಟ್

ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ಬ್ಯಾಟರ್ಸ್ ಔಟ್ ಆಗೋದೇ ಕ್ಯಾಚ್​ನಿಂದ. ಆಟಗಾರನು ಬ್ಯಾಟ್‌ನಿಂದ ಹೊಡೆದ ಚೆಂಡು ನೆಲ ಮುಟ್ಟುವ ಮೊದಲು ಫೀಲ್ಡರ್ ಅಥವಾ ವಿಕೆಟ್‌ಕೀಪರ್‌ ಹಿಡಿದರೆ ಅದನ್ನು ಕ್ಯಾಚ್ ಔಟ್ ಎಂದು ಪರಿಗಣಿಸಲಾಗುತ್ತದೆ. ಹೀಗಿದ್ರೂ ಕ್ಯಾಚ್​ ಔಟ್​ನಲ್ಲಿ ಬೇರೆ ಬೇರೆ ರೀತಿಗಳಿವೆ. ಫಾರ್ ಎಕ್ಸಾಂಪಲ್ ಬೌಲರ್ ಸ್ವತಃ ಕ್ಯಾಚ್ ತೆಗೆದುಕೊಂಡರೆ, ಅದನ್ನು ಕ್ಯಾಚ್ ಮತ್ತು ಬೌಲ್ಡ್ ಎನ್ನಲಾಗುತ್ತೆ. ವಿಕೆಟ್ ಕೀಪರ್ ಅಥವಾ ಸ್ಲಿಪ್ ಕಾರ್ಡನ್‌ನಿಂದ ಕ್ಯಾಚ್ ಪಡೆದರೆ ಅದನ್ನು ಕೀಪರ್​ ಅಥವಾ ಸ್ಲಿಪ್​ ಕ್ಯಾಚ್​ ಎಂದು ಹೇಳಲಾಗುತ್ತದೆ.

ನಂಬರ್ 3 – ಎಲ್ ​ಬಿಡಬ್ಲ್ಯೂ

ಬ್ಯಾಟರ್​ಗಳು ಔಟಾಗುವ ಸಾಮಾನ್ಯ ವಿಧಾನಗಳಲ್ಲಿ LBW ಕೂಡ ಒಂದು. ಬ್ಯಾಟರ್ ಸ್ಟಂಪ್‌ಗಳಿಗೆ ಅಡ್ಡಲಾಗಿ ನಿಂತು ಚೆಂಡನ್ನು ಹೊಡೆಯಲು ಯತ್ನಿಸಿದಾಗ ಚೆಂಡು ಬ್ಯಾಟ್​​ಗೆ ತಾಗದೇ ಬ್ಯಾಟರ್​ನ ಕಾಲಿಗೆ ತಾಗಿದರೆ ಅದನ್ನು ಲೆಗ್ ಬಿಫೋರ್ ವಿಕೆಟ್ ಅಥವಾ ಎಲ್‌ಬಿಡಬ್ಲ್ಯೂ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಚೆಂಡು ಬ್ಯಾಟರ್‌ನ ಪ್ಯಾಡ್ ಅಥವಾ ಗ್ಲೌಸ್‌ಗೆ ತಾಗದಿದ್ದರೂ ಸ್ಟಂಪ್‌ಗೆ ತಾಗುತ್ತದೆಯೋ ಇಲ್ಲವೋ ಎಂದು ಅಂಪೈರ್​ಗಳು ನಿರ್ಣಯಿಸುತ್ತಾರೆ. ಒಂದು ವೇಳೆ ಅಂಪೈರ್​ ನಿರ್ಧಾರದಿಂದ ಬ್ಯಾಟರ್​ಗೆ ಅಸಮಾಧಾನವಿದ್ದಲ್ಲಿ ತಮ್ಮ ಬಳಿಯಿರುವ ರಿವ್ಯೂ​ ಆಯ್ಕೆ ಮೂಲಕ ಮತ್ತೊಮ್ಮೆ ಪರಿಶೀಲಿಸಲು ಮೂರನೇ ಅಂಪೈರ್​ ಬಳಿಗೆ ಕೊಂಡೊಯ್ಯಬಹುದು. ಎಲ್​ಬಿಡಬ್ಲ್ಯೂ ಔಟ್ ಕೊಟ್ಟಾಗ ಸಾಮಾನ್ಯವಾಗಿ ರಿವ್ಯೂ ಮೊರೆ ಹೋಗಲಾಗುತ್ತೆ.

ನಂಬರ್ 4 – ಫೀಲ್ಡರ್​ಗೆ ಅಡ್ಡಿ ಪಡಿಸುವುದು

ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ಸ್ಥಾಪಿಸಿದ ಕ್ರಿಕೆಟ್ ನಿಯಮಗಳ ಕಾನೂನು 37ರ ಪ್ರಕಾರ, ಬ್ಯಾಟರ್​ ಉದ್ದೇಶಪೂರ್ವಕವಾಗಿ ಫೀಲ್ಡಿಂಗ್ ಮಾಡುವವರಿಗೆ ಅಡ್ಡಿ ಪಡಿಸಿದ್ರೆ ಆತನನ್ನ ಔಟ್ ಮಾಡಲಾಗುತ್ತೆ. ಫೀಲ್ಡರ್​ಗೆ ಕ್ಯಾಚ್  ಹಿಡಿಯುವಾಗ ಅಥವಾ ರನ್​ಔಟ್​ಗೆ ಯತ್ನಿಸುವಾಗ ಉದ್ದೇಶಪೂರ್ವಕವಾಗಿಯೇ ಆತನಿಗೆ ಅಡ್ಡಿ ಪಡಿಸಿದ್ರೆ ಈ ನಿರ್ಧಾರ ನೀಡಲಾಗುತ್ತದೆ. ಫಾರ್ ಎಕ್ಸಾಂಪಲ್, ಬೌಲರ್​ ಚೆಂಡನ್ನು ಕ್ಯಾಚ್​ ಹಿಡಿಯಲು​ ಯತ್ನಿಸುವಾಗ ಅದನ್ನು ತಪ್ಪಿಸಲು ರನ್​ ತೆಗೆಯುವ ನೆಪದಲ್ಲಿ ಉದ್ದೇಶಪೂರ್ವಕವಾಗಿ ಬ್ಯಾಟರ್​ ಅವನಿಗೆ ಡಿಕ್ಕಿ ಹೊಡೆಯುವುದು ಅಥವಾ ಕ್ಯಾಚ್​ ಹಿಡಿಯದಂತೆ ತಪ್ಪಿಸುವುದು, ರನ್​ಔಟ್ ಮಾಡಲು ಯತ್ನಿಸಿದಾಗ ಬಾಲ್​ಗೆ ಅಡ್ಡ ಬರುವುದನ್ನ ಮಾಡಿದಲ್ಲಿ ಈ ನಿಯಮದ ಮೂಲಕ ಬ್ಯಾಟರ್​ನನ್ನು ವಜಾಗೊಳಿಸಬಹುದು.

ನಂಬರ್ 5 – ರನ್​ ಔಟ್

ರನ್ ಔಟ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ. ಒಬ್ಬ ಬ್ಯಾಟರ್ ರನ್ ಗಳಿಸುವಾಗ ಕ್ರೀಸ್​ಗೆ ತಲುಪುವ ಮುನ್ನವೇ ಎದುರಾಳಿ ತಂಡವು ಚೆಂಡನ್ನು ಸ್ಟಂಪ್‌ಗೆ ಹೊಡೆದರೆ ಅದನ್ನು ರನ್ ಔಟ್ ಎಂದು ಪರಿಗಣಿಸಲಾಗುತ್ತದೆ. ಇದಷ್ಟೇ ಅಲ್ಲದೇ ಬ್ಯಾಟರ್ ಸ್ಟಂಪ್‌ಗೆ ಚೆಂಡು ತಾಕದಂತೆ ಉದ್ದೇಶಪೂರ್ವಕವಾಗಿ ಚೆಂಡನ್ನು ದೇಹಕ್ಕೆ ತಾಗಿಸಿಕೊಂಡರೆ ಅದನ್ನು ರನ್​ಔಟ್​ ಎಂದೇ ನಿರ್ಧರಿಸಲಾಗುತ್ತದೆ. ಮೂರನೇ ಅಂಪೈರ್ ಮೂಲಕ ಟೆಕ್ನಿಕಲ್ ಎವಿಡೆನ್ಸ್ ಪಡೆದು ಅಂತಿಮ  ತೀರ್ಪು ಪಡೆಯಲಾಗುತ್ತದೆ.

ನಂಬರ್ 6 – ರಿಟೈರ್ಡ್​ ಔಟ್​

ಸಾಮಾನ್ಯದಲ್ಲಿ ಸಾಮಾನ್ಯ ಎನ್ನುವಂತೆ ರಿಟೈರ್ಡ್ ಔಟ್ ಕೊಡಲಾಗುತ್ತೆ. ಬ್ಯಾಟರ್​ ಕಾರಣಾಂತರಗಳಿಂದ ಆಟದ ಮಧ್ಯದಲ್ಲೇ ಕ್ರೀಸ್​ನಿಂದ ಪೆವಿಲಿಯನ್‌ಗೆ ಹಿಂತಿರುಗಲು ನಿರ್ಧರಿಸಿದಾಗ ರಿಟೈರ್ಡ್​ ಔಟ್ ಎಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚಾಗಿ ಬ್ಯಾಟರ್​ ಇಂಜುರಿಗೆ ಒಳಗಾದಾಗ ಅಥವಾ ದೇಹದ ನೋವಿನಿಂದ ಬಳಲುತ್ತಿರುವಾಗ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಈ ನಿಯಮದಲ್ಲಿ ಬ್ಯಾಟರ್​ ಒಮ್ಮೆ ಹೋರ ಹೋದ ಮೇಲೂ ಮಧ್ಯದಲ್ಲಿ ಪಂದ್ಯಕ್ಕೆ ಪುನರಾಗಮನ ಮಾಡಬಹುದು. ಒಂದು ವೇಳೆ ಸ್ವತಃ ಬ್ಯಾಟರ್​ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ನಿವೃತ್ತಿ ತೆಗೆದುಕೊಂಡರೆ ಅದನ್ನು ರಿಟೈರ್​ ಔಟ್​ ಅಡಿಯಲ್ಲಿ ಪರಿಗಣಿಸಲಾಗುತ್ತದೆ.

ನಂಬರ್ 7 – ಸ್ಟಂಪ್ಡ್ ಔಟ್​

ಸ್ಟಂಪ್ಡ್ ಔಟ್​ ವಿಧಾನವು ಕ್ರಿಕೆಟ್​ನಲ್ಲಿ ಕಾಮನ್ ಆಗಿದೆ. ಬ್ಯಾಟರ್ ಕ್ರೀಸ್‌ನಿಂದ ಹೊರಬಂದು ಚೆಂಡನ್ನು ಹೊಡೆಯಲು ಯತ್ನಿಸಿದ ವೇಳೆ ಮಿಸ್​ ಆಗಿ ಚೆಂಡು ವಿಕೆಟ್‌ಕೀಪರ್‌ನ ಕೈಗೆ ಸೇರಿ ಬ್ಯಾಟರ್ ಕ್ರೀಸ್‌ನೊಳಗೆ ಸೇರುವ ಮೊದಲೇ ಕೀಪರ್​ ಚೆಂಡನ್ನು ವಿಕೆಟ್‌ಗಳಿಗೆ ತಾಗಿಸಿದ್ರೆ ಅದನ್ನು ಸ್ಟಂಪ್​ ಔಟ್​ ಎಂದು ಪರಿಗಣಿಸಲಾಗುತ್ತದೆ. ಸ್ಪಿನ್ನರ್ ಅಥವಾ ನಿಧಾನಗತಿಯ ಬೌಲಿಂಗ್ ವೇಳೆ ಹೆಚ್ಚು ಸ್ಟಂಪಿಂಗ್ ಮಾಡಲಾಗುತ್ತೆ.

ನಂಬರ್ 8 – ಟೈಮ್​ ಔಟ್

ಟೈಮ್​ ಔಟ್ ವಿಧಾನ ಅಪರೂಪದಲ್ಲಿ​ ಅಪರೂಪವಾಗಿ ನಡೆಯುತ್ತೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಇದನ್ನು ಹೆಚ್ಚಾಗಿ ಕಾಣೋಕೆ ಆಗಲ್ಲ. ಟೈಮ್​ ಔಟ್​ ಎಂದರೆ ಬ್ಯಾಟರ್​ ಒಬ್ಬ ಕ್ರೀಸ್​ನಿಂದ ನಿರ್ಗಮಿಸಿದ ಬಳಿಕ ಮತ್ತೊಬ್ಬ ಬ್ಯಾಟರ್​ 3 ನಿಮಿಷಗಳ ಒಳಗೆ ಕ್ರೀಸ್​ಗೆ ಆಗಮಿಸಬೇಕು. ಒಂದು ವೇಳೆ ಬ್ಯಾಟರ್​ ಕ್ರೀಸ್​ಗೆ ಬರಲು 3 ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಎದುರಾಳಿ ತಂಡ ಅಂಪೈರ್​ಗೆ ಅಪೀಲ್​ ಮಾಡಬಹುದು. ಬಳಿಕ ಔಟ್​ ನೀಡಲಾಗುತ್ತದೆ. ಇದು ಪ್ರಥಮ ದರ್ಜೆಯ ಮಟ್ಟದ ಕ್ರಿಕೆಟ್​ನಲ್ಲಿ ಹೆಚ್ಚಾಗಿ ಆಗುತ್ತೆ.

ನಂಬರ್ 9 – ಬಾಲ್​ ಹಿಟ್​ ದಿ ಟ್ವೈಸ್​

ಯೆಸ್. ಈ ಔಟ್ ಹೆಸ್ರನ್ನ ನೀವು ಕೇಳಿರೋಕು ಸಾಧ್ಯ ಇಲ್ಲ. ಯಾಕಂದ್ರೆ ಕ್ರೀಡಾಂಗಣದಲ್ಲಿ ಈ ಥರ ಔಟ್​ನ ನೀವು ನೋಡಿಯೂ ಇರೋದಿಲ್ಲ. ಚೆಂಡನ್ನು ಬ್ಯಾಟ್​ನಿಂದ ಎರಡು ಬಾರಿ ಹೊಡೆದ್ರೆ ಅದನ್ನ ಔಟ್ ಎಂದು ಪರಿಗಣಿಸಲಾಗುತ್ತೆ. ಇದೊಂದು ಅಪರೂಪದ ಔಟ್ ವಿಧಾನ. ಬ್ಯಾಟರ್ ಚೆಂಡನ್ನು ಎರಡು ಸಲ ಹೊಡೆದ್ರೆ ಈ ರೀತಿಯ ಔಟ್ ಕೊಡಲಾಗುತ್ತೆ. ಬಟ್ ಈ ರೀತಿಯ ಔಟ್ ಆಗೋದು ತೀರಾ ಅಂದ್ರೆ ತೀರಾ ಕಮ್ಮಿ.

ನಂಬರ್ 10 – ಹಿಟ್ ವಿಕೆಟ್

ಹಿಟ್ ವಿಕೆಟ್ ಔಟ್ ವಿಧಾನಗಳಲ್ಲಿ ತುಂಬಾನೇ ಡಿಫ್ರೆಂಟ್ ಆಗಿದೆ. ಬಾಲ್ ಹೊಡೆಯಲು ಮುಂದಾದ ವೇಳೆ ಬ್ಯಾಟರ್ ತನ್ನ ಬ್ಯಾಟ್ ಅಥವಾ ಇತರ ಯಾವುದೇ ದೇಹದ ಭಾಗ ಮತ್ತು ಥಿಂಗ್ಸ್​ಗಳಿಂದ ಕೇರ್​ಲೆಸ್​ ಆಗಿ ತನ್ನ  ಹಿಂಬದಿ ಇರೋ ಸ್ಟಂಪ್‌ಗಳನ್ನು ಬೀಳಿಸಿದ್ರೆ ಅದನ್ನ ಹಿಟ್ ವಿಕೆಟ್ ಎನ್ನಲಾಗುತ್ತೆ. ಬ್ಯಾಟರ್​ನನ್ನು ಪೆವಿಲಿಯನ್​ಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಬ್ಯಾಟರ್‌ನ ಹೆಲ್ಮೆಟ್‌ಗೆ ಮತ್ತು ಬ್ಯಾಟ್​ಗೆ ಚೆಂಡು ಬಡಿದು ಸ್ಟಂಪ್‌ನ ಮೇಲೆ ಬಿದ್ದರೂ ಅದನ್ನ ಹಿಟ್ ವಿಕೆಟ್ ಎಂದೇ ಪರಿಗಣಿಸಲಾಗುತ್ತದೆ.

ಇನ್ನು ಮೂಲ ನಿಯಮಗಳ ಜೊತೆ ಜೊತೆಗೆ ಕಾಲಕ್ಕೆ ತಕ್ಕಂತೆ ಒಂದಷ್ಟು ಚೇಂಜಸ್ ಕೂಡ ಮಾಡಿಕೊಳ್ಳಲಾಗ್ತಿದೆ. 2022ರಲ್ಲಿ ಕೂಡ ಹೊಸ ರೂಲ್ಸ್ ಮಾಡಲಾಗಿದೆ. ಅದೇನಂದ್ರೆ ಮೊದಲೆಲ್ಲಾ ಕ್ಯಾಚ್‌ ಔಟ್‌ ಆದಂತಹ ಸಂದರ್ಭದಲ್ಲಿ ಬ್ಯಾಟರ್‌ಗಳು ರನ್‌ ಗಳಿಸುವಾಗ ಒಬ್ಬರನ್ನ ಒಬ್ಬರು ದಾಟಿದ್ದರೆ, ಹೊಸದಾಗಿ ಕ್ರೀಸ್‌ಗೆ ಬರುವ ಬ್ಯಾಟರ್‌ಗೆ ನಾನ್‌ ಸ್ಟ್ರೈಕ್‌ನಲ್ಲಿ ನಿಲ್ಲುವ ಅವಕಾಶ ಸಿಗುತ್ತಿತ್ತು. ಆದರೆ, ಈ ನಿಯಮಕ್ಕೆ ಐಸಿಸಿ ಅಂತ್ಯ ಹಾಡಿದೆ. ಕ್ಯಾಚ್‌ ಔಟ್‌ ಆದಂತಹ ಸಂದರ್ಭದಲ್ಲಿ ಹೊಸ ಬ್ಯಾಟರ್‌ ಈಗ ಸ್ಟ್ರೈಕ್‌ ತೆಗೆದುಕೊಳ್ಳಬೇಕು. ಹಾಗೇ ಕೊವಿಡ್ ಟೈಮ್​ನಲ್ಲೂ ಚೆಂಡಿಗೆ ಉಗುಳು ಹಚ್ಚುವುದರ ವಿರುದ್ಧ ಐಸಿಸಿ ನಿಷೇಧ ಹೇರಿತ್ತು. ಹೀಗೆ ಹಲವು ನಿಮಯಗಳನ್ನ ಬದಲಾವಣೆ ಮಾಡಲಾಗಿದೆ. ಒಟ್ನಲ್ಲಿ ಹೇಳಿ ಕೇಳಿ ಕ್ರಿಕೆಟ್ ಒಂದು ದೊಡ್ಡ ಆಟ. ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿಗೂ ತಲುಪಿರುವ ಕ್ರಿಕೆಟ್ ನಲ್ಲಿ ಕ್ರಾಂತಿಯೇ ಆದ೦ತಾಗಿದೆ. ಅದ್ರಲ್ಲೂ ಟಿ-20 ಕ್ರಿಕೆಟ್ ಫಾರ್ಮೇಟ್ ಬಂದ ಮೇಲಂತೂ ಜನರಲ್ಲಿ ಕ್ರಿಕೆಟ್ ಹುಚ್ಚು ಇನ್ನೂ ಜಾಸ್ತಿ ಆಗಿದೆ. ಮೂಲತಃ ಇಂಗ್ಲಿಷ್​ನವರ ಕ್ರೀಡೆಯಾದ ಕ್ರಿಕೆಟ್ ಇಂದು ಭಾರತದ ಮೋಸ್ಟ್ ಪಾಪ್ಯುಲರ್ ಗೇಮ್ ಆಗಿದೆ. ಸದ್ಯ ಟಿ-2 ವಿಶ್ವಕಪ್ ಗೆದ್ದಿರೋ ಟೀಂ ಇಂಡಿಯಾ 2025ರ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

Shwetha M